ಸ ಪೂರ್ವರೂಪೇಣ ಸಮಾಪ್ಯ
ಚೈಕ್ಯಂ ವಿಭಜ್ಯ ಚೇಚ್ಛಾನುಸೃತೋSಥ
ರೇಮೇ ।
ಹರಿಃ ಶ್ರಿಯಾ
ಬ್ರಹ್ಮಮುಖೈಶ್ಚ ಮುಕ್ತೈಃ ಸಮ್ಪೂಜ್ಯಮಾನೋSಮಿತಸದ್ಗುಣಾತ್ಮಾ
॥ ೩೨.೩೧ ॥
ಶ್ರೀಕೃಷ್ಣನು ಮೂಲಸ್ವರೂಪದಲ್ಲಿ ಐಕ್ಯ ಹೊಂದಿಯೂ ಮತ್ತೆ ಇಚ್ಛಾನುಸಾರ ಬೇರೆಯಾಗಿಯೂ ಆನಂದದಿಂದ
ಇದ್ದನು. ಪರಮಾತ್ಮನು ಲಕ್ಷ್ಮೀದೇವಿಯಿಂದಲೂ, ಬ್ರಹ್ಮಮೊದಲಾದವರಿಂದಲೂ, ಮುಕ್ತರಿಂದಲೂ
ಪೂಜಿಸಲ್ಪಡುವವನಾಗಿ, ಎಲ್ಲಾ ಗುಣಗಳೇ ಮೈವೆತ್ತು ಕ್ರೀಡಿಸಿದನು.
ಬ್ರಹ್ಮಾSಪಿ ಶರ್ವಾದಿಯುತಃ ಸ್ವಲೋಕಂ ಪ್ರಾಪ್ತಃ
ಪುನಸ್ತತ್ರ ಗತಂ ಚ ಕೃಷ್ಣಮ್ ।
ರೇಮೇSಭಿಪಶ್ಯನ್ ಪ್ರತಿಪೂಜಯಂಸ್ತಂ ಸುರಾಶ್ಚ ಸರ್ವೇ
ರವಿಬಿಮ್ಬಸಂಸ್ಥಮ್ ॥ ೩೨.೩೨ ॥
ರುದ್ರಾದಿಗಳಿಂದ ಕೂಡಿದ ಚತುರ್ಮುಖಬ್ರಹ್ಮನೂ ಕೂಡಾ ತನ್ನ ಲೋಕಕ್ಕೆ(ಸತ್ಯಲೋಕಕ್ಕೆ)
ತೆರಳಿ, ಅಲ್ಲಿರುವ ಕೃಷ್ಣನನ್ನು ನೋಡುತ್ತಾ, ಪೂಜಿಸುತ್ತಾ, ಆನಂದಿಸಿದನು. ಎಲ್ಲಾ ದೇವತೆಗಳೂ ಸೂರ್ಯಮಂಡಲದಲ್ಲಿರುವ ಪರಮಾತ್ಮನನ್ನು ಕಾಣುತ್ತಾ, ಪೂಜಿಸುತ್ತಾ ಆನಂದಿಸಿದರು.
ಯತೋ ನ ದರ್ಶಿತಾ
ಭ್ರಾನ್ತಿಃ ಪ್ರಾದುರ್ಭಾವೇಷ್ವಪಿ ಕ್ವಚಿತ್ ।
ದೇಹತ್ಯಾಗಾನುಕಾರೇಣ
ಹರಿಣಾ ತದಿಹಾಚ್ಯುತಃ ॥ ೩೨.೩೩ ॥
ಮೋಹಯಿತ್ವಾSಸುರಾನನ್ಧಂ ತಮಃ ಪ್ರಾಪಯಿತುಂ ಪ್ರಭುಃ ।
ಚಿದಾನನ್ದೈಕದೇಹೋSಪಿ ತ್ಯಕ್ತಂ ದೇಹಮಿವಾಪರಮ್ ॥ ೩೨.೩೪ ॥
ಸೃಷ್ಟ್ವಾ
ಸ್ವದೇಹೋಪಮಿತಂ ಶಯಾನಂ ಭುವ್ಯಗಾದ್ ದಿವಮ್ ।
ದಾರುಕೋಕ್ತ್ಯಾ
ಸಮಾಯಾತಃ ಪಾರ್ತ್ಥಸ್ತಮದಹತ್ ತದಾ ॥ ೩೨.೩೫ ॥
ರೌಹಿಣೇಯಾದಿಕಾನಾಂ ಚ
ಶರೀರಾಣಿ ಪ್ರಧಾನತಃ ।
ದಾರುಕೋ ವಿಷ್ಣುಲೋಕಂ
ತು ಪುನರಾಪ ಯಥಾಗತಮ್ ॥ ೩೨.೩೬ ॥
ಯಾವ ಕಾರಣದಿಂದ ಶ್ರೀಕೃಷ್ಣನು ತಾನು ಅಭಿವ್ಯಕ್ತನಾಗುವಾಗ ದುರ್ಜನರಿಗೆ ಭ್ರಾಂತಿಯನ್ನು
ಕೊಡಲಿಲ್ಲವೋ, ಆ ಕಾರಣದಿಂದ ದೈತ್ಯರನ್ನು ತಪ್ಪು ತಿಳಿಯುವಂತೆ ಮಾಡಿ, ಅವರನ್ನು ಅನ್ಧಂತಮಸ್ಸಿಗೆ ಹೊಂದಿಸಲು ಸರ್ವಸಮರ್ಥನಾದ ಅಚ್ಯುತನು ದೇಹವನ್ನು
ಬಿಡುತ್ತಿದ್ದೇನೆ ಎನ್ನುವ ಭ್ರಮೆಯನ್ನು ಹುಟ್ಟಿಸಿದನು. ಜ್ಞಾನಾನಂದವೇ ಮೈವೆತ್ತು ಬಂದರೂ, ದೇಹವನ್ನು ಬಿಟ್ಟನೋ ಎಂಬಂತೆ ತನ್ನ ದೇಹದಂತೆಯೇ ಇರುವ ದೇಹವನ್ನು ಭೂಮಿಯಲ್ಲಿ ಮಲಗಿದಂತೆ
ಸೃಷ್ಟಿಸಿ, ಸ್ವಧಾಮಕ್ಕೆ ತೆರಳಿದನು. ದಾರುಕನ ಮಾತಿನಂತೆ
ಹಸ್ತಿನಾವತಿಯಿಂದ ಬಂದ ಅರ್ಜುನನು -ಬಲರಾಮ ಕೃಷ್ಣ ಮೊದಲಾದವರ ಪ್ರಧಾನವಾಗಿರುವ ಶರೀರಗಳನ್ನು
ಶವಸಂಸ್ಕಾರಕ್ಕೆ ಒಳಪಡಿಸಿದನು. ದಾರುಕನು ಬಂದ ಹಾಗೆಯೇ ಪುನಃ ನಾರಾಯಣನ ಲೋಕವನ್ನು ಹೊಂದಿದನು.
[ಅಸಜ್ಜನರಿಗೆ ಭ್ರಾಂತಿ ಹುಟ್ಟಿಸಲು ಶ್ರೀಕೃಷ್ಣ ತನ್ನ ದೇಹದಂತೆಯೇ ಇರುವ ಒಂದು ದೇಹವನ್ನು
ಸೃಷ್ಟಿಮಾಡಿ, ಪರಲೋಕಕ್ಕೆ ತೆರಳಿದನು. ಜನರು ಕೃಷ್ಣನೂ ಮನುಷ್ಯರಂತೆಯೇ ಸತ್ತ
ಎಂದುಕೊಂಡರು. ದುಷ್ಟಜನರನ್ನು ಮೋಹಿಸಿ ಅನ್ಧಂತಮಸ್ಸಿಗೆ ಕಳುಹಿಸಲು ಕೃಷ್ಣ ಹೀಗೆ ಮಾಡಿದನು.]
ತಥೈವ ಜನಮೋಹಾಯ
ಪ್ರಾಪ್ಯ ವಹ್ನಾವದೃಶ್ಯತಾಮ್ ।
ರುಗ್ಮಿಣ್ಯಗಾದ್ಧರೇಃ
ಪಾರ್ಶ್ವಂ ಸತ್ಯಾ ಕೃತ್ವಾ ತಪಸ್ತಥಾ ॥ ೩೨.೩೭ ॥
ಚಿದಾನನ್ದೈಕದೇಹೇ ಹಿ
ದ್ವಿರೂಪೇ ಇವ ತೇ ಯತಃ ।
ಏಕೈವಾತಃ ಕೃಷ್ಣವತ್ ತೇ
ದುಷ್ಟಾನ್ ಮೋಹಯತಸ್ತಥಾ ॥ ೩೨.೩೮ ॥
ಹಾಗೆಯೇ ರುಗ್ಮಿಣೀದೇವಿಯು
ಜನರ ಮೋಹಕ್ಕಾಗಿ ಬೆಂಕಿಯಲ್ಲಿ ಅದೃಶ್ಯಳಾಗಿ ನಾರಾಯಣನ ಸಮೀಪಕ್ಕೆ ತೆರಳಿದಳು. ಸತ್ಯಭಾಮೆಯು ತಪಸ್ಸನ್ನು
ಮಾಡಿ,
ಪರಮಾತ್ಮನ ಪಾರ್ಶ್ವವನ್ನು ಸೇರಿದಳು.
[ಯಾವ ಕಾರಣದಿಂದ ಆ ಇಬ್ಬರೂ
ಜ್ಞಾನಾನಂದವೇ ವೈವೆತ್ತು ಬಂದಿರುವ ಶ್ರೀಲಕ್ಷ್ಮೀದೇವಿಯೇ ಆಗಿದ್ದಾಳೋ, ಆ ಕಾರಣದಿಂದ ಶ್ರೀಕೃಷ್ಣನಂತೆ
ದುಷ್ಟರನ್ನು ಮೋಹಿಸಲು ಅವರು ಬೆಂಕಿಯಲ್ಲಿ ಬಿದ್ದು ಪ್ರಾಣಕಳೆದುಕೊಂಡಂತೆಯೂ, ಸಮಾಧಿಯೋಗದಿಂದ ಪ್ರಾಣ ಕಳೆದುಕೊಂಡಂತೆಯೂ
ತೋರಿದರು.]
ಅನ್ಯಾ ಮಹಾಮಹಿಷ್ಯಸ್ತು
ತ್ಯಕ್ತ್ವಾ ದೇಹಂ ಹುತಾಶನೇ ।
ಕಾಶ್ಚಿತ್ ಕಾಶ್ಚಿತ್ತು
ತಪಸಾ ತ್ಯಕ್ತದೇಹಾ ಹರಿಂ ಯಯುಃ ॥ ೩೨.೩೯ ॥
ಷಣ್ಮಹಿಷಿಯರಲ್ಲಿ ಕೆಲವರು ಅಗ್ನಿಯಲ್ಲಿ ದೇಹವನ್ನು ಬಿಟ್ಟರೆ, ಉಳಿದವರು ಧ್ಯಾನಯೋಗದಿಂದ ದೇಹವನ್ನು
ಬಿಟ್ಟು, ನಾರಾಯಣನನ್ನು ಕುರಿತು ತೆರಳಿದರು.
ರೌಹಿಣೇಯಾದಿಕಾನಾಂ ಚ
ಭಾರ್ಯ್ಯಾ ವಹ್ನಿಮುಖೇ ತನುಮ್ ।
ತ್ಯಕ್ತ್ವಾ ಸ್ವಭರ್ತ್ತೄನೇವಾSಪುಃ ಸರ್ವಾ ಏವ ಪತಿವ್ರತಾಃ ॥ ೩೨.೪೦ ॥
ಪತಿವೃತೆಯರಾದ ಬಲರಾಮ, ಪ್ರದ್ಯುಮ್ನ, ಮೊದಲಾದವರ ಪತ್ನಿಯರು ಅಗ್ನಿಮುಖದಲ್ಲಿ ದೇಹವನ್ನು ಬಿಟ್ಟು, ತಮ್ಮ ಗಂಡಂದಿರನ್ನು ಆ ಲೋಕದಲ್ಲಿಯೂ ಸೇರಿದರು.
No comments:
Post a Comment