ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, October 4, 2023

Mahabharata Tatparya Nirnaya Kannada 32-01-06

೩೨. ಪಾಣ್ಡವಸ್ವರ್ಗ್ಗಾರೋಹಣಮ್

 

̐

ತತಃ ಕುರುಕ್ಷೇತ್ರಮವಾಪ್ಯ ಕೃಷ್ಣೋ ದೀಕ್ಷಾಂ ಪ್ರಪೇದೇ ದ್ವಿಷಡಬ್ಧಸತ್ರೇ ।

ಸ ಏವ ಚ ವ್ಯಾಸಭೃಗೂದ್ವಹಾತ್ಮಾ ಚಕ್ರೇSತ್ರ ಸಾದಸ್ಯಮಜೋSಪ್ರಮೇಯಃ ॥ ೩೨.೦೧ ॥

 

ತದನಂತರ ಶ್ರೀಕೃಷ್ಣನು ಕುರುಕ್ಷೇತ್ರಕ್ಕೆ ಬಂದು, ಹನ್ನೆರಡುವರ್ಷ ನಡೆಸುವ ಯಾಗದಲ್ಲಿ ಧೀಕ್ಷೆಯನ್ನು ಹೊಂದಿದನು. ಉತ್ಪತ್ತಿರಹಿತನಾದ, ತಿಳಿಯಲು ಅಸಾಧ್ಯನೆನಿಸಿದ ಆ ಶ್ರೀಕೃಷ್ಣನೇ ವೇದವ್ಯಾಸ ಹಾಗೂ ಪರಶುರಾಮರೂಪವುಳ್ಳವನಾಗಿ ಈ ಯಾಗದಲ್ಲಿ ಸದಸ್ಯವಹಿಸಿದನು.(ಯಾಗ ನಿಯಾಮಕನಾದನು ಅಥವಾ ಯಾಗದ ವಿಧಿಯನ್ನು ಹೇಳತಕ್ಕವನಾದನು.)  

 

ತತ್ರರ್ತ್ವಿಜೋ ದಕ್ಷಭೃಗುಪ್ರಧಾನಾಃ ಪಾರ್ತ್ಥಾ ಯದೂನಾಂ ಪ್ರವರೈಃ ಸಮೇತಾಃ ।

ಬ್ರಹ್ಮೇಶಶಕ್ರಪ್ರಮುಖಾಃ ಸುರಾಶ್ಚ ಚಕ್ರುಃ ಸುಸಾಚಿವ್ಯಮನನ್ತದಾಸಾಃ ॥ ೩೨.೦೨ ॥

 

ಆ ಯಾಗದಲ್ಲಿ ದಕ್ಷ, ಭೃಗು ಮೊದಲಾದವರು ಪುರೋಹಿತರಾದರು. ಯಾದವ ಶ್ರೇಷ್ಠರಿಂದ ಕೂಡಿಕೊಂಡ ಪಾಂಡವರು, ಬ್ರಹ್ಮ-ರುದ್ರ-ಇಂದ್ರ ಮೊದಲಾದ ದೇವತೆಗಳೂ ಪರಮಾತ್ಮನ ಸೇವಕರಾಗಿ ಸಹಾಯವನ್ನು ಮಾಡಿದರು.

 

ಸರ್ವೇ ಚ ಜೀವಾ ವಸುಧಾತಳಸ್ಥಾ ಯೇSನ್ಯೇSನ್ತರಿಕ್ಷದ್ಯುಮುಖೋತ್ತರೇಷು ।

ವಸನ್ತಿ ನಾರಾಯಣಪಾದಸಂಶ್ರಯಾಸ್ತೇ ಚಾತ್ರ ಸರ್ವೇ ಮುಮುದುಃ ಸನಾಗಾಃ ॥ ೩೨.೦೩ ॥

 

ಭೂಮಿಯ ಮೇಲಿರುವ, ಅಂತರಿಕ್ಷ, ಸ್ವರ್ಗ, ಮೊದಲಾದ ಲೋಕಗಳಲ್ಲಿ ವಾಸಿಸುವ ಸಜ್ಜನರಾದ ಸಮಸ್ತ ಜೀವರು, ಪಾರಲೋಕಗಳಲ್ಲಿ ವಾಸಿಸುವ ನಾಗರೂ ಸೇರಿದಂತೆ ಸಮಸ್ತ ಭಗವಂತನ ಪಾದ ಸೇವಕರು, ಎಲ್ಲರೂ ಕೂಡಾ ಈ ಯಾಗಕ್ಕೆಂದು ಬಂದು ಸಂತೋಷಪಟ್ಟರು.

 

ಸುನಿರ್ಣ್ಣಯಸ್ತತ್ವವಿನಿರ್ಣ್ಣಯಾರ್ತ್ಥಿನಾಂ ತತ್ವಸ್ಯ ಚಾಭೂದಿಹ ವಾದಶೀಲಿನಾಮ್ ।

ಮಿಥೋ ವಿವಾದಾತ್ ಸುರಭೂಸುರಾಣಾಂ ವಾಕ್ಯಾದ್ಧರೇರ್ವ್ಯಾಸಭೃಗೂದ್ವಹಾತ್ಮನಃ ॥ ೩೨.೦೪ ॥

 

ದೇವತೆಗಳೂ ಹಾಗೂ ಋಷಿಗಳ ಪರಸ್ಪರ ವಿವಾದದಿಂದ, ವಾದಕ್ಕಾಗಿ ಹೊರಟಿರುವ, ತತ್ವದ ನಿರ್ಣಯಬೇಕು ಎಂದು ಬಯಸಿದ ಆ ಸಭೆಯಲ್ಲಿ ವೇದವ್ಯಾಸ ಹಾಗೂ ಪರಶುರಾಮ ದೇವರ ವಾಕ್ಯದಿಂದ ತತ್ವದ ಒಳ್ಳೆಯ ರೀತಿಯ ನಿರ್ಣಯವಾಯಿತು.

 

ಧರ್ಮ್ಮಾರ್ತ್ಥಕಾಮಾನಖಿಲಾನವಾಪುಸ್ತದರ್ತ್ಥಿನೋ ಮುಕ್ತಿಮಪೀಹ ಕೃಷ್ಣಾತ್ ।

ಯಥೇಷ್ಟಪಾನಾಶನವಾಸಸೋ ಜನಾ ವಿಚೇರುರತ್ರಾಮರಮಾನವಾದಯಃ ॥ ೩೨.೦೫ ॥

 

ಈ ಯಜ್ಞದಲ್ಲಿ ಎಲ್ಲರೂ ಶ್ರೀಕೃಷ್ಣನಿಂದ ಯಥೇಷ್ಟವಾಗಿ, ಬಯಸಿದಂತಹ ಪಾನ, ಅಶನ, ಭೋಜನ, ವಸ್ತ್ರವುಳ್ಳವರಾಗಿ,   ಧರ್ಮ-ಅರ್ಥ-ಕಾಮಗಳನ್ನೂ, ಮುಕ್ತಿಯನ್ನೂ ಕೂಡಾ ಕೃಷ್ಣನ ಅನುಗ್ರಹದಿಂದ ಹೊಂದಿ ತಿರುಗಾಡಿದರು.

 

ಕ್ಷೇತ್ರಂ ತದಾಸೀದ್ಧರಿಲೋಕಸಮ್ಮಿತಂ ಯದೀಯುರತ್ರಾಖಿಲಸಜ್ಜನಾ ಯುತಿಮ್ ।

ನಾನಾಪ್ತಕಾಮಾಶ್ಚ ಯತೋ ಬಭೂವುರ್ನ್ನಿರ್ಯ್ಯತ್ನದೃಶ್ಯಶ್ಚ ಯತೋSತ್ರ ಕೇಶವಃ ॥ ೩೨.೦೬ ॥

 

ಯಾವ ಕಾರಣದಿಂದ ಈ ಯಾಗದ ಕಾಲದಲ್ಲಿ ಶ್ರೀಕೃಷ್ಣನು ಯಾವುದೇ ಪ್ರಯತ್ನವಿಲ್ಲದೇ ಕಾಣಲ್ಪಟ್ಟನೋ, ಯಾವ ಕಾರಣದಿಂದ ಎಲ್ಲಾ ಸಜ್ಜನರೂ ಕೂಡಾ ಅಲ್ಲಿ ಒಟ್ಟಾಗಿದ್ದರೋ, ಯಾವ ಕಾರಣದಿಂದ ಅಲ್ಲಿ ಯಾರಿಗೂ ಕೂಡಾ ಬಯಕೆ ಈಡೇರಲಿಲ್ಲ ಎಂದಾಗಲಿಲ್ಲವೋ. ಆ ಎಲ್ಲಾ ಕಾರಣದಿಂದ ಈ ಕುರುಕ್ಷೇತ್ರವು ವೈಕುಂಠ ಲೋಕಕ್ಕೆ ಸದೃಶವಾಯಿತು. 

No comments:

Post a Comment