ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 1, 2023

Mahabharata Tatparya Nirnaya Kannada 31-20-29

 

ಅನಶ್ನನ್ತಂ ಚತುರ್ತ್ಥೇSಹ್ನಿ ಧೃತರಾಷ್ಟ್ರಂ ಯುಧಿಷ್ಠಿರಃ ।

ಜ್ಞಾತ್ವಾ ಸಮ್ಪ್ರಾರ್ತ್ಥಯಾಮಾಸ ಭೋಜನಾರ್ತ್ಥಂ ಪುನಃಪುನಃ ॥ ೩೧.೨೦ ॥

 

ಯುಧಿಷ್ಠಿರನು ಉಪವಾಸವಿರುವ ಧೃತರಾಷ್ಟ್ರನನ್ನು ನಾಲ್ಕನೇ ದಿವಸದಲ್ಲಿ ತಿಳಿದು, ‘ಊಟಮಾಡು’ ಎಂದು ಮತ್ತೆ ಮತ್ತೆ ಅವನನ್ನು ಬೇಡಿಕೊಂಡನು.

 

ಅನುಜ್ಞಾಂ ವನವಾಸಾಯ ತ್ವತ್ತಃ ಪ್ರಾಪ್ಯೈವ ಸರ್ವಥಾ ।

ಭೋಕ್ಷ್ಯೇSನ್ಯಥಾ ನೇತಿ ವದನ್ ಧೃತರಾಷ್ಟ್ರಃ ಶ್ರಮಾನ್ವಿತಃ ॥ ೩೧.೨೧ ॥

 

ಉಪವಾಸಕೃಶೋ ಭಾರ್ಯ್ಯಂ ಶಿಶ್ರಿಯೇ ಮೂರ್ಚ್ಛಿತಃ ಕ್ಷಣಾತ್ ।

ಶನ್ತಮೇನ ಕರೇಣಾಥ ಧರ್ಮ್ಮಜಸ್ತಂ ಮೃದು ಸ್ಪೃಶನ್ ॥ ೩೧.೨೨ ॥

 

ಶನೈಃ ಸಂಜ್ಞಾಮಗಮಯದಬ್ರವೀಚ್ಚ ಸುದುಃಖಿತಃ ।

ಪುರಸ್ಕೃತ್ಯ ಯುಯುತ್ಸುಂ ತ್ವಂ ಕುರು ರಾಜ್ಯಮಕಣ್ಟಕಮ್ ॥ ೩೧.೨೩ ॥

 

ವಯಮೇವ ತ್ವದರ್ತ್ಥಾಯ ಕುರ್ಮ್ಮಃ ಸರ್ವೇ ತಪೋ ವನೇ ।

ನೇತ್ಯಾಹ ಧೃತರಾಷ್ಟ್ರಸ್ತಂ ಕುಲಧರ್ಮ್ಮೋ ಹಿ ನೋ ವನೇ ॥ ೩೧.೨೪ ॥

 

ಅನ್ತೇ ದೇಹಪರಿತ್ಯಾಗಸ್ತನ್ಮಾSನುಜ್ಞಾತುಮರ್ಹಸಿ ।

ತಯೋರ್ವಿವದತೋರೇವಂ ಕೃಷ್ಣದ್ವೈಪಾಯನಃ ಪ್ರಭುಃ ॥ ೩೧.೨೫ ॥

 

ಸರ್ವಜ್ಞಃ ಸರ್ವಕರ್ತ್ತೇಶ ಆವಿರ್ಭೂತೋSಬ್ರವೀನ್ನೃಪಮ್ ।

ತಪಸಾSಶೇಷದೋಷಾಣಾಂ ಕ್ಷಯಕಾಮಮಿಮಂ ನೃಪಮ್  ॥ ೩೧.೨೬ ॥

 

ಅನುಜಾನೀಹಿ ನೈವಾಸ್ಯ ಧರ್ಮ್ಮವಿಘ್ನಕರೋ ಭವ ।

ಕಾಲೇ ನಿರ್ವೇದಮಾಪನ್ನಸ್ತಪಸಾ ದಗ್ಧಕಿಲ್ಬಿಷಃ ॥ ೩೧.೨೭ ॥

 

ಶುಭ್ರಾಂ ಗತಿಮಯಂ ಯಾಯಾದನ್ಯಥಾ ನ ಕಥಞ್ಚನ ।

ಇತ್ಯುಕ್ತೋ ಧರ್ಮ್ಮರಾಜಸ್ತಮನುಜಜ್ಞೇ ಸ ಚಾಶಿತಃ ॥ ೩೧.೨೮ ॥

 

 

‘ನಿನ್ನಿಂದ ವನವಾಸಕ್ಕಾಗಿ ಅನುಜ್ಞೆಯನ್ನು ಹೊಂದಿಯೇ ಊಟಮಾಡುತ್ತೇನೆ, ಇಲ್ಲದಿದ್ದರೆ ಇಲ್ಲಾ’ ಎಂದು ಹೇಳುತ್ತಾ, ಉಪವಾಸದಿಂದ ಬಹಳ ಶ್ರಮಗೊಂಡು, ಕೃಶನಾದ ಧೃತರಾಷ್ಟ್ರನು, ಮೂರ್ಛಿತನಾಗಿ ಹೆಂಡತಿಯನ್ನು ಆಶ್ರಯಿಸಿದನು.    

ಆಗ ಯುಧಿಷ್ಟಿರನು ಬಹಳ ಆನಂದವನ್ನು ಉಂಟುಮಾಡುವ ತನ್ನ ಕೈಯಿಂದ ದೊಡ್ಡಪ್ಪನನ್ನು ಮೃದುವಾಗಿ ಮುಟ್ಟುತ್ತಾ, ನಿಧಾನವಾಗಿ ಅವನನ್ನು ಎಚ್ಚರಗೊಳಿಸಿದನು. ದುಃಖಿತನಾಗಿ ಯುಧಿಷ್ಠಿರ ಹೇಳುತ್ತಾನೆ- ‘ನೀನು ಯುಯುತ್ಸುವನ್ನು ಮುಂದಿಟ್ಟುಕೊಂಡು, ಶತ್ರುಗಳಿಂದ ರಹಿತವಾದ ರಾಜ್ಯವನ್ನು ಪಾಲನೆ ಮಾಡು. ನಾವೇ ನಿನಗಾಗಿ ಕಾಡಿನಲ್ಲಿ ತಪಸ್ಸು ಮಾಡುತ್ತೇವೆ’ ಎಂದು. ಧೃತರಾಷ್ಟ್ರನು ಹೀಗೆ ಹೇಳುವ ಧರ್ಮರಾಜನನ್ನು ಕುರಿತು- ‘ಅದು ಸಾಧ್ಯವಿಲ್ಲ, ಕಾಡಿಗೆ ಹೋಗುವುದು ಮತ್ತು ಕಡೆಗಾಲದಲ್ಲಿ ಕಾಡಿನಲ್ಲಿ  ದೇಹತ್ಯಾಗ ಮಾಡುವುದು ನಮ್ಮ ಕುಲಧರ್ಮ. ನನಗೆ ಕಾಡಿಗೆ ಹೋಗಲು ಅನುಜ್ಞೆನೀಡಲು ನೀನು ಅರ್ಹನಾಗಿದ್ದೀಯ’ ಎಂದು ಹೇಳಿದ.  ಅವರಿಬ್ಬರೂ ಈ ರೀತಿ ವಾದ-ವಿವಾದ ಮಾಡುತ್ತಿರಲು-ಎಲ್ಲವನ್ನೂ ಬಲ್ಲ, ಎಲ್ಲವನ್ನೂ ಮಾಡುವ, ಸರ್ವಸಮರ್ಥರಾದ, ಎಲ್ಲರ ಒಡೆಯರಾದ ವೇದವ್ಯಾಸರು ಅಲ್ಲಿ ಆವಿರ್ಭಾವಗೊಂಡು, ಧರ್ಮರಾಜನನ್ನು ಕುರಿತು ಹೇಳಿದರು- ‘ತಪಸ್ಸಿನಿಂದ ಎಲ್ಲಾ ದೋಷಗಳ ನಾಶವಾಗಬೇಕು ಎಂದು ಬಯಸುವ ಈ ರಾಜನಿಗೆ ಅನುಜ್ಞೆಕೊಡು. ಇವನ ಧರ್ಮ ವಿಘ್ನ ಮಾಡಬೇಡ. ಸರಿಯಾದ ಕಾಲದಲ್ಲಿ ವೈರಾಗ್ಯವನ್ನು ಹೊಂದಿರುವ ಇವನು ತಪಸ್ಸಿನಿಂದ ತನ್ನ ಪಾಪವನ್ನು ಸುಟ್ಟು ಪವಿತ್ರವಾದ ಗತಿಯನ್ನು ಹೊಂದುತ್ತಾನೆ, ಇಲ್ಲದಿದ್ದರೆ ಹೊಂದಲಾರ’ ಎಂದು. ಈರೀತಿ ಹೇಳಲ್ಪಟ್ಟ ಧರ್ಮರಾಜನು ಧೃತರಾಷ್ಟ್ರನಿಗೆ ಅನುಜ್ಞೆಯನ್ನಿತ್ತನು. ಧೃತರಾಷ್ಟ್ರನು ಊಟ ಮಾಡಿದ ಕೂಡಾ.

 

ಶಿಕ್ಷಯಾಮಾಸ ಸದ್ಧರ್ಮ್ಮಾನ್ ನೀತಿಂ ಚ ವಿದುಷೇSಪ್ಯಲಮ್ ।

ಕೇವಲಸ್ನೇಹತೋ ರಾಜ್ಞೇ ಶುಶ್ರಾವ ವಿನಯಾಯ ಸಃ ॥ ೩೧.೨೯ ॥

 

ಯುಧಿಷ್ಠಿರನ ಮೇಲಿನ ಸ್ನೇಹದಿಂದ ಸಜ್ಜನರ ಧರ್ಮವನ್ನೂ, ರಾಜನೀತಿಯನ್ನೂ ಧೃತರಾಷ್ಟ್ರ ಯುಧಿಷ್ಟಿರನಿಗೆ ಉಪದೇಶ ಮಾಡಿದನು. ಅದೆಲ್ಲವನ್ನೂ ಚೆನ್ನಾಗಿ ಬಲ್ಲವನಾದರೂ, ಧರ್ಮರಾಜನು ವಿನಯಕ್ಕಾಗಿ ಅದನ್ನು ಕೇಳಿದನು.  

No comments:

Post a Comment