ಗೋಪಾಲಮನ್ತ್ರಂ ಭಜತಾಂ
ಫಲಪ್ರದ ಏಕೇನ ರೂಪೇಣ ಸ ಭುವ್ಯದೃಶ್ಯಃ ।
ತಸ್ಥೌ ದ್ವಿತೀಯೇನ ಚ
ಸೂರ್ಯ್ಯಮಣ್ಡಲೇ ತೃತೀಯಮಾಸೀಚ್ಛಿವಪೂಜಿತಂ ವಪುಃ ॥ ೩೨.೨೭ ॥
ಶ್ರೀಕೃಷ್ಣನು ಭೂಲೋಕದಲ್ಲಿ ಗೋಪಾಲಮಂತ್ರದಿಂದ[1]
ಭಜಿಸುವವರಿಗೆ ಒಂದು ರೂಪದಿಂದ ಫಲವನ್ನೀಯುತ್ತಾ ಅದೃಶ್ಯನಾಗಿ ನಿಂತ. ಎರಡನೇ ರೂಪದಿಂದ ಸೂರ್ಯಮಂಡಲದಲ್ಲಿ ನಿಂತ. ಮೂರನೇ
ರೂಪದಿಂದ ಶಿವಲೋಕದಲ್ಲಿ ಶಿವನಿಂದ ಪೂಜಿತನಾದ.
[ಈ ಕುರಿತು ಮಹಾಭಾರತದ ಮೌಸಲಪರ್ವದಲ್ಲಿ ವಿವರ ಕಾಣಸಿಗುತ್ತದೆ. ಗೋಪಾಲಮಂತ್ರದಿಂದ
ಪೂಜಿಸಲ್ಪಡುವ ಭಗವಂತನ ರೂಪದ ವರ್ಣನೆ ಹೀಗಿದೆ- ‘ಭುಜೈಶ್ಚತುರ್ಭಿಃ ಸಮುಪೇತಂ ಮಮೇದಂ ರೂಪಂ
ವಿಶಿಷ್ಟಂ ಜೀವಿತಂ ಸಂಸ್ಥಿತಂ ಚ । ಭೂಮೌ ಗತಂ ಪೂಜಯತಾಪ್ರಮೇಯಂ ಸದಾ ಹಿ ತಸ್ಮಿನ್ ನಿವಸಾಮೀತಿ
ದೇವಾಃ’ (೫.೩೪). ಸೂರ್ಯಮಂಡಲದಲ್ಲಿರುವ ಭಗವಂತನ ವರ್ಣನೆಯನ್ನೂ ಇಲ್ಲಿ
ಹೇಳಲಾಗಿದೆ- ‘ವಾಣೀ ಚಾSಸೀತ್ ಸಂಶ್ರಿತಾ ರೂಪಿಣೀ ಸಾ ಭಾನೋರ್ಮಧ್ಯೇ ಪ್ರವಿಶ ತ್ವಂ ತು ರಾಜನ್’ (೫.೩೩) ]
ಸಮ್ಪೂಜಿತಂ
ಬ್ರಹ್ಮಲೋಕೇ ಚತುರ್ಥಂ ಕಞ್ಜೋದ್ಭವೇನಾಥ ಪರಂ ಸ್ವಧಾಮ ।
ಸಮಾಪ್ನುವಾನಂ ವಪುರಸ್ಯ
ಪಞ್ಚಮಂ ಭಕ್ತ್ಯಾSನ್ವಯುರ್ದ್ದೇವವರಾಃ
ಸ್ವಶಕ್ತ್ಯಾ ॥ ೩೨.೨೮ ॥
ಬ್ರಹ್ಮಲೋಕದಲ್ಲಿ ಬ್ರಹ್ಮನಿಂದ ಚೆನ್ನಾಗಿ ಪೂಜಿಸಲ್ಪಡುವುದು ಪರಮಾತ್ಮನ ನಾಲ್ಕನೇ
ರೂಪವು. ತನ್ನ ಮನೆಯಾದ ವೈಕುಂಠಕ್ಕೆ ತೆರಳುತ್ತಿರುವ ಭಗವಂತನ ಐದನೇ ರೂಪವನ್ನು ದೇವತೆಗಳು ತಮ್ಮ
ಸ್ವರೂಪಯೋಗ್ಯತೆಗೆ ಅನುಗುಣವಾಗಿ ಭಕ್ತಿಯಿಂದ ಅನುಸರಿಸಿದರು.
[ಭಾಗವತ ಈ ಕುರಿತು ಹೇಳುವುದನ್ನು ಕಾಣಬಹುದು- ‘ಭವಂ ಪಿತಾಮಹಂ ವೀಕ್ಷ್ಯ ವಿಭೂತೀರಾತ್ಮನೋ ವಿಭುಃ । ಸಂಯುಜ್ಯಾSತ್ಮನಿ ಚಾSತ್ಮಾನಂ ಪದ್ಮನೇತ್ರೇ ನ್ಯಮೀಲಯತ್’ (೧೧.೩೧.೫), ‘ದೇವಾದಯೋ ಬ್ರಹ್ಮಮುಖಾ
ಆವಿಶಂತಂ ಸ್ವಧಾಮನಿ । ಅವಿಜ್ಞಾತಗತಿಂ ಕೃಷ್ಣಂ ದದೃಶುಶ್ಚಾತಿವಿಸ್ಮಿತಾಃ’(೧೧.೩೧.೮)]
[ಭಗವಂತನ ನಾಲ್ಕು ರೂಪಗಳು ರಾಮಾಯಣ ಮತ್ತು ಮಹಾಭಾರತದಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು
ಕಾಣುತ್ತೇವೆ. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ,
ಈ ನಾಲ್ಕು ರೂಪಗಳ ಉಪಾಸನೆ, ಜೊತೆಗೆ ಐದನೆಯದಾಗಿ ನಾರಾಯಣ ರೂಪದ ಉಪಾಸನೆಯನ್ನು ತೈತ್ತಿರೀಯ
ಸಂಹಿತೆ ಹೇಳುತ್ತದೆ. ಈ ನಾಲ್ಕು ರೂಪಗಳ ವಿಶೇಷವಾದ ಉಪಾಸನೆ ಬ್ರಹ್ಮಸೂತ್ರದ ನಾಲ್ಕು
ಅಧ್ಯಾಯದಲ್ಲಿ ಪ್ರತಿಪಾದಿತವಾಗಿದೆ. ಯಾರು ಈ ನಾಲ್ಕು
ಅಧ್ಯಾಯವನ್ನು ತಿಳಿಯುತಾರೋ ಅವರಿಗೆ ಭಗವಂತನ ನಾಲ್ಕು ರೂಪಗಳ ಸಾಕ್ಷಾತ್ಕಾರವಾಗುತ್ತದೆ ಎಂದು
ಹೇಳುತ್ತಾರೆ. ಇನ್ನೂ ವಿಶೇಷವಾದವರಲ್ಲಿ ಪ್ರತೀ ಅಧ್ಯಾಯದಲ್ಲಿರುವ ನಾಲ್ಕು ಪಾದಗಳಲ್ಲಿ ನಾಲ್ಕು
ಪರಮಾತ್ಮನ ರೂಪಗಳು ಗೋಚರವಾಗುತ್ತದೆ ಎನ್ನುತ್ತಾರೆ. ಇನ್ನೂ ವಿಶೇಷವಾಗಿ ಬ್ರಹ್ಮಸೂತ್ರದ ಒಂದೊಂದು
ಸೂತ್ರದಲ್ಲೂ, ಒಂದೊಂದು ಅಕ್ಷರದಲ್ಲೂ ಭಗವಂತನ
ರೂಪ ಗೋಚರವಾಗುತ್ತದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ನಾಲ್ಕು/ಐದು ರೂಪಗಳು ರಾಮಾಯಣ
ಮಹಾಭಾರತದಲ್ಲಿ ವಿಶೇಷ ಪಾತ್ರವನ್ನು ವಹಿಸಿರುವುದನ್ನು ನಾವು ಕಾಣುತ್ತೇವೆ.]
ತತ್ತೇಜಸಾ ತೇ
ಪ್ರತಿಮುಷ್ಟದೃಷ್ಟಯಃ ಪುರುಷ್ಟುತಾದ್ಯಾ ಅಮಿತೋರುದೀಧಿತೇಃ ।
ಯಾವತ್ ಸ್ವಗಮ್ಯಂ
ತ್ವನುಗಮ್ಯ ತಸ್ಥುರ್ನ್ನಿಮೀಲಿತಾಕ್ಷಾ ವಿಹತೋರ್ಧ್ವಚಾರಾಃ ॥ ೩೨.೨೯ ॥
ಇಂದ್ರ ಮೊದಲಾದ ದೇವತೆಗಳು ಭಗವಂತನ ಜೊತೆಗೆ ತಾವು ಎಲ್ಲಿಯತನಕ ಹೋಗಬಹುದೋ ಅಲ್ಲಿಯ ತನಕ ಅನುಸರಿಸಿ
ಹೋದರು. ನಂತರ ಪರಮಾತ್ಮನ ತೇಜಸ್ಸಿನಿಂದ ಕಣ್ಗಳನ್ನು ಮುಚ್ಚಿ, ಇನ್ನೂ ಮೇಲೆ ಹೋಗಲಾರದೇ ಅಲ್ಲಿಯೇ ನಿಂತರು.
[ಮಹಾಭಾರತದ ಮೌಸಲಪರ್ವದಲ್ಲಿ(೫.೩೫) ಈ
ಪ್ರಮೇಯವನ್ನು ಹೇಳಿದ್ದಾರೆ- ‘ದೇವಾ ನಿವೃತ್ತಾಸ್ತತ್ಪದಂ ನಾSಪ್ನುವಂತೋ ಬುದ್ಧ್ಯಾ ದೇವಂ
ಸಂಸ್ಮರಂತಃ ಪ್ರತೀತಾಃ’
ಇನ್ನು ಭಾಗವತದಲ್ಲೂ ಈ ವಿವರಣೆಯನ್ನು ಕಾಣಬಹುದು- ‘ಸೌದಾಮಿನ್ಯಾ ಯಥಾSSಕಾಶೇ ಯಾಂತ್ಯಾ ಭಿತ್ತ್ವಾSಭ್ರಮಂಡಲಮ್ | ಗತಿರ್ನ ಲಕ್ಷ್ಯತೇ ಮರ್ತ್ಯೈಸ್ತಥಾ ಕೃಷ್ಣಸ್ಯ ದೈವತೈಃ’ (೧೧.೩೧.೯)]
ವೀನ್ದ್ರೇಶಶೇಷಾನುಗತಃ
ಸ್ವಯಮ್ಭೂರ್ದ್ಧಾಮ ಪ್ರವಿಷ್ಟಂ ತಮಜಂ ಪ್ರಣಮ್ಯ ।
ವೀನ್ದ್ರಾದಿಕೈರಪ್ಯಯುತಃ
ಸ್ವಪಿತ್ರಾSSಶ್ಲಿಷ್ಟೋ
ರಹಶ್ಚಾಕಥಯತ್ ತಥಾSಸ್ತೌತ್ ॥ ೩೨.೩೦ ॥
ಗರುಡ-ಶೇಷ-ರುದ್ರ ಇವರಿಂದ ಅನುಸರಿಸಲ್ಪಟ್ಟವನಾದರೂ ಕೂಡಾ ಬ್ರಹ್ಮನು ಸ್ವಧಾಮಕ್ಕೆ ತೆರಳಿರುವ
ಆ ಸರ್ವೋತ್ಕೃಷ್ಟ ನಾರಾಯಣನನ್ನು ನಮಸ್ಕರಿಸಿ, ರುದ್ರಾದಿಗಳಿಂದಲೂ ಬೇರ್ಪಟ್ಟು, ಅಲ್ಲಿಂದ ಮುಂದೆ ತೆರಳಿ, ತಂದೆಯಾದ ಪರಮಾತ್ಮನಿಂದ ಆಲಿಂಗಿತನಾಗಿ ರಹಸ್ಯದಲ್ಲಿ ಮಾತನಾಡಿದನು. ಹಾಗೆಯೇ
ಸ್ತೋತ್ರಮಾಡಿದ ಕೂಡಾ.
[1]
ಗೋಪಾಲಮಂತ್ರದ ಕುರಿತು ಆಚಾರ್ಯರು ತಮ್ಮ ತಂತ್ರಸಾರ
ಸಂಗ್ರಹದಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. ಕಾಮಬೀಜವಾದ 'ಕ್ಲೀಂ’ ಕಾರದಿಂದ ಕೂಡಿದ, ಚತುರ್ಥ್ಯಂತವಾದ 'ಕೃಷ್ಣ' ಶಬ್ದ
ಮತ್ತು ವೇದವೇದ್ಯ ಎಂಬ ಅರ್ಥದ 'ಗೋವಿಂದ' ಶಬ್ದ, ಅನಂತರ
ಗೋಪಿಯರಿಗೆ ಪ್ರಿಯ ಎನ್ನುವ ಅರ್ಥದ ಚತುರ್ಥ್ಯಂತವಾದ 'ಗೋಪೀಜನವಲ್ಲಭ' ಶಬ್ದ ಮತ್ತು 'ಸ್ವಾಹಾ'
ಶಬ್ದ- ಈ ೧೮ ಅಕ್ಷರಗಳು ಸೇರಿ ಗೋಪಾಲಮಂತ್ರವಾಗುವುದು.(ತಥಾಚ ಮಂತ್ರಃ -‘ಕ್ಲೀಂ ಕೃಷ್ಣಾಯ
ಗೋವಿಂದಾಯ ಗೋಪೀಜನವಲ್ಲಭಾಯ ಸ್ವಾಹಾ’) ಈ ಮಂತ್ರವು ವಿಷ್ಣುಪ್ರೀತಿಯ ಮೂಲಕ ಎಲ್ಲಾ
ಬಯಕೆಗಳನ್ನೂ, ಮೋಕ್ಷವನ್ನೂ ಕೊಡುವಂಥದು. ಮಂತ್ರದ ೫ ಪದಗಳಿಂದ ಪಂಚಾಂಗನ್ಯಾಸವನ್ನಾಚರಿಸಬೇಕು.
ಧ್ಯಾಯೇದ್ಧರಿನ್ಮಣಿ-ನಿಭಂ
ಜಗದೇಕ-ವಂದ್ಯಂ ಸೌಂದರ್ಯ-ಸಾರಮರಿ-ಶಂಖ-ವರಾಭಯಾನಿ ।
ದೋರ್ಭಿರ್ದಧಾನಮಜಿತಂ
ಸ-ರಸಂ ಚ ಭೈಷ್ಮೀ-ಸತ್ಯಾ-ಸಮೇತಮಖಿಲ-ಪ್ರದಮಿಂದಿರೇಶಮ್ ॥
ಸಮಸ್ತ ಜನರಿಂದಲೂ
ವಂದ್ಯನಾದ, ಸೌಂದರ್ಯಪೂರ್ಣನಾದ,
ನಾಕು ಕೈಗಳಲ್ಲಿ ಚಕ್ರಶಂಖವರಾಭಯಮುದ್ರೆಗಳನ್ನು ಧರಿಸಿರುವ,
ಭಕ್ತರ ಮೇಲೆ ದಯಾರಸವನ್ನು ಬೀರುತ್ತಿರುವ, ಸಕಲ ಪುರುಷಾರ್ಥಪ್ರದನಾದ, ರುಗ್ಮಿಣಿ ಸತ್ಯಭಾಮೆಯರೊಡನೆ ಕುಳಿತಿರುವ, ನೀಲಮಣಿಯಂತೆ ಕಪ್ಪು ಮೈಯ, ಅಜೇಯನಾದ
ಶ್ರೀಹರಿಯನ್ನು ನೆನೆಯಬೇಕು. ಕಾಮಬೀಜದಿಂದ ಮತ್ತು ನಮಃ ಪದದಿಂದ ಕೂಡಿದ ಚತುರ್ಥ್ಯಂತವಾದ 'ಕೃಷ್ಣ' ಶಬ್ದವು ಕೃಷ್ಣಷಡಕ್ಷರ
ಎನ್ನಿಸಿಕೊಳ್ಳುವುದು.(ತಥಾಚ ಮಂತ್ರಃ – ‘ಕ್ಲೀಂ
ಕೃಷ್ಣಾಯ ನಮಃ’ ಅದರ ಆದ್ಯಕ್ಷರವಾದ ಕಾಮಬೀಜವೂ ಒಂದು ಸ್ವತಂತ್ರ
ಮಂತ್ರವಾಗಿದ್ದು ಚಿಂತಾಮಣಿಯಂತೆ ಸರ್ವೇಷ್ಟಪ್ರದವಾಗಿದೆ.
No comments:
Post a Comment