ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 27, 2018

Mahabharata Tatparya Nirnaya Kannada 9.138-9.143


ಉಕ್ತಂ ಲಕ್ಷಣಶಾಸ್ತ್ರೇ ಚ ಕೃಷ್ಣದ್ವೈಪಾಯನೋದಿತೇ
ತ್ರಿಭಾಷಾ ಯೋ ನ ಜಾನಾತಿ ರೀತೀನಾಂ ಶತಮೇವ ಚ  ೯.೧೩೮

ವ್ಯತ್ಯಾಸಾದೀನ್ ಸಪ್ತ ಭೇದಾನ್ ವೇದಾದ್ಯರ್ತ್ಥಂ ತಥಾ ವದೇತ್
ಸ ಯಾತಿ ನಿರಯಂ ಘೋರಮನ್ಯಥಾಜ್ಞಾನಸಮ್ಭವಮ್೯.೧೩೯

(‘ಲಕ್ಷಣ ಗ್ರಂಥ’ವನ್ನೂ ವೇದವ್ಯಾಸರೇ ರಚಿಸಿದ್ದಾರೆ. ಮಹಾಭಾರತವನ್ನು ಯಾವ ರೀತಿ ಅರ್ಥೈಸಬೇಕು ಎನ್ನುವ ವಿವರ ಅಲ್ಲಿದೆ. ಯಾವ-ಯಾವ ವಾಕ್ಯಗಳು ಎನೇನಾಗಿವೆ, ಯಾವಯಾವ ಘಟನೆಗಳು ಯಾವಯಾವ ಶೈಲಿಯಲ್ಲಿದೆ ಎಂದು ವೇದವ್ಯಾಸರೇ ವಿವರ ನೀಡಿದ್ದಾರೆ. ಅದನ್ನೇ ‘ಲಕ್ಷಣಶಾಸ್ತ್ರ’ ಎಂದು ಕರೆಯುತ್ತಾರೆ). 
ಲಕ್ಷಣಗ್ರಂಥದಲ್ಲೇ ಹೇಳಿರುವಂತೆ:  ಮೂರು ಭಾಷೆಗಳನ್ನು(ಸಮಾಧಿ, ದರ್ಶನ ಮತ್ತು ಗುಹ್ಯ ಭಾಷೆಗಳನ್ನು), ನೂರು ರೀತಿಗಳನ್ನು ಹಾಗು  ವ್ಯತ್ಯಾಸ ಮೊದಲಾದ ಏಳು ಭೇಧಗಳನ್ನು ತಿಳಿಯದೇ ಯಾರು ವೇದ-ಪುರಾಣ ಇತ್ಯಾದಿಗಳನ್ನು ವ್ಯಾಖ್ಯಾನ ಮಾಡುತ್ತಾರೋ, ಅವರು ವಿಪರೀತಜ್ಞಾನದಿಂದ  ಉಂಟಾಗತಕ್ಕ ಘೋರವಾದ ನರಕವನ್ನು ಹೊಂದುತ್ತಾರೆ.

ಇತ್ಯನ್ಯೇಷು ಚ ಶಾಸ್ತ್ರೇಷು ತತ್ರತತ್ರೋದಿತಂ ಬಹು
‘ವ್ಯತ್ಯಾಸಃ ಪ್ರಾತಿಲೋಮ್ಯಂ ಚ ಗೋಮೂತ್ರೀ ಪ್ರಘಸಸ್ತಥಾ ೯.೧೪೦

‘ಉಕ್ಷಣಃ ಸುಧುರಃ ಸಾಧು ಸಪ್ತ ಭೇದಾಃ ಪ್ರಕೀರ್ತ್ತಿತಾಃ’ 
ಇತ್ಯಾದಿ ಲಕ್ಷಣಾನ್ಯತ್ರ ನೋಚ್ಯನ್ತೇsನ್ಯಪ್ರಸಙ್ಗತಃ  ೯.೧೪೧

ಈರೀತಿಯಾಗಿ ಬೇರೆಬೇರೆ ಶಾಸ್ತ್ರಗಳಲ್ಲಿ (ಲಕ್ಷಣ ಗ್ರಂಥ, ನಿರ್ಣಯ ಗ್ರಂಥ, ಮೊದಲಾದವುಗಳಲ್ಲಿ) ಅಲ್ಲಲ್ಲಿ ಬಹಳವಾಗಿ ಹೇಳಿದ್ದಾರೆ. ವ್ಯತ್ಯಾಸಃ,  ಪ್ರಾತಿಲೋಮ್ಯ, ಗೋಮೂತ್ರೀ, ಪ್ರಘಸ, ಉಕ್ಷಣಃ,  ಸುಧುರಃ ಮತ್ತು  ಸಾಧು ಎನ್ನುವ ಏಳು ತರದ ಕಥಾ ಭೇದಗಳಿವೆ.  ಈ ಎಲ್ಲಾ ಲಕ್ಷಣಗಳ ವಿವರಣೆಯನ್ನು ಇಲ್ಲಿ ನಾನು ವಿವರಿಸುತ್ತಿಲ್ಲ. ಏಕೆಂದರೆ ಅದು ಬೇರೆಯೇ ಪ್ರಸಂಗ.
[ವ್ಯತ್ಯಾಸಃ: ಕಾಲವ್ಯತ್ಯಾಸ, ದೇಶವ್ಯತಾಸ, ಪುರುಷವ್ಯತ್ಯಾಸ ಶೈಲಿ ನಿರೂಪಣೆ. ಮುಖ್ಯವಾಗಿ ಅಸುರರನ್ನು ದಾರಿ ತಪ್ಪಿಸಲು ಬಳಸುವ ನಿರೂಪಣೆ. ಇಲ್ಲಿ ಕಾಲ, ದೇಶ, ವ್ಯಕ್ತಿಗಳನ್ನೇ  ಬದಲಿಸಿ ಹೇಳಲಾಗುತ್ತದೆ.
ಪ್ರಾತಿಲೋಮ್ಯ: ಅನುಕ್ರಮವಿಲ್ಲದ ನಿರೂಪಣಾ ಶೈಲಿ.
ಗೋಮೂತ್ರೀ: ಎತ್ತು ಮೂತ್ರ ಮಾಡಿದಂತೆ ವಕ್ರಗತಿಯಲ್ಲಿ ನಿರೂಪಣೆ.
ಪ್ರಘಸಃ : ಹಸು ಹುಲ್ಲು ತಿಂದಂತೆ, (ಇಲ್ಲಿ ಸ್ವಲ್ಪ- ಅಲ್ಲಿ ಸ್ವಲ್ಪ) ಮಧ್ಯಮಧ್ಯದಲ್ಲಿ ಹೇಳುತ್ತಿರುವ ಕಥಾಭಾಗವನ್ನು ಬಿಟ್ಟು, ಬೇರೆಬೇರೆ ಕಥೆಗಳನ್ನು ನಿರೂಪಣೆ ಮಾಡುವುದು. ಇಲ್ಲಿ ಕ್ರಮವಾಗಿ ಒಂದೇ ಕಥೆಯನ್ನು ಹೇಳುವುದಿಲ್ಲ.
ಉಕ್ಷಣಃ  : ಪ್ರೋಕ್ಷಣ ರೂಪದಲ್ಲಿ ಕಥೆಯನ್ನು ಸ್ವಲ್ಪ  ನಿರೂಪಣೆ ಮಾಡಿ ಮುಂದೆ ಹೋಗುವುದು.
ಸುಧುರಃ : ಸಮಗ್ರವಾಗಿ(meticulous) ನಿರೂಪಣೆ ಮಾಡುವುದು
ಸಾಧು : ಸಮಾಧಿಭಾಷೆಯಿಂದ ಪರಮಾತ್ಮನ ಸರ್ವೋತ್ತಮತ್ತ್ವ ಮೊದಲಾದ ತತ್ತ್ವಗಳನ್ನು ಸರಿಯಾಗಿ ತೋರುವಂತೆ ನಿರೂಪಿಸುವುದು]

ಅನುಸಾರೇಣ ತೇಷಾಂ ತು ನಿರ್ಣ್ಣಯಃ ಕ್ರಿಯತೇ ಮಯಾ
ತಸ್ಮಾನ್ನಿರ್ಣ್ಣಯಶಾಸ್ತ್ರತ್ವಾದ್ ಗ್ರಾಹ್ಯಮೇತದ್ ಬುಭೂಷುಭಿಃ ೯.೧೪೨

ಆ ಎಲ್ಲಾ ಪ್ರಮಾಣ ಗ್ರಂಥಗಳ ಅನುಸಾರವಾಗಿ ನಿರ್ಣಯವನ್ನು ನಾನಿಲ್ಲಿ ಮಾಡಿದ್ದೇನೆ. ಆ ಕಾರಣದಿಂದ ನಿರ್ಣಯ ಶಾಸ್ತ್ರವಾಗಿರುವ ಈ ಗ್ರಂಥವು ಗ್ರಾಹ್ಯ. (ನಿರ್ಣಯ ಗ್ರಂಥ ಎನ್ನುವುದು ನನ್ನ ಬುದ್ಧಿ ವೈಭವವಲ್ಲ. ಇದು ವೇದವ್ಯಾಸರ ವಿವಕ್ಷೆ ಕೂಡಾ ಹೌದು ಎನ್ನುವುದನ್ನು ಮಧ್ವಾಚಾರ್ಯರು ಇಲ್ಲಿ ಸ್ಪಷ್ಟಪಡಿಸಿದ್ದಾರೆ) 

ಇತೀರಿತಾ ರಾಮಕಥಾ ಪರಾ ಮಯಾ ಸಮಸ್ತಶಾಸ್ತ್ರಾನುಸೃತೇರ್ಭವಾಪಹಾ
ಪಠೇದಿಮಾಂ ಯಃ ಶೃಣುಯಾದಥಾಪಿ ವಾ ವಿಮುಕ್ತಬನ್ಧಶ್ಚರಣಂ ಹರೇರ್ವ್ರಜೇತ್ ೯.೧೪೩

ಉಪಸಂಹಾರ ಮಾಡುತ್ತಾ ಆಚಾರ್ಯರು ಹೇಳುತ್ತಾರೆ: ‘ಈರೀತಿಯಾಗಿ ಸಂಸಾರಬಂಧವನ್ನು ನಾಶ ಮಾಡುವ, ಉತ್ಕೃಷ್ಟವಾದ ರಾಮನ ಕಥೆಯು ಎಲ್ಲಾ ಶಾಸ್ತ್ರವನ್ನು ಅನುಸರಿಸಿ, ನನ್ನಿಂದ ಹೇಳಲ್ಪಟ್ಟಿದೆ. ಇದನ್ನು ಯಾರು ಓದುತ್ತಾನೋ, ಕೇಳುತ್ತಾನೋ, ಅವನು ಸಮಸ್ತ ಬಂಧದಿಂದ ಮುಕ್ತನಾಗಿ, ಪರಮಾತ್ಮನ ಪಾದವನ್ನು ಹೊಂದುತ್ತಾನೆ’.

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ  ಶ್ರೀರಾಮಸ್ವಧಾಮಪ್ರವೇಶೋ ನಾಮ ನವಮೋsಧ್ಯಾಯಃ

*********

No comments:

Post a Comment