ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 1, 2023

Mahabharata Tatparya Nirnaya Kannada 31-11-19

 

ತಸ್ಯಾಪನೇತುಂ ವಿಷಯೇಷು ಸಕ್ತಿಂ ದ್ವೇಷಂ ತಥೈವಾSತ್ಮನಿ ಭೀಮಸೇನಃ ।

ಜಗಾದ ಮಾದ್ರೀಸುತಯೋಃ ಸಮಕ್ಷಮಾಸ್ಫೋಟ್ಯ ಸಂಶೃಣ್ವತ ಏವ ತಸ್ಯ ॥ ೩೧.೧೧ ॥

 

ಧೃತರಾಷ್ಟ್ರನಿಗೆ ವಿಷಯಪದಾರ್ಥಗಳಲ್ಲಿ ಆಸಕ್ತಿಯನ್ನು ಕಡಿಮೆಮಾಡಲು, ಹಾಗೆಯೇ ತನ್ನ ಮೇಲಿನ ಅವನ  ದ್ವೇಷವನ್ನು ದೂರಓಡಿಸಲು ಭೀಮಸೇನನು ನಕುಲ-ಸಹದೇವರ ಮುಂದೆ ಧೃತರಾಷ್ಟ್ರ ಕೇಳುತ್ತಿರುವಾಗಲೇ ತೊಡೆಯನ್ನು ತಟ್ಟಿ ಮಾತನಾಡಿದನು-

 

ತಾವಿಮೌ ಮೇ ಭುಜೌ ವೃತ್ತೌ ಪೀನೌ ಚನ್ದನರೂಷಿತೌ ।

ಯಯೋರನ್ತರಮಾಸಾದ್ಯ ಜರಢಸ್ಯ ಸುತಾ ಹತಾಃ ॥ ೩೧.೧೨ ॥

 

‘ಯಾವ ನನ್ನ ಎರಡು ಭುಜಗಳ ನಡುವೆ ಸಿಕ್ಕಿ ಈ ಮುದುಕನಾದ ಧೃತರಾಷ್ಟ್ರನ ಮಕ್ಕಳೆಲ್ಲರೂ ಸತ್ತರೋ,  ಆ ನನ್ನ ಭುಜಗಳನ್ನು ನೋಡಿ. ಹೇಗೆ ದುಂಡಾಗಿ ದಪ್ಪವಾಗಿವೆ. ಗಂಧದಿಂದ ಲೇಪಿತವಾಗಿವೆ.’

[ಈ ಪ್ರಸಂಗದ ವಿವರಣೆ ಮಹಾಭಾರತದಲ್ಲಿ ಈರೀತಿಯಾಗಿ ಹೇಳಲಾಗಿದೆ- ‘ಅನ್ಧಸ್ಯ ನೃಪತೇಃ ಪುತ್ರಾ ಮಯಾ ಪರಿಘಬಾಹುನಾ । ನೀತಾ ಲೋಕಮಮುಂ ಸರ್ವೇ ನಾನಾಶಸ್ತ್ರಾಸ್ತ್ರಯೋಧಿನಃ । ಇಮೌ ತೌ ಪರಿಘಪ್ರಖ್ಯೌ ಭುಜೌ ಮಮ ದುರಾಸದೌ ।  ಯಯೋರನ್ತರಮಾಸಾದ್ಯ ಧಾರ್ತರಾಷ್ಟ್ರಾಃ ಕ್ಷಯಂ ಗತಾಃ ॥ ತಾವಿಮೌ ಚಂದನೇನಾಕ್ತೌ ವಂದನೀಯೌ ಚ ಮೇ ಭುಜೌ । ಯಾಭ್ಯಾಂ ದುರ್ಯೋಧನೋ ನೀತಃ ಕ್ಷಯಂ ಸಸುತಬಾನ್ಧವಃ (ಮಹಾಭಾರತ ಆಶ್ರಮವಾಸಿಕ ಪರ್ವ ೩.೮-೧೦)]

 

ಯಮೌ ತದನ್ವಮೋದೇತಾಂ ತತ್ಸ್ನೇಹಾದ್ ಗೌರವಾದಪಿ ।

ನೈವ ತತ್ ಕೃಷ್ಣಯಾ ಜ್ಞಾತಂ ಪೃಥಯಾ  ಸಹಪುತ್ರಯಾ ॥ ೩೧.೧೩ ॥

 

ನಕುಲ-ಸಹದೇವರು ಅಣ್ಣನಮೇಲಿನ ಸ್ನೇಹದಿಂದಲೂ, ಗೌರವದಿಂದಲೂ ಹೌದು ಎಂದು ಅವನ ಮಾತನ್ನು ಅನುಮೋದಿಸಿದರು. ದ್ರೌಪದಿಯಿಂದ ಅದು ತಿಳಿಯಲ್ಪಡಲಿಲ್ಲ. ಉಳಿದವರಿಗೂ ಕೂಡಾ(ಯುಧಿಷ್ಠಿರ, ಅರ್ಜುನ, ಕುಂತಿ, ಇತರರಿಗೆ ಕೂಡಾ) ಇದು ತಿಳಿಯಲ್ಪಡಲಿಲ್ಲ.

 

ತಚ್ಛ್ರುತ್ವೋತ್ಪನ್ನನಿರ್ವೇದಂ ಕ್ಷತ್ತಾ ಜ್ಯೇಷ್ಠಸ್ಯ ವರ್ದ್ಧಯನ್ ।

ಉವಾಚ ಜೀವಿತಾಶಾ ತೇ ನನು ರಾಜನ್ ಮಹೀಯಸೀ ॥ ೩೧.೧೪ ॥

 

ಭೀಮಾಪವರ್ಜ್ಜತಂ ಪಿಣ್ಡಮಾದತ್ಸೇ ಗೃಹಪಾಲವತ್ ।

ನಚಾಪರಾಧೋ ಭೀಮಸ್ಯ ಬ್ರುವತಸ್ತ್ವಾಮಿದಂ ವಚಃ  ॥ ೩೧.೧೫ ॥

 

ಭೀಮನ ಮಾತನ್ನು ಕೇಳಿ ಧೃತರಾಷ್ಟ್ರನಲ್ಲಿ ಹುಟ್ಟಿದ ವೈರಾಗ್ಯವನ್ನು ಗಮನಿಸಿದ ವಿದುರನು ಅದನ್ನು ಬೆಳೆಸುತ್ತಾ ಹೇಳುತ್ತಾನೆ- ‘ಓ ರಾಜನೇ, ನಿನ್ನಲ್ಲಿ ಅತಿಯಾದ ಬದುಕುವ ಬಯಕೆಯಿದೆ. ಅದಕ್ಕಾಗಿ ಭೀಮ ಎಸೆಯುವ ಪಿಂಡವನ್ನು ನಾಯಿಯಂತೆ ಸ್ವೀಕರಿಸುತ್ತಿರುವೆ. ನಿನ್ನನ್ನು ಕುರಿತು ಈ ರೀತಿಯಾಗಿ ಹೇಳುವ ಭೀಮನಲ್ಲಿ ಯಾವ ಅಪರಾಧವೂ ಇಲ್ಲ.

 

ಅಗ್ನಿರ್ನ್ನಿಸೃಷ್ಟೋ ದತ್ತಶ್ಚ ಗರೋ ದಾರಾಶ್ಚ ದೂಷಿತಾಃ’ ।

ಹೃತಂ ಕ್ಷೇತ್ರಂ ಧನಂ ಯಸ್ಯ ಕಿಂ ಭೀಮೇನ ಕೃತಂ ತ್ವಯಿ ॥ ೩೧.೧೬ ॥

 

ಅವರಿಗೆ ಬೆಂಕಿಯನ್ನಿಟ್ಟೆ, ವಿಷವನ್ನು ಕೊಟ್ಟೆ, ಅವರ ಹೆಂಡಿರನ್ನು ಕೆಡಿಸಲು ಪ್ರಯತ್ನಪಟ್ಟೆ, ಅವರ ಭೂಮಿಯನ್ನು, ಹಣವನ್ನು ಕಿತ್ತುಕೊಂಡೆ. ಅಂತಹ ನಿನ್ನಲ್ಲಿ ಭೀಮಸೇನನಿಂದ ಯಾವ ಅನಿಷ್ಟ ಮಾಡಲ್ಪಟ್ಟಿತು? (ಪ್ರತಿಯಾಗಿ ಅವನು ನಿನಗೇನೂ ಮಾಡಿಲ್ಲ).

 

ಅಲಮಾಸಜ್ಜತಸ್ತೇSದ್ಯ ನಿರ್ವೇದಕರಮೀರಿತಮ್ ।

ಉಪಕಾರಾಯ ಭೀಮೇನ ತವ ದ್ವೇಷಂ ತ್ಯಜಾತ್ರ ತತ್ ॥ ೩೧.೧೭ ॥

 

ಕೇವಲ ವಿಷಯದಲ್ಲಿ ಆಸಕ್ತನಾಗಿರುವ ನಿನಗೆ ವೈರಾಗ್ಯ ಬರಲೀ ಎಂದು ನಿನ್ನ ಉಪಕಾರಕ್ಕಾಗಿಯೇ ಭೀಮಸೇನನು ಈರೀತಿ ಹೇಳಿರುವುದು. ಅದರಿಂದಾಗಿ ಈ ಭೀಮಸೇನನಲ್ಲಿ ನಿನ್ನ ಸೇಡನ್ನು ಬಿಡು.

 

ವಿಮುಚ್ಯ ದ್ವೇಷಕಾಮೌ ತ್ವಂ ವನೇ ತೀರ್ತ್ಥನಿಷೇವಕಃ ।

ತಪಸಾSSರಾಧಯ ಹರಿಂ ತತಃ ಪೂತೋ ಭವಿಷ್ಯಸಿ ॥ ೩೧.೧೮ ॥

 

ನೀನು ದ್ವೇಷ ಹಾಗೂ ಕಾಮನೆಗಳನ್ನು ಬಿಟ್ಟು, ಕಾಡಿನಲ್ಲಿ ತೀರ್ಥಗಳನ್ನು ಸೇವಿಸುತ್ತಾ, ತಪಸ್ಸಿನಿಂದ ನಾರಾಯಣನನ್ನು ಆರಾಧಿಸು. ಅದರಿಂದ ಪವಿತ್ರನಾಗುವೆ.’

 

ಇತ್ಯುಕ್ತೋ ದ್ವೇಷಮುತ್ಸೃಜ್ಯ ಭೀಮೇ ನಿರ್ವೇದಮಾಗತಃ ।

ಅನುಜ್ಞಾಂ ತಪಸೇ ಪ್ರಾಪ್ತುಮುಪವಾಸಪರೋSಭವತ್ ॥ ೩೧.೧೯ ॥

 

ಈರೀತಿಯಾಗಿ ಹೇಳಲ್ಪಟ್ಟ ಧೃತರಾಷ್ಟ್ರನು ಭೀಮಸೇನನಲ್ಲಿ ದ್ವೇಷವನ್ನು ಬಿಟ್ಟು ವೈರಾಗ್ಯವನ್ನು ಹೊಂದಿ ತಪಸ್ಸಿಗೋಸ್ಕರ ಅನುಜ್ಞೆಯನ್ನು ಹೊಂದಲು ಉಪವಾಸಕ್ಕೆ ಕುಳಿತನು.

No comments:

Post a Comment