ತತೋ ಯಜ್ಞಃ ಪ್ರವವೃತೇ
ಕೃಷ್ಣದ್ವೈಪಾಯನೇರಿತಃ ।
ಋತ್ವಿಜೋ ಮುನಯೋSತ್ರಾSಸನ್ ಸರ್ವವಿದ್ಯಾಸು
ನಿಷ್ಠಿತಾಃ ॥೨೧.೨೩೩॥
ತದನಂತರ ವೇದವ್ಯಾಸರಿಂದ ಪ್ರೇರಿತವಾದ ಯಜ್ಞವು ಮೊದಲುಗೊಂಡಿತು.
ಎಲ್ಲಾ ವಿದ್ಯೆಯನ್ನು ಬಲ್ಲ ಮುನಿಗಳು ಪುರೋಹಿತರಾದರು.
[ಈ ಯಜ್ಞದ ಪೌರೋಹಿತ್ಯವನ್ನು ಯಾರು ವಹಿಸಿದ್ದರು
ಎನ್ನುವುದನ್ನು ಮಹಾಭಾರತ(ಸಭಾಪರ್ವ ೩೬.೩೪-೩೫) ವಿವರಿಸಿದೆ: ‘ಸ್ವಯಂ ಬ್ರಹ್ಮತ್ವಮಕರೋತ್ ತಸ್ಯ ಸತ್ಯವತೀಸುತಃ । ಧನಞ್ಜಯಾನಾಮೃಷಭಃ
ಸುಸಾಮಾ ಸಾಮಗೋSಭವತ್ । ವೇದವ್ಯಾಸ ದೇವರು ಬ್ರಹ್ಮರಾಗಿದ್ದರು(ಅಥರ್ವವೇದದ
ಪುರೋಹಿತರು-ಬ್ರಹ್ಮ). ಸುಸಾಮಾ ಎನ್ನುವ ಧನಞ್ಜಯ
ಋಷಿಗಳ ವಂಶದಲ್ಲಿ ಬಂದ ಋಷಿ ಸಾಮವೇದದ ಪುರೋಹಿತರಾದರು. ಯಾಜ್ಞವಲ್ಕ್ಯೋ ಬಭೂವಾಥ ಬ್ರಹ್ಮಿಷ್ಠೋSಧ್ವರ್ಯುಸತ್ತಮಃ
। ಪರಮಾತ್ಮನನ್ನು ಚೆನ್ನಾಗಿ ತಿಳಿದ ಯಾಜ್ಞವಲ್ಕ್ಯರು ಯಜುರ್ವೇದದ ಪುರೋಹಿತರಾದರು. ಪೈಲೋ
ಹೋತಾ ವಸೋಃ ಪುತ್ರೋ ಧೌಮ್ಯೇನ ಸಹಿತೋSಭವತ್’ ವಸುವಿನ ಮಗನಾಗಿರುವ,
ವೇದವ್ಯಾಸರ ಶಿಷ್ಯರಾಗಿರುವ, ಋಗ್ವೇದವನ್ನು ಜಗತ್ತಿಗೆ ಕೊಟ್ಟವರಾದ ಪೈಲರು ಋಗ್ವೇದದ
ಪುರೋಹಿತರಾದರು. ಅವರಿಗೆ ಸಹಾಯಕರಾಗಿ ಧೌಮ್ಯರಿದ್ದರು].
ದ್ವೈಪಾಯನೋಕ್ತವಿಧಿನಾ
ದೀಕ್ಷಯಾಞ್ಚಕ್ರಿರೇ ನೃಪಮ್ ।
ಜ್ಯೇಷ್ಠತ್ವಾದ್
ಯಾಜಮಾನಂ ತು ಪ್ರಣಿಧಾಯ ಯುಧಿಷ್ಠಿರೇ ॥೨೧.೨೩೪॥
ಭೀಮಾರ್ಜ್ಜುನಾದಯಃ
ಸರ್ವೇ ಸಹ ತೇನ ಸಮಾಸಿರೇ ।
ಬ್ರಹ್ಮಾಣಿಪದಯೋಗ್ಯತ್ವಾತ್
ಕೃಷ್ಣೈಕಾ ಯಜ್ಞಪತ್ನ್ಯಭೂತ್ ॥೨೧.೨೩೫॥
ವೇದವ್ಯಾಸರ ನಿರ್ದೇಶನದಂತೆ ಎಲ್ಲಾ ಪುರೋಹಿತರು ಯುಧಿಷ್ಠಿರನನ್ನು ಯಜ್ಞ ದೀಕ್ಷಿತನನ್ನಾಗಿ
ಮಾಡಿದರು.
ಭೀಮ-ಅರ್ಜುನ ಮೊದಲಾದವರೆಲ್ಲರೂ ಕೂಡಾ ಜ್ಯೇಷ್ಠತ್ವವಿದ್ದ
ಕಾರಣ ಯಜಮಾನತ್ವವನ್ನು ಯುಧಿಷ್ಠಿರನಲ್ಲಿಟ್ಟು,
ಅವನೊಂದಿಗೆ ಧೀಕ್ಷಿತರಾದರು. ಬ್ರಹ್ಮಾಣಿ(ಸರಸ್ವತಿ)
ಪದವಿಗೆ ಯೋಗ್ಯಳಾದ್ದರಿಂದ ದ್ರೌಪದಿ ಯಜ್ಞಪತ್ನಿಯ ಸ್ಥಾನದಲ್ಲಿದ್ದಳು.
[ಈ ಯಜ್ಞದಲ್ಲಿ ಮುಖ್ಯವಾಗಿ ಯಾರೆಲ್ಲ ಮಹರ್ಷಿಗಳು ಪಾಲ್ಗೊಂಡಿದ್ದರು ಎನ್ನುವುದನ್ನು ಮಹಾಭಾರತದಲ್ಲಿ
ವಿವರಿಸಲಾಗಿದೆ (ಸಭಾಪರ್ವ ೭೨.೬) ‘ವ್ಯಾಸಂ ಧೌಮ್ಯಂ ವಸಿಷ್ಠಂ ಚ ನಾರದಂ ಚ ಮಹಾಮುನಿಮ್ ।
ಸುಮಂತುಂ ಜೈಮಿನಿಂ ಪೈಲಂ ವೈಶಮ್ಪಾಯನಮೇವ ಚ । ಯಾಜ್ಞವಲ್ಕ್ಯಂ
ಚ ಕಪಿಲಂ ಕಪಾಲಂ ಕೌಶಿಕಂ ತಥಾ । ಸರ್ವಾಂಶ್ಚ ಋತ್ವಿಕ್ಪ್ರವರಾನ್ ಪೂಜಯಾಮಾಸ ಸತ್ಕೃತಾನ್’ – ಪಾಂಡವರ
ಪುರೋಹಿತರಾದ ಧೌಮ್ಯರು, ವಸಿಷ್ಠಮುನಿಗಳು, ವೇದವ್ಯಾಸರು, ನಾರದರು, ಅಥರ್ವವೇದವನ್ನು ವ್ಯಾಸರಿಂದ ಅಭ್ಯಾಸ ಮಾಡಿದ ಸುಮಂತು ಮಹರ್ಷಿಗಳು, ಯಜುರ್ವೇದವನ್ನು ವ್ಯಾಸರಿಂದ ಅಭ್ಯಾಸ ಮಾಡಿದ ಜೈಮಿನಿಗಳು, ಋಗ್ವೇದವನ್ನು
ಅಭ್ಯಾಸ ಮಾಡಿದ ಪೈಲರು, ಯಜುರ್ವೇದವನ್ನು ಅಭ್ಯಾಸ ಮಾಡಿದ ವೈಶಮ್ಪಾಯನರು, ಯಾಜ್ಞವಲ್ಕ್ಯರು, ಕಪಿಲ ಮತ್ತು ಕಪಾಲ ಮಹರ್ಷಿಗಳು, ಕೌಶಿಕರು(ವಿಶ್ವಾಮಿತ್ರರು), ಹೀಗೆ ಎಲ್ಲರ ಸಮ್ಮುಖದಲ್ಲಿ ಯುಧಿಷ್ಠಿರ ದೀಕ್ಷೆಗೆ ಒಳಪಟ್ಟ.]
ಪದಾಯೋಗ್ಯತಯಾ ನಾನ್ಯಾಃ
ಪತ್ನ್ಯಸ್ತೇಷಾಂ ಸಹಾSಸಿರೇ ।
ಆಜ್ಞಯೈವ
ಜಗದ್ಧಾತುರ್ವ್ಯಾಸಸ್ಯಾನನ್ತತೇಜಸಃ ॥೨೧.೨೩೬॥
ಪಾಂಡವರ ಉಳಿದ ಹೆಂಡತಿಯರು(ಉದಾಹರಣೆಗೆ ಸುಭದ್ರೆ, ಮೊದಲಾದವರು)
ಬ್ರಹ್ಮಾಣಿ ಪದವಿಗೆ ಯೋಗ್ಯರಲ್ಲದ್ದರಿಂದ, ಮುಖ್ಯವಾಗಿ ಜಗದೀಶರಾದ ವೇದವ್ಯಾಸರ ಅಣತಿಯಂತೆಯೇ ದೀಕ್ಷೆಗೆ
ಕುಳಿತುಕೊಳ್ಳಲಿಲ್ಲ.
ಸ್ಥಲಮಪ್ಯತ್ರ ಸರ್ವಂ
ಹಿ ರತ್ನಹೇಮಮಯಂ ತ್ವಭೂತ್ ।
ಕಿಮು ಪಾತ್ರಾದಿಕಂ
ಸರ್ವಂ ಶಿಭಿರಾಣಿ ಚ ಸರ್ವಶಃ ॥೨೧.೨೩೭॥
ಆ ಯಜ್ಞವೈಭವ ಅಭೂತಪೂರ್ವವಾಗಿತ್ತು. ನೆಲವೂ ಕೂಡಾ ಸ್ವರ್ಣರತ್ನಮಯವಾಗಿತ್ತು. ನೆಲವೇ ಹೀಗೆ
ಎಂದ ಮೇಲೆ ಇನ್ನು ಪಾತ್ರೆಗಳು, ಶಿಬಿರವೆಲ್ಲವೂ ಕೂಡಾ ಬಂಗಾರ-ರತ್ನಮಯವಾಗಿತ್ತು ಎಂದು ಏನು ಹೇಳಬೇಕು.
(ಎಲ್ಲವೂ ಸುವರ್ಣರತ್ನಮಯವೇ ಆಗಿತ್ತು).
ಆಹೂತಂ ದಿಗ್ಜಯೇ ಪಾರ್ತ್ಥೈಸ್ತದಾ
ಲೋಕದ್ವಿಸಪ್ತಕಮ್ ।
ಸರ್ವಮತ್ರಾsಗಮದ್ ಬ್ರಹ್ಮಶರ್ವಶಕ್ರಾದಿಪೂರ್ವಕಮ್ ॥೨೧.೨೩೮॥
ಪಾಂಡವರಿಂದ ದಿಗ್ವಿಜಯದ ಸಂದರ್ಭದಲ್ಲಿ ಆಮಂತ್ರಣಕ್ಕೆ ಒಳಪಟ್ಟ ಬ್ರಹ್ಮ, ರುದ್ರ, ಇಂದ್ರರೇ ಮೊದಲಾದ ಎಲ್ಲಾ ಹದಿನಾಲ್ಕು ಲೋಕಗಳೂ ಕೂಡಾ ಬಂದವು(ಹದಿನಾಲ್ಕು ಲೋಕಗಳಿಂದಲೂ
ಆಮಂತ್ರಿಸಲ್ಪಟ್ಟ ಎಲ್ಲರೂ ಯಜ್ಞಸ್ಥಳಕ್ಕೆ ಬಂದರು).
ಭೀಷ್ಮೋ ದ್ರೋಣಶ್ಚ
ವಿದುರೋ ಧೃತರಾಷ್ಟ್ರಃ ಸಹಾತ್ಮಜಃ ।
ಸಸ್ತ್ರೀಕಾ
ಆಯಯುಸ್ತತ್ರ ಬಾಹ್ಲೀಕಶ್ಚ ಸಹಾತ್ಮಜಃ ॥೨೧.೨೩೯॥
ಭೀಷ್ಮ, ದ್ರೋಣ, ವಿದುರ, ಮಕ್ಕಳಿಂದ ಕೂಡಿದ ಧೃತರಾಷ್ಟ್ರನು ಸ್ತ್ರೀಯರಿಂದ ಕೂಡಿದವರಾಗಿ ಆ
ಯಜ್ಞಸ್ಥಳವನ್ನು ಕುರಿತು ಬಂದರು. ಮಕ್ಕಳಿಂದ ಕೂಡಿದ ಬಾಹ್ಲೀಕರಾಜನೂ ಬಂದನು.
ತಥೈವ ಯಾದವಾಃ ಸರ್ವೇ
ಬಲಭದ್ರಪುರೋಗಮಾಃ ।
ರುಗ್ಮಿಣೀಸತ್ಯಭಾಮಾದ್ಯಾ
ಮಹಿಷ್ಯಃ ಕೇಶವಸ್ಯ ಚ ॥೨೧.೨೪೦॥
ಹಾಗೆಯೇ, ಬಲರಾಮನೇ ಮೊದಲಾಗಿರುವ ಯಾದವರೂ,
ರುಗ್ಮಿಣಿ-ಸತ್ಯಭಾಮೆ ಮೊದಲಾದ ಕೃಷ್ಣನ ಮಹಿಷಿಯರೂ ಬಂದರು.
No comments:
Post a Comment