ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, January 31, 2022

Mahabharata Tatparya Nirnaya Kannada 21: 304-308

 

[ಧೃತರಾಷ್ಟ್ರನಲ್ಲಿ ಕಲಿಯ ಆವೇಶ ಆಗಿರುವುದು ಯಾವಾಗ ಎನ್ನುವುದನ್ನು ವಿವರಿಸುತ್ತಾರೆ: ]

 

ಆವಿವೇಶ ಕಲಿಸ್ತಂ ಹಿ ಯದಾ ಪುತ್ರತ್ವಸಿದ್ಧಯೇ ।

ಅಂಶೇನ ತತ ಆರಭ್ಯ ನೈವಾಸ್ಮಾದಪಜಗ್ಮಿವಾನ್                    ॥೨೧.೩೦೪॥

 

ಯಾವತ್ ಪುರಂ ಪರಿತ್ಯಜ್ಯ ವನಮೇವ ವಿವೇಶ ಹ ।

ತದನ್ತರಾ ತತಸ್ತಸ್ಯ ಪಾಪಯುಕ್ತಂ ಮನೋsಭವತ್                  ॥೨೧.೩೦೫॥

 

(ಗಂಡು ಮತ್ತು ಹೆಣ್ಣು ಒಂದು ಮಗುವನ್ನು ಪಡೆಯಲು ಶಾಸ್ತ್ರದಲ್ಲಿ ಒಂದು ಪ್ರಕ್ರಿಯೆಯನ್ನು ಹೇಳುತ್ತಾರೆ. ಊಟ ಮಾಡುವ ಆಹಾರದಲ್ಲಿ ಜೀವ ಬಂದು ಸೇರಿಕೊಳ್ಳುತ್ತಾನೆ. ಹೀಗೆ ಸೇರಿದ ಜೀವ ಆಹಾರದೊಂದಿಗೆ ಗಂಡಿನ ದೇಹವನ್ನು ಪ್ರವೇಶಿಸಿ, ರೇತಸ್ಸಿನ ರೂಪವಾಗಿ ಬದಲಾಗುತ್ತಾನೆ. ಆ ರೇತಸ್ಸು ಹೆಣ್ಣಿನ ಗರ್ಭಾಶಯವನ್ನು ಸೇರಿ ಒಂದು ಮಗುವಾಗಿ ರೂಪುಗೊಳ್ಳುತ್ತದೆ.)

ಅಂಶದಿಂದ ಪುತ್ರತ್ವ ಸಿದ್ಧಿಗಾಗಿ ಯಾವಾಗ ಕಲಿಯೂ ಧೃತರಾಷ್ಟ್ರನ ದೇಹವನ್ನು ಪ್ರವೇಶ ಮಾಡಿದನೋ. ಅವತ್ತಿನಿಂದ ಒಂದು ಅಂಶದಿಂದ ಧೃತರಾಷ್ಟ್ರನಲ್ಲೇ ಉಳಿದ ಅವನು ಹೊರಹೋಗಲೇ ಇಲ್ಲ.

ಯಾವಾಗ ಮುಂದೆ ಧೃತರಾಷ್ಟ್ರ ಹಸ್ತಿನಾವತಿಯನ್ನು ಬಿಟ್ಟು ಕಾಡಿಗೆ ಪ್ರವೇಶ ಮಾಡುವನೋ, ಅಲ್ಲಿಯತನಕ ಕಲಿ ಅವನನ್ನು ಬಿಡಲೇ ಇಲ್ಲಾ. (ಅದರಿಂದಾಗಿ ದುರ್ಯೋಧನ ಹುಟ್ಟುವ ಒಂದು ವರ್ಷ ಮೊದಲು ಪ್ರವೇಶಿಸಿದ ಕಲಿ, ಧೃತರಾಷ್ಟ್ರ ಸಾಯುವುದಕ್ಕಿಂತ ಸುಮಾರು ೩ ವರ್ಷ ಮುಂಚೆಯ ತನಕ ಅವನಲ್ಲಿದ್ದ) ಹೀಗಾಗಿ ಧೃತರಾಷ್ಟ್ರನ  ಮನಸ್ಸು ಪಾಪಿಷ್ಠವಾಗಿತ್ತು.    

 

ನ್ಯವಾರಯತ್ ತಂ ವಿದುರೋ ಮಹತ್ ತೇ ಪಾಪಂ ಕುಲಸ್ಯಾಪಿ ವಿನಾಶಕೋsಯಮ್ ।

ಸಮುದ್ಯಮೋ ನಾತ್ರ ವಿಚಾರ್ಯ್ಯಮಸ್ತಿ ಕೃಥಾ ನ ತಸ್ಮಾದಯಶಶ್ಚ ತೇ ಸ್ಯಾತ್             ॥೨೧.೩೦೬॥

 

ಶ್ರೇಷ್ಠವಾದ ಸದ್ಬುದ್ಧಿಯುಳ್ಳವನಾದ ವಿದುರನು ಧೃತರಾಷ್ಟ್ರನನ್ನು ತಡೆದು ಹೇಳುತ್ತಾನೆ: ‘ನಿನಗೆ ಪಾಪ ಬರುತ್ತದೆ. ಈರೀತಿಯ ತೊಡಗುವಿಕೆ ಇಡೀ ಕುಲವನ್ನೇ ನಾಶ ಮಾಡುತ್ತದೆ. ಈ ವಿಚಾರದಲ್ಲಿ ಯಾವ ಹೆಚ್ಚಿನ ವಿಚಾರವನ್ನೂ ಮಾಡಬೇಕಾಗಿಲ್ಲ. ಆದ್ದರಿಂದ ಹೀಗೆ ಮಾಡಬೇಡ. ಇದರಿಂದ ನಿನಗೆ ಶಾಶ್ವತವಾದ ಅಪಕೀರ್ತಿ ಬರುತ್ತದೆ’ ಎಂದು. 

 

ಇತಿ ಬ್ರುವಾಣಂ ಕಲಹೋSತ್ರ ನ ಸ್ಯಾನ್ನಿವಾರಯಾಮೋ ವಯಮೇವ ಯಸ್ಮಾತ್ ।

ದ್ರಷ್ಟುಂ ಸುತಾನ್ ಕ್ರೀಡತ ಏಕಸಂಸ್ಥಾನಿಚ್ಛಾಮಿ ಪಾರ್ತ್ಥಾಂಶ್ಚ ಸುಯೋಧನಾದೀನ್ ॥೨೧.೩೦೭॥

 

ಅತಃ ಕ್ಷಿಪ್ರಮುಪಾನೇಯಾಃ ಪಾರ್ತ್ಥಾ ಇತಿ ಬಲೋದಿತಃ ।

ಯಯೌ ಸ ವಿದುರಃ ಪಾರ್ತ್ಥಾನ್ ದ್ವಾರಕಾಂ ಕೇಶವೇ ಗತೇ                  ॥೨೧.೩೦೮॥

 

ಈರೀತಿಯಾಗಿ ಎಚ್ಚರಕೊಡುವ ವಿದುರನನ್ನು ಕುರಿತು ಧೃತರಾಷ್ಟ್ರ- ‘ಯಾವ ಕಾರಣದಿಂದ ನಾವೇ ತಡೆಯುತ್ತೇವೆ(ಈ ಜೂಜಿನಿಂದ ಜಗಳ ಆಗುವುದಿಲ್ಲ, ಒಂದು ವೇಳೆ ಆದರೆ ನಾವು ತಡೆಯುತ್ತೇವೆ. ನಾನು ಅವರನ್ನು ಕರೆಯುತ್ತಿರುವುದು ಏಕೆಂದರೆ:). ಪಾಂಡವರೂ ಮತ್ತು ದುರ್ಯೋಧನ ಮೊದಲಾದವರು  ಒಂದೆಡೆ ಇದ್ದು, ಆಟ ಆಡುವ ಅವರನ್ನು ನಾನು ನೋಡಲು  ಇಷ್ಟಪಡುತ್ತೇನೆ. (ಕೇವಲ ಕ್ರೀಡೆಗಾಗಿ ಕರೆಸುತ್ತಿರುವುದು). ಅದರಿಂದ ಬೇಗನೇ ಪಾಂಡವರು ಕರೆತರಲ್ಪಡಬೇಕಾದವರು.’ ಈರೀತಿಯಾಗಿ ಬಲಾತ್ಕಾರವಾಗಿ ಧೃತರಾಷ್ಟ್ರನಿಂದ ಒತ್ತಿಒತ್ತಿ ಹೇಳಲ್ಪಟ್ಟ ವಿದುರನು ಪಾಂಡವರನ್ನು ಕುರಿತು ತೆರಳಿದ. ಆ ಸಮಯದಲ್ಲಿ ಶ್ರೀಕೃಷ್ಣ ಇಂದ್ರಪ್ರಸ್ಥದಲ್ಲಿರಲಿಲ್ಲ. ಅವನು ದ್ವಾರಕಾಪಟ್ಟಣಕ್ಕೆ ಮರಳಿದ್ದ.

Saturday, January 29, 2022

Mahabharata Tatparya Nirnaya Kannada 21: 292-303

 

ಇತೀರಿತಃ ಪಾಪತಮ ಆಹ ಗಾನ್ಧಾರಕೋ ನೃಪಃ ।

ಪಾಪಾನಾಮಖಿಲಾನಾಂ ಚ ಪ್ರಧಾನಂ ಚಕ್ರವರ್ತ್ತಿನಮ್                        ॥೨೧.೨೯೨॥

 

ಈರೀತಿಯಾಗಿ ದುರ್ಯೋಧನ ಮಾತನಾಡಿದಾಗ, ಅತ್ಯಂತ ಪಾಪಿಷ್ಠನಾದ ಗಾಂಧಾರರಾಜ ಶಕುನಿಯು, ಎಲ್ಲಾ ಪಾಪಿಗಳ ಮುಖ್ಯರಿಗೆ ಚಕ್ರವರ್ತಿಯಾಗಿರುವ ದುರ್ಯೋಧನನನ್ನು ಕುರಿತು ಹೇಳಿದನು.

 

ಯಾನ್ತಾಂ ಶ್ರಿಯಂ ಪ್ರದೀಪ್ತಾಂ ತ್ವಂ ಪಾಣ್ಡವೇಷು ಪ್ರಪಶ್ಯಸಿ

ತಾಮಕ್ಲೇಶತ ಆದಾಸ್ಯೇ ಕ್ರೀಡನ್ನ ಕ್ಷೈಸ್ತ್ವದನ್ತಿಕೇ                        ॥೨೧.೨೯೩॥

 

‘ನೀನು ಯಾವಯಾವ ಸಂಪತ್ತು ಪಾಂಡವರಲ್ಲಿ ಬೆಳಗುತ್ತಿರುವುದನ್ನು ನೋಡುತ್ತೀಯೋ, ಆ ಎಲ್ಲಾ ಸಂಪತ್ತನ್ನು ಅನಾಯಾಸವಾಗಿ ದಾಳಗಳನ್ನು ಉರುಳಿಸುತ್ತಾ(ಪಗಡೆ/ಜೂಜಾಡುತ್ತಾ) ನಿನ್ನಲ್ಲಿಗೆ ಕರೆತರುತ್ತೇನೆ’.

 

ಇತೀರಿತಃ ಪ್ರಸನ್ನಧೀಃ ಸುಯೋಧನೋ ಬಭೂವ ಹ ।

ಪ್ರಜಗ್ಮತುಶ್ಚ ತಾವುಭೌ ವಿಚಿತ್ರವೀರ್ಯ್ಯಜಂ ನೃಪಮ್               ॥೨೧.೨೯೪॥

 

ಈರೀತಿಯಾಗಿ ಶಕುನಿಯಿಂದ ಹೇಳಲ್ಪಟ್ಟ ಸುಯೋಧನನು ಸಂತಸಗೊಂಡ. ಅವರಿಬ್ಬರೂ ಧೃತರಾಷ್ಟ್ರನ ಹತ್ತಿರ ಹೋದರು.

 

ಧೃತರಾಷ್ಟ್ರಮಥೋವಾಚ ದ್ವಾಪರಾಂಶೋsತಿಪಾಪಕೃತ್ ।

ನಾಸ್ತಿಕ್ಯರೂಪಃ ಶಕುನಿರ್ವಿವರ್ಣ್ಣಂ ಹರಿಣಂ ಕೃಶಮ್                  ॥೨೧.೨೯೫॥

 

ತದನಂತರ ದ್ವಾಪರ ನಾಮಕ ದೈತ್ಯನ ಅಂಶವಾದ, ಅತ್ಯಂತ ಪಾಪವನ್ನು ಮಾಡಲು ಕಾರಣವಾದ, ಜನರಲ್ಲಿ ನಾಸ್ತಿಕ್ಯವನ್ನು ಬಿತ್ತುವ ಶಕುನಿಯು ದುರ್ಯೋಧನನನ್ನು ಬಿಳಿಚಿಕೊಂಡಿದ್ದಾನೆ, ಕಪ್ಪುಬಣ್ಣದವನಾಗಿದ್ದಾನೆ , ಕೃಶವಾಗಿದ್ದಾನೆಂದು ಧೃತರಾಷ್ಟ್ರನಲ್ಲಿ  ಹೇಳಿದ.

 

ದುರ್ಯ್ಯೋಧನಂ ತು  ತಚ್ಛ್ರುತ್ವಾ ಕುತ ಇತ್ಯಾಹ ದುರ್ಮ್ಮನಾಃ ।

ಅಬ್ರೂತಾಂ ತೌ ನೃಪಾಯಾsಶು ದ್ವಾಭ್ಯಾಂ ಯನ್ಮನ್ತ್ರಿತಂ ಪಥಿ             ॥೨೧.೨೯೬॥

 

ಈ ಮಾತನ್ನು ಕೇಳಿ ದುಃಖಿತನಾದ ಧೃತರಾಷ್ಟ್ರನು  ‘ಏಕೆ ಹೀಗೆ’ ಎಂದು ಕೇಳಿದ. ಆಗ ಅವರಿಬ್ಬರೂ ತಾವು ದಾರಿಯಲ್ಲಿ ಏನನ್ನು ಯೋಚನೆಮಾಡಿದ್ದರೋ ಅದನ್ನು ಹೇಳಿದರು.

 

ಶ್ರುತ್ವೈವ ತನ್ನೇತ್ಯವದತ್ ಸ ಭೂಪತಿರ್ವಿರೋಧಿ ಧರ್ಮ್ಮಸ್ಯ ವಿನಾಶಕಾರಣಮ್ ।

ಕುಮನ್ತ್ರಿತಂ ವೋ ನ ಮಮೈತದಿಷ್ಟಂ ಸ್ವಬಾಹುವೀರ್ಯ್ಯಾಪ್ತಮಹಾಶ್ರಿಯೋ ಹಿ ತೇ ॥೨೧.೨೯೭॥

 

ತ್ವಯಾsಪಿ ನಿರ್ಜ್ಜಿತ್ಯ ದಿಶೋ ಮಖಾಗ್ರ್ಯಾಃ ಕಾರ್ಯ್ಯಾಃ ಸ್ಪೃಧೋ ಮಾ ಗುಣವತ್ತಮೈಸ್ತೈಃ ।

ವಿಶೇಷತೋ ಭ್ರಾತೃಭಿರಗ್ರ್ಯಪೌರುಷೈರಿತ್ಯುಕ್ತ ಆಹಾsಶು ಸುಯೋಧನಸ್ತಮ್             ॥೨೧.೨೯೮॥

 

ಅವರ ಮಾತನ್ನು ಕೇಳಿದೊಡನೆ ಧೃತರಾಷ್ಟ್ರನು ‘ಇದು ಸರಿಯಲ್ಲ, ಧರ್ಮಕ್ಕೆ ವಿರುದ್ಧವಾಗಿ ನಡೆದರೆ ವಿನಾಶಕ್ಕೆ ಕಾರಣವಾಗುತ್ತದೆ. ನಿಮ್ಮ ಕೆಟ್ಟ ಆಲೋಚನೆಯೂ ನನಗೆ ಇಷ್ಟ ಅಲ್ಲ. ಪಾಂಡವರು ತಮ್ಮ ತೋಳ್ಬಲದಿಂದ ಸಕಲ ಸಂಪತ್ತನ್ನೂ ಪಡೆದಿದ್ದಾರೆ. ಅವರ ಮೇಲೆ  ಸ್ಪರ್ಧೆ ಒಳ್ಳೆಯದಲ್ಲ.

ನಿನ್ನಿಂದಲೂ ದಿಕ್ಕುಗಳನ್ನು ಗೆದ್ದು, ಶ್ರೇಷ್ಠವಾದ ಯಜ್ಞಗಳು ಮಾಡಲ್ಪಡತಕ್ಕದ್ದು. ಆದರೆ ಗುಣಗಳಿಂದ ಶ್ರೇಷ್ಠರಾಗಿರುವ ಅವರೊಂದಿಗೆ ಸ್ಪರ್ಧಿಸಬೇಡ. ವಿಶೇಷತಃ ನಿನ್ನ ಅಣ್ಣ-ತಮ್ಮಂದಿರೊಂದಿಗೆ ಬೇಡ’ ಎಂದನು. ಈರೀತಿ ಹೇಳಲ್ಪಟ್ಟ ದುರ್ಯೋಧನನು ಅವನನ್ನು ಕುರಿತು ಹೇಳಿದನು.

 

ಯದಿ ಶ್ರಿಯಂ ಪಾಣ್ಡವಾನಾಂ ನಾಕ್ಷೈರಾಚ್ಛೇತ್ತುಮಿಚ್ಛಸಿ ।

ಮೃತಮೇವಾದ್ಯ ಮಾಂ ವಿದ್ಧಿ ಪಾಣ್ಡವೈಸ್ತ್ವಂ ಸುಖೀ ಭವ                       ॥೨೧.೨೯೯॥

 

ಯದಿ ಮಜ್ಜೀವಿತಾರ್ತ್ಥೀ ತ್ವಮಾನಯಾsಶ್ವಿಹ ಪಾಣ್ಡವಾನ್ ।

ಸಭಾರ್ಯ್ಯಾನ್ ದೇವನಾಯೈವ ನಚಾಧರ್ಮ್ಮೋsತ್ರ ಕಶ್ಚನ                  ॥೨೧.೩೦೦॥

 

‘ಒಂದುವೇಳೆ ಪಾಂಡವರ ಸಂಪತ್ತನ್ನು ದಾಳಗಳಿಂದ ಕಿತ್ತುಕೊಳ್ಳಲು ಬಯಸುವುದಿಲ್ಲವಾದರೆ ಈಗಲೇ ನಾನು ಸತ್ತಿದ್ದೇನೆ ಎಂದು ತಿಳಿದುಕೋ. ನೀನು ಪಾಂಡವರ ಜೊತೆಗೆ ಸುಖವಾಗಿರು.

ಒಂದುವೇಳೆ ನೀನು ನಾನು ಬದುಕಬೇಕು ಎಂದು ಬಯಸುವಿಯಾದರೆ ಕೂಡಲೇ ಇಲ್ಲಿಗೆ ದ್ರೌಪದಿಯಿಂದ ಒಡಗೂಡಿದ ಪಾಂಡವರನ್ನು ಜೂಜಿಗಾಗಿಯೇ ಕರೆ. ಈ ಜೂಜಾಡುವಿಕೆಯಲ್ಲಿ ಅಧರ್ಮವಿಲ್ಲ.

 

ವೇದಾನುಜೀವಿನೋ ವಿಪ್ರಾಃ ಕ್ಷತ್ರಿಯಾಃ ಶಸ್ತ್ರಜೀವಿನಃ ।

ತ್ರುಟ್ಯತೇ ಯೇನ ಶತ್ರುಶ್ಚ ತಚ್ಛಸ್ತ್ರಂ ನೈವ ಚೇತರತ್                 ॥೨೧.೩೦೧॥

 

ಬ್ರಾಹ್ಮಣರು ವೇದವನ್ನಿಟ್ಟುಕೊಂಡು ಬದುಕುತ್ತಾರೆ. ಕ್ಷತ್ರಿಯರು ಶಸ್ತ್ರವನ್ನಿಟ್ಟುಕೊಂಡು ಬಾಳುತ್ತಾರೆ. ಯಾವುದರಿಂದ ಶತ್ರುವು ನಾಶಮಾಡಲ್ಪಡುತ್ತಾನೋ ಅದೇ ಶಸ್ತ್ರ ಬೇರೆ ಅಲ್ಲವೇ ಅಲ್ಲ.

 

ಅತಃ ಸ್ವಧರ್ಮ್ಮ ಏವಾಯಂ ತವಾಪಿ ಸ್ಯಾತ್ ಫಲಂ ಮಹತ್ ।

ಇತ್ಯುಕ್ತೋ ಮಾ ಫಲಂ ಮೇsಸ್ತು ತವೈವಾಸ್ತ್ವಿತಿ ಸೋsಬ್ರವೀತ್             ॥೨೧.೩೦೨॥

 

ಹೀಗಾಗಿ ನಾನು ಪಾಂಡವರೆಂಬ ಶತ್ರುಗಳನ್ನು ನಾಶಮಾಡಲು, ಜೂಜು ಎಂಬ ಶಸ್ತ್ರವನ್ನು ಬಳಸುತ್ತಿದ್ದೇನೆ. ಜೂಜೂ ಕೂಡಾ ಸ್ವಧರ್ಮವೇ (ವೇದದಲ್ಲಿ ಕ್ಷತ್ರಿಯರು ಶಸ್ತ್ರವನ್ನು  ಆಶ್ರಯಿಸಿ ಬದುಕಬೇಕು ಎಂದಿದೆ. ನನ್ನ ಪ್ರಕಾರ ಜೂಜೂ ಕೂಡಾ ನಮ್ಮ ಶಸ್ತ್ರ. ಹಾಗಾಗಿ ಇದು ಧರ್ಮ ಎನ್ನುವ ವಾದ). ಇದರಿಂದ ನಿನಗೂ ಕೂಡಾ ಒಳ್ಳೆಯ ಫಲ ಸಿಗುತ್ತದೆ.’ ಈರೀತಿಯಾಗಿ ಹೇಳಲ್ಪಟ್ಟ ಧೃತರಾಷ್ಟ್ರನು ‘ನನಗೆ ಫಲ ಬೇಡ’ ಎಂದು ಹೇಳಿ ಸುಮ್ಮನಾದನು.

 

ಏವಂ ಬ್ರುವನ್ನಪಿ ನೃಪ ಆವಿಷ್ಟಃ ಕಲಿನಾ ಸ್ವಯಮ್ ।

ಪುತ್ರಸ್ನೇಹಾಚ್ಚ ವಿದುರಮಾದಿಶತ್ ಪಾಣ್ಡವಾನ್ ಪ್ರತಿ               ॥೨೧.೩೦೩॥

 

ಈರೀತಿಯಾಗಿ ಹೇಳುತ್ತಿದ್ದರೂ ಧೃತರಾಷ್ಟ್ರನು ಕಲಿಯ ಆವೇಶಕ್ಕೆ ಒಳಗಾಗಿ ಪುತ್ರನ ಮೇಲಿನ ಪ್ರೀತಿಯಿಂದಲೂ, ಪಾಂಡವರನ್ನು ಕುರಿತು ತೆರಳಲು ವಿದುರನನ್ನು ಆದೇಶಿಸಿದ.

Thursday, January 27, 2022

Mahabharata Tatparya Nirnaya Kannada 21: 278-291

 

ಉಪಾಸಿರೇ ಚ ತಾನ್ ನೃಪಾಃ ಸಮಸ್ತಶಃ ಸುಹೃದ್ಗಣಾಃ ।

ತದಾSSಜಗಾಮ ಖಡ್ಗಭೃತ್  ಸಹಾನುಜಃ ಸುಯೋಧನಃ                       ॥೨೧.೨೭೮॥

 

ಎಲ್ಲಾ ಮಿತ್ರರಾಗಿರುವ ರಾಜರು ಸಮೀಪದಲ್ಲಿಯೇ ಕುಳಿತಿದ್ದರು. ಆಗ  ಖಡ್ಗವನ್ನು ಹಿಡಿದ, ತಮ್ಮಂದಿರಿಂದ ಕೂಡಿದ ದುರ್ಯೋಧನನು ಸಭಾಸ್ಥಳಕ್ಕೆ ಬಂದನು.

[ಇಲ್ಲಿ ದುರ್ಯೋಧನನ ಮನೋಭಾವ ಹೇಗಿತ್ತು ಎನ್ನುವುದನ್ನು  ಖಡ್ಗಭೃತ್’ ಎಂದು ಹೇಳಿದ್ದಾರೆ. ಇದರ ಆಯಾಮಗಳನ್ನೇ ಭಾಗವತದಲ್ಲಿ(೧೦.೮೪.೧) ವಿಸ್ತಾರವಾಗಿ ಕಾಣುತ್ತೇವೆ. ‘ತತ್ರ ದುರ್ಯೋಧನೋ ಮಾನಿ ಪರಿತೋ ಭ್ರಾತೃಭಿಃ ಪ್ರಿಯೈಃ  ಕಿರೀಟಮಾಲಿ ನ್ಯವಿಶದಸಿಹಸ್ತಃ  ಕ್ಷಿಪನ್ ರುಚಾ   ಬಹಳ ಗರ್ವವುಳ್ಳವನಾಗಿ, ತನ್ನೆಲ್ಲಾ ತಮ್ಮನ್ದಿರರಿಂದ ಕೂಡಿಕೊಂಡು, ಕಿರೀಟವನ್ನು ಧರಿಸಿ, ಖಡ್ಗವನ್ನು ಹಿಡಿದು, ತಿರಸ್ಕಾರವನ್ನು ಮುಖದಲ್ಲಿ ತೋರುತ್ತಾ  ದುರ್ಯೋಧನ ಸಭೆಯನ್ನು ಪ್ರವೇಶಿಸಿದ].

 

ದ್ವಾರಂ ಸಭಾಯಾ ಹರಿನೀಲರಶ್ಮಿವ್ಯೂಢಂ ನ ಜಾನನ್ ಸ ವಿಹಾಯ ಭಿತ್ತಿಮ್

ಅಭ್ಯನ್ತರಾಣಾಂ ದೃಶಿ ನೋವಿಘಾತಿನೀಂ ಸಂ ಸ್ಫಾಟಿಕಾಮಾಶು ದೃಢಂ ಚುಚುಮ್ಬೇ ॥೨೧.೨೭೯॥

 

ಇಂದ್ರನೀಲಮಣಿಯ ಪ್ರಕಾಶದಿಂದ ಆಚ್ಛಾದಿತವಾದ ಸಭಾಂಗಣದ ದ್ವಾರವನ್ನು ತಿಳಿಯದ ದುರ್ಯೋಧನ, ಅದನ್ನು ಬಿಟ್ಟು,  ಮಧ್ಯದಲ್ಲಿ ಇರುವ, ಯಾವುದೇ ಪದಾರ್ಥಗಳನ್ನು ಕಾಣುವುದರಲ್ಲಿ ತಡೆಯದ(ಪಾರದರ್ಶಕವಾದ) ಸ್ಫಟಿಕಮಣಿಗಳಿಂದ ಮಾಡಿದ ಗೋಡೆಯನ್ನು ಗಟ್ಟಿಯಾಗಿ ಮುತ್ತಿಕ್ಕಿದ. (ಗೋಡೆಗೆ ಡಿಕ್ಕಿಹೊಡೆದ).

 

ಪ್ರವೇಶಯೇತಾಂ ಚ ಯಮೌ ತಮಾಶು ಸಭಾಂ ಭುಜೌ ಗೃಹ್ಯ ನೃಪೋಪದಿಷ್ಟೌ ।

ತತ್ರೋಪವಿಶ್ಯ ಕ್ಷಣಮನ್ಯತೋSಗಾದಮೃಷ್ಯಮಾಣಃ ಶ್ರಿಯಮೇಷು ದಿವ್ಯಾಮ್ ॥೨೧.೨೮೦॥

 

ಆಗ ಧರ್ಮರಾಜನಿಂದ ಉಪದಿಷ್ಟರಾದ(ಆಜ್ಞಾಪಿಸಲ್ಪಟ್ಟ) ನಕುಲ-ಸಹದೇವರು ದುರ್ಯೋಧನನ ಕೈಗಳನ್ನು ಹಿಡಿದುಕೊಂಡು ಸಭೆಯನ್ನು ಪ್ರವೇಶಮಾಡುವಂತೆ ಮಾಡಿದರು. ಅಲ್ಲಿ ಆ ಸಭೆಯಲ್ಲಿ ಸ್ವಲ್ಪಹೊತ್ತು ಸುಧಾರಿಸಿಕೊಂಡ(ಕುಳಿತುಕೊಂಡ) ದುರ್ಯೋಧನ,  ಪಾಂಡವರಲ್ಲಿರುವ ಅಲೌಕಿಕವಾದ ಸಂಪತ್ತನ್ನು ಸಹಿಸದೇ, ಅಲ್ಲಿಂದ ಬೇರೆಡೆಗೆ ತೆರಳಿದನು.

 

ತತೇನ್ದ್ರನೀಲಭುವಿ ರತ್ನಮಯಾನಿ ದೃಷ್ಟ್ವಾ ಪದ್ಮಾನಿ ನೀರಮನಸಾ ಜಗೃಹೇ ಸ್ವವಸ್ತ್ರಮ್ ।

ರತ್ನೋರುದೀಧಿತಿನಿಗೂಢಜಲಂ ಸ್ಥಲಂ ಚ ಮತ್ವಾ ಪಪಾತ ಸಹಿತೋSವರಜೈರ್ಜ್ಜಲೌಘೇ ॥೨೧.೨೮೧॥

 

ಹೀಗೆ ಹೋಗುವಾಗ ಅಲ್ಲಿ ಇಂದ್ರನೀಲಮಣಿಮಯವಾದ ನೆಲದಲ್ಲಿ (ಅಲಂಕಾರಕ್ಕಾಗಿ ಇಟ್ಟ) ರತ್ನದ ಪದ್ಮಗಳನ್ನು ನೋಡಿ, ಅದನ್ನು ನೀರು ಎನ್ನುವ ಭ್ರಮೆಯಿಂದ ತನ್ನ ಬಟ್ಟೆಗಳನ್ನು ಎತ್ತಿ ಹಿಡಿದುಕೊಂಡ. ನಂತರ ಮುತ್ತು-ರತ್ನಗಳ ಉತ್ಕೃಷ್ಟ ಕಾಂತಿಯಿಂದ  ಆಚ್ಛಾದಿತವಾದ ನೀರನ್ನು ನೆಲವೆಂದು ತಿಳಿದು, ತಮ್ಮಂದಿರಿಂದ ಕೂಡಿಕೊಂಡು ಆ ಜಲದಲ್ಲಿ ಬಿದ್ದ.

 

ತಂ ಪ್ರಾಹಸದ್ ಭಗವತಾ ಕ್ಷಿತಿಭಾರನಾಶಹೇತೋಃ ಸುಸೂಚಿತ ಊರುಸ್ವರತೋSತ್ರ ಭೀಮಃ ।

ಪಾಞ್ಚಾಲರಾಜಸುತಯಾ ಚ ಸಮಂ ತಥಾSನ್ಯೈಃ ಸ್ವೀಯೈಸ್ತಥಾSನು ಜಹಸುರ್ಭಗವನ್ಮಹಿಷ್ಯಃ ॥೨೧.೨೮೨॥

 

ಆಗ ಶ್ರೀಕೃಷ್ಣನಿಂದ ಭೂಭಾರನಾಶವಾಗಲಿ ಎನ್ನುವ ಕಾರಣಕ್ಕಾಗಿ ಕಣ್ಸನ್ನೆಯಿಂದ ಹೇಳಲ್ಪಟ್ಟ ಭೀಮನು, ದ್ರೌಪದಿಯಿಂದ ಒಡಗೂಡಿ, ಸಾತ್ಯಕಿಯಿಂದ ಒಡಗೂಡಿ ಗಟ್ಟಿಯಾಗಿ ನಕ್ಕನು. ಅವನನ್ನು ಅನುಸರಿಸಿ ಪರಮಾತ್ಮನ ಮಹಿಷಿಯರೂ ನಕ್ಕರು.

 

ಮನ್ದಸ್ಮಿತೇನ ವಿಲಸದ್ವದನೇನ್ದುಬಿಮ್ಬೋ ನಾರಾಯಣಸ್ತು ಮುಖಮೀಕ್ಷ್ಯ ಮರುತ್ಸುತಸ್ಯ ।

ನೋವಾಚ ಕಿಞ್ಚಿದಥ ಧರ್ಮ್ಮಸುತೋ ನಿವಾರ್ಯ್ಯ ಪ್ರಾಸ್ಥಾಪಯದ್ ವಸನಮಾಲ್ಯವಿಲೇಪನಾನಿ ॥೨೧.೨೮೩॥

 

ಶೋಭಿಸುವ ಮುಖಚಂದ್ರವುಳ್ಳವನಾದ ನಾರಾಯಣನಾದರೋ, ಮಂದಹಾಸದಿಂದ ಭೀಮಸೇನನ ಮುಖವನ್ನು ನೋಡಿದ ಆದರೆ ಏನನ್ನೂ ಹೇಳಲಿಲ್ಲ. ಆಗ ಧರ್ಮರಾಜನು ನಗುವನ್ನು ತಡೆದು, ದುರ್ಯೋಧನನಿಗಾಗಿ ವಸ್ತ್ರಗಳೂ, ಪುಷ್ಪಗಳೂ, ಗಂಧಗಳನ್ನೂ ಕಳುಹಿಸಿದ.

 

ಕೃಷ್ಣಾವೃಕೋದರಗತಂ ಬಹಳಂ ನಿಧಾಯ ಕ್ರೋಧಂ ಯಯೌ ಸಶಕುನಿರ್ದ್ಧೃತರಾಷ್ಟ್ರಪುತ್ರಃ ।

ಸಮ್ಬ್ರೀಳಿತೋ ನೃಪತಿದತ್ತವರಾಮ್ಬರಾದೀನ್  ನ್ಯಕ್ಕೃತ್ಯ ಮಾರ್ಗ್ಗಗತ ಆಹ ಸ ಮಾತುಲಂ ಸ್ವಮ್ ॥೨೧.೨೮೪॥

 

ಆಗ ದುರ್ಯೋಧನನು ಬಹಳ ಲಜ್ಜಿತನಾಗಿ,  ದ್ರೌಪದಿ ಭೀಮಸೇನರಲ್ಲಿ ಬಹಳ ಕೋಪವನ್ನಿಟ್ಟುಕೊಂಡು,  ಧರ್ಮರಾಜ ಕೊಟ್ಟ ಬಟ್ಟೆ ಮೊದಲಾದವುಗಳನ್ನು ತಿರಸ್ಕರಿಸಿ, ಶಕುನಿ ಹಾಗೂ ತನ್ನ ತಮ್ಮಂದಿರಿಂದ ಕೂಡಿಕೊಂಡು ಹಸ್ತಿನಾವತಿಯತ್ತ ತೆರಳಿದ. ದಾರಿಯಲ್ಲಿ ದುರ್ಯೋಧನನು  ತನ್ನ ಸೋದರಮಾವನಾದ ಶಕುನಿಯನ್ನು ಕುರಿತು ಮಾತನಾಡಿದ.  

[ಈ ಘಟನೆಯನ್ನು ಭಾಗವತದಲ್ಲಿ(೧೦.೮೪.೪) ವಿವರಿಸಲಾಗಿದೆ: ‘ಜಹಾಸ ಭೀಮಸ್ತಂ ದೃಷ್ಟ್ವಾ ಸ್ತ್ರೀಯೋ ಭೂಪಾಶ್ಚ ಕೇಚನ । ನಿವಾರ್ಯಮಾಣಾ ಅಪ್ಯಙ್ಗ ರಾಜ್ಞಾ ಕೃಷ್ಣಾನುಮೋದಿತಾಃ ಯುಧಿಷ್ಠಿರ ತಡೆದರೂ ಅವರೆಲ್ಲರೂ ನಕ್ಕರು]

 

ಯೌ ಮಾಮಹಸತಾಂ ಕೃಷ್ಣಾಭೀಮೌ ಕೃಷ್ಣಸ್ಯ ಸನ್ನಿಧೌ ।

ತಯೋರಕೃತ್ವಾ ಸನ್ತಾಪಂ ನಾಹಂ ಜೀವಿತುಮುತ್ಸಹೇ             ॥೨೧.೨೮೫॥

 

‘ಯಾವ ದ್ರೌಪದೀಭೀಮರು ಶ್ರೀಕೃಷ್ಣನ ಎದುರಿನಲ್ಲೇ ನನ್ನನ್ನು ಕುರಿತು ನಕ್ಕರೋ(ಅಪಹಾಸ ಮಾಡಿದರೋ), ಅವರಿಗೆ ಸಂಕಟವನ್ನು ಮಾಡದೇ ನಾನು ಬದುಕಬಯಸುವುದಿಲ್ಲ.

 

ಯದಿ ಮೇ ಶಕ್ತಿರತ್ರ ಸ್ಯಾದ್ ಘಾತಯೇಯಂ ವೃಕೋದರಮ್ ।

ಅಗ್ರಪೂಜಾಂ ಚ ಕೃಷ್ಣಸ್ಯ ವಿಲುಮ್ಪೇಯಂ ನ ಸಂಶಯಃ             ॥೨೧.೨೮೬॥

 

ಒಂದು ವೇಳೆ ನನಗೆ ಶಕ್ತಿ ಇದ್ದಿದ್ದರೆ ಇಲ್ಲಿ ಈ ಪ್ರಸಂಗದಲ್ಲಿ ಭೀಮಸೇನನನ್ನು ಕೊಂದು ಹಾಕುತ್ತಿದ್ದೆ. ಕೃಷ್ಣನ ಅಗ್ರಪೂಜೆಯನ್ನೂ ಕೂಡಾ ಹಾಳುಮಾಡುತ್ತಿದ್ದೆ. ಈ ವಿಷಯದಲ್ಲಿ ಸಂಶಯವಿಲ್ಲ.(ಆದರೆ ಶಕ್ತಿ ಇಲ್ಲದೇ ಇರುವ ಕಾರಣ ಏನೂ ಮಾಡಲಾಗಲಿಲ್ಲ ಎನ್ನುವ ಧ್ವನಿ)

 

ಈದೃಶಂ ಪಾಣ್ಡವೈಶ್ವರ್ಯಂ ದೃಷ್ಟ್ವಾ ಕೋ ನಾಮ ಜೀವಿತಮ್ ।

ಇಚ್ಛೇತ ಕರದಾ ಯೇಷಾಂ ವೈಶ್ಯವತ್ ಸರ್ವಭೂಮಿಪಾಃ                       ॥೨೧.೨೮೭॥

 

ಯಾವ ಪಾಂಡವರಿಗೆ ವೈಶ್ಯರಂತೆ ಎಲ್ಲಾ ರಾಜರು ಕರವನ್ನು ನಮ್ರರಾಗಿ ಸಲ್ಲಿಸುತ್ತಿದ್ದರೋ, ಹೀಗಿರುವ ಪಾಂಡವರ ವೈಭವವನ್ನು ಕಂಡು ಯಾರುತಾನೆ ಬದುಕಲು ಇಚ್ಛಿಸಿಯಾನು.(ಯಾರೂ ಬದುಕಿರಲು ಇಚ್ಛಿಸಲಾರರು ಎನ್ನುವ ಧ್ವನಿ)’

 

ಇತ್ಯುಕ್ತಃ ಶಕುನಿರ್ವೈರಂ ದೃಢೀಕರ್ತ್ತುಂ ವಚೋSಬ್ರವೀತ್ ।

ಕಿಂ ತೇ ವೈರೇಣ ರಾಜೇನ್ದ್ರ ಬಲಿಭಿರ್ಭ್ರಾತೃಭಿಃ ಪುನಃ                 ॥೨೧.೨೮೮॥

 

ಅನುಜೀವಸ್ವ ತಾನ್ ವೀರಾನ್ ಗುಣಜ್ಯೇಷ್ಠಾನ್ ಬಲಾಧಿಕಾನ್ ।

ಇತೀರಿತೋSತಿಸಂವೃದ್ಧಕೋಪ ಆಹ ಸುಯೋಧನಃ                 ॥೨೧.೨೮೯॥

 

ಈರೀತಿಯಾಗಿ ಹೇಳಲ್ಪಟ್ಟ ಶಕುನಿಯು ದುರ್ಯೋಧನನ ಪಾಂಡವರಮೇಲಿನ ಶತ್ರುತ್ವವನ್ನು ಇನ್ನಷ್ಟು ಗಟ್ಟಿಮಾಡಲು, ಹೀಗೆ ಹೇಳಿದ: ‘ಎಲೋ ರಾಜರುಗಳಲ್ಲಿ ಹಿರಿಯನಾದ ದುರ್ಯೋಧನನೇ, ಬಲಿಷ್ಠರಾದ ಅಣ್ಣ-ತಮ್ಮಂದಿರ ಜೊತೆಗೆ ನೀನು ವೈರವನ್ನಿಟ್ಟುಕೊಂಡು ಎನು ಪ್ರಯೋಜನ? ಗುಣದಿಂದ ಹಿರಿಯರಾದ, ಬಲದಿಂದ ಮಿಗಿಲಾದ ಆ ವೀರರನ್ನು ಅನುಸರಿಸಿ ಜೀವಿಸು ಎಂದು.  ಈರೀತಿಯಾಗಿ ಹೇಳಲ್ಪಟ್ಟವನಾಗಿ ಕೋಪದಿಂದ ಬೆಂದುಹೋದ ದುರ್ಯೋಧನನು ಹೇಳಿದ.

 

ಯದಿ ತೇಷಾಂ ತದೈಶ್ವರ್ಯಂ ನ ಮಾಂ ಗಚ್ಛೇದಶೇಷತಃ ।

ಸರ್ವಥಾ ನೈವ ಜೀವೇಯಮಿತಿ ಸತ್ಯಂ ಬ್ರವೀಮಿ ತೇ               ॥೨೧.೨೯೦॥

 

‘ಒಂದುವೇಳೆ ಅವರ ಸಿರಿವಂತಿಕೆಯನ್ನು ಸಂಪೂರ್ಣವಾಗಿ ನಾನು ಹೊಂದದ ಪಕ್ಷದಲ್ಲಿ, ನಿಶ್ಚಯವಾಗಿ ಬದುಕಲಾರೆನು. ಇದು ಪೊಳ್ಳು ಮಾತಲ್ಲ, ಇದು ಸತ್ಯ’.  

 

ನಚ ಬಾಹುಬಲಾಚ್ಛಕ್ಷ್ಯ ಆದಾತುಂ ತಾಂ ಶ್ರಿಯಂ ಕ್ವಚಿತ್ ।

ನೇನ್ದ್ರೋSಪಿ ಸಮರೇ ಶಕ್ತಸ್ತಾನ್ ಜೇತುಂ ಕಿಮು ಮಾನುಷಾಃ               ॥೨೧.೨೯೧॥

 

ಆದರೆ ನನ್ನ ತೋಳ್ಬಲದಿಂದ ಆ ಸಂಪತ್ತನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಇಂದ್ರನೂ ಕೂಡಾ ಯುದ್ಧದಲ್ಲಿ ಅವರನ್ನು ಗೆಲ್ಲಲು ಶಕ್ತನಲ್ಲ. ಇನ್ನು ಮನುಷ್ಯರು ಶಕ್ತರಲ್ಲವೆಂದು ಏನು ಹೇಳಬೇಕು.’