ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 16, 2022

Mahabharata Tatparya Nirnaya Kannada 21: 198-204

 

ಕ್ರಮೇಣ ಸರ್ವಾನ್ ನಿರ್ಜ್ಜಿತ್ಯ ಪೌಣ್ಡ್ರಕಂ ಚ ಮಹಾಬಲಮ್ ।

ವಿರಥೀಕೃತ್ಯ ಕರ್ಣ್ಣಂ ಚ ಕರಮಾದಾಯ ಸರ್ವತಃ         ೨೧.೧೯೮

 

ಭೀಮಸೇನನು ಕ್ರಮವಾಗಿ ಎಲ್ಲಾ ರಾಜರನ್ನು ಗೆಲ್ಲುತ್ತಾ, ಮಹಾಬಲಿಷ್ಠನಾದ ಪೌಂಡ್ರಕನನ್ನೂ ಗೆದ್ದು, ಕರ್ಣನನ್ನು ರಥಹೀನನನ್ನಾಗಿ ಮಾಡಿ, ಎಲ್ಲರಿಂದ ಕಪ್ಪವನ್ನು ಸ್ವೀಕರಿಸಿ ಮುನ್ನಡೆದ.

 

ಹಿಮವಚ್ಛಿಖರೇ ದೇವಾನ್ ಜಿತ್ವಾ ಶಕ್ರಪುರೋಗಮಾನ್ ।

ಕ್ರೀಡಾರ್ತ್ಥಂ ಯುದ್ಧ್ಯತಸ್ತೇಭ್ಯಸ್ತುಷ್ಟೇಭ್ಯೋ ರತ್ನಸಞ್ಚಯಮ್             ೨೧.೧೯೯

 

ಕೇವಲ ಕ್ರೀಡೆಗಾಗಿ ಯುದ್ಧಮಾಡಿದ ಇಂದ್ರನೇ ಮೊದಲಾದ ದೇವತೆಗಳನ್ನು ಹಿಮವತ್ಪರ್ವತದಲ್ಲಿ ಗೆದ್ದ ಭೀಮಸೇನ, ಅತ್ಯಂತ ಸಂತುಷ್ಟರಾದ ಅವರಿಂದ ರತ್ನಸಂಚಯವನ್ನು ಸ್ವೀಕರಿಸಿದ.

 

ಬಾಹುಯುದ್ಧೇನ ಶೇಷಂ ಚ ಗರುಡಂ ಚ ಮಹಾಬಲಮ್ ।

ಕ್ರೀಡಮಾನೌ ವಿನಿರ್ಜ್ಜಿತ್ಯ ಭೂಷಣಾನ್ಯಾಪ ತೋಷತಃ ।

ತಾಭ್ಯಾಂ ಚ ದೃಢಮಾಶ್ಲಿಷ್ಟಃ ಸ್ನೇಹವಿಕ್ಲಿನ್ನಯಾ ಧಿಯಾ             ೨೧.೨೦೦

 

ಕ್ರೀಡೆಗಾಗಿಯೇ  ಬಂದಿದ್ದ ಶೇಷನನ್ನೂ, ಮಹಾಬಲನಾದ ಗರುಡನನ್ನೂ  ಮಲ್ಲಯುದ್ಧದಿಂದ ಗೆದ್ದ ಭೀಮಸೇನ, ಅವರಿಂದ ಗಟ್ಟಿಯಾಗಿ ಆಲಿಂಗಿತನಾದ.  ಅವರನ್ನು ಸಂತೋಷಗೊಳಿಸಿ,  ಅವರಿಂದ ಆಭರಣಗಳನ್ನು ಪಡೆದ.

[ಭೀಮಸೇನ ದೇವತೆಗಳನ್ನು ಗೆದ್ದಿರುವ ವಿಷಯವನ್ನು ಮಹಾಭಾರತ ಗುಹ್ಯಭಾಷೆಯಲ್ಲಿ ಹೇಳಿರುವುದನ್ನು ನಾವು ಕಾಣುತ್ತೇವೆ. ‘ಕೌಶಿಕೀಕಚ್ಛನಿಲಯಂ ರಾಜಾನಂ ಚ ಮಹೌಜಸಮ್ ।  ಉಭೌ ಬಲಭೃತೌ ವೀರಾವುಭೌ ತೀವ್ರಪರಾಕ್ರಮೌ।  ನಿರ್ಜಿತ್ಯಾಜೌ ಮಹಾರಾಜ ವಙ್ಗರಾಜಮುಪಾದ್ರವತ್’ (ಸಭಾಪರ್ವ೩೧.೨೩-೨೪) - ಕೌಶಿಕೀ ನದಿ ತೀರದಲ್ಲಿರುವ ಒಬ್ಬ ಶ್ರೇಷ್ಠನಾದ ರಾಜನನ್ನು, ಇಬ್ಬರು ಬಲಿಷ್ಠ ವೀರರನ್ನು ಯುದ್ಧದಲ್ಲಿ ಗೆದ್ದು ವಙ್ಗದೇಶದತ್ತ ಮುನ್ನೆಡೆದ ಎಂದಿದೆ ಭಾರತ. ಹಿಮವತ್ಪರ್ವತದಲ್ಲಿ ಕೌಶಿಕೀ ನದಿ ಹರಿಯುತ್ತದೆ. ಅಲ್ಲಿ ಯಾವ ರಾಜ್ಯವೂ ಇರಲಿಲ್ಲ. ಯಾವ ಬುಡಕಟ್ಟು ಜನರೂ ಅಲ್ಲಿ ವಾಸಿಸುತ್ತಿರಲಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಒಬ್ಬ ಹಾಗೂ ತಕ್ಷಣ ಇನ್ನಿಬ್ಬರು ವೀರರು ಭೀಮಸೇನನೊಂದಿಗೆ ಯುದ್ಧ ಮಾಡಿದರು. ಇವರು ಯಾರು ಎನ್ನುವುದನ್ನು   ಮಹಾಭಾರತ ವಿವರಿಸುವುದಿಲ್ಲ. ಈ ಗುಹ್ಯ ಭಾಷೆಯನ್ನು ಆಚಾರ್ಯರು  ನಮಗಿಲ್ಲಿ ಬಿಡಿಸಿ ಹೇಳಿದ್ದಾರೆ. ಇಂದ್ರ, ತದನಂತರ ಶೇಷ ಮತ್ತು ಗರುಡರೊಂದಿಗೆ ಭೀಮ ಹಿಮವತ್ಪರ್ವತದಲ್ಲಿ ಯುದ್ಧ ಮಾಡಿದ.]

 

 

ಪೋಪ್ಲೂಯಮಾನಃ ಸ ತತೋsಮ್ಬುಧೌ ಬಲೀ ಜಗಾಮ ಬಾಣಸ್ಯ ಪುರಂ ಹರಂ ಚ ।

ರಣೇsಜಯದ್ ವಾರಣರೂಪಮಾಸ್ಥಿತಂ ಕ್ರೀಡನ್ತಮೇತೇನ ಚ ತೋಷಿತೋ ಹರಃ ೨೧.೨೦೧

 

ಭೀಮಸೇನನು ಸಮುದ್ರವನ್ನು ಈಜಿ ಬಾಣನ ಪಟ್ಟಣವನ್ನು ತಲುಪಿದ. ಅಲ್ಲಿ ಆನೆಯ ವೇಷವನ್ನು ಧರಿಸಿದ, ಕೇವಲ ಕ್ರೀಡೆಗಾಗಿಯೇ ಯುದ್ಧಮಾಡಲು ಬಂದ ಹರನನ್ನೂ ಕೂಡಾ ಗೆದ್ದ. ಇದರಿಂದ ರುದ್ರನು ಸಂತುಷ್ಟನಾದ.

 

ಪೃಷ್ಟಶ್ಚ ಗಿರೀಶೇನಾಸೌ ವಿಸ್ತರಂ ದಿಗ್ಜಯಸ್ಯ ಚ ।

ಸಿಂಹವ್ಯಾಘ್ರಾದಿರೂಪಾಶ್ಚ ಆತ್ಮನಾ ವಿಜಿತಾ ಯಥಾ ।

ಗರುತ್ಮಚ್ಛೇಷಶಕ್ರಾದ್ಯಾ ದೇವಾಃ ಸರ್ವೇ ತದಬ್ರವೀತ್   ೨೧.೨೦೨

 

ರುದ್ರದೇವರಿಂದ ಪ್ರಶ್ನೆಮಾಡಲ್ಪಟ್ಟ ಭೀಮಸೇನನು ದಿಗ್ವಿಜಯದ ವೃತ್ತಾಂತವನ್ನು ಶಿವನಿಗೆ ಹೇಳಿದ. ಸಿಂಹ, ವ್ಯಾಘ್ರ, ಇತ್ಯಾದಿ ರೂಪವನ್ನು ತೊಟ್ಟುಕೊಂಡ ಗರುಡ-ಶೇಷ-ಇಂದ್ರರೇ ಮೊದಲಾದ ದೇವತೆಗಳೆಲ್ಲರೂ ಕೂಡಾ ಹೇಗೆ ತನ್ನಿಂದ ಪರಾಜಿತರಾದರು ಎನ್ನುವುದನ್ನು ಭೀಮ ವಿವರಿಸಿದ.

[ಮಹಾಭಾರತದ ಸಭಾಪರ್ವದಲ್ಲಿ(೩೧. ೨೦೨, ೨೦೮) ಭೀಮಸೇನ ಹಿಮವತ್ಪರ್ವದದಲ್ಲಿ ಎಲ್ಲಾ ಸಿಂಹಗಳನ್ನೂ, ವ್ಯಾಘ್ರಗಳನ್ನೂ, ಆನೆಗಳನ್ನೂ ಗೆದ್ದು ಮುನ್ನೆಡೆದ ಎಂದು ಹೇಳಿದ್ದಾರೆ. ದಿಗ್ವಿಜಯದಲ್ಲಿ ಈ ರೀತಿ ವಿಶೇಷವಾಗಿ ಸಿಂಹಗಳನ್ನೂ, ಆನೆಗಳನ್ನೂ ಗೆದ್ದ ಎಂದು ಹೇಳಿದ್ದಾರೆ. ಇದು ದರ್ಶನ ಭಾಷೆ. ಬೇರೆಯವರು ಏನನ್ನು ಕಂಡರು ಎನ್ನುವುದನ್ನು ಅಲ್ಲಿ ವಿವರಿಸಲಾಗಿದೆ. ಆದರೆ ಈರೀತಿ ಮೃಗಗಳ ರೂಪದಲ್ಲಿ ಬೇರೆಯವರಿಗೆ ಕಾಣಿಸಿಕೊಂಡಿರುವುದು ಇಂದ್ರ, ಗರುಡ, ಶೇಷ ಇತ್ಯಾದಿ ದೇವತೆಗಳು ಎನ್ನುವುದನ್ನು ಆಚಾರ್ಯರು ಇಲ್ಲಿ ಬಿಡಿಸಿ ಹೇಳಿದ್ದಾರೆ].

 

ನಿಶಮ್ಯ ಶಙ್ಕರೋsಖಿಲಂ ಮಖಸ್ಯ ಚ ಪ್ರಸಾಧಕಮ್ ।

ಹರಿಂ ತತೋ ಬಲೇಃ ಸುತಾದ್ ದದೌ ಚ ರತ್ನಸಞ್ಚಯಮ್             ೨೧.೨೦೩

 

ರುದ್ರನು ಭೀಮಸೇನನಿಂದ ಪರಮಾತ್ಮನು ಯಜ್ಞವನ್ನು ಮಾಡಿಸುತ್ತಿದ್ದಾನೆ ಎನ್ನುವುದನ್ನು ಕೇಳಿ, ಬಲಿಯ ಮಗನಾದ ಬಾಣಾಸುರನಿಂದ ರತ್ನಸಂಚಯವನ್ನು ಕೊಡಿಸಿದನು.

 

ಸ ಬಾಣದೈತ್ಯತೋ ಮಹಚ್ಛಿವೇನ ದತ್ತಮುತ್ತಮಮ್ ।

ಪ್ರಗೃಹ್ಯ ರತ್ನಸಞ್ಚಯಂ ಸ್ವಕಂ ಪುರಂ ಸಮಾಯಯೌ   ೨೧.೨೦೪

 

ಭೀಮಸೇನನಾದರೋ, ಬಾಣ ದೈತ್ಯನ ಮುಖಾಂತರ ಸದಾಶಿವನಿಂದ ಕೊಡಲ್ಪಟ್ಟ, ಬಹಳವಾಗಿರುವ ರತ್ನಸಂಚಯಗಳನ್ನು ಸ್ವೀಕರಿಸಿ, ತನ್ನ ಪಟ್ಟಣಕ್ಕೆ ತೆರಳಿದ.

No comments:

Post a Comment