ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 19, 2020

Mahabharata Tatparya Nirnaya Kannada 1784_1790



ಸ ಆಶ್ರಮಾಚ್ಚ ನೈಷ್ಠಿಕಾದ್ ವಿದೂಷಿತಃ ಪ್ರತೀಪಕೃತ್ ।
ಹರೇಶ್ಚ ತಾಪಮೇಯಿವಾನ್ ಜಗರ್ಹ ಚಾsತ್ಮಶೇಮುಷೀಮ್ ॥೧೭.೮೪॥

ನೈಷ್ಠಿಕಬ್ರಹ್ಮಚರ್ಯಾಶ್ರಮದಿಂದ ಭ್ರಷ್ಟನಾಗಿ, ಪರಮಾತ್ಮನನ್ನು ವಿರೋಧ ಮಾಡಿದ ಗರ್ಗಾಚಾರ್ಯರು, ತದನಂತರ  ಪಶ್ಚಾತ್ತಾಪಪಟ್ಟು ತನ್ನ ಬುದ್ಧಿಯನ್ನು ಬೈದುಕೊಂಡರು.

ಜಗಾಮ ಚಾರಣಂ ಹರಿಂ ಪ್ರಪಾಹಿ ಮಾಂ ಸುಪಾಪಿನಮ್ ।
ಇತಿ ಸ್ಮ ವಿಷ್ಣ್ವನುಜ್ಞಯಾ ಚಕಾರ ವೈಷ್ಣವಂ ತಪಃ ॥೧೭.೮೫॥

ಅದರಿಂದಾಗಿ ‘ಅತ್ಯಂತ ಪಾಪಿಯಾದ ನನ್ನನ್ನು ರಕ್ಷಿಸು’ ಎಂದು ಗರ್ಗಾಚಾರ್ಯರು ಪರಮಾತ್ಮನಲ್ಲಿ  ಶರಣುಹೋದರು. ಈರೀತಿಯಾಗಿ, ವಿಷ್ಣುವಿನ ಅನುಜ್ಞೆಯಿಂದ ಮುಂದೆ ವಿಷ್ಣುಸಂಬಂಧಿಯಾದ ತಪಸ್ಸನ್ನು ಮಾಡಿದರು.

(ಈರೀತಿಯಾಗಿ ಯವನಪುತ್ರನ ಜನ್ಮದ ಹಿನ್ನೆಲೆಯನ್ನು ಜರಾಸಂಧನಿಗೆ ಹೇಳುತ್ತಿರುವ  ಸಾಲ್ವ, ಮುಂದುವರಿದು ಹೇಳುತ್ತಾನೆ:  )


ಕುತೋ ಹಿ ಭಾಗ್ಯಮಾಪತೇನ್ಮುನೇಃ ಶಿವಾರ್ಚ್ಚನೇ ಸದಾ ।
ಭವಾದೃಶಾ ಹಿ ದಾನವಾಃ ಸ್ಥಿರಾಃ ಶಿವಾರ್ಚ್ಚನೇ ಸದಾ ॥೧೭.೮೬॥

‘ಶಿವನ ಅರ್ಚನೆಯ ಭಾಗ್ಯ ಆ ಮುನಿಗೆ ಎಲ್ಲಿಂದ ಬರಬೇಕು? ನಿನ್ನಂತಹ ದಾನವರು ಶಿವನ ಅರ್ಚನೆಯಲ್ಲಿ ಯಾವಾಗಲೂ ನಿಷ್ಠೆಯುಳ್ಳವರು.

ಸುತೋsಸ್ಯ ಕಾಲನಾಮಕೋ ಬಭೂವ ಕೃಷ್ಣಮರ್ದ್ದಿತುಮ್ ।
ಸದೈವ ಕಾಲಕಾಙ್ಕ್ಷಣಾತ್ ಸ ಯಾವನಾಭಿಷೇಚಿತಃ ॥೧೭.೮೭॥

ಹೀಗೆ ಗರ್ಗಾಚಾರ್ಯರಿಂದ ಹುಟ್ಟಿದ ಯವನ ರಾಜನ ಮಗನು ‘ಕಾಲ ಎಂಬ ಹೆಸರಿನವನಾದನು. (ಏಕೆ ಈ ಹೆಸರನ್ನು ಪಡೆದ ಎಂದರೆ:) ಅವನು  ಕೃಷ್ಣನನ್ನು ತುಳಿಯಲು ಕಾಲವನ್ನು ನಿರಂತರವಾಗಿ ಪ್ರತೀಕ್ಷೆ ಮಾಡುತ್ತಿದ್ದುದರಿಂದ ಅವನು  ಕಾಲ-ಯವನ ಎಂಬ ಹೆಸರನ್ನು ಪಡೆದ. ಯವನ ರಾಜ  ತನ್ನ ಸ್ಥಾನದಲ್ಲಿ ತನ್ನ ಮಗನಿಗೆ ಅಭಿಷೇಕ ಮಾಡಿದ.

ತವೈವ ಶಿಷ್ಯ ಏಷ ಚಾತಿಭಕ್ತಿಮಾನ್ ಹಿ ಶಙ್ಕರೇ ।
ಪ್ರಭೂತಸೇನಯಾ ಯುತೋ ಬಲೋದ್ಧತಶ್ಚ ಸರ್ವದಾ ॥೧೭.೮೮॥

ಓ, ಜರಾಸಂಧ, ಶಂಕರನಲ್ಲಿ ಅತ್ಯಂತ ಭಕ್ತಿಯುಳ್ಳವನಾದ ಆ ಕಾಲಯವನ  ನಿನ್ನ ಶಿಷ್ಯನೇ. ಬಹಳ ಸೇನೆಯಿಂದ ಕೂಡಿರುವ ಆತ  ಬಲದಿಂದ ಉದ್ಧತನಾಗಿದ್ದಾನೆ ಕೂಡಾ.  

ತಮೇಶ ಯಾಮಿ ಶಾಸನಾತ್ ತವೋಪನೀಯ ಸತ್ವರಮ್ ।
ವಿಕೃಷ್ಣಕಂ ಕ್ಷಿತೇಸ್ಥಳಂ ವಿಧಾಯ ಸಂರಮಾಮ ಹಾ ॥೧೭.೮೯॥

ನಾನು ನಿನ್ನ ಆಜ್ಞೆಯಿಂದ ಕಾಲಯವನನಿದ್ದಲ್ಲಿಗೆ ತೆರಳುತ್ತೇನೆ. ಅವನನ್ನು ಕರೆತಂದು ಶೀಘ್ರದಲ್ಲಿ ಇಡೀ ಭೂಮಿಯನ್ನು ಕೃಷ್ಣ ರಹಿತನನ್ನಾಗಿ ಮಾಡಿ, ನಾವು ಆನಂದ ತುಂಬಿದವರಾಗೋಣ.

ತತಶ್ಚ ರುಗ್ಮಿಣೀಂ ವಯಂ ಪ್ರದಾಪಯಾಮ ಚೇದಿಪೇ ।
ವಿನಾಶ್ಯ ದೇವಪಕ್ಷಿಣೋ ಯಥೇಷ್ಟಮಾಸ್ಮ ಸರ್ವದಾ ॥೧೭.೯೦॥

ತದನಂತರ ನಾವೆಲ್ಲರೂ ಸೇರಿ ರುಗ್ಮಿಣಿಯನ್ನು ಶಿಶುಪಾಲನಿಗೆ ಕೊಡಿಸೋಣ. ದೇವತೆಗಳ ಪಕ್ಷದವರನ್ನು ನಾಶಮಾಡಿಸಿ, ನಮ್ಮ ಇಚ್ಛಾನುಸಾರ ಇರೋಣ’ ಎನ್ನುತ್ತಾನೆ ಸಾಲ್ವ.

No comments:

Post a Comment