ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, October 2, 2023

Mahabharata Tatparya Nirnaya Kannada 31-61-70

 

ಸಕ್ಷತ್ತೃಗಾನ್ಧಾರಿಪೃಥೇ ಸಸಞ್ಜಯೇ ತಪೋಭಿರಾರಾಧಯತಿ ಪ್ರಭುಂ ಹರಿಮ್ ।

ವೈಚಿತ್ರವೀರ್ಯ್ಯೇSತ್ರ ಸದಾರಬನ್ಧುಭೃತ್ಯಾಸ್ತು ಪಾರ್ತ್ಥಾ ದೃಶಯೇ ಸಮಾಯಯುಃ ॥ ೩೧.೬೧ ॥

 

ಕ್ಷತ್ತೈಕತಾಮತ್ರ ಯುಧಿಷ್ಠಿರೇಣ ಪ್ರಾಪ್ತೋSಥ ಭಾರ್ಯ್ಯಾಸಹಿತಂ ಸಸಞ್ಜಯಮ್ ।

ಉಪಾಸಮಾನೇಷು ವಿಚಿತ್ರವೀರ್ಯ್ಯಪುತ್ರಂ ಪೃಥಾಂ ಚೈವ ಪೃಥಾಸುತೇಷು ॥ ೩೧.೬೨ ॥

 

ಪ್ರಾದುರ್ಬಭೂವಾಮಿತಶಕ್ತಿತೇಜೋಜ್ಞಾನಾದ್ಭುತೈಶ್ವರ್ಯ್ಯಸುಖಾದಿರೂಪಃ ।

ವ್ಯಾಸೋ ಹರಿಸ್ತತ್ರ ಸಮೀಕ್ಷ್ಯ ಸರ್ವೇ ಸಮ್ಪೂಜಯಾಮಾಸುರುದಗ್ರಭಕ್ತ್ಯಾ ॥ ೩೧.೬೩ ॥

 

ವಿದುರ, ಗಾಂಧಾರಿ, ಕುಂತಿ ಹಾಗೂ ಸಂಜಯನಿಂದ ಕೂಡಿರುವ ಧೃತರಾಷ್ಟ್ರನು, ತಪಸ್ಸಿನಿಂದ ಸರ್ವಸಮರ್ಥನಾದ ನಾರಾಯಣನನ್ನು ಆರಾಧನೆ ಮಾಡುತ್ತಿರಲು, ಹೆಂಡತಿ, ಬಂಧುಗಳು ಹಾಗೂ ಭೃತ್ಯರಿಂದ ಕೂಡಿರುವ ಪಾಂಡವರು ದೊಡ್ಡಪ್ಪನನ್ನು ನೋಡಲೆಂದು ಆಶ್ರಮಕ್ಕೆ ಬಂದರು.

ಆಗಲೇ ವಿದುರನು ಯುಧಿಷ್ಠಿರನೊಂದಿಗೆ ಐಕ್ಯವನ್ನು ಹೊಂದಿದನು(ಧರ್ಮರಾಜನ ಇನ್ನೊಂದು ರೂಪವಾಗಿರುವ ವಿದುರನು ದೇಹತ್ಯಾಗಮಾಡಿ ಯುಧಿಷ್ಠಿರನಲ್ಲಿ ಐಕ್ಯನಾದನು). ಸಂಜಯನಿಂದ ಕೂಡಿದ, ಹಂಡತಿ ಸಹಿತನಾದ ಧೃತರಾಷ್ಟ್ರನನ್ನು, ಕುಂತಿಯನ್ನೂ ಪಾಂಡವರು ಚೆನ್ನಾಗಿ ಸೇವೆಮಾಡುತ್ತಿರಲು, ಎಣೆಯಿರದ ಶಕ್ತಿ, ತೇಜಸ್ಸು, ಜ್ಞಾನವಿರುವ, ಅದ್ಭುತವಾದ ಐಶ್ವರ್ಯ, ಸುಖ ಮೊದಲಾದವುಗಳ ಸ್ವರೂಪವುಳ್ಳ ವ್ಯಾಸರೂಪಿ ನಾರಾಯಣನು ಅಲ್ಲಿ ಪ್ರಾದುರ್ಭವಿಸಿದನು. ಆಶ್ರಮಕ್ಕೆ ಬಂದ ವೇದವ್ಯಾಸರನ್ನು ಕಂಡ  ಎಲ್ಲರೂ ಅತ್ಯುತ್ಕೃಷ್ಟವಾದ ಭಕ್ತಿಯಿಂದ ಅವರನ್ನು ಪೂಜಿಸಿದರು.

 

 

ತೈಃ ಪೂಜಿತಸ್ತತ್ರ ನಿಷಣ್ಣ ಆಹ ಯದ್ಯದ್ ಯದಿಷ್ಟಂ ಪ್ರವದನ್ತು ತತ್ತತ್ ।

ದಾಸ್ಯಾಮಿ ತಸ್ಯಾದ್ಯ ತದಿತ್ಯಮುಷ್ಮಿನ್  ಭಕ್ತ್ಯುಚ್ಛ್ರಯಃ ಪಾಣ್ಡುಸುತೈಃ ಸದಾರೈಃ ।

ವೃತೋSತ್ರ ಕುನ್ತೀ ರವಿಸೂನುಜನ್ಮಮೃತ್ಯೂತ್ಥದೋಷಾಪಗಮಂ ಯಯಾಚೇ ॥ ೩೧.೬೪ ॥

 

ಅವರೆಲ್ಲರಿಂದ ಸತ್ಕ್ರುತರಾದ ವೇದವ್ಯಾಸರು ಆಶ್ರಮದಲ್ಲಿದ್ದವರಾಗಿ ಹೀಗೆ ಹೇಳಿದರು- ‘ಯಾರು-ಯಾರಿಗೆ ಏನೇನು ಇಷ್ಟವೋ, ಅದನ್ನು ನನ್ನ ಮುಂದೆ ಹೇಳಲಿ. ಅವರಿಗೆ ಈಗಲೇ ಅದನ್ನು ಕೊಡುತ್ತೇನೆ’ ಎಂದು. ಆಗ ಆ ವೇದವ್ಯಾಸರಲ್ಲಿ ಹೆಂಡಂದಿರಿಂದ ಸಹಿತರಾದ ಪಾಂಡವರೆಲ್ಲರೂ ಕೂಡಾ ಭಕ್ತಿಯನ್ನು ಬೇಡಿದರು. ಕುಂತಿಯು ಕರ್ಣನನ್ನು ಹುಟ್ಟಿಸಿದ್ದರಿಂದ ಮತ್ತು ಅವನ ಸಾವಿನಿಂದಾಗಿ ಬಂದಿರಬಹುದಾದ ದೋಷಪರಿಹಾರವನ್ನು ಬೇಡಿದಳು.  

 

ತೇಷಾಂ ಪ್ರದತ್ತೇಷ್ವಭಿವಾಞ್ಛಿತೇಷು ವೈಚಿತ್ರವೀರ್ಯ್ಯಃ ಸಹ ಭಾರ್ಯ್ಯಯೈವ ।

ಸಮ್ಮನ್ತ್ರ್ಯ ನಿಃಶೇಷರಣೇಹತಾನಾಂ ಸನ್ಧರ್ಶನಂ ಪ್ರಾರ್ತ್ಥಿತವಾಂಸ್ತಮೀಶಮ್ ॥ ೩೧.೬೫ ॥

 

ಪಾಂಡವರಿಗೆ ಹಾಗೂ ಕುಂತೀದೇವಿಗೆ ಅವರವರ ಬಯಕೆಗಳು ಕೊಡಲ್ಪಟ್ಟಮೇಲೆ, ಧೃತರಾಷ್ಟ್ರನು ತನ್ನ ಹೆಂಡತಿಯೊಡಗೂಡಿ ಯೋಚನೆಮಾಡಿ, ಯುದ್ಧದಲ್ಲಿ ಸತ್ತ ಎಲ್ಲರ ಸಂದರ್ಶನವನ್ನು ಸರ್ವಸಮರ್ಥರಾದ ವೇದವ್ಯಾಸರನ್ನು ಕುರಿತು ಬೇಡಿಕೊಂಡನು.

 

ತತಸ್ತು ತೇ ಸತ್ಯವತೀಸುತಸ್ಯ ಸರ್ವೇಶ್ವರಸ್ಯಾSಜ್ಞಯಾ ಸರ್ವ ಏವ ।

ಸಮಾಗತಾಃ ಸ್ವರ್ಗ್ಗಲೋಕಾತ್ ಕ್ಷಣೇನ ದತ್ತಾ ಚ ದಿವ್ಯಾ ದೃಗಮುಷ್ಯ ರಾಜ್ಞಃ ॥ ೩೧.೬೬ ॥

 

ಊಷುಶ್ಚ ರಾತ್ರಿಂ ಪರಮಾಜ್ಞಯೈವ ಸರ್ವೇ ಸ್ವಭಾರ್ಯ್ಯಾಸಹಿತಾ ಯಥಾ ಪುರಾ ।

ತೃಪ್ತಃ ಸದಾರೋ ನೃಪತಿಶ್ಚ ತತ್ರ ಸರ್ವೇSಪಿ ದೃಷ್ಟ್ವಾ ಮಹದದ್ಭುತಂ ತತ್ ॥ ೩೧.೬೭ ॥

 

ತದನಂತರ ಸರ್ವೆಶ್ವರನಾದ ವೇದವ್ಯಾಸರ ಆಜ್ಞೆಯಿಂದ ಯುದ್ಧದಲ್ಲಿ ಸಂಹರಿಸಲ್ಪಟ್ಟ ಅವರೆಲ್ಲರೂ ಕೂಡಾ ಸ್ವರ್ಗಲೋಕದಿಂದ ಕ್ಷಣದಲ್ಲಿ ಇಳಿದು ಬಂದರು. ವೇದವ್ಯಾಸರು ಧೃತರಾಷ್ಟ್ರನಿಗೆ ದಿವ್ಯವಾದ ಕಣ್ಣನ್ನು  ಕೊಟ್ಟರು. ಎಲ್ಲರೂ ತಮ್ಮ ಹೆಂಡದಿರೊಡಗೂಡಿ, ಹಿಂದೆ ಹೇಗೋ ಹಾಗೆಯೇ, ಆ ರಾತ್ರಿಯಿಡೀ ಹೆಂಡಂದಿರ ಸಹಿತರಾಗಿ ವೇದವ್ಯಾಸರ ಆಜ್ಞೆಯಂತೆ ಅಲ್ಲೇ ವಾಸಮಾಡಿದರು. ಆಗ ಗಾಂಧಾರಿಯಿಂದೊಡಗೂಡಿದ ಧೃತರಾಷ್ಟ್ರನು ಅತ್ಯಂತ ಸಂತುಷ್ಟನಾದನು. ಉಳಿದವರೆಲ್ಲರೂ ಕೂಡಾ ಈ ಅತ್ಯದ್ಭುತವಾದ ಸಂಗತಿಯನ್ನು ಕಂಡು ಸಂತಸಗೊಂಡರು.

 

 

ಅಥಾSಜ್ಞಯೈವಾಸ್ಯ ಪರಸ್ಯ ಸರ್ವಾಃ ಸ್ತ್ರಿಯೋ ನಿಜೇಶೈಃ ಸಹಿತಾ ಯಯುಃ ಸ್ವಮ್ ।

ವಿನೋತ್ತರಾಂ ತಾಂ ತು ಕಥಾಂ ನಿಶಮ್ಯ ಪಾರಿಕ್ಷಿತೋSಯಾಚತ ತಾತದೃಷ್ಟಿಮ್ ॥ ೩೧.೬೮ ॥

 

ತದನಂತರ ಸರ್ವೋತ್ಕೃಷ್ಟರಾದ ವೇದವ್ಯಾಸರ ಆಜ್ಞೆಯಿಂದಲೇ, ಉತ್ತರೆಯೊಬ್ಬಳನ್ನು ಬಿಟ್ಟು[1], ಎಲ್ಲಾ ಹೆಣ್ಣುಮಕ್ಕಳೂ ಕೂಡಾ ತಮ್ಮ ಗಂಡಂದಿರಿಂದೊಡಗೂಡಿ ತಮ್ಮ ಲೋಕಕ್ಕೆ ತೆರಳಿದರು.

(ಮಹಾಭಾರತದ ಈ ಕಥಾ ಸಂದರ್ಭವನ್ನು ಪರೀಕ್ಷಿತರಾಜನ ಮಗನಾದ ಜನಮೇಜಯನಿಗೆ ವೈಶಂಪಾಯನರು ಹೇಳುತ್ತಿರುವಾಗ ಅಲ್ಲಿ ವೇದವ್ಯಾಸರೂ ಉಪಸ್ಥಿತರಿದ್ದರು.) ಈ ಕಥೆಯನ್ನು ಕೇಳಿದ ಜನಮೇಜಯನು ವೇದವ್ಯಾಸರಲ್ಲಿ ಸತ್ತ  ತನ್ನ ಅಪ್ಪನಾದ ಪರೀಕ್ಷಿತನನ್ನು ತಾನೂ ನೋಡಬೇಕು ಎಂದು ಬೇಡಿದನು.

 

ತಂ ಚಾSನಯಾಮಾಸ ತದೈವ ಕೃಷ್ಣೋ ಹ್ಯಚಿನ್ತ್ಯಶಕ್ತಿಃ ಸ ವಿಕುಣ್ಠಲೋಕಾತ್ ।

ದೃಷ್ಟ್ವಾ ಸ ಪಾರೀಕ್ಷಿತ ಆಪ ತುಷ್ಟಿಂ ಸ್ವತಾತಮೀಶೇನ ಸಮಾಹೃತಂ ಪುನಃ ॥ ೩೧.೬೯ ॥

 

ಸಮ್ಪೂಜ್ಯ ತಂ ಕೃಷ್ಣಮಪೀಶವನ್ದ್ಯಂ ಕ್ಷಮಾಪಯಾಮಾಸ ಪರೀಕ್ಷಿದಾತ್ಮಜಃ ।

ಚಕ್ರೇ ಚ ವಿಸ್ರಮ್ಭಮತೀವ ಭಾರತೇ ಪುನಶ್ಚ ತತ್ರತ್ಯಜನೈಃ ಸಮೇತಃ ॥ ೩೧.೭೦ ॥

 

ಎಣಿಯಿರದ ಶಕ್ತಿಯುಳ್ಳ ವೇದವ್ಯಾಸರು ಪರೀಕ್ಷಿತ ರಾಜನನ್ನೂ ಕೂಡಾ ವೈಕುಂಠ ಲೋಕದಿಂದ ಆ ಕ್ಷಣದಲ್ಲಿಯೇ ಕರೆತಂದರು. ಜನಮೇಜಯನು ವೇದವ್ಯಾಸರಿಂದ ಕರೆತರಲ್ಪಟ್ಟ ತನ್ನ ಅಪ್ಪನನ್ನು ಕಂಡು ಸಂತಸವನ್ನು ಹೊಂದಿದನು. ಬ್ರಹ್ಮಾದಿಗಳಿಂದಲೂ ವನ್ದ್ಯರಾದ ವೇದವ್ಯಾಸರನ್ನು ಸತ್ಕರಿಸಿದ ಜನಮೇಜಯನು ‘ನಿಮ್ಮ ಶಕ್ತಿಯನ್ನು ಪರೀಕ್ಷೆಮಾಡಿದ್ದಕ್ಕೆ ಕ್ಷೆಮೆ ಇರಲೀ’  ಎಂದು ವೇದವ್ಯಾಸರನ್ನು ಬೇಡಿಕೊಂಡನು. ತದನಂತರ ಅವನು ಮತ್ತೆ ಅಲ್ಲಿರುವ ಜನರಿಂದ ಕೂಡಿಕೊಂಡು ಮಹಾಭಾರತದಲ್ಲಿ ಅತ್ಯಂತವಾಗಿ ವಿಶ್ವಾಸವನ್ನು ಮಾಡಿದನು. 



[1]ಪುತ್ರಪರಿಪಾಲನಾರ್ಥವಾಗಿ ಉತ್ತರೆಯು ತೆರಳಲಿಲ್ಲ.

No comments:

Post a Comment