ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 7, 2023

Mahabharata Tatparya Nirnaya Kannada 32-19-26

 

ತತಃ ಪರೇಶೋSಗಣಿತಾನುಭಾವಃ ಸ್ವಸಾರಥಿಂ ಪಾಣ್ಡವಾನಾಂ ಸಕಾಶಮ್ ।

ಸ್ವಲೋಕಯಾನಪ್ರತಿವೇದನಾಯ ಸ್ವಸ್ಯಾನು ಚೈಷಾಂ ತ್ವರಯಾSಭ್ಯಯಾತಯತ್ ॥ ೩೨.೧೯ ॥

 

ಅಥಾSಸತಃ ಪಿಪ್ಪಲಮೂಲ ಈಶಿತುರೂರುಸ್ಥಿತಂ ಪಾದತಳಂ ಸುತಾಮ್ರಮ್ ।

ದೃಷ್ಟ್ವಾ ಜರಾ ನಾಮ ಸಸರ್ಜ ಶಲ್ಯಂ ಭಕ್ತೋSಪ್ಯಲಂ ರೋಹಿತಂ ಶಙ್ಕಮಾನಃ ॥ ೩೨.೨೦ ॥

 

ತದನಂತರ ಎಣೆಯಿರದ ಮಹಿಮೆಯಿರುವ ಶ್ರೀಕೃಷ್ಣನು ತನ್ನ ಅನಂತರದಲ್ಲಿ ಪಾಂಡವರೂ ಕೂಡಾ ತಮ್ಮ ತಮ್ಮ ಲೋಕಗಳಿಗೆ  ಹೋಗುವ ವಿಷಯದಲ್ಲಿ ತಿಳಿಸಿಕೊಡುವುದಕ್ಕಾಗಿ, ತನ್ನ ಸಾರಥಿಯಾದ ದಾರುಕನನ್ನು ಶೀಘ್ರದಲ್ಲಿ ಪಾಂಡವರ ಬಳಿಗೆ ಕಳುಹಿಸಿದನು.  

ಸಾರಥಿ ತೆರಳಿದಮೇಲೆ ಅಶ್ವತ್ಥಮರದ ಬುಡದಲ್ಲಿ ತನ್ನ ತೊಡೆಯಮೇಲಿರಿಸಿದ ತಾಮ್ರಕೆಂಪು ಬಣ್ಣದ  ಶ್ರೀಕೃಷ್ಣನ ಪಾದದ ತಳಭಾಗವನ್ನು ಕಂಡ ‘ಜರ’ ಎಂಬ ಬೇಡನು, ಭಗವದ್ಭಕ್ತನಾಗಿದ್ದರೂ ಕೂಡಾ, ಅದನ್ನು ರೋಹಿತಮೃಗವೆಂದು ಭ್ರಮಿಸಿ ಬಾಣಬಿಟ್ಟನು.

 

ಅಚ್ಛೇದ್ಯಾಭೇದ್ಯದೇಹಸ್ಯ ಶಲ್ಯೇ ಪಾದಮುಪಸ್ಥಿತೇ ।

ಸಮೀಪಮಾಗತೋ ವ್ಯಾಧೋ ದೃಷ್ಟ್ವಾ ಭೀತೋSಪತದ್ ಭುವಿ ॥ ೩೨.೨೧ ॥

 

ಛೇಧಿಸಲು ಅಸಾಧ್ಯವಾಗಿರುವ, ಭೇಧಿಸಲಾಗದ ದೇಹವುಳ್ಳ ಪರಮಾತ್ಮನ ಪಾದವನ್ನ ಬಾಣವು ಹೊಕ್ಕಿರಲು, ಅಲ್ಲಿಗೆ ಬಂದ ಆ ಬೇಡನು ದೇವರನ್ನು ಕಂಡು, ಭಯಗೊಂಡು, ಭೂಮಿಯಲ್ಲಿ ಬಿದ್ದನು.  

 

ವಿಪ್ರವಾಕ್ಯಂ ಮಾನಯಾನಃ ಕಾರಯಿತ್ವಾSಮುನಾ ಹರಿಃ ।

ಪಾಪಂ ಮಾಂ ಜಹಿ ದೇವೇತಿ ಯಾಚನ್ತಮನಯದ್ ದಿವಮ್ ॥ ೩೨.೨೨ ॥

 

ವಿಪ್ರರ ಮಾತನ್ನು ಗೌರವಿಸುವವನಾಗಿ ಬೇಡನ ಮೂಲಕ ಈ ಕೆಲಸವನ್ನು ಮಾಡಿಸಿದ ಶ್ರೀಕೃಷ್ಣ, ‘ಓ, ದೇವನೇ, ಪಾಪಿಷ್ಠನಾಗಿರುವ ನನ್ನನ್ನು ಕೊಲ್ಲು’ ಎಂದು ಬೇಡಿಕೊಳ್ಳುತ್ತಿರುವ ಆ ಬೇಡನನ್ನು ಸ್ವರ್ಗಕ್ಕೆ ಕಳುಹಿಸಿಕೊಟ್ಟನು.

 

[ಯಾರು ಈ ಬೇಡ ಎನ್ನುವುದನ್ನು ವಿವರಿಸುತ್ತಾರೆ-]

 

ಪಾದಪ್ರಹಾರದೋಷೇಣ ತಂ ಭೃಗುಂ ವ್ಯಾಧತಾಂ ಗತಮ್ ।

ಪಶ್ಚಾತ್ತಾಪೇನ ಭಕ್ತ್ಯಾ ಚ ಸುಪ್ರೀತಸ್ತಚ್ಛರೀರಿಣಮ್ ॥ ೩೨.೨೩ ॥

 

ಸ್ವಾಜ್ಞಾಪ್ರಾಪ್ತವಿಮಾನೇನ ದಿವಂ ನಿನ್ಯೇ ಜನಾರ್ದ್ದನಃ ।

ನೀಚಾ ಯೋನಿರ್ನ್ನೀಚನೀಚಂ ಕರ್ಮ್ಮಾSಪ್ತಂ ನೀಚಕರ್ಮ್ಮತಃ ॥ ೩೨.೨೪ ॥

 

ಅದುಷ್ಟತ್ವಾತ್ತು ಮನಸೋ ಭಕ್ತಿಲೋಪೋ ನಚಾಪ್ಯಭೂತ್ ।

ಭೃಗೋರತ್ರಾಬುದ್ಧಿಪೂರ್ವಂ ನಾತಿದೋಷಕೃದಪ್ಯಭೂತ್ ॥ ೩೨.೨೫ ॥

 

ಹಿಂದೆ (ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು ಎಂದು ನಿರ್ಣಯ ಮಾಡುವಾಗ) ಸಿಟ್ಟಿನಿಂದ ಪಾದದಿಂದ ಒದ್ದ ದೋಷದಿಂದಾಗಿ ಬೇಡನಾಗಿ ಹುಟ್ಟಿರುವ ಭೃಗು ಮಹರ್ಷಿಯನ್ನು, ಅವನ ಪಶ್ಚಾತಾಪದಿಂದಲೂ,  ಭಕ್ತಿಯಿಂದಲೂ ಪ್ರೀತನಾಗಿರುವ ಶ್ರೀಕೃಷ್ಣನು, ತನ್ನ ಆಜ್ಞೆಯಿಂದ ಬಂದ ವಿಮಾನದಿಂದ ಸ್ವರ್ಗಕ್ಕೆ ಕಳುಹಿಸಿಕೊಟ್ಟನು.

ಭೃಗು ಮಾಡಿರುವ ಕರ್ಮ- ಪರಮಾತ್ಮನನ್ನು ಒದೆಯುವ ಅತ್ಯಂತ ನೀಚದರಲ್ಲಿ ನೀಚಕರ್ಮ.  ಆ ನೀಚ ಕರ್ಮದಿಂದಾಗಿ ಅವನು ಹೊಂದಿರುವುದು ಬೇಡಶರೀರ.  ಹೀಗಿದ್ದರೂ ಕೂಡಾ, ಭೃಗುವಿನ ಮನಸ್ಸು ದುಷ್ಟವಾಗಿರಲಿಲ್ಲ. ಭಕ್ತಿ ಕುಗ್ಗಲೂ ಇಲ್ಲ. ಅಲ್ಲದೇ ಅವನು ಇಲ್ಲಿ ಬುದ್ಧಿಪೂರ್ವಕವಾಗಿ ಬಾಣ ಬಿಟ್ಟಿರಲಿಲ್ಲ. ಅದರಿಂದಾಗಿ  ಅವನಿಗೆ ಅತ್ಯಂತ ದೋಷ ಉಂಟಾಗಲಿಲ್ಲ.  

 

ತತೋ ವಿರಿಞ್ಚೇಶಪುರನ್ದರಾದ್ಯಾಃ ಪುನಃ ಸ್ತುವನ್ತೋSಭಿಯಯುಃ ಪ್ರಣಮ್ಯ ।

ಕೃಷ್ಣಂ ಸ ಚಾSಶ್ವೇವ ಯಯೌ ಸ್ವಲೋಕಂ ಸ್ವತೇಜಸಾ ಸರ್ವಮಿದಂ ಪ್ರಕಾಶಯನ್ ॥ ೩೨.೨೬ ॥

 

ತದನಂತರ ಬ್ರಹ್ಮರುದ್ರ ಇಂದ್ರಾದಿ ದೇವತೆಗಳು, ಮತ್ತೆ ಸ್ತೋತ್ರಮಾಡುತ್ತಾ, ನಮಸ್ಕರಿಸಿ, ಕೃಷ್ಣನನ್ನು ಕುರಿತು ಬಂದು, ಅವನನ್ನು ಅನುಸರಿಸಿದರು. ಆ ಕೃಷ್ಣನಾದರೋ, ತನ್ನ ತೇಜಸ್ಸಿನಿಂದ ಎಲ್ಲವನ್ನೂ ಬೆಳಗುತ್ತಾ, ಶೀಘ್ರದಲ್ಲಿಯೇ ತನ್ನ ಲೋಕಕ್ಕೆ ತೆರಳಿದನು.

No comments:

Post a Comment