ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, April 29, 2020

Mahabharata Tatparya Nirnaya Kannada 17124_17131


ಸ ಬಾಹುನೈವ ಕೇಶವೋ ವಿಜಿತ್ಯ ಯಾವನಂ ಪ್ರಭುಃ ।
ನಿಹತ್ಯ ಸರ್ವಸೈನಿಕಾನ್ ಸ್ವಮಸ್ಯ ಯಾಪಯತ್ ಪುರೀಮ್ ॥೧೭.೧೨೪॥

ಕೃಷ್ಣನಾದರೋ, ಕೇವಲ ತನ್ನ ಬಾಹುಗಳಿಂದ ಕಾಲಯವನನನ್ನು ಗೆದ್ದು, ಅವನ ಎಲ್ಲಾ ಸೈನಿಕರನ್ನು ಕೊಂದು, ಅವನಿಗೆ ಸೇರಿದ ಎಲ್ಲಾ  ದ್ರವ್ಯಗಳನ್ನು ತನ್ನ ಪಟ್ಟಣವನ್ನು ಕುರಿತು ಕಳುಹಿಸಿಕೊಟ್ಟನು.

ಸಹಾಸ್ತ್ರಶಸ್ತ್ರಸಞ್ಚಯಾನ್ ಸೃಜನ್ತಮಾಶು ಯಾವನಮ್ ।
ನ್ಯಪಾತಯದ್ ರಥೋತ್ತಮಾತ್ ತಳೇನ ಕೇಶವೋsರಿಹಾ ॥೧೭.೧೨೫॥

ಶತ್ರುಗಳನ್ನು ಕೊಲ್ಲುವ ಕೇಶವನು, ಅಸ್ತ್ರ-ಶಸ್ತ್ರಗಳ ಸಮೂಹವನ್ನೇ ತನ್ನತ್ತ ಬಿಡುತ್ತಿರುವ ಕಾಲಯವನನನ್ನು  ಉತ್ಕೃಷ್ಟವಾದ ಅವನ ರಥದಿಂದ ಕೆಳಗೆ ಬೀಳಿಸಿದನು.

ವಿವಾಹನಂ ನಿರಾಯುಧಂ ವಿಧಾಯ ಬಾಹುನಾ ಕ್ಷಣಾತ್ ।
ವಿಮೂರ್ಚ್ಛಿತಂ ನಚಾಹನತ್ ಸುರಾರ್ತ್ಥಿತಂ ಸ್ಮರನ್ ಹರಿಃ ॥೧೭.೧೨೬॥

ಪರಮಾತ್ಮನು ಕ್ಷಣದಲ್ಲಿ ತನ್ನ ಬಾಹುವಿನಿಂದ ಅವನನ್ನು ವಾಹನವಿಲ್ಲದವನಾಗಿಯೂ, ಆಯುಧವಿಲ್ಲದವನಾಗಿಯೂ ಮಾಡಿದನು.  ಮೂರ್ಛೆಗೊಂಡ ಅವನನ್ನು ದೇವತೆಗಳ ಪ್ರಾರ್ಥನೆಯನ್ನು  ನೆನಪಿಸಿಕೊಂಡು ಕೊಲ್ಲಲಿಲ್ಲ.

[ದೇವತೆಗಳ ಪ್ರಾರ್ಥನೆ ಏನಾಗಿತ್ತು?]

ಪುರಾ ಹಿ ಯೌವನಾಶ್ವಜೇ ವರಪ್ರದಾಃ ಸುರೇಶ್ವರಾಃ ।
ಯಯಾಚಿರೇ ಜನಾರ್ದ್ದನಂ ವರಂ ವರಪ್ರದೇಶ್ವರಮ್ ॥೧೭.೧೨೭॥

ಅನರ್ತ್ಥಕೋ ವರೋsಮುನಾ ವೃತೋsಪಿ ಸಾರ್ತ್ಥಕೋ ಭವೇತ್ ।
ಅರಿಂ ಭವಿಷ್ಯಯಾವನಂ ದಹತ್ವಯಂ ತವೇಶ್ವರ ॥೧೭.೧೨೮॥

ಯುವನಾಶ್ವನ ಮಗ ಮಾನ್ಧಾತಾ, ಮಾನ್ಧಾತಾನ ಮಗನಾದ  ಮುಚುಕುನ್ದನಿಗೆ ಹಿಂದೆ  ವರವನ್ನು ನೀಡಿದ್ದ ಶ್ರೇಷ್ಠರಾದ ದೇವತೆಗಳು, ತಾವು ಕೊಟ್ಟ ವರವನ್ನು ಸತ್ಯವಾಗಿಸುವಂತೆ, ವರವನ್ನು ಕೊಡುವವರಲ್ಲಿಯೇ ಅಗ್ರಗಣ್ಯನಾದ ನಾರಾಯಣನನ್ನು ಕುರಿತು ಹೀಗೆ ಬೇಡಿದ್ದರು:
‘ಈ ಮುಚುಕುನ್ದನಿಂದ ವ್ಯರ್ಥವಾದ ವರವು ಬೇಡಲ್ಪಟ್ಟರೂ ಕೂಡಾ, ಅದು ಅವನಿಗೆ ಸಾರ್ಥಕವಾಗಬೇಕು. ನಿನ್ನ ಶತ್ರುವಾಗಿರುವ, ಮುಂದೆ ಬರುವ ಕಾಲಯವನನನ್ನು ಈ ಮುಚುಕುನ್ದನು  ಸುಟ್ಟುಬಿಡಲಿ’  ಎಂದು.

ತಥಾsಸ್ತ್ವಿತಿ ಪ್ರಭಾಷಿತಂ ಸ್ವವಾಕ್ಯಮೇವ ಕೇಶವಃ ।
ಋತಂ ವಿಧಾತುಮಭ್ಯಯಾತ್ ಸ ಯೌವನಾಶ್ವಜಾನ್ತಿಕಮ್ ॥೧೭.೧೨೯॥

ಕೃಷ್ಣನು ‘ಹಾಗೆಯೇ ಆಗಲಿ’ ಎಂದು ಹೇಳಲ್ಪಟ್ಟ  ತನ್ನ ಮಾತನ್ನೇ ಸತ್ಯವನ್ನಾಗಿ ಮಾಡಲು ಮುಚಕುನ್ದನ ಸಮೀಪ ತೆರಳಿದನು.

ಸಸಙ್ಜ್ಞಕೋsಥ ಯಾವನೋ ಧರಾತಳಾತ್ ಸಮುತ್ಥಿತಃ ।
ನಿಪಾತ್ಯ ಯಾನ್ತಮೀಶ್ವರಂ ಸ ಪೃಷ್ಠತೋsನ್ವಯಾತ್ ಕ್ರುಧಾ ॥೧೭.೧೩೦॥

ಸ್ವಲ್ಪಹೊತ್ತಾದಮೇಲೆ, ಪ್ರಜ್ಞೆಬಂದ ಕಾಲಯವನನು, ಭೂಮಿಯಿಂದ ಮೇಲೆದ್ದು, ಕೋಪದಿಂದ,  ತೆರಳುತ್ತಿರುವ ಕೃಷ್ಣನನ್ನು ಹಿಂದಿನಿಂದ ಅನುಸರಿಸಿದನು.

[ಈ ಎಲ್ಲಾ ಘಟನೆಯ ವಿವರವನ್ನು ನಾವು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೭.೪೩-೪೭)ಕಾಣುತ್ತೇವೆ:  ಮಾನ್ಧಾತುಸ್ತು ಸುತೋ ರಾಜಾ ಮುಚುಕುನ್ದೋ ಮಹಾಯಶಾಃ  । (ಯುವನಾಶ್ವನ ಮಗ ಮಾನ್ಧಾತ, ಮಾನ್ಧಾತುವಿನ ಮಗ  ಮುಚುಕುನ್ದ) ಪುರಾ ದೇವಾಸುರೇ ಯುದ್ಧೇ ಕೃತಕರ್ಮ ಮಹಾಬಲಃ । ವರೇಣ  ಚ್ಛನ್ದಿತೋ ದೆವೈರ್ನಿದ್ರಾಮೇವ ಗೃಹೀತವಾನ್ ।  (ದೇವಾಸುರ ಯುದ್ಧದಲ್ಲಿ ದೇವತೆಗಳ ಪರವಾಗಿ ಯುದ್ಧಮಾಡಿ ದಣಿದಿದ್ದ ಮುಚುಕುನ್ದ, ಯುದ್ಧಾನಂತರ  ತನಗೆ ವಿಶ್ರಾಂತಿಬೇಕು ಎಂದು ನಿದ್ರೆಯನ್ನೇ ವರವಾಗಿ ಬೇಡಿದ) ಶ್ರಾನ್ತಸ್ಯ ತಸ್ಯ ವಾಗೇವಂ ತದಾ ಪ್ರಾದುರಭೂತ್ ಕಿಲ । ಪ್ರಸುಪ್ತೋ ಬೋಧಯೇದ್ ಯೋ ಮಾಂ ತಂ ದಹೇಯಮಹಂ ಸುರಾಃ  ।  (‘ನಾನು ಮಲಗಿರುತ್ತೇನೆ. ಯಾರಾದರು ವಿಶ್ರಾಂತಿ ಕಾಲದಲ್ಲಿ ನನ್ನನ್ನು ಎಬ್ಬಿಸಿದರೆ ಅವರು ಬಸ್ಮವಾಗಲಿ’ ಎಂದು ಅವನು ವರವನ್ನು ಬೇಡಿದ್ದ) ಚಕ್ಷುಷಾ ಕ್ರೋಧದೀಪ್ತೇನ ಏವಮಾಹ ಪುನಃಪುನಃ  (ಒಮ್ಮೆ ಅಲ್ಲ, ಪದೇಪದೇ ಅದನ್ನೇ ಕೇಳಿದ). ಏವಮಸ್ತ್ವಿತಿ ತಂ ಶಕ್ರ ಉವಾಚ ತ್ರಿದಶೈಃ ಸಹ ।  ಸ ಸುರೈರಭ್ಯನುಜ್ಞಾತೋ ಲೋಕಂ  ಮಾನುಷಮಾಗಮತ್ । ಸ ಪರ್ವತಗುಹಾಂ  ಕಾಞ್ಚಿತ್ ಪ್ರವಿಷ್ಯ ಶ್ರಮಕರ್ಷಿತಃ  (ವರವನ್ನು ಪಡೆದ ಮುಚುಕುನ್ದ ಮನುಷ್ಯಲೋಕಕ್ಕೆ ಬಂದು, ಗೂಢವಾದ ಪರ್ವತದ ಗುಹೆಯ  ಒಳಗಡೆ ಮಲಗಿದ್ದ).  ಸುಶ್ವಾಪ ಕಾಲಮೇತಂ ವೈ ಯಾವತ್ ಕೃಷ್ಣಸ್ಯ ದರ್ಶನಮ್’ (ಶ್ರೀಕೃಷ್ಣನ ದರ್ಶನವಾಗುವ ತನಕವೂ ಅಲ್ಲೇ ಮಲಗಿದ್ದ. 

ಹರಿರ್ಗ್ಗುಹಾಂ ನೃಪಸ್ಯ ತು ಪ್ರವಿಶ್ಯ ಸಂವ್ಯವಸ್ಥಿತಃ ।
ಸ ಯಾವನಃ ಪದಾsಹನನ್ನೃಪಂ ಸ ತಂ ದದರ್ಶ ಹ ॥೧೭.೧೩೧॥

ಪರಮಾತ್ಮನು ಮುಚುಕುನ್ದ ರಾಜನು ನಿದ್ರಿಸುತ್ತಿರುವ ಗವಿಯನ್ನು ಪ್ರವೇಶಮಾಡಿ, ಅಲ್ಲೇ ಅಡಗಿ ನಿಂತ. ಶ್ರೀಕೃಷ್ಣನನ್ನು ಹಿಂಬಾಲಿಸಿ ಬಂದ ಕಾಲಯವನನು ನಿದ್ರಿಸುತ್ತಿರುವ ಮುಚುಕುನ್ದನನ್ನು ತುಳಿದ. ಆಗ ಮುಚುಕುನ್ದ ನಿದ್ರೆಯಿಂದೆದ್ದು ಕಾಲಯವನನನ್ನು ಕಂಡ.

Sunday, April 26, 2020

Mahabharata Tatparya Nirnaya Kannada 17117_17123


ಸಮಸ್ತಮಾಧುರಾನ್ ಪ್ರಭುಃ ಕುಶಸ್ಥಲೀಸ್ಥಿತಾನ್ ಕ್ಷಣಾತ್ ।
ವಿಧಾಯ ಬಾಹುಯೋಧಕಃ ಸ ಯಾವನಂ ಸಮಭ್ಯಯಾತ್ ॥೧೭.೧೧೭॥

ಸರ್ವಸಮರ್ಥನಾದ ಕೃಷ್ಣನು ಮಧುರಾಪಟ್ಟಣ ಪ್ರದೇಶದಲ್ಲಿರುವ ಎಲ್ಲಾ ನಾಗರಿಕರನ್ನು ಕ್ಷಣದಲ್ಲಿಯೇ ದ್ವಾರಕಾಪಟ್ಟಣದಲ್ಲಿ ಇರುವವರನ್ನಾಗಿ ಮಾಡಿ, ಕೈಗಳಿಂದಲೇ ಯುದ್ಧ (ಬಾಹುಯುದ್ಧ) ಮಾಡಲು ಬಯಸಿ, ಕಾಲಯವನನನ್ನು  ಎದುರುಗೊಂಡ.

[ಹಾಗಾದರೆ ಶ್ರೀಕೃಷ್ಣ ಮಧುರಾಪಟ್ಟಣದಲ್ಲಿದ್ದ  ಯಾದವರನ್ನು ಕಾಲಯವನ ಹಾಗೂ ಜರಾಸಂಧನಿಂದ ರಕ್ಷಿಸುವ ಶಕ್ತಿ ಇಲ್ಲದೇ ದ್ವಾರಕಾನಗರಿಗೆ ಸ್ಥಳಾಂತರಿಸಿದನೇ ಎಂದರೆ :]

ಅನನ್ತಶಕ್ತಿರಪ್ಯಜಃ ಸುನೀತಿದೃಷ್ಟಯೇ ನೃಣಾಮ್ ।
ವ್ಯವಾಸಯನ್ನಿಜಾನ್ ಜನಾನ್ ಸ ಲೀಲಯೈವ ಕೇವಲಮ್ ॥೧೭.೧೧೮॥

ಎಣೆಯಿರದ ಕಸುವಿನವನಾದ, ಎಂದೂ ಹುಟ್ಟದ ಪರಮಾತ್ಮನು, ಮನುಷ್ಯರಿಗೆ ಆಪತ್ಕಾಲದಲ್ಲಿ ಅನುಸರಿಸಬೇಕಾದ ನೀತಿಯನ್ನು ತೋರಿಸಲೋಸುಗ, ಕೇವಲ ಲೀಲೆಯಿಂದ ತನ್ನವರನ್ನು ಸ್ಥಳಾಂತರ ಮಾಡಿದ.

ಅನಾದ್ಯನನ್ತಕಾಲಕಂ ಸಮಸ್ತಲೋಕಮಣ್ಡಲಮ್ ।
ಯದೀಕ್ಷಯೈವ ರಕ್ಷ್ಯತೇ ಕಿಮಸ್ಯ ವೃಷ್ಣಿರಕ್ಷಣಮ್ ॥೧೭.೧೧೯॥

ಅನಾದಿಕಾಲದಿಂದ, ಅನಂತಕಾಲದವರೆಗೆ ಇಡೀ ಲೋಕಸಮೂಹವು ಯಾರ ನೋಟದಿಂದಲೇ ರಕ್ಷಿಸಲ್ಪಡುತ್ತಿದೆಯೋ, ಅಂತಹ ಪರಮಾತ್ಮನಿಗೆ ಯಾದವರ ರಕ್ಷಣೆ ಯಾವ ಲೆಕ್ಕ?

ನಿರಾಯುಧಂ ಚ ಮಾಮಯಂ ವರಾಚ್ಛಿವಸ್ಯ ನ ಕ್ಷಮಃ ।
ಸಮಸ್ತಸೇನಯಾ ಯುತೋsಪಿ ಯೋದ್ಧುಮಿತ್ಯದರ್ಶಯತ್ ॥೧೭.೧೨೦॥

‘ಯಾವುದೇ ಆಯುಧವನ್ನು ಇಟ್ಟುಕೊಳ್ಳದ ನನ್ನನ್ನು, ಇವನು ಸದಾಶಿವನ ವರವಿದ್ದೂ ಗೆಲ್ಲಲಾರ’. ಕೇವಲ ಅವನೊಬ್ಬನೇ ಅಲ್ಲ, ಸಮಸ್ತ ಸೇನೆಯೊಂದಿಗೆ ಕೂಡಿದರೂ ಕೂಡಾ, ಅವನು ಕೃಷ್ಣನೊಂದಿಗೆ   ಯುದ್ಧಮಾಡಲು  ಸಮರ್ಥನಲ್ಲ  ಎಂಬುವುದನ್ನು  ಭಗವಂತ ತೋರಿಸಿದ.


[ಕಾಲಯವನನನ್ನು ಯುದ್ಧಭೂಮಿಯಲ್ಲಿ ಕೃಷ್ಣ ಎದುರುಗೊಳ್ಳುವುದಕ್ಕೂ ಮೊದಲು ಒಂದು ಘಟನೆ ನಡೆದಿತ್ತು. ಆ ಘಟನೆಯ ವಿವರವನ್ನು ಇಲ್ಲಿ ಹೇಳುತ್ತಾರೆ:]

ಸ ಕೃಷ್ಣಪನ್ನಗಂ ಘಟೇ ನಿಧಾಯ ಕೇಶವೋsರ್ಪ್ಪಯತ್ ।
ನಿರಾಯುಧೋsಪ್ಯಹಂ ಕ್ಷಮೋ ನಿಹನ್ತುಮಪ್ರಿಯಾನಿತಿ ॥೧೭.೧೨೧॥

ಕೃಷ್ಣನು ಕಪ್ಪುಸರ್ಪವೊಂದನ್ನು(ಘಟಸರ್ಪವೊಂದನ್ನು) ಮಡಿಕೆಯಲ್ಲಿಟ್ಟು, ಕಾಲಯವನನಿಗೆ ಕಳುಹಿಸಿದ. ಅದರ ಹಿಂದಿನ ಸಂದೇಶ ಏನು ಎಂದರೆ: ನಾನು ಆಯುಧವಿಲ್ಲದೇ, ನನಗೆ ಅಪ್ರಿಯರಾದವರನ್ನು ಕೊಲ್ಲಲು ಸಮರ್ಥನು.(ಹೇಗೆ ಹಾವು ಯಾವುದೇ ಆಯುಧವಿಲ್ಲದೆ ತನ್ನ ಶತ್ರುವನ್ನು ಕೊಲ್ಲಬಲ್ಲದೋ, ಹಾಗೆ).

ಘಟಂ ಪಿಪೀಲಿಕಾಗಣೈಃ ಪ್ರಪೂರ್ಯ್ಯ ಯಾವನೋsಸ್ಯ ಚ ।
ಬಹುತ್ವತೋ ವಿಜೇಷ್ಯ ಇತ್ಯಹಿಂ ಮೃತಂ ವ್ಯದರ್ಶಯತ್ ॥೧೭.೧೨೨॥

ಕಾಲಯವನನು ಇರುವೆಗಳ ಸಮೂಹಗಳಿಂದ ಆ ಸರ್ಪವಿರುವ ಮಡಿಕೆಯನ್ನು ತುಂಬಿಸಿ, ಸತ್ತ ಹಾವನ್ನು ಕೃಷ್ಣನಿಗೆ ತೋರಿಸಿಕೊಟ್ಟ. ಅದರರ್ಥ: ‘ಬಹಳ ಜನ ಇರುವುದರಿಂದ ನಾನೇ ಗೆಲ್ಲುತ್ತೇನೆ ಎಂದು.

[ಈ ಎಲ್ಲಾ ಅಂಶಗಳನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೭.೩೨-೩೭) ವಿವರಿಸಲಾಗಿದೆ: ‘ತತಃ ಕುಮ್ಭೇ ಮಹಾಸರ್ಪಂ ಭಿನ್ನಾಞ್ಜನಚಯೋಪಮಮ್ ಘೋರಮಾಶೀವಿಷಂ ಕೃಷ್ಣಂ ಕೃಷ್ಣಃ  ಪ್ರಾಕ್ಷೇಪಯತ್  ತದಾ । ತತಸ್ತಂ ಮುದ್ರಯಿತ್ವಾ ತು ಸ್ವೇನ ದೂತೇನ ಹಾರಯತ್ । (ಅಂಜನದಂತೆ ಕಪ್ಪಗಿರುವ,  ದಂತದಲ್ಲಿ ವಿಷವಿರುವ(ಆಶೀವಿಷ) ಹಾವನ್ನು ಕುಮ್ಭದಲ್ಲಿಟ್ಟು, ಅದನ್ನು ಮುಚ್ಚಿ (ಮುದ್ರೆಮಾಡಿ), ದೂತನ ಮುಖೇನ ಶ್ರೀಕೃಷ್ಣ ಕಳುಹಿಸಿದ).  ನಿದರ್ಶನಾರ್ಥಂ  ಗೋವಿಂದೋ  ಭೀಶಯಾಮಾಸ  ತಂ ನೃಪಮ್ । ಸ ದೂತಃ ಕಾಲಯವನೇ ದರ್ಶಯಾಮಾಸ ತಂ ಘಟಮ್ । ಕಾಳಸರ್ಪೋಪಮಃ ಕೃಷ್ಣ ಇತ್ಯುತ್ತ್ವಾ ಭರತರ್ಷಭ । (ಕಾಲಯವನನನ್ನು ಕಂಡ ದೂತ, ‘ಈ ಮಡಿಕೆಯ ಒಳಗಡೆ ಇರುವ ಹಾವಿನಷ್ಟೇ ಭಯಂಕರ ಶ್ರೀಕೃಷ್ಣ’  ಎಂದ) ತತ್ಕಾಲಯವನೋ ಬುದ್ಧ್ವಾ ತ್ರಾಸನಂ ಯಾದವೈಃ ಕೃತಮ್ । ಪಿಪೀಲಿಕಾನಾಂ ಚನ್ಡಾನಾಂ ಪೂರಯಾಮಾಸ ತಂ ಘಟಮ್ ।  ಸ ಸರ್ಪೋ ಬಹುಭಿಸ್ತೀಕ್ಷ್ಣೈಃ ಸರ್ವತಸ್ತೈಃ ಪಿಪೀಲಿಕೈಃ  । ಭಕ್ಷ್ಯಮಾಣಃ  ಕಿಲಾಙ್ಗೇಷು ಭಸ್ಮೀಭೂತೋsಭವತ್ ತದಾ ।  ತಂ ಮುದ್ರಯಿತ್ವಾsಥ ಘಟಂ ತಥೈವ  ಯವನಾಧಿಪಃ । ಪ್ರೇಶಯಾಮಾಸ ಕೃಷ್ಣಾಯ ಬಾಹುಲ್ಯಮುಪವರ್ಣಯನ್’ (ಕಾಲಯವನ ಬಹಳ ಪಿಪೀಲಿಕಗಳ  ಗಣವನ್ನು ಮಡಿಕೆಯೊಳಗೆ ಬಿಟ್ಟ. ಆಗ ಹಾವು ಸತ್ತಿತು. ಹೀಗೆ,  ನಾವು ಬಹಳ ಜನರಿದ್ದೇವೆ ಎಂಬ ಸಂದೇಶವನ್ನು ಆತ ಹಿಂದೆ ಕಳುಹಿಸಿದ)].

ಕಿಮತ್ರ ಸತ್ಯಮಿತ್ಯಹಂ ಪ್ರದರ್ಶಯಿಷ್ಯ ಇತ್ಯಜಃ ।
ಉದೀರ್ಯ ದೂತಮಭ್ಯಯಾತ್ ಸ ಯಾವನಂ ಪ್ರಬಾಧಿತುಮ್ ॥೧೭.೧೨೩॥

‘ಈವಿಚಾರದಲ್ಲಿ ಯಾವುದು ಸತ್ಯವಾಗುವುದು ಎಂದು ತೋರಿಸುತ್ತೇನೆ’ ಎಂದು ದೂತನನ್ನು ಕುರಿತು ಹೇಳಿದ ಶ್ರೀಕೃಷ್ಣ,  ಕಾಲಯವನನನ್ನು ಪೀಡಿಸಲು ತೆರಳಿದ.

Saturday, April 25, 2020

Mahabharata Tatparya Nirnaya Kannada 17112_17116


ಸ ಭೌವನಃ ಸಮಾಗತಃ ಕುಶಸ್ಥಲೀಂ ವಿನಿರ್ಮ್ಮಮೇ ।  
ನಿರಮ್ಬುಕೇ ತು ಸಾಗರೇ ಜನಾರ್ದ್ದನಾಜ್ಞಯಾ ಕೃತೇ ॥೧೭.೧೧೨॥

ಭುವನನೆಂಬ ಋಷಿಯ ಮಗನಾದ ವಿಶ್ವಕರ್ಮನು ಬಂದವನಾಗಿ, ಪರಮಾತ್ಮನ ಆಜ್ಞೆಯಿಂದ ಆ ಪ್ರದೇಶದಲ್ಲಿ ನೀರಿಲ್ಲವಾಗುತ್ತಿರಲು, ಅಲ್ಲಿ  ದ್ವಾರಕಾನಗರಿಯನ್ನು ನಿರ್ಮಿಸಿದನು.

[ಈ ಕುರಿತಾದ ವಿವರ ಮಹಾಭಾರತದ ಆದಿಪರ್ವದಲ್ಲಿ(೩೨.೩)ಕಾಣಸಿಗುತ್ತದೆ ‘ಭೌವನಃ ಸುಮಹಾವೀರ್ಯಃ  ಸೋಮಸ್ಯ ಪರಿರಕ್ಷಿತಾ’.  ಋಗ್ವೇದದ ವಿಶ್ವಕರ್ಮಸೂಕ್ತದ(೧೦.೮೧)  ಅನುಕ್ರಮಣಿಕೆಯಲ್ಲಿ ಹೇಳುವಂತೆ: ‘ಯ ಇಮಾ ವಿಶ್ವಕರ್ಮಾ ಭೌವನೋ ವೈಶ್ವಕರ್ಮಣಂ ತು’  ಭಾಗವತದಲ್ಲೂ(೧೦.೫೩.೩೨-೩೪)  ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ವರುಣೇನಾಭಿಸಙ್ಗಮ್ಯ ಸಮಾಭಾಷ್ಯಾಭಿಪೂಜಿತಃ । ಇತಿ ಸಮ್ಮಂತ್ರ್ಯ ಭಗವಾನ್ ದುರ್ಗಂ ದ್ವಾದಶಯೋಜನಮ್ । (ಹನ್ನೆರಡು ಯೋಜನ ವಿಸ್ತಾರವಾಗಿರುವ ಪಟ್ಟಣವನ್ನು ಕಟ್ಟಲು ತೀರ್ಮಾನ ಮಾಡಿದ). ಅಂತಃಸಮುದ್ರೇ ನಗರಂ ಕೃಷ್ಟೋsದ್ಭುತಮಚೀಕರತ್ । ದೃಶ್ಯತೇ ಯತ್ರ ಹಿ ತ್ವಾಷ್ಟ್ರಂ ವಿಜ್ಞಾನಂ ಶಿಲ್ಪನೈಪುಣಮ್’ (ಸಮಗ್ರವಾದ ಶಿಲ್ಪಿನೈಪುಣ್ಯದಿಂದ ಕೂಡಿದ ದ್ವಾರಕಾಪಟ್ಟಣವನ್ನು ನಿರ್ಮಿಸಿದ ). ಇನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೪೪) ಹೇಳುವಂತೆ: ತತಃ ಸಾ ನಿರ್ಮಿತಾ ಕಾಂತಾ ಪುರೀ ದ್ವಾರಾವತೀ ತದಾ । ಮಾನಸೇನ ಪ್ರಯತ್ನೇನ ವೈಷ್ಣವೀ ವಿಶ್ವಕರ್ಮಣಾ’ (ಭಗವಂತ ಸಂಕಲ್ಪಮಾತ್ರದಿಂದ ವಿಶ್ವಕರ್ಮನ ಮುಖೇನ ಪಟ್ಟಣ ನಿರ್ಮಾಣ ಮಾಡಿದ).
ಹೀಗೆ ಈ ಪಟ್ಟಣದ ಇತಿಹಾಸವನ್ನು ಹರಿವಂಶಪರ್ವದಲ್ಲಿ, ವಿಷ್ಣುಪುರಾಣದಲ್ಲಿ,  ಭಾಗವತದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು. ‘ಒಂದು ಕಾಲದಲ್ಲಿ ಆ ಸ್ಥಳ ಪಟ್ಟಣವೇ ಆಗಿದ್ದು, ಆನಂತರ ಸಮುದ್ರ ಅದನ್ನು ಆಕ್ರಮಿಸಿ ಕೊಂಡಿತ್ತು. ಅದನ್ನು ಮತ್ತೆ ಶ್ರೀಕೃಷ್ಣ ಪಟ್ಟಣವನ್ನಾಗಿ ಮಾಡಿದ. ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡುತ್ತಿದ್ದಂತೆಯೇ ಸಮುದ್ರ ಆ ಸ್ಥಳವನ್ನು ಮತ್ತೆ ನುಂಗಿತು’ ಎಂದು ಮಹಾಭಾರತದ ಮೌಸಲಪರ್ವದಲ್ಲಿ ಹೇಳುತ್ತಾರೆ. ‘ಇಲ್ಲಿರುವ  ರತ್ನಗಳೆಲ್ಲವೂ ಹಾಗೇ ಇರಲಿ, ಇದನ್ನು ಯಾರಿಗೂ ಕೂಡಾ ಕೊಡಬಾರದು, ಮತ್ತೆ ನಾನು ಬರುತ್ತೇನೆ’ ಎಂದು ಸಮುದ್ರನಿಗೆ ಭಗವಂತನ ಆಜ್ಞೆಯಾಗಿದೆ ಎಂದೂ ಹೇಳುತ್ತಾರೆ].

ಮಹೋದಕಸ್ಯ ಮದ್ಧ್ಯತಶ್ಚಕಾರ ತಾಂ ಪುರೀಂ ಶುಭಾಮ್ ।
ದ್ವಿಷಟ್ಕಯೋಜನಾಯತಾಂ ಪಯೋಬ್ಧಿಮದ್ಧ್ಯಗೋಪಮಾಮ್ ॥೧೭.೧೧೩॥

ಹೀಗೆ, ಭಗವಂತನ ಆಜ್ಞೆಯಂತೆ, ಜಲಸಮೂಹದ ಮಧ್ಯದಲ್ಲಿ, ಹನ್ನೆರಡು ಯೋಜನ ವಿಸ್ತೃತವಾದ, ಕ್ಷೀರಸಾಗರ ಮಧ್ಯದಲ್ಲಿರುವ ಶ್ವೇತದ್ವೀಪಕ್ಕೆ ಸದೃಶವಾದ, ಶ್ರೇಷ್ಠವಾದ ಪಟ್ಟಣವನ್ನು ವಿಶ್ವಕರ್ಮ ನಿರ್ಮಾಣಮಾಡಿದನು.

ಚಕಾರ ಲಾವಣೋದಕಂ ಜನಾರ್ದ್ದನೋsಮೃತೋಪಮಮ್ ।
ಸಭಾಂ ಸುದರ್ಮ್ಮನಾಮಕಾಂ ದದೌ ಸಮೀರಣೋsಸ್ಯ ಚ ॥೧೧.೧೧೪॥

ಜನಾರ್ದನನು ಸಂಕಲ್ಪಮಾತ್ರದಿಂದ ಉಪ್ಪುನೀರನ್ನು ಅಮೃತತುಲ್ಯವನ್ನಾಗಿ ಮಾಡಿದನು. ದೇವಲೋಕದಲ್ಲಿದ್ದ ‘ಸುಧರ್ಮ’ ಎಂಬ ಹೆಸರಿನ ಸಭೆಯನ್ನು ಮುಖ್ಯಪ್ರಾಣದೇವರು ನೀಡಿದರು.  

[ವಿಷ್ಣುಪುರಾಣದಲ್ಲಿ(೫.೨೩.೧೩) ಹೇಳುವಂತೆ: ಯಾದವಾಭಿಭವಂ ದೃಷ್ಟಾ ಮಾ ಕುರ್ವನ್ತ್ವರಯೋsಧಿಕಾಃ । ಇತಿ ಸಞ್ಚಿನ್ತ್ಯ ಗೋವಿಂದೋ ಯೋಜನಾನಾಂ  ಮಹೋದಧಿಮ್ । ಯಯಾಚೇ ದ್ವಾದಶ ಪುರೀಂ ದ್ವಾರಕಾಂ  ತತ್ರ ನಿರ್ಮಮೇ’ (ಶ್ರೀಕೃಷ್ಣ ಸಮುದ್ರರಾಜನನ್ನು ಬೇಡಿಕೊಂಡ(ದರ್ಶನ ಭಾಷೆ), ಹಾಗೂ ಸಮುದ್ರ ಹನ್ನೆರಡು ಯೋಜನ ಸ್ಥಳವನ್ನು ಬಿಟ್ಟುಕೊಟ್ಟ). ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೭೬) ಈ ಕುರಿತಾದ ವಿವರ ಕಾಣಸಿಗುತ್ತದೆ. ‘ಸುಧರ್ಮಾಯ  ಸುಧರ್ಮಾಂ  ತಾಂ ಕೃಷ್ಣಯಾಕ್ಲಿಷ್ಟಕಾರಿಣೇ ದೇವೋ  ದೇವಸಭಾಂ  ದತ್ವಾ  ವಾಯುರಂತರ ಧೀಯತ’]

ಶತಕ್ರತೋಃ ಸಭಾಂ ತು ತಾಂ ಪ್ರದಾಯ ಕೇಶವಾಯ ಸಃ ।
ನಿಧೀನ್ ಸಮರ್ಪ್ಯ ಸರ್ವಶೋ ಯಯೌ ಪ್ರಣಮ್ಯ ತಂ ಪ್ರಭುಮ್ ॥೧೭.೧೧೫॥

ಇಂದ್ರನ ಸಭೆಯನ್ನು ಕೇಶವನಿಗಾಗಿ  ತಂದುಕೊಟ್ಟ, ಬೇರೆಬೇರೆ ಲೋಕಗಳಲ್ಲಿರುವ ಅಪೂರ್ವ ನಿಧಿಗಳನ್ನೂ ತಂದುಕೊಟ್ಟ ಮುಖ್ಯಪ್ರಾಣನು ಪರಮಾತ್ಮನಿಗೆ ನಮಸ್ಕಾರ ಮಾಡಿದನು.

ಸಮಸ್ತದೇವತಾಗಣಾಃ ಸ್ವಕೀಯಮರ್ಪ್ಪಯನ್ ಹರೌ ।
ವಿಮುಚ್ಯ ಪಕ್ಷಿಪುಙ್ಗವಂ ಸ ಯೋದ್ಧುಮೈಚ್ಛದಚ್ಯುತಃ ॥೧೭.೧೧೬॥

ಎಲ್ಲಾ ದೇವತೆಗಳ ಗಣಗಳೂ ಕೂಡಾ ತಮ್ಮತಮ್ಮ ಸಂಪತ್ತನ್ನು ಪರಮಾತ್ಮನಿಗೆ ಅರ್ಪಿಸಿದರು. ಶ್ರೀಕೃಷ್ಣನು ಪಕ್ಷಿಶ್ರೇಷ್ಠನಾದ ಗರುಡನನ್ನು ಬಿಟ್ಟು ತಾನೇ ಯುದ್ಧಮಾಡಲು ಬಯಸಿದನು.

[ಈ ಪ್ರಸಂಗವನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೬೪)  ವಿವರಿಸಿರುವುದನ್ನು ನಾವು ಕಾಣುತ್ತೇವೆ.  ಗೃಹೀತ್ವಾ  ಶಾಸನಂ ಮೂರ್ಧ್ನ ನಿಧಿರಾಟ್ ಕೇಶವಸ್ಯ ಹ । ನಿಧೀನಾಜ್ಞಾಪಯಾಮಾಸ ದ್ವಾರವತ್ಯಾಂ ಗೃಹೇಗೃಹೇ (ಇಲ್ಲಿ ನಿಧಿರಾಟ್ ಎಂದರೆ ನಮಗೆ ‘ಕುಬೇರ’ ಎಂಬಂತೆ ತೋರುತ್ತದೆ. ಆದರೆ ನಿಧಿಗಳಿಗೆ ಮೂಲ ಒಡೆಯ ಮುಖ್ಯಪ್ರಾಣನೇ. ನಿಧಿಗಳಿಗೆ ಒಡೆಯನಾದ ಮುಖ್ಯಪ್ರಾಣನು ದೇವರ ಆಜ್ಞೆಯನ್ನು ತಲೆಯಮೇಲೆ ಹೊತ್ತು, ಎಲ್ಲಾ ನಿಧಿಗಳನ್ನೂ ಕೂಡಾ, ದ್ವಾರವತಿಯ ಮನೆಮನೆಯಲ್ಲಿಯೂ ಇರುವಂತೆ ನೋಡಿಕೊಂಡ. ಭಾಗವತದಲ್ಲಿ( ೧೦.೫೩.೪೦-೪೧) ಹೇಳುವಂತೆ: ಶ್ಯಾಮೈಕಕರ್ಣಾನ್ ವರುಣೋ ಹಯಾನ್ ಶುಕ್ಲಾನ್ ಮನೋಜವಾನ್ । ದದೌ ಸಹಸ್ರಸಙ್ಖ್ಯಾತಾನ್ ದೇವದೇವಾಯ ತೋಯರಾಟ್ । ಅಷ್ಟೌ ನಿಧಿಪತಿಃ ಕೋಶಾನ್ ರತ್ನಪೂರ್ಣನವಿಕ್ಷಯಾನ್ । ತಥಾsನ್ಯೇ ಲೋಕಪಾಲಾಶ್ಚ ದದುಃ ಸ್ವಾಧಿಕೃತಂ ಧನಂ    (ಒಂದು ಕಿವಿ ಮಾತ್ರ ಕಪ್ಪಾಗಿರುವ, ಇಡೀ ದೇಹ ಬೆಳ್ಳಗಿರುವ, ವೇಗದಿಂದ ಸಾಗುವ, ಸಹಸ್ರಾರು ಸಂಖ್ಯೆಯ ಕುದುರೆಗಳನ್ನು ವರುಣನು ನೀಡಿದ. ಅವನು ಅಷ್ಟನಿಧಿಕೋಶಗಳನ್ನೇ ಕೊಟ್ಟ. ಹಾಗೆಯೇ, ಬೇರೆ ಲೋಕಪಾಲರೂ ಕೂಡಾ, ತಮ್ಮಲ್ಲಿರುವ ನಿಧಿಯನ್ನು ಪರಮಾತ್ಮನಿಗೆ ಅರ್ಪಿಸಿದರು).]

Mahabharata Tatparya Nirnaya Kannada 17107_17111


ಹರಿಶ್ಚ ವೈನತೇಯಯುಗ್ ವಿಚಾರ್ಯ್ಯ ರಾಮಸಂಯುತಃ ।
ಸದಾsತಿಪೂರ್ಣ್ಣಸಂವಿದಪ್ಯಜೋsಥ ಲೀಲಯಾsಸ್ಮರತ್ ॥೧೭.೧೦೭॥

ಸಂಪೂರ್ಣಪ್ರಜ್ಞೆಯುಳ್ಳವನಾದರೂ, ಬಲರಾಮನಿಂದ ಕೂಡಿದ ಶ್ರೀಹರಿಯು ಗರುಡನೊಂದಿಗೆ  ಕೂಡಿಕೊಂಡು, ಲೀಲಾವಿಲಾಸದಿಂದ ಚಿಂತನೆ ಮಾಡಿದನು.

ಯುಯುತ್ಸುರೇಷ ಯಾವನಃ ಸಮೀಪಮಾಗತೋsದ್ಯ ನಃ ।
ಯುಯುತ್ಸತಾಮನೇನ ನೋ ಜರಾಸುತೋsಭಿಯಾಸ್ಯತಿ ॥೧೭.೧೦೮॥

‘ಕಾಲಯವನನು ಯುದ್ಧಮಾಡಬೇಕೆಂದು ನಮ್ಮ ಸಮೀಪಕ್ಕೆ ಬಂದಿದ್ದಾನೆ. ಯುದ್ಧಮಾಡುವ ಅವನ  ಜೊತೆಗೆ ಸೇರಿ ಜರಾಸಂಧನು ಇನ್ನೊಂದು ದಿಕ್ಕಿನಿಂದ ಬರುತ್ತಿದ್ದಾನೆ.

ಸ ಯಾದವಾನ್ ಹನಿಷ್ಯತಿ ಪ್ರಭಙ್ಗತಸ್ತು ಕೋಪಿತಃ ।
ಪುರಾ ಜಯಾಶಯಾ ಹಿ ನೌ ಯದೂನ್ ನ ಜಘ್ನಿವಾನಸೌ ॥೧೭.೧೦೯॥

ಅನೇಕ ಸಲ ಸೋತು, ಮುನಿದವನಾದ ಜರಾಸಂಧ ಈ ಬಾರಿ ಯಾದವರನ್ನು ಕೊಲ್ಲುತ್ತಾನೆ. ಹಿಂದೆ ಕೇವಲ ನಮ್ಮನ್ನು ಗೆಲ್ಲಬೇಕು ಎಂಬ ಬಯಕೆಯಿಂದ ಆತ ಯಾದವರನ್ನು ಕೊಂದಿರಲಿಲ್ಲ.



ನಿರಾಶಕೋsದ್ಯ ಯಾದವಾನಪಿ ಸ್ಮ ಪೀಡಯಿಷ್ಯತಿ ।
ಅತಃ ಸಮುದ್ರಮದ್ಧ್ಯಗಾಪುರೀವಿಧಾನಮದ್ಯ ಮೇ ॥೧೭.೧೧೦॥

ಈರೀತಿ ಹತಾಶನಾದ ಅವನು ಯಾದವರನ್ನು ಪೀಡಿಸುತ್ತಾನೆ. ಆದ್ದರಿಂದ ಸಮುದ್ರ ಮದ್ಯದಲ್ಲಿ ಪಟ್ಟಣವೊಂದನ್ನು ನಿರ್ಮಾಣ ಮಾಡಬೇಕೆಂದು ನನಗನಿಸುತ್ತಿದೆ.

ಪ್ರರೋಚತೇ ನಿಧಾನಮಪ್ಯಮುತ್ರ ಸರ್ವಸಾತ್ತ್ವತಾಮ್ ।
ಉದೀರ್ಯ ಚೈವಮೀಶ್ವರೋsಸ್ಮರತ್ ಸುರೇಶವರ್ದ್ಧಕಿಮ್ ॥೧೭.೧೧೧॥

ಆ ಪಟ್ಟಣವನ್ನೇ ಎಲ್ಲಾ  ಯಾದವರ ಆವಾಸ ಸ್ಥಾನವನ್ನಾಗಿ ಮಾಡಬೇಕು’ ಎಂದು ಹೇಳಿದ  ಪರಮಾತ್ಮ ವಿಶ್ವಕರ್ಮನನ್ನು ಸ್ಮರಣೆ ಮಾಡಿದ.

Tuesday, April 21, 2020

Mahabharata Tatparya Nirnaya Kannada 17101_17106


ಇತೀರಿತೇsಪ್ಯತೃಪ್ತವತ್ ಸ್ಥಿತೇ ತು ಬಾರ್ಹದ್ರಥೇ ।
ಜಗಾಮ ಸೌಭಮಾಸ್ಥಿತಃ ಸ ಸೌಭರಾಟ್ ಚ ಯಾವನಮ್ ॥೧೭.೧೦೧॥

ಸಾಲ್ವ ಇಷ್ಟೆಲ್ಲಾ ಹೇಳಿದರೂ ಕೂಡಾ, ಜರಾಸಂಧ ಮಾತ್ರ ಕಸಿವಿಸಿಯಲ್ಲಿಯೇ(ಅತೃಪ್ತನಾಗಿಯೇ) ಇದ್ದ. ಹೀಗಿರುವಾಗ ಸಾಲ್ವನು ತನ್ನ ಸೌಭ ವಿಮಾನವನ್ನೇರಿ ಕಾಲಯವನನ  ದೇಶದತ್ತ ತೆರಳಿದ.

ಸ ಕಾಲಯಾವನೋsಥ ತಂ ಜರಾಸುತಾನ್ತಿಕಾಗತಮ್ ।
ನಿಶಮ್ಯ ಭಕ್ತಿಪೂರ್ವಕಂ ಪ್ರಣಮ್ಯ ಚಾsರ್ಚ್ಚಯದ್ ದೃತಮ್ ॥೧೭.೧೦೨॥

ಆ ಕಾಲಯವನನು, ‘ಸಾಲ್ವ ಜರಾಸಂಧನ ಕಡೆಯಿಂದ ಬಂದಿದ್ದಾನೆ’ ಎಂದು ತಿಳಿದೊಡನೇ, ಭಕ್ತಿಯಿಂದ ನಮಸ್ಕರಿಸಿ ಸತ್ಕರಿಸಿದನು.

ಜರಾಸುತೋ ಹಿ ದೈವತಂ ಸಮಸ್ತಕೇಶವದ್ವಿಷಾಮ್ ।
ಇತಿ ಪ್ರಣಮ್ಯ ತಾಂ ದಿಶಂ ತದೀಯಮಾಶ್ವಪೂಜಯತ್ ॥೧೭.೧೦೩॥

‘ಜರಾಸಂಧನಲ್ಲವೇ ಎಲ್ಲಾ ಕೇಶವ ದ್ವೇಷಿಗಳಿಗೆ ದೇವತೆಯಂತೆ ಇರುವವನು’ ಎಂದು ಹೇಳಿದ ಕಾಲಯವನ, ಜರಾಸಂಧನಿರುವ ದಿಕ್ಕಿಗೆ ನಮಸ್ಕರಿಸಿ, ಸಾಲ್ವನಿಗೆ ಗೌರವ ನೀಡಿದನು.

ತದೀರಿತಂ ನಿಶಮ್ಯ ಚ ದ್ರುತಂ ತ್ರಿಕೋಟಿಸಙ್ಖ್ಯಯಾ ।
ಅಕ್ಷೋಹಿಣೀಕಯಾ ಯುತಃ ಸ್ವಸೇನಯಾ ನಿರಾಕ್ರಮತ್ ॥೧೭.೧೦೪॥

ಸಾಲ್ವನ ಸಂದೇಶವನ್ನು ಕೇಳಿದ ಕಾಲಯವನ, ಮೂರುಕೋಟಿ ಬಲವುಳ್ಳ, ಅಕ್ಷೋಹಿಣೀನಾಮಕವಾದ  ತನ್ನ ಸೇನೆಯೊಂದಿಗೆ ಕೂಡಲೇ ಅಲ್ಲಿಂದ ಹೊರಟನು.

ತದಶ್ವಮೂತ್ರವಿಷ್ಠಯಾ ಬಭೂವ ನಾಮತಃ ಶಕೃತ್ ।
ನದೀ ಸುವೇಗಗಾಮಿನೀ ಕಲೌ ಚ ಯಾ ವಹೇದ್ ದ್ರುತಮ್ ॥೧೭.೧೦೫॥

ಕಾಲಯವನನ ಸೇನೆಯಲ್ಲಿರುವ ಅಶ್ವಗಳ ಮಲ-ಮೂತ್ರದಿಂದ ‘ಶಕೃತ್’ ಎಂಬ ಹೆಸರಿನ ನದಿಯೇ ಹರಿಯಲಾರಂಭಿಸಿತು.  ಯಾವ ನದಿ ಕಲಿಯುಗದಲ್ಲಿ ವೇಗವಾಗಿ ಹರಿಯುತ್ತದೋ ಅಂತಹ ನದಿ.

ಪುನಃಪುನರ್ನ್ನದೀಭವಂ ನಿಶಾಮ್ಯ ದೇಶಸಙ್ಕ್ಷಯಮ್ ।
ತದನ್ಯದೇಶಮೂತ್ರಿತಂ ವ್ಯಶೋಷಯದ್ಧಿ ಮಾರುತಃ ॥೧೭.೧೦೬॥

ಆಗ ಶಕೃತ್ ನದಿಯಿಂದ ಉಂಟಾಗತಕ್ಕಂತಹ ಪರಿಸರ ಹಾಗು ದೇಶನಾಶವನ್ನು ನೋಡಿ, ಮಾರುತನು ಆ ನದಿಯನ್ನು ಬತ್ತಿಸಿಬಿಟ್ಟ.
[ಭಾಗವತದಲ್ಲಿ(೧೦.೫೩.೨೮) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ನಾರದಪ್ರೇಷಿತೋ ವೀರೋ  ಯಾವನಃ  ಪ್ರತ್ಯದೃಶ್ಯತ । ರುರೋಧ ಮಧುರಾಮೇತ್ಯ ತಿಸೃುಭಿರ್ಮ್ಲೇಚ್ಛಕೋಟಿಭಿಃಹರಿವಂಶದಲ್ಲೂ ಈ ಕುರಿತಾದ ವಿವರಣೆ ಇದೆ: ’ ಸಮೃದ್ಧೋ ಹಿ ಯದಾ ರಾಜಾ ಯವನಾನಾಂ ಮಹಾಬಲಃ । ತತ ಏನಂ ನೃಪಾ ಮ್ಲೇಚ್ಛಾಃ ಸಂಶ್ರಿತ್ಯಾನುಯಯುಸ್ತದಾ । [ಮ್ಲೇಚ್ಛ ರಾಜರೆಲ್ಲರೂ (ಶಕರು, ಹೂಣರು, ಆಂದ್ರರು, ಪುಳಿನ್ದರು, ಪುಲ್ಕಸರು, ಇತ್ಯಾದಿ) ಯವನನ ಹಿಂಬಾಲಕರಾಗಿ ಬಂದರು].  ಶಕಾಸ್ತುಷಾರಾ ದರದಾ ಪಾರದಾಃ ಶೃುಙ್ಖಲಾಃ   ಖಶಾಃ  । ಪಲ್ಲವಾಃ ಶತಶಶ್ಚಾನ್ಯೇ  ಮ್ಲೇಚ್ಛಾ ಹೈಮವತಾಸ್ತಥಾ’ (ವಿಷ್ಣುಪರ್ವಣಿ ೫೭.೧೯-೨೦).... ಮೂತ್ರೇಣ ಶಕೃತಾ ಚೈವ ಸೈನ್ಯೇನ ಸಸೃಜೇ ನದೀಮ್ । ಅಶ್ವಷ್ಟ್ರಶಕೃತಾಂ ರಾಶೇರ್ನಿಃಸೃತೇತಿ  ಜನಾಧಿಪ । ತತೋsಶ್ವಶಕೃದಿತ್ಯೇವ ನಾಮ ನದ್ಯಾ ಬಭೂವ ಹ’    (ವಿಷ್ಣುಪರ್ವಣಿ ೫೭.೨೩-೨೪)]

Monday, April 20, 2020

Mahabharata Tatparya Nirnaya Kannada 1791_17100


ಇತೀರಿತೋ ಜರಾಸುತೋ ಬಭೂವ ದುರ್ಮ್ಮನಾ ಭೃಶಮ್ ।
ಕಿರೀಟಮಣ್ಡಿತಂ ಶಿರಶ್ಚಕಾರ ಚಾsಶ್ವವಾಗ್ ಭೃಷಮ್ ॥೧೭.೯೧॥

ಈರೀತಿಯಾಗಿ ಸಾಲ್ವನಿಂದ ಹೇಳಲ್ಪಟ್ಟ ಜರಾಸಂಧನು ಅತ್ಯಂತ ಮನಸ್ಸು ಕೆಡಿಸಿಕೊಂಡವನಾದ. (ಸ್ವಾಭಿಮಾನಿ ಜರಾಸಂಧ ಬಹಳ ಸಂಕಟಪಟ್ಟ). ಕಿರೀಟದಿಂದ ಅಲಂಕೃತವಾದ ತನ್ನ ತಲೆಯನ್ನು ಕೆಳಗೆ ಮಾಡಿದ. (ತಲೆತಗ್ಗಿಸಿದ).

ಕರಂ ಕರೇಣ ಪೀಡಯನ್ ನಿಶಾಮ್ಯ ಚಾsತ್ಮನೋ ಭುಜೌ ।
ಜಗಾದ ಕಾರ್ಯ್ಯಸಿದ್ಧಯೇ ಕಥಂ ಪ್ರಯಾಚಯೇ ಪರಮ್ ॥೧೭.೯೨॥

ಕೈ-ಕೈ ಹಿಸುಕಿಕೊಳ್ಳುತ್ತಾ, ತನ್ನ ಭುಜವನ್ನು ನೋಡುತ್ತಾ ಜರಾಸಂಧ ಹೇಳುತ್ತಾನೆ: ‘ನನ್ನ ಕಾರ್ಯಸಿದ್ಧಿಗಾಗಿ ಇನ್ನೊಬ್ಬನ ಸಹಾಯವನ್ನು  ಹೇಗೆ ಬೇಡಲಿ ನಾನು?

ಸುದುರ್ಗ್ಗಕಾರ್ಯ್ಯಸನ್ತತಿಂ ಹ್ಯಗುಃ ಸ್ಮ ಮದ್ಭುಜಾಶ್ರಯಾಃ ।
ಸಮಸ್ತಭೂತಳೇ ನೃಪಾಃ ಸ ಚಾಹಮೇಷ ಮಾಗಧಃ ॥೧೭.೯೩॥

ನನ್ನ ಆಶ್ರಯ ಪಡೆದ ರಾಜರುಗಳೇ ಅತ್ಯಂತ ಅಸಂಭವವಾದ ಕಾರ್ಯವನ್ನು ಸಾಧಿಸಿಕೊಂಡಿದ್ದಾರೆ. ಅಂತಹ ಜರಾಸಂಧ ನಾನು.

ಕದಾsಪ್ಯಚೀರ್ಣ್ಣಮದ್ಯ ತತ್ ಕಥಂ ಕರೋಮಿ ಕೇವಲಮ್ ।
ಗಿರೀಶಪಾದಸಂಶ್ರಯಃ ಪ್ರಭುಃ ಸಮಸ್ತಭೂಭೃತಾಮ್ ॥೧೭.೯೪॥

ಹೀಗಿರುವಾಗ ಯಾವತ್ತೂ ಮಾಡದ ಕಾರ್ಯವನ್ನು(ಇನ್ನೊಬ್ಬರ ಸಹಾಯ ಬೇಡುವುದನ್ನು) ಹೇಗೆ ಮಾಡಲಿ? ಕೇವಲ ಸದಾಶಿವನ ಪಾದವನ್ನು ಆಶ್ರಯಿಸಿರುವ, ಎಲ್ಲಾ ರಾಜರಿಗೂ ಪ್ರಭುವಾಗಿರುವ ನಾನು ಇನ್ನೊಬ್ಬನ ಮುಂದೆ ಹೇಗೆ ಕೈಚಾಚಲಿ?

ಇತೀರಿತಃ ಸ ಸೌಭರಾಡ್ ಜಗಾದ ವಾಕ್ಯಮುತ್ತರಮ್ ।
ಭವಾನಪಿ ಸ್ಮ ಮುಹ್ಯತೇ ಕಿಮಸ್ಮದಾದಯಃ ಪ್ರಭೋ ॥೧೭.೯೫॥

ಈರೀತಿಯಾಗಿ ಜರಾಸಂಧ ನುಡಿದಾಗ, ಅದಕ್ಕೆ ಉತ್ತರವಾಗಿ ಸಾಲ್ವನು ಹೇಳುತ್ತಾನೆ:  ‘ನಿನ್ನಂತವನೇ ಮೋಹಕ್ಕೊಳಗಾಗುತ್ತಾನೆ ಎಂದಮೇಲೆ, ನಾವು ಮೋಹಕ್ಕೆ ಒಳಗಾಗುವುದರಲ್ಲೇನು ಆಶ್ಚರ್ಯ?

ಸ್ವಶಿಷ್ಯಕೈಃ ಕೃತಂ ತು ಯತ್ ಕಿಮನ್ಯಸಾಧಿತಂ ಭವೇತ್ ।
ಸ್ವಶಿಷ್ಯದಾಸವರ್ಗ್ಗಕೈಃ ಸಮರ್ತ್ಥಯನ್ತಿ ಭೂಭುಜಃ ॥೧೭.೯೬॥

ನಿನ್ನ ಶಿಷ್ಯರು ಮಾಡುವ ಕೆಲಸ ನೀನು ಮಾಡಿದಂತೆ ತಾನೇ? ರಾಜರು ತಮ್ಮ ಶಿಷ್ಯರಿಂದ, ತಮ್ಮ ದಾಸರಿಂದ ತಮ್ಮ ಕಾರ್ಯಸಾಧನೆ ಮಾಡಿಸಿಕೊಳ್ಳುತ್ತಾರೆ.

ಅಪಿ ಸ್ಮ ತೇ ಬಲಾಶ್ರಯಪ್ರವೃತ್ತಯೋsಸ್ಮದಾದಯಃ ।
ಪುಮಾನ್ ಕುಠಾರಸಙ್ಗ್ರಹಾದಶಕ್ತ ಈರ್ಯತೇ ಹಿ ಕಿಮ್  ॥೧೭.೯೭॥

ನಾವೆಲ್ಲರೂ ಕೂಡಾ ನಿನ್ನ ಬಲವನ್ನು ಆಶ್ರಯಿಸಿಕೊಂಡು ಮುಂದುವರಿಯುತ್ತಿದ್ದೇವೆ. ಪುರುಷನೊಬ್ಬ ಕೊಡಲಿಯನ್ನು ಹಿಡಿದುಕೊಂಡ ಮಾತ್ರಕ್ಕೆ ಅವನನ್ನು  ಅಶಕ್ತ ಎಂದು ಹೇಳುತ್ತಾರೇನು?

ಕುಠಾರಸಮ್ಮಿತೋ ಹ್ಯಸೌ ತವೈವ ಯಾವನೇಶ್ವರಃ ।
ವಿನಾ ಭವದ್ಬಲಂ ಕ್ವಚಿತ್ ಪ್ರವರ್ತ್ತಿತುಂ ನಹಿ ಕ್ಷಮಃ ॥೧೭.೯೮॥

ನಿನ್ನ ಕೈಯಲ್ಲಿನ ಕೊಡಲಿಯಂತೆ ಇರುವವನು ಆ ಕಾಲಯವನ. ನಿನ್ನ ಬಲ ಇಲ್ಲದೇ ಸ್ವತಃ ಮುಂದುವರಿಯಲು ಅವನು ಸಮರ್ಥನಲ್ಲ.

ವರೋ ಹಿ ಕೃಷ್ಣಮರ್ದ್ದನೇ ವೃತೋsಸ್ಯ ಕೇವಲಃ ಶಿವಾತ್ ।
ತದನ್ಯಶತ್ರುಪೀಡನಾತ್ ತ್ವಮೇವ ತಸ್ಯ ರಕ್ಷಕಃ ॥೧೭.೯೯॥

ಕೃಷ್ಣನನ್ನು ಸಾಯಿಸುವುದರಲ್ಲಿ ಅವನು ಶಿವನಿಂದ ವರವನ್ನು ಪಡೆದಿದ್ದಾನೆ. ಆದರೆ ಇತರರಿಂದ ಅವನನ್ನು ರಕ್ಷಿಸುವವನು ನೀನೇ.

ತವಾಖಿಲೈರಜೇಯತಾ ಶಿವಪ್ರಸಾದತೋsಸ್ತಿ ಹಿ ।
ವಿಶೇಷತೋ ಹರೇರ್ಜ್ಜಯೇ ವರಾದಯಂ ವಿಮಾರ್ಗ್ಯತೇ ॥೧೭.೧೦೦॥

ಶಿವನ ಅನುಗ್ರಹದಿಂದ ನಿನಗೆ ಅಜೇಯತ್ವವಿದೆ. ಕೃಷ್ಣನನ್ನು ಜಯಿಸುವುದರಲ್ಲಿ ಆ ಕಾಲಯವನನು ವಿಶೇಷವಾದ ವರವನ್ನು ಪಡೆದಿದ್ದಾನೆ’  ಎನ್ನುತ್ತಾನೆ ಸಾಲ್ವ.

Sunday, April 19, 2020

Mahabharata Tatparya Nirnaya Kannada 1784_1790



ಸ ಆಶ್ರಮಾಚ್ಚ ನೈಷ್ಠಿಕಾದ್ ವಿದೂಷಿತಃ ಪ್ರತೀಪಕೃತ್ ।
ಹರೇಶ್ಚ ತಾಪಮೇಯಿವಾನ್ ಜಗರ್ಹ ಚಾsತ್ಮಶೇಮುಷೀಮ್ ॥೧೭.೮೪॥

ನೈಷ್ಠಿಕಬ್ರಹ್ಮಚರ್ಯಾಶ್ರಮದಿಂದ ಭ್ರಷ್ಟನಾಗಿ, ಪರಮಾತ್ಮನನ್ನು ವಿರೋಧ ಮಾಡಿದ ಗರ್ಗಾಚಾರ್ಯರು, ತದನಂತರ  ಪಶ್ಚಾತ್ತಾಪಪಟ್ಟು ತನ್ನ ಬುದ್ಧಿಯನ್ನು ಬೈದುಕೊಂಡರು.

ಜಗಾಮ ಚಾರಣಂ ಹರಿಂ ಪ್ರಪಾಹಿ ಮಾಂ ಸುಪಾಪಿನಮ್ ।
ಇತಿ ಸ್ಮ ವಿಷ್ಣ್ವನುಜ್ಞಯಾ ಚಕಾರ ವೈಷ್ಣವಂ ತಪಃ ॥೧೭.೮೫॥

ಅದರಿಂದಾಗಿ ‘ಅತ್ಯಂತ ಪಾಪಿಯಾದ ನನ್ನನ್ನು ರಕ್ಷಿಸು’ ಎಂದು ಗರ್ಗಾಚಾರ್ಯರು ಪರಮಾತ್ಮನಲ್ಲಿ  ಶರಣುಹೋದರು. ಈರೀತಿಯಾಗಿ, ವಿಷ್ಣುವಿನ ಅನುಜ್ಞೆಯಿಂದ ಮುಂದೆ ವಿಷ್ಣುಸಂಬಂಧಿಯಾದ ತಪಸ್ಸನ್ನು ಮಾಡಿದರು.

(ಈರೀತಿಯಾಗಿ ಯವನಪುತ್ರನ ಜನ್ಮದ ಹಿನ್ನೆಲೆಯನ್ನು ಜರಾಸಂಧನಿಗೆ ಹೇಳುತ್ತಿರುವ  ಸಾಲ್ವ, ಮುಂದುವರಿದು ಹೇಳುತ್ತಾನೆ:  )


ಕುತೋ ಹಿ ಭಾಗ್ಯಮಾಪತೇನ್ಮುನೇಃ ಶಿವಾರ್ಚ್ಚನೇ ಸದಾ ।
ಭವಾದೃಶಾ ಹಿ ದಾನವಾಃ ಸ್ಥಿರಾಃ ಶಿವಾರ್ಚ್ಚನೇ ಸದಾ ॥೧೭.೮೬॥

‘ಶಿವನ ಅರ್ಚನೆಯ ಭಾಗ್ಯ ಆ ಮುನಿಗೆ ಎಲ್ಲಿಂದ ಬರಬೇಕು? ನಿನ್ನಂತಹ ದಾನವರು ಶಿವನ ಅರ್ಚನೆಯಲ್ಲಿ ಯಾವಾಗಲೂ ನಿಷ್ಠೆಯುಳ್ಳವರು.

ಸುತೋsಸ್ಯ ಕಾಲನಾಮಕೋ ಬಭೂವ ಕೃಷ್ಣಮರ್ದ್ದಿತುಮ್ ।
ಸದೈವ ಕಾಲಕಾಙ್ಕ್ಷಣಾತ್ ಸ ಯಾವನಾಭಿಷೇಚಿತಃ ॥೧೭.೮೭॥

ಹೀಗೆ ಗರ್ಗಾಚಾರ್ಯರಿಂದ ಹುಟ್ಟಿದ ಯವನ ರಾಜನ ಮಗನು ‘ಕಾಲ ಎಂಬ ಹೆಸರಿನವನಾದನು. (ಏಕೆ ಈ ಹೆಸರನ್ನು ಪಡೆದ ಎಂದರೆ:) ಅವನು  ಕೃಷ್ಣನನ್ನು ತುಳಿಯಲು ಕಾಲವನ್ನು ನಿರಂತರವಾಗಿ ಪ್ರತೀಕ್ಷೆ ಮಾಡುತ್ತಿದ್ದುದರಿಂದ ಅವನು  ಕಾಲ-ಯವನ ಎಂಬ ಹೆಸರನ್ನು ಪಡೆದ. ಯವನ ರಾಜ  ತನ್ನ ಸ್ಥಾನದಲ್ಲಿ ತನ್ನ ಮಗನಿಗೆ ಅಭಿಷೇಕ ಮಾಡಿದ.

ತವೈವ ಶಿಷ್ಯ ಏಷ ಚಾತಿಭಕ್ತಿಮಾನ್ ಹಿ ಶಙ್ಕರೇ ।
ಪ್ರಭೂತಸೇನಯಾ ಯುತೋ ಬಲೋದ್ಧತಶ್ಚ ಸರ್ವದಾ ॥೧೭.೮೮॥

ಓ, ಜರಾಸಂಧ, ಶಂಕರನಲ್ಲಿ ಅತ್ಯಂತ ಭಕ್ತಿಯುಳ್ಳವನಾದ ಆ ಕಾಲಯವನ  ನಿನ್ನ ಶಿಷ್ಯನೇ. ಬಹಳ ಸೇನೆಯಿಂದ ಕೂಡಿರುವ ಆತ  ಬಲದಿಂದ ಉದ್ಧತನಾಗಿದ್ದಾನೆ ಕೂಡಾ.  

ತಮೇಶ ಯಾಮಿ ಶಾಸನಾತ್ ತವೋಪನೀಯ ಸತ್ವರಮ್ ।
ವಿಕೃಷ್ಣಕಂ ಕ್ಷಿತೇಸ್ಥಳಂ ವಿಧಾಯ ಸಂರಮಾಮ ಹಾ ॥೧೭.೮೯॥

ನಾನು ನಿನ್ನ ಆಜ್ಞೆಯಿಂದ ಕಾಲಯವನನಿದ್ದಲ್ಲಿಗೆ ತೆರಳುತ್ತೇನೆ. ಅವನನ್ನು ಕರೆತಂದು ಶೀಘ್ರದಲ್ಲಿ ಇಡೀ ಭೂಮಿಯನ್ನು ಕೃಷ್ಣ ರಹಿತನನ್ನಾಗಿ ಮಾಡಿ, ನಾವು ಆನಂದ ತುಂಬಿದವರಾಗೋಣ.

ತತಶ್ಚ ರುಗ್ಮಿಣೀಂ ವಯಂ ಪ್ರದಾಪಯಾಮ ಚೇದಿಪೇ ।
ವಿನಾಶ್ಯ ದೇವಪಕ್ಷಿಣೋ ಯಥೇಷ್ಟಮಾಸ್ಮ ಸರ್ವದಾ ॥೧೭.೯೦॥

ತದನಂತರ ನಾವೆಲ್ಲರೂ ಸೇರಿ ರುಗ್ಮಿಣಿಯನ್ನು ಶಿಶುಪಾಲನಿಗೆ ಕೊಡಿಸೋಣ. ದೇವತೆಗಳ ಪಕ್ಷದವರನ್ನು ನಾಶಮಾಡಿಸಿ, ನಮ್ಮ ಇಚ್ಛಾನುಸಾರ ಇರೋಣ’ ಎನ್ನುತ್ತಾನೆ ಸಾಲ್ವ.

Mahabharata Tatparya Nirnaya Kannada 1778_1783


ಯತೋ ಹಿ ಕೃಷ್ಣಸಂಶ್ರಯಾದ್ ಬತಾಪಹಾಸಿತಾ ವಯಮ್ ।
ಇತಿ ಬ್ರುವನ್ ವನಂ ಯಯೌ ತಪಶ್ಚ ಶೈವಮಾಚರತ್ ॥೧೭.೭೮॥

‘ಕೃಷ್ಣನನ್ನೂ ಸೇರಿಸಿ ಇಡೀ ಯಾದವ ಕುಲವನ್ನೇ ಇಲ್ಲವಾಗಿಸುತ್ತೇನೆ ಎನ್ನುವ ಪ್ರತಿಜ್ಞೆಮಾಡಿದ ಗರ್ಗಾಚಾರ್ಯರು, ‘ಕೃಷ್ಣನ ಸಂಶ್ರಯ ಇದೆ ಎಂದು ನನ್ನನ್ನು ಅಪಹಾಸ್ಯ ಮಾಡಿದಿರಷ್ಟೇ’ ಎಂದು ಹೇಳುತ್ತಾ ಕಾಡಿಗೆ ತೆರಳಿದರು  ಮತ್ತು ಶಿವನನ್ನು ಕುರಿತು ತಪಸ್ಸನ್ನಾಚರಿಸಿದರು.

ಸ ಚೂರ್ಣ್ಣಮಾಯಸಂ ತ್ವದನ್ ದದರ್ಶ ಚಾಬ್ದತಃ ಶಿವಮ್ ।
ವರಂ ತತೋsಭಿಪೇದಿವಾನ್ ಸುತಂ ಹರೇರಭಾವದಮ್ ॥೧೮.೭೯॥

ಗರ್ಗಾಚಾರ್ಯರು ಲೋಹಚೂರ್ಣವನ್ನು ತಿನ್ನುತ್ತಾ, ಒಂದು ವರ್ಷದ ನಂತರ ಶಿವನನ್ನು ಕಂಡರು ಮತ್ತು  ಅವನಿಂದ ಶ್ರೀಕೃಷ್ಣನ ಅಭಾವವನ್ನು ಉಂಟುಮಾಡುವ ಮಗನನ್ನು ವರವಾಗಿ ಪಡೆದರು.

[ಹರಿವಂಶದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ:   ಮಹಾಮುನಿಶ್ಚಾಯಸಚೂರ್ಣಮಶ್ನನ್ನುಪಸ್ತಿತೋ  ದ್ವಾದಶವಾರ್ಷಿಕಂ ವ್ರತಮ್ । ......... ತಪೋಬಲಾದ್ ಗರ್ಗಮುನೇರ್ಮಹಾತ್ಮನೋ  ವರಪ್ರಭಾವಾಚ್ಛಕಲೇಂದುಮೌಲಿನಃ । ಭವಂತಮಾಸಾದ್ಯ ಜನಾರ್ದನೋ ಹಿಮಂ ವಿಲೀಯತೇ  ಭಾಸ್ಕರರಶ್ಮಿನಾ ಯಥಾ’ (ವಿಷ್ಣುಪರ್ವಣಿ ೫೩.೫೪). ಅಲಿಪ್ಸಂಸ್ತು ಸ್ತ್ರಿಯಂ ಚೈವ ತಪಸ್ತೇಪೇ ಸುದಾರುಣಮ್ ।  ತತೋ ದ್ವಾದಶವರ್ಷಾಣಿ ಸೋsಯಶ್ಚೂರ್ಣಮಭಕ್ಷಯತ್’ (೫೭.೯).   ಇಲ್ಲಿ ಗರ್ಗಾಚಾರ್ಯರು ಹನ್ನೆರಡು ವರ್ಷ ತಪಸ್ಸು ಮಾಡಿದರು  ಎಂದು ಹೇಳಿದ್ದಾರೆ. ಆದರೆ ಇಲ್ಲಿ ವಾರ್ಷಿಕ ಎನ್ನುವುದು  ಕೇವಲ ಔಪಚಾರಿಕ. ಒಂದು ತಿಂಗಳನ್ನು ಒಂದು ವರ್ಷ ಎಂದು ಹೇಳಿದ್ದಾರೆಯೇ ವಿನಃ ಅದು ಹನ್ನೆರಡು ವರ್ಷವಲ್ಲ. ಇದಕ್ಕೆ ಪೂರಕವಾದ ಅಂಶವನ್ನು ನಾವು ವಿಷ್ಣುಪುರಾಣದಲ್ಲಿ(೫.೨೩.೩) ಕಾಣಬಹುದು:   ‘ಆರಾಧಯನ್ ಮಹಾದೇವಂ ಲೋಹಚೂರ್ಣಮಭಕ್ಷಯತ್  । ದದೌ ವರಂ ಚ ತುಷ್ಟೋsಸ್ಮೈ ವರ್ಷೇ ತು ದ್ವಾದಶೇ ಹರಃ

[ಶ್ರೀಕೃಷ್ಣನಿಗೆ ನಾಮಕರಣ ಮಾಡಿದ, ಕೃಷ್ಣಭಕ್ತರಾದ ಗರ್ಗಾಚಾರ್ಯರು ಏಕೆ ಈರೀತಿ ಮಾಡಿದರು ಎಂದರೆ:]

ಸ ವಿಷ್ಣುದೈವತೋsಪಿ ಸನ್ ಪ್ರವಿಷ್ಟ ಉಲ್ಬಣಾಸುರೈಃ ।
ವ್ಯಧಾದ್ಧರೇಃ ಪ್ರತೀಪಕಂ ವ್ರತಂ ಚ ನೈಷ್ಠಿಕಂ ಜಹೌ ॥೧೭.೮೦॥

ಗರ್ಗಾಚಾರ್ಯರು ವಿಷ್ಣುವನ್ನೇ ದೇವತೆಯನ್ನಾಗಿ ಪಡೆದವರಾದರೂ ಕೂಡಾ, ಭಯಂಕರವಾದ ಅಸುರರಿಂದ ಪ್ರವೇಶಿಸಿದವರಾಗಿ(ಪ್ರವಿಷ್ಟರಾದವರಾಗಿ) ಪರಮಾತ್ಮನಿಗೆ ವಿರುದ್ಧವನ್ನು ಮಾಡಿದರು. ತನ್ನ ನೈಷ್ಠಿಕ ವ್ರತವನ್ನು ಬಿಟ್ಟರು.

ತಮಾರ ಚಾsಸುರಾಪ್ಸರಾ ಬಲಿಷ್ಠಪುತ್ರಕಾಮ್ಯಯಾ ।
ಪ್ರವಿಶ್ಯ ಗೋಪಿಕಾಙ್ಗನಾಸಮೂಹಮದ್ಧ್ಯಮುಲ್ಬಣಾ ॥೧೭.೮೧॥

ಒಬ್ಬಳು ಅಸುರ ಸಂಬಂಧಿಯಾದ, ಕ್ರೂರಸ್ವಭಾವದ ಅಪ್ಸರೆ ತನಗೆ  ಬಲಿಷ್ಠನಾದ ಮಗ ಬೇಕು ಎನ್ನುವ ಬಯಕೆಯಿಂದ, ಗೋಪಿಕೆಯರ ಸಮೂಹದಲ್ಲಿ ಪ್ರವೇಶಿಸಿ, ಆ ಗರ್ಗಾಚಾರ್ಯರನ್ನು ಹೊಂದಿದಳು.
[ಅಪ್ಸರೆಯರು ಮತ್ತು ಗಂಧರ್ವರಲ್ಲಿ  ದೈವಿಕರು ಮತ್ತು ಆಸುರರು ಎಂಬ ವಿಭಾಗ ಇರುತ್ತದೆ. ಉದಾಹರಣೆಗೆ  ದ್ರಮಿಳ ಎನ್ನುವ ದೈತ್ಯಗಂಧರ್ವ. ಅವನಿಂದಾಗಿ ಉಗ್ರಸೇನನ ಹೆಂಡತಿಯಲ್ಲಿ ರಾಕ್ಷಸನಾದ ಕಂಸ ಹುಟ್ಟಿದ. ಹಾಗೇ, ಇಲ್ಲಿ  ಈಕೆ ಅಸುರ ಸ್ವಭಾವದ ಅಪ್ಸರೆ. ಈಕೆ ಗೋಪಿಕೆಯರ ಸಮೂಹದಲ್ಲಿದ್ದು ಗರ್ಗಾಚಾರ್ಯರನ್ನು ಸೇರಿ ಮಗನನ್ನು ಪಡೆಯುತ್ತಾಳೆ ].

[ಹರಿವಂಶಪರ್ವದಲ್ಲಿ (೩೫.೧೪-೧೫) ಈ ಕುರಿತ ವಿವರಣೆ ಕಾಣಸಿಗುತ್ತದೆ: ಗೋಪಕನ್ಯಾಮುಪಾದಾಯ ಮೈಥುನಾಯೋಪಚಕ್ರಮೇ । ಗೋಪಾಲೀ ತ್ವಪ್ಸರಾಸ್ತಸ್ಯ ಗೋಪಸ್ತ್ರೀವೇಷಧಾರಿಣೀ । (ಗೋಪಸ್ತ್ರೀ ವೇಷಧಾರಿಣಿಯಾಗಿ ಆಕೆ ಮೈಥುನಕ್ಕಾಗಿ ಬಂದಳು) ಧಾರಯಾಮಾಸ ಗರ್ಗಸ್ಯ ಗರ್ಭಂ ದುರ್ಧರಮಚ್ಯುತಮ್’ (ಅತ್ಯಂತ ಭಯಂಕರವಾದ ಗರ್ಭವನ್ನು ಆಕೆ ಧರಿಸಿದಳು).
ಇನ್ನು ವಿಷ್ಣುಪರ್ವದಲ್ಲೂ(೫೭.೧೨-೧೪) ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ತತಃ ಶುಶ್ರಾವ ತಂ ರಾಜಾ ಯವನಾಧಿಪತಿರ್ವರಂ । ಪುತ್ರಪ್ರಸವಜಂ ದೈವಾದಪುತ್ರಃ ಪುತ್ರಕಾಮಿತಾ । ಸ ನೃಪಸ್ತಮುಪಾನಾಯ್ಯ ಸಾಂತ್ವಯಿತ್ವಾ  ದ್ವಿಜೋತ್ತಮಮ್ । ತಂ ಘೋಷಮಧ್ಯೇ ಯವನೋ ಗೋಪಾಸ್ತ್ರೀಷು ಸಮಾಸೃಜತ್ ।  (ಮಗ ಬೇಕು ಎನ್ನುವ ಒಬ್ಬ ರಾಜನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಅದರಿಂದಾಗಿ ಅವನು ಒಬ್ಬ ಅಸುರಾಪ್ಸರೆಯನ್ನು ಗೋಪಿಕೆಯರ ಮಧ್ಯದಲ್ಲಿ ಕಳುಹಿಸಿ, ಅವಳ ಮೂಲಕ ಗರ್ಗನಿಂದ ಮಗನನ್ನು ಪಡೆಯುವ ಹಂಚಿಕೆಯನ್ನು ಹಾಕಿದ. ಅವನೇ ಯವನ[1] ರಾಜ). ಗೋಪಾಲಿ ತ್ವಪ್ಸರಾಸ್ತತ್ರ  ಗೋಪಸ್ತ್ರೀವೇಷಧಾರಿಣಿ । ಧಾರಯಾಮಾಸ ಗರ್ಗಸ್ಯ ಗರ್ಭಂ ದುರ್ಧರಮಚ್ಯುತಮ್ ।  ಮಾನುಷ್ಯಾಂ ಗರ್ಗಭಾರ್ಯಾಯಾಂ  ನಿಯೋಗಾಚ್ಛೂಲಪಾಣಿನಃ । ಸ ಕಾಲಯವನೋ  ನಾಮ ಜಜ್ಞೇ ಶೂರೋ ಮಹಾಬಲಃ’    

ಸ ಯಾವನೇನ ಭೂಭೃತಾ ಹಿ ಗೋಪಿಕಾಭಿರರ್ಚ್ಚಿತಃ ।
ಅಪುತ್ರಕೇಣ ಜಾನತಾ ಮುನೇರ್ಮ್ಮನೋsನುಚಿನ್ತಿತಮ್ ॥೧೭.೮೨॥

ಗರ್ಗಾಚಾರ್ಯರ ಮನಸ್ಸಿನ ಚಿಂತನೆಯನ್ನು ತಿಳಿದವನಾದ  ಯವನರಾಜನಿಂದ,  ಹಾಗೂ  ಗೋಪಿಕೆಯರಿಂದಲೂ ಕೂಡಾ ಗರ್ಗಾಚಾರ್ಯರು ಅರ್ಚಿತರಾದರು.

ಸ ಚಾಪ್ಸರಸ್ತನೌ ಸುತಂ ನಿಷಿಚ್ಯ ಯಾವನಾಯ ಚ ।
ದದೌ ವಿಮೋಹಿತಃ ಕ್ರುಧಾ ಕಿಮೇತದೀಶ ವೈರಿಣಃ ॥೧೭.೮೩॥

ಅಪ್ಸರೆಯನ್ನು ಸಂಭೋಗಿಸಿ ಮಗನನ್ನು ಪಡೆದ ಗರ್ಗಾಚಾರ್ಯರು ತನ್ನನ್ನು ಅರ್ಚಿಸಿದ ಯವನನಿಗೆ, ಸಿಟ್ಟಿನಿಂದ ಮೋಹಿತನಾಗಿ ಆ ಮಗುವನ್ನು ಕೊಟ್ಟರು. ಅಸುರಾವೇಶದಿಂದ, ಕೃಷ್ಣ ಹಾಗೂ ಯಾದವರ ಮೇಲೆ ವೈರತ್ವವನ್ನು ಸಾಧಿಸುತ್ತಿರುವ ಗರ್ಗಾಚಾರ್ಯ  ಈರೀತಿ ಮಾಡುವುದರಲ್ಲೇನು ಆಶ್ಚರ್ಯ?




[1] ಪ್ರಾಯಃ ಇಲ್ಲಿ ಹೇಳುವ ಯವನ ದೇಶ ಇಂದಿನ ದಕ್ಷಿಣ ಆಫ್ರಿಕ. ನಿಶ್ಚಿತವಾಗಿ ತಿಳಿದಿಲ್ಲ. ಆದರೆ ಅನೇಕರು ಹಾಗೆ ಹೇಳುತ್ತಾರೆ.