ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, April 20, 2020

Mahabharata Tatparya Nirnaya Kannada 1791_17100


ಇತೀರಿತೋ ಜರಾಸುತೋ ಬಭೂವ ದುರ್ಮ್ಮನಾ ಭೃಶಮ್ ।
ಕಿರೀಟಮಣ್ಡಿತಂ ಶಿರಶ್ಚಕಾರ ಚಾsಶ್ವವಾಗ್ ಭೃಷಮ್ ॥೧೭.೯೧॥

ಈರೀತಿಯಾಗಿ ಸಾಲ್ವನಿಂದ ಹೇಳಲ್ಪಟ್ಟ ಜರಾಸಂಧನು ಅತ್ಯಂತ ಮನಸ್ಸು ಕೆಡಿಸಿಕೊಂಡವನಾದ. (ಸ್ವಾಭಿಮಾನಿ ಜರಾಸಂಧ ಬಹಳ ಸಂಕಟಪಟ್ಟ). ಕಿರೀಟದಿಂದ ಅಲಂಕೃತವಾದ ತನ್ನ ತಲೆಯನ್ನು ಕೆಳಗೆ ಮಾಡಿದ. (ತಲೆತಗ್ಗಿಸಿದ).

ಕರಂ ಕರೇಣ ಪೀಡಯನ್ ನಿಶಾಮ್ಯ ಚಾsತ್ಮನೋ ಭುಜೌ ।
ಜಗಾದ ಕಾರ್ಯ್ಯಸಿದ್ಧಯೇ ಕಥಂ ಪ್ರಯಾಚಯೇ ಪರಮ್ ॥೧೭.೯೨॥

ಕೈ-ಕೈ ಹಿಸುಕಿಕೊಳ್ಳುತ್ತಾ, ತನ್ನ ಭುಜವನ್ನು ನೋಡುತ್ತಾ ಜರಾಸಂಧ ಹೇಳುತ್ತಾನೆ: ‘ನನ್ನ ಕಾರ್ಯಸಿದ್ಧಿಗಾಗಿ ಇನ್ನೊಬ್ಬನ ಸಹಾಯವನ್ನು  ಹೇಗೆ ಬೇಡಲಿ ನಾನು?

ಸುದುರ್ಗ್ಗಕಾರ್ಯ್ಯಸನ್ತತಿಂ ಹ್ಯಗುಃ ಸ್ಮ ಮದ್ಭುಜಾಶ್ರಯಾಃ ।
ಸಮಸ್ತಭೂತಳೇ ನೃಪಾಃ ಸ ಚಾಹಮೇಷ ಮಾಗಧಃ ॥೧೭.೯೩॥

ನನ್ನ ಆಶ್ರಯ ಪಡೆದ ರಾಜರುಗಳೇ ಅತ್ಯಂತ ಅಸಂಭವವಾದ ಕಾರ್ಯವನ್ನು ಸಾಧಿಸಿಕೊಂಡಿದ್ದಾರೆ. ಅಂತಹ ಜರಾಸಂಧ ನಾನು.

ಕದಾsಪ್ಯಚೀರ್ಣ್ಣಮದ್ಯ ತತ್ ಕಥಂ ಕರೋಮಿ ಕೇವಲಮ್ ।
ಗಿರೀಶಪಾದಸಂಶ್ರಯಃ ಪ್ರಭುಃ ಸಮಸ್ತಭೂಭೃತಾಮ್ ॥೧೭.೯೪॥

ಹೀಗಿರುವಾಗ ಯಾವತ್ತೂ ಮಾಡದ ಕಾರ್ಯವನ್ನು(ಇನ್ನೊಬ್ಬರ ಸಹಾಯ ಬೇಡುವುದನ್ನು) ಹೇಗೆ ಮಾಡಲಿ? ಕೇವಲ ಸದಾಶಿವನ ಪಾದವನ್ನು ಆಶ್ರಯಿಸಿರುವ, ಎಲ್ಲಾ ರಾಜರಿಗೂ ಪ್ರಭುವಾಗಿರುವ ನಾನು ಇನ್ನೊಬ್ಬನ ಮುಂದೆ ಹೇಗೆ ಕೈಚಾಚಲಿ?

ಇತೀರಿತಃ ಸ ಸೌಭರಾಡ್ ಜಗಾದ ವಾಕ್ಯಮುತ್ತರಮ್ ।
ಭವಾನಪಿ ಸ್ಮ ಮುಹ್ಯತೇ ಕಿಮಸ್ಮದಾದಯಃ ಪ್ರಭೋ ॥೧೭.೯೫॥

ಈರೀತಿಯಾಗಿ ಜರಾಸಂಧ ನುಡಿದಾಗ, ಅದಕ್ಕೆ ಉತ್ತರವಾಗಿ ಸಾಲ್ವನು ಹೇಳುತ್ತಾನೆ:  ‘ನಿನ್ನಂತವನೇ ಮೋಹಕ್ಕೊಳಗಾಗುತ್ತಾನೆ ಎಂದಮೇಲೆ, ನಾವು ಮೋಹಕ್ಕೆ ಒಳಗಾಗುವುದರಲ್ಲೇನು ಆಶ್ಚರ್ಯ?

ಸ್ವಶಿಷ್ಯಕೈಃ ಕೃತಂ ತು ಯತ್ ಕಿಮನ್ಯಸಾಧಿತಂ ಭವೇತ್ ।
ಸ್ವಶಿಷ್ಯದಾಸವರ್ಗ್ಗಕೈಃ ಸಮರ್ತ್ಥಯನ್ತಿ ಭೂಭುಜಃ ॥೧೭.೯೬॥

ನಿನ್ನ ಶಿಷ್ಯರು ಮಾಡುವ ಕೆಲಸ ನೀನು ಮಾಡಿದಂತೆ ತಾನೇ? ರಾಜರು ತಮ್ಮ ಶಿಷ್ಯರಿಂದ, ತಮ್ಮ ದಾಸರಿಂದ ತಮ್ಮ ಕಾರ್ಯಸಾಧನೆ ಮಾಡಿಸಿಕೊಳ್ಳುತ್ತಾರೆ.

ಅಪಿ ಸ್ಮ ತೇ ಬಲಾಶ್ರಯಪ್ರವೃತ್ತಯೋsಸ್ಮದಾದಯಃ ।
ಪುಮಾನ್ ಕುಠಾರಸಙ್ಗ್ರಹಾದಶಕ್ತ ಈರ್ಯತೇ ಹಿ ಕಿಮ್  ॥೧೭.೯೭॥

ನಾವೆಲ್ಲರೂ ಕೂಡಾ ನಿನ್ನ ಬಲವನ್ನು ಆಶ್ರಯಿಸಿಕೊಂಡು ಮುಂದುವರಿಯುತ್ತಿದ್ದೇವೆ. ಪುರುಷನೊಬ್ಬ ಕೊಡಲಿಯನ್ನು ಹಿಡಿದುಕೊಂಡ ಮಾತ್ರಕ್ಕೆ ಅವನನ್ನು  ಅಶಕ್ತ ಎಂದು ಹೇಳುತ್ತಾರೇನು?

ಕುಠಾರಸಮ್ಮಿತೋ ಹ್ಯಸೌ ತವೈವ ಯಾವನೇಶ್ವರಃ ।
ವಿನಾ ಭವದ್ಬಲಂ ಕ್ವಚಿತ್ ಪ್ರವರ್ತ್ತಿತುಂ ನಹಿ ಕ್ಷಮಃ ॥೧೭.೯೮॥

ನಿನ್ನ ಕೈಯಲ್ಲಿನ ಕೊಡಲಿಯಂತೆ ಇರುವವನು ಆ ಕಾಲಯವನ. ನಿನ್ನ ಬಲ ಇಲ್ಲದೇ ಸ್ವತಃ ಮುಂದುವರಿಯಲು ಅವನು ಸಮರ್ಥನಲ್ಲ.

ವರೋ ಹಿ ಕೃಷ್ಣಮರ್ದ್ದನೇ ವೃತೋsಸ್ಯ ಕೇವಲಃ ಶಿವಾತ್ ।
ತದನ್ಯಶತ್ರುಪೀಡನಾತ್ ತ್ವಮೇವ ತಸ್ಯ ರಕ್ಷಕಃ ॥೧೭.೯೯॥

ಕೃಷ್ಣನನ್ನು ಸಾಯಿಸುವುದರಲ್ಲಿ ಅವನು ಶಿವನಿಂದ ವರವನ್ನು ಪಡೆದಿದ್ದಾನೆ. ಆದರೆ ಇತರರಿಂದ ಅವನನ್ನು ರಕ್ಷಿಸುವವನು ನೀನೇ.

ತವಾಖಿಲೈರಜೇಯತಾ ಶಿವಪ್ರಸಾದತೋsಸ್ತಿ ಹಿ ।
ವಿಶೇಷತೋ ಹರೇರ್ಜ್ಜಯೇ ವರಾದಯಂ ವಿಮಾರ್ಗ್ಯತೇ ॥೧೭.೧೦೦॥

ಶಿವನ ಅನುಗ್ರಹದಿಂದ ನಿನಗೆ ಅಜೇಯತ್ವವಿದೆ. ಕೃಷ್ಣನನ್ನು ಜಯಿಸುವುದರಲ್ಲಿ ಆ ಕಾಲಯವನನು ವಿಶೇಷವಾದ ವರವನ್ನು ಪಡೆದಿದ್ದಾನೆ’  ಎನ್ನುತ್ತಾನೆ ಸಾಲ್ವ.

No comments:

Post a Comment