ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, October 2, 2023

Mahabharata Tatparya Nirnaya Kannada 31-30-40

 

ಅನುಜ್ಞಾಯ ಗೃಹಂ ಪ್ರಾಪ್ತೇ ಧರ್ಮ್ಮಜೇ ವಿದುರಂ ಪುನಃ ।

ಶ್ರಾದ್ಧಾಯ ವಿತ್ತಮಾಕಾಙ್ಕ್ಷನ್ ಪ್ರೇಷಯಾಮಾಸ ತದ್ವಚಃ ॥ ೩೧.೩೦ ॥

 

ಶ್ರುತ್ವಾ ಯುಧಿಷ್ಠಿರೋ ಭೀಮಮಾಹ ದಾತವ್ಯಮದ್ಯ ನಃ ।

ಪುತ್ರಪೌತ್ರಾಪ್ತಬನ್ಧೂನಾಂ ಶ್ರಾದ್ಧೇಚ್ಛೋರ್ವಿತ್ತಮಞ್ಜಸಾ ॥ ೩೧.೩೧ ॥

 

ಧೃತರಾಷ್ಟ್ರನಿಗೆ ಅನುಜ್ಞೆಯನ್ನಿತ್ತ ಧರ್ಮರಾಜನು ತನ್ನ ಮನೆಗೆ ಹಿಂತಿರುಗಲು, ಪುನಃ ಧೃತರಾಷ್ಟ್ರನು ದುರ್ಯೋಧನನ ಶ್ರಾದ್ಧಕ್ಕೆ ಹಣವನ್ನು ಬಯಸುತ್ತಾ, ವಿದುರನನ್ನು ಕಳುಹಿಸಿಕೊಟ್ಟನು. ವಿದುರನ ಮಾತನ್ನು ಕೇಳಿ ಯುಧಿಷ್ಠಿರನು (ವಿತ್ತಸಚಿವನಾದ) ಭೀಮಸೇನನನ್ನು ಕುರಿತು ‘ಮಕ್ಕಳು, ಮೊಮ್ಮಕ್ಕಳು, ಆಪ್ತರಾಗಿರುವ ಬಂಧುಗಳ ಶ್ರಾದ್ಧವನ್ನು ಮಾಡಬೇಕು ಎಂದು ಬಯಸಿ, ವಿತ್ತವನ್ನು ಬೇಡುವ ಧೃತರಾಷ್ಟ್ರನಿಗೆ ಹಣವು ಕೊಡಲ್ಪಡಬೇಕಾದದ್ದು’ ಎಂದು ಹೇಳಿದನು.

 

ತಮಾಹ ಭೀಮಃ ಪಾಪಾನಾಂ ವಿಮುಖಾನಾಂ ಮಧುದ್ವಿಷಃ ।

ಪಾರಲೌಕಿಕಸಾಹಾಯ್ಯಂ ನ ಕಾರ್ಯ್ಯಮಿತರಾರ್ತ್ಥತಃ ॥ ೩೧.೩೨ ॥

 

 

ದತ್ತೇನಾಪಿ ಹಿ ವಿತ್ತೇನ ಪುತ್ರಶ್ರಾದ್ಧಂ ಕರಿಷ್ಯತಿ ।

ತಜ್ಜ್ಞಾತ್ವಾ ದದತಾಂ ದೋಷೋ ಭವೇದಿತಿ ವಿಚಿನ್ತಯನ್  ॥ ೩೧.೩೩ ॥

 

'ಕಷ್ಟಾತ್ ಕಷ್ಟತರಂ ಯಾನ್ತು ಸರ್ವೇ ದುರ್ಯ್ಯೋಧನಾದಯಃ' ।

ಭೀಷ್ಮಾದೀನಾಂ ವಯಂ ಶ್ರಾದ್ಧಕರ್ತ್ತಾರಸ್ತೇನ ಕಿಂ ತತಃ ॥ ೩೧.೩೪ ॥

 

ಕಾನೀನತ್ವಾತ್ತು ಕರ್ಣ್ಣಸ್ಯ ಸಹಾಸ್ಮಾಭಿಃ ಪೃಥೈವ ಹಿ ।

ಶ್ರಾದ್ಧಕರ್ಮ್ಮಣ್ಯಧಿಕೃತಾ ಕಿಂ ತಸ್ಮೈ ಧೀಯತೇ ಧನಮ್ ॥ ೩೧.೩೫ ॥

 

ಆಗ ಧರ್ಮರಾಜನನ್ನು ಕುರಿತು ಭೀಮಸೇನನು ಹೇಳುತ್ತಾನೆ- ‘ಕೃಷ್ಣನಿಗೆ ವಿಮುಖರಾಗಿರುವ ಪಾಪಿಗಳಿಗೆ ಪರಲೋಕದ ಸಹಾಯರೂಪವಾಗಿರುವ ಶ್ರಾದ್ಧ ಮೊದಲಾದವುಗಳನ್ನು ಬೇರೊಬ್ಬರ   ಸಂಕೋಚಕ್ಕೆ ಬಲಿಬಿದ್ದೂ ಕೂಡಾ ಮಾಡತಕ್ಕದ್ದಲ್ಲ. ದುರ್ಯೋಧನನಿಗಿಂತ ಇತರರಾದ ಭೀಷ್ಮಾದಿಗಳ ಶ್ರಾದ್ಧಕ್ಕಾಗಿ ಕೊಟ್ಟರೂ ಕೂಡಾ, ಧೃತರಾಷ್ಟ್ರ ಅದನ್ನು ತನ್ನ ಮಕ್ಕಳ ಶ್ರಾದ್ಧಕ್ಕೇ ಬಳಸುತ್ತಾನೆ. ಇದನ್ನು ತಿಳಿದೂ ಕೂಡಾ ಕೊಡುವವರಿಗೆ ದೋಷವುಂಟಾಗುತ್ತದೆ. ದುರ್ಯೋಧನಾದಿಗಳೆಲ್ಲರೂ ಕೂಡಾ ಅಧೋಲೋಕಕ್ಕೆ ಹೋಗಬೇಕೇ ಹೊರತು ಊರ್ಧ್ವಲೋಕಕ್ಕಲ್ಲ. ಯಾವ ಕಾರಣದಿಂದ ಭೀಷ್ಮಾದಿಗಳ ಶ್ರಾದ್ಧವನ್ನು ನಾವೇ ಮಾಡುತ್ತೇವೋ, ಹಾಗಿರುವಾಗ ಧೃತರಾಷ್ಟ್ರನಿಗೆ ಕೊಡುವ ದ್ರವ್ಯದಿಂದ ಏನು ಪ್ರಯೋಜನ? ಇನ್ನು ಕರ್ಣ ಕುಂತಿಯ ಕನ್ಯಾವಸ್ಥೆಯಲ್ಲೇ ಹುಟ್ಟಿರುವುದರಿಂದ ಅವನ ಶ್ರಾದ್ಧವನ್ನು ನಮ್ಮ ಜೊತೆಗೇ ಕೂಡಿಕೊಂಡು ತಾಯಿಯೇ  ಮಾಡಬೇಕು. ಹೀಗಿರುವಾಗ ಧೃತರಾಷ್ಟ್ರನಿಗೇಕೆ ಹಣ?

 

ಇತ್ಯುಕ್ತವನ್ತಂ ನೃಪತಿರರ್ಜ್ಜುನಶ್ಚೋಚತುಃ ಪುನಃ ।

ಯಿಯಾಸೋರ್ಯ್ಯಾಚಮಾನಾಯ ನಿಜಬಾಹುಬಲಾರ್ಜ್ಜಿತಮ್ ॥ ೩೧.೩೬ ॥

 

ದೇಹಿ ವಿತ್ತಂ ಪರಮತಃ ಕಿಂ ತ್ವಾಮೇಷೋSಭಿಯಾಚತೇ ।

ಇತ್ಯುಕ್ತಮಪಿ ನೇತ್ಯೇವ ಬ್ರುವಾಣಂ ಶುದ್ಧಧಾರ್ಮ್ಮಿಕಮ್  ॥ ೩೧.೩೭ ॥

 

ಅಪ್ರೀತ್ಯಾ ಜೋಷಮಾಸ್ಸ್ವೇತಿ ಪ್ರೋಚ್ಯೋವಾಚ ಯುಧಿಷ್ಠಿರಃ ।

ಕೋಶತೋ ಯದ್ ಬಹಿರ್ವಿತ್ತಂ ದಾನಭೋಗಾದಿಕಾರಣಮ್  ॥ ೩೧.೩೮ ॥

 

ಮಮ ಸನ್ನಿಹಿತಂ ಸರ್ವಂ ತತ್ ಪಿತ್ರೇSದ್ಯಾರ್ಪ್ಪಿತಂ ಮಯಾ ।

ಏವಮೇವಾರ್ಜ್ಜುನೋSಪ್ಯಾಹ ವಿದುರಂ ಪುನರೂಚತುಃ  ॥ ೩೧.೩೯ ॥

 

ಮುಖ್ಯಧರ್ಮ್ಮರತೇ ಭೀಮೇ ನ ಪಿತಾ ಕ್ರೋದ್ಧುಮರ್ಹತಿ ।

ಇತ್ಯುಕ್ತೋ ವಿತ್ತಮಾದಾಯ ಗತ್ವಾ ಕ್ಷತ್ತಾSಗ್ರಜೇSಬ್ರವೀತ್ ॥ ೩೧.೪೦ ॥

 

ಈರೀತಿಯಾಗಿ ಭೀಮಸೇನ ಹೇಳಿದಾಗ ಧರ್ಮರಾಜ ಹಾಗೂ  ಅರ್ಜುನರು ಹೇಳುತ್ತಾರೆ- ‘ಇನ್ನೇನು ಹೊರಟುಹೋಗುತ್ತಾನೆ. ಬೇಡುತ್ತಿದ್ದಾನೆ, ಅವನಿಗೆ ರಾಷ್ಟ್ರದ ಹಣ ಕೊಡುವುದು ಬೇಡ. ನೀನು ಗಳಿಸಿದ ದೊಡ್ಡ ಭಾಗವನ್ನು ಕೊಡು.  ಇದಕ್ಕೂ ಮಿಗಿಲಾಗಿ ನಿನ್ನನ್ನು ಏನು ಬೇಡುತ್ತಿದ್ದಾನೆ ಅವನು? ಆಗ ಭೀಮಸೇನ ‘ನನ್ನ ಹಣವನ್ನೂ ಕೊಡಲಾರೆ’ ಎಂದನು. ಈ ರೀತಿಯಾಗಿ ಹೇಳುವ ಶುದ್ಧಧಾರ್ಮಿಕನಾದ ಭೀಮನನ್ನು ಸಿಟ್ಟಿನಿಂದ ‘ಸುಮ್ಮನಿರು ಎಂದು ಗದರಿದ ಯುಧಿಷ್ಠಿರ, ವಿದುರನಲ್ಲಿ- ರಾಷ್ಟ್ರದ ಕೋಶದಿಂದ ಆಚೆ ಇರುವ, ದಾನ ಮತ್ತು ಭೋಗಕ್ಕಾಗಿಯೇ ಇರುವ ತನ್ನ ಹಾಗೂ ಅರ್ಜುನನ ವೈಯಕ್ತಿಕ ಹಣವನ್ನು ಈಗಲೇ ಕೊಡುತ್ತಿದ್ದೇನೆ ಎಂದನು. ಇದೇರೀತಿಯಾಗಿ ಅರ್ಜುನನೂ ಹೇಳಿದನು.

ಅವರಿಬ್ಬರೂ ವಿದುರನಿಗೆ ಮತ್ತೆ ಹೇಳಿದರು- ‘ಶುದ್ಧ ಭಗವದ್ಧರ್ಮದಲ್ಲಿ ರತನಾದ ಭೀಮಸೇನನಲ್ಲಿ ದೊಡ್ಡಪ್ಪನಾದ ಧೃತರಾಷ್ಟ್ರನು ಮುನಿಯುವುದು ತರವಲ್ಲ’ ಎಂದು. ಈರೀತಿಯಾಗಿ ಹೇಳಲ್ಪಟ್ಟ ವಿದುರನು ಹಣವನ್ನು ತೆಗೆದುಕೊಂಡು ಹೋಗಿ ತನ್ನ ಅಣ್ಣನಲ್ಲಿ ಹೀಗೆ ಹೇಳಿದನು-

No comments:

Post a Comment