ಯುಧಿಷ್ಠಿರಾರ್ಜ್ಜುನೌ ಭಕ್ತಿಂ ನಿತರಾಂ ತ್ವಯಿ ಚಕ್ರತುಃ ।
ನಾತಿಹೃಷ್ಟಸ್ತ್ವದಾಜ್ಞಾಯಾಂ
ಭೀಮಸ್ತನ್ಮಾ ಕ್ರುಧೋSತ್ರ
ಚ ॥ ೩೧.೪೧ ॥
‘ಶುದ್ಧೇ ಕ್ಷತ್ರಿಯಧರ್ಮ್ಮೇ
ಹಿ ನಿರತೋSಯಂ
ವೃಕೋದರಃ’ ।
ನೃಪಾರ್ಜ್ಜುನೌ ಧರ್ಮ್ಮರತಾವಪಿ
ಲೋಕಕೃಪಾಪರೌ ॥ ೩೧.೪೨ ॥
‘ಯುಧಿಷ್ಠಿರ ಹಾಗೂ
ಅರ್ಜುನರು ನಿನ್ನಲ್ಲಿ ಆತ್ಯಂತಿಕವಾದ ಭಕ್ತಿಯನ್ನು ಮಾಡಿದರು. ಭೀಮಸೇನನು ನಿನ್ನ ಅಣತಿಯ
ವಿಚಾರದಲ್ಲಿ ಬಹಳ ಸಂತೋಷದಿಂದಿಲ್ಲ. ಯಾವ ಕಾರಣದಿಂದ ಭೀಮಸೇನನು ಶುದ್ಧಕ್ಷತ್ರಿಯ ಧರ್ಮದಲ್ಲಿ
ರತನಾಗಿದ್ದಾನೆ, ಆ ಕಾರಣದಿಂದ ಅವನಲ್ಲಿ ಮುನಿಯಬೇಡ. ಯುಧಿಷ್ಠಿರ ಹಾಗೂ ಅರ್ಜುನರು ಕ್ಷತ್ರಿಯ ಧರ್ಮದಲ್ಲಿ
ಆಸಕ್ತರಾದರೂ ಕೂಡಾ ಪ್ರಜೆಗಳ ದಯೆಯಲ್ಲಿ (ದಾಕ್ಷಿಣ್ಯಧರ್ಮದಲ್ಲಿ) ಆಸಕ್ತರಾಗಿದ್ದಾರೆ.’
[ಮಹಾಭಾರತ(ಆಶ್ರಮವಾಸಿಕಪರ್ವ
೧೪.೦೮)-‘ಏವಮ್ಪ್ರಾಯೋ ಹಿ ಧರ್ಮೋSಯಂ ಕ್ಷತ್ರಿಯಾಣಾಂ ನರಾಧಿಪ । ಶುದ್ಧೇ ಕ್ಷತ್ರಿಯಧರ್ಮೇ ಹಿ ನಿರತೋSಯಂ ವೃಕೋದರಃ’]
ಅಜಾತಕೋಪಸ್ತಚ್ಛ್ರುತ್ವಾ
ಧೃತರಾಷ್ಟ್ರಃ ಪ್ರಶಾನ್ತಧೀಃ ।
ಕೃತ್ವಾ ಶ್ರಾದ್ಧಾನಿ
ಸರ್ವೇಷಾಂ ಮಹಾದಾನಾನ್ಯನಾರತಮ್ ॥ ೩೧.೪೩ ॥
ದಶರಾತ್ರಂ ದದೌ
ಶುದ್ಧಮನಸಾ ನಿಋಣತ್ವಧೀಃ ।
ಸರ್ವಂ ಸಮರ್ಪ್ಯ
ಗೋವಿನ್ದೇ ಪಾರ್ತ್ಥೇಭ್ಯೋSನ್ಯೇಭ್ಯ ಏವ ಚ ॥ ೩೧.೪೪ ॥
ವಿದುರನ ಮಾತನ್ನು ಕೇಳಿದ
ಧೃತರಾಷ್ಟ್ರನು ಕ್ರೋಧಿತನಾಗದೇ, ಶಾಂತವಾದ ಬುದ್ಧಿಯುಳ್ಳವನಾಗಿ, ದುರ್ಯೋಧನಾದಿಗಳಿಗೂ ಮತ್ತು ತನಗೂ
ಯಾವುದೇ ಋಣ ಇರಬಾರದು ಎನ್ನುವ ದೃಷ್ಟಿಯಲ್ಲಿ (ಋಣಪರಿಹಾರದ ಬಯಕೆಯಿಂದ)ಎಲ್ಲರಿಗೂ ಶ್ರಾದ್ಧವನ್ನು
ಮಾಡಿದನು. ಹತ್ತು ರಾತ್ರಿಗಳ ಕಾಲ ನಿರಂತರವಾಗಿ ಮಹಾ ದಾನಗಳನ್ನು ಮಾಡಿದನು.
ಸ್ವಜನೇಭ್ಯಃ ಸಮಾದಾಯ
ಸ್ರವನ್ನೇತ್ರೇಭ್ಯ ಉಚ್ಛಧೀಃ ।
ಅನುಜ್ಞಾಂ ನಿರ್ಗ್ಗತಃ
ಪ್ರಾಹ ಪೌರಜಾನಪದಾನ್ ನೃಪಃ ॥ ೩೧.೪೫ ॥
ತಾನು ಮಾಡಿದ ಎಲ್ಲಾ
ಕರ್ಮಗಳನ್ನು ನಾರಾಯಣನಲ್ಲಿ ಸಮರ್ಪಿಸಿ, ಪಾಂಡವರಿಂದಲೂ, ಉಳಿದ ಎಲ್ಲಾ ಬಂಧುಬಾಂಧವರಿಂದಲೂ ಅನುಜ್ಞೆಯನ್ನು ಪಡೆದು, ಕಣ್ಣೀರಿಡುತ್ತಾ ಹೊರಟ ಧೃತರಾಷ್ಟ್ರ ನೆರೆದಿರುವ ಎಲ್ಲಾ ಪ್ರಜೆಗಳನ್ನು ಕುರಿತು ಮಾತನಾಡಿದನು-
ಧರ್ಮ್ಮತೋ ರಕ್ಷಿತಾ
ಯೂಯಮಸ್ಮತ್ಪೂರ್ವೈರ್ಮ್ಮಹಾತ್ಮಭಿಃ ।
ನಚಾಹಂ ಪರಮಸ್ನೇಹಾದ್
ಯುಷ್ಮಾಭಿಃ ಸುಕೃಪಾಲುಭಿಃ ॥ ೩೧.೪೬ ॥
ಅರಕ್ಷಿತೇತಿ ಕಥಿತಃ
ಪ್ರಮಾದಾದಪಿ ಸಜ್ಜನಾಃ ।
ಇಷ್ಟಂ ಚ ಯಜ್ಞೈಃ ಪೂರ್ತ್ತೈಶ್ಚ
ಚರಿತಂ ಯುಷ್ಮದಾಶ್ರಯಾತ್ ॥ ೩೧.೪೭ ॥
ಪುತ್ರಸ್ತು ಮಮ
ಪಾಪಾತ್ಮಾ ಸರ್ವಕ್ಷತ್ರವಿನಾಶಕಃ ।
ಸರ್ವಾತಿಶಙ್ಕೀ ಮೂಢಶ್ಚ
ವೃದ್ಧಾನಾಂ ಶಾಸನಾತಿಗಃ ॥ ೩೧.೪೮ ॥
ನೀವೆಲ್ಲರೂ ನನಗಿಂತ
ಹಿರಿಯರಾದ ರಾಜರಿಂದ ಧರ್ಮಪೂರ್ವಕವಾಗಿ ಪಾಲಿಸಲ್ಪಟ್ಟಿದ್ದೀರಿ. ನಾನು ಪರಮಸ್ನೇಹದಿಂದ ನಿಮ್ಮನ್ನು
ಪಾಲಿಸಿಲ್ಲ. ಆದರೂ ನನ್ನ ಮೇಲೆ ಕೃಪೆತೋರಿದ ನಿಮ್ಮಿಂದ ‘ನಾನು ನಿಮ್ಮನ್ನು ರಕ್ಷಿಸಿಲ್ಲ’ ಎಂದು
ಹೇಳಲ್ಪಡಲಿಲ್ಲ. ನೀವು ಪ್ರಮಾದದಿಂದಲೂ ನನ್ನನ್ನು ಬೈಯಲಿಲ್ಲ. ನಾನು ನಿಮ್ಮ ಸಹಕಾರದಿಂದ ಯಾಗಗಳನ್ನು ಮಾಡಿದೆ. ಕೆರೆ ಕಟ್ಟೆಗಳನ್ನು ತೊಡಿಸಿದೆ. ಅರವಟ್ಟಿಗೆಗಳನ್ನು
ನಿರ್ಮಾಣಮಾಡಿದೆ,
ನನ್ನ ಮಗ ಅತ್ಯಂತ ಪಾಪಿಷ್ಠ, ಮೂಢ. ಎಲ್ಲಾ ಕ್ಷತ್ರಿಯರನ್ನು ನಾಶಮಾಡಲೆಂದು ಬಂದವನವನು. ಎಲ್ಲರನ್ನೂ
ಅವನು ಶಂಕಿಸುತ್ತಿದ್ದ. ವೃದ್ಧರ ಶಾಸನವನ್ನು ಅವನು ಮೀರಿದ್ದ.
ಸೌಭ್ರಾತ್ರಂ ಯೇನ
ಸನ್ತ್ಯಜ್ಯ ಪಾಣ್ಡವೇಷು ಮಹಾತ್ಮಸು ।
ಕೃತಂ ವಿರೂಪಂ ಸುಮಹತ್
ಕುರ್ಯ್ಯಾದ್ ಯನ್ನಾಪರಃ ಕ್ವಚಿತ್ ॥ ೩೧.೪೯ ॥
ಯಾವ ನನ್ನ ಮಗನಿಂದ ಮಹಾತ್ಮರಾದ
ಪಾಂಡವರಲ್ಲಿ ಸ್ನೇಹವನ್ನು ಬಿಟ್ಟು ದ್ವೇಷ ಮಾಡಲ್ಪಟ್ಟಿತು. ಅಂತಹ ಮಹತ್ತಾದ ದ್ವೇಷವನ್ನು ಇನ್ನೊಬ್ಬನು
ಎಲ್ಲಿಯೂ ಮಾಡುವುದಿಲ್ಲವೋ, ಅಂತಹ ತಪ್ಪು ಅವನಿಂದ ಮಾಡಲ್ಪಟ್ಟಿತು.
ಅಪ್ರಿಯಾಣಿ ಚ
ಕೃಷ್ಣಸ್ಯ ಸುಬಹೂನ್ಯಾಚರತ್ ಕುಧೀಃ ।
ಪ್ರಾಯಸ್ತೇನಾಪಿ
ಮನ್ದೇನ ನ ಯುಷ್ಮಾಸ್ವಶಿವಂ ಕೃತಮ್ ॥ ೩೧.೫೦ ॥
ಭ್ರಾತರೋSಸ್ಯ ಚ ಸರ್ವೇSಪಿ ತಚ್ಛೀಲಮನುವರ್ತ್ತಿನಃ ।
ಹತಾಶ್ಚ ಸ್ವೇನ ಪಾಪೇನ
ಸಸುತಾಮಾತ್ಯಬಾನ್ಧವಾಃ ॥ ೩೧.೫೧ ॥
ಶ್ರೀಕೃಷ್ಣನಿಗೆ
ಇಷ್ಟವಾಗದ ಕೆಲಸವನ್ನು ಅವನು ಮಾಡಿದ. ಪ್ರಾಯಃ ಮೂರ್ಖನಾದ ಅವನಿಂದ ನಿಮ್ಮಲ್ಲೂ ಅನಿಷ್ಟವು ಮಾಡಲ್ಪಟ್ಟಿದೆಯಷ್ಟೇ.
ಅವನ ತಮ್ಮಂದಿರೂ ಕೂಡಾ ಅವನದೇ ಸ್ವಭಾವವನ್ನು ಅನುಸರಿಸಿದರು ಮತ್ತು ಎಲ್ಲರೂ ತಮ್ಮ ಪಾಪದಿಂದಲೇ ಮಕ್ಕಳು, ಬಂಧುಬಾಂಧವರ ಸಹಿತರಾಗಿ ಸತ್ತು
ಹೋದರು.
No comments:
Post a Comment