ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, January 20, 2022

Mahabharata Tatparya Nirnaya Kannada 21: 221-226

 

ಅರ್ಜ್ಜುನಃ ಕಪಿವರೋಚ್ಛ್ರಿತದ್ಧ್ವಜಂ ಸ್ಯನ್ದನಂ ಸಮಧಿರುಹ್ಯ ಗಾಣ್ಡಿವೀ ।

ಯಾತ ಏವ ದಿಶಮುತ್ತರಾಂ ಯದಾ ಪಾರ್ವತೀಯಕನೃಪಾಃ ಸಮಾಯಯುಃ             ೨೧.೨೨೧

 

ಅರ್ಜುನನು ಗಾಣ್ಡೀವವನ್ನು ಹಿಡಿದು, ಹನುಮಂತನ ಲಾಂಛನವುಳ್ಳ ಧ್ವಜವನ್ನು ಒಳಗೊಂಡ ರಥವನ್ನು ಏರಿ ಉತ್ತರದಿಕ್ಕಿಗೆ ತೆರಳಿದ.  ಆಗ ಪರ್ವತದಲ್ಲಿ ವಾಸಮಾಡುವ ಗುಡ್ಡಗಾಡು ಜನರು(ಕ್ಷುದ್ರರಾಜರು) ಅವನೊಂದಿಗೆ ಯುದ್ಧಕ್ಕಾಗಿ ಬಂದರು.

[‘ವಿಜಿತ್ಯ ಚಾsಹವೇ ಶೂರಾನ್ ಪಾರ್ವತೀಯಾನ್ ಮಹಾರಥಾನ್ ಮಹಾಭಾರತ ಸಭಾಪರ್ವ(೨೮.೧೫) . ‘ ‘ದಸ್ಯೂನ್ ಪರ್ವತವಾಸಿನಃ’(೧೬). ಆ ಗುಡ್ಡಗಾಡು ಜನರು ದರೋಡೆಕೋರರು, ಕಳ್ಳರು, ಇತ್ಯಾದಿ ರೀತಿಯ ಜನರಾಗಿದ್ದರು.]

 

ತ್ರೈಗರ್ತ್ತಾಃ ಪಾರ್ವತೇಯಾಶ್ಚ ಸಹಿತಾಃ ಪಾಣ್ಡುನನ್ದನಮ್ ।

ಅಭ್ಯೇತ್ಯ ಯೋಧಯಾಮಾಸುರ್ಜ್ಜಾನನ್ತಸ್ತಚ್ಚಿಕೀರ್ಷಿತಮ್             ೨೧.೨೨೨

 

ತ್ರಿಗರ್ತದೇಶದವರು, ಪಾರ್ವತೇಯರು(ಈಗಿನ ನಾಗಾಲ್ಯಾಂಡ್ ಮತ್ತು ಸುತ್ತಲಿನ ಪ್ರದೇಶದವರು), ಎಲ್ಲರೂ ಸೇರಿ ಅರ್ಜುನನನ್ನು ಎದುರುಗೊಂಡು, ಅರ್ಜುನನ ಉದ್ದೇಶವನ್ನು ತಿಳಿದವರಾಗಿ ಯುದ್ಧ ಮಾಡಿದರು.

 

ತಾನ್ ವಿಜಿತ್ಯ ಯುಗಪತ್ ಸ ಪಾಣ್ಡವಃ ಸಞ್ಜಯನ್ ಕ್ರಮಶ ಏವ ತಾಂ ದಿಶಮ್ ।

ಪ್ರಾವ್ರಜಚ್ಚ ಭಗದತ್ತಮೂರ್ಜ್ಜಿತಂ ತೇನ ಚಾಸ್ಯ ಸಮಭೂನ್ಮಹಾರಣಃ             ೨೧.೨೨೩

 

ಅವರೆಲ್ಲರನ್ನೂ ಒಮ್ಮೆಲೇ ಗೆದ್ದ ಅರ್ಜುನನು, ಕ್ರಮವಾಗಿ ಉತ್ತರದಿಕ್ಕನ್ನು ಗೆಲ್ಲುತ್ತಾ, ಬಲದಿಂದ ಕೂಡಿದ ಭಗದತ್ತನನ್ನು (ಪ್ರಾಗ್ಜ್ಯೋತಿಷ, ಈಗಿನ ಅಸ್ಸಾಂ) ಕುರಿತು ತೆರಳಿದನು. ಅರ್ಜುನನಿಗೆ ಭಗದತ್ತನೊಂದಿಗೆ ದೊಡ್ಡ ಯುದ್ಧವಾಯಿತು.

 

ಸೋSಭಿಯುದ್ಧ್ಯ ಸಗಜೋ ದಿನಾಷ್ಟಕಂ ಶ್ರಾನ್ತ ಆಹ ಪುರುಹೂತನನ್ದನಮ್ ।

ಬ್ರೂಹಿ ತೇ ಸಮರಕಾರಣಂ ತ್ವಿತಿ ಪ್ರಾಹ ದೇಹಿ ಕರಮಿತ್ಯಥಾರ್ಜ್ಜುನಃ             ೨೧.೨೨೪

 

ಸೋsಪ್ಯದಾತ್ ಕರಮಮುಷ್ಯ ವಾಸವೋ ಮದ್ಗುರುಸ್ತವ ಪಿತೇತಿ ಸಾದರಮ್ ।

ನೈವ ಜೇತುಮಿಹ ಶಕ್ಷ್ಯಸಿ ತ್ವಮಿತ್ಯಾವದದ್ಧರಿವರಾಸ್ತ್ರತೇಜಸಾ             ೨೧.೨೨೫


(ಅರ್ಜುನ ಏತಕ್ಕಾಗಿ ಬಂದಿದ್ದಾನೆ ಎನ್ನುವುದನ್ನೂ ತಿಳಿದುಕೊಳ್ಳದೆ) ಭಗದತ್ತನು ತನ್ನ ಸುಪ್ರತೀಕ ಎನ್ನುವ ನೆಚ್ಚಿನ ಆನೆಯನ್ನೇರಿ ಎಂಟು ದಿನಗಳ ಕಾಲ ಯುದ್ಧಮಾಡಿ, ಆಯಾಸಗೊಂಡು, ‘ನಿನ್ನ ಯುದ್ಧಕ್ಕೆ ಕಾರಣವೇನು ಹೇಳು’ ಎಂದು ಅರ್ಜುನನನ್ನು ಕೇಳಿದನು.

‘ನಾವು ಯಜ್ಞವನ್ನು ಮಾಡುತ್ತಿದ್ದೇವೆ. ಅದಕ್ಕೆ ಕಪ್ಪವನ್ನು ಕೊಡು’ ಎಂದು ಅರ್ಜುನ ಹೇಳಿದ. ಭಗದತ್ತನೂ ಕೂಡಾ ಅರ್ಜುನನಿಗೆ ಕಪ್ಪವನ್ನು ಕೊಟ್ಟು. ‘ನಿನ್ನ ಅಪ್ಪನಾದ ಇಂದ್ರನು ನನ್ನ ಗುರು. ಅದಕ್ಕಾಗಿ ನಾನು ಕಪ್ಪವನ್ನು ನೀಡುತ್ತಿದ್ದೇನೆ. ನೀನು ನನ್ನನ್ನು ಗೆಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದ. ಅವನಲ್ಲಿ ನಾರಾಯಣ ಅಸ್ತ್ರವಿತ್ತು.

[ಭಗದತ್ತ ಇಂದ್ರನ ಶಿಷ್ಯ, ನರಕಾಸುರನ ಮಗ, ಪಾಂಡುವಿನ ಗೆಳೆಯ. ವರಾಹ ದೇವರ ವಿಶೇಷ ಅನುಗ್ರಹ ಅವನಮೇಲಿತ್ತು.]

 

ಸ್ನೇಹಪೂರ್ವಂ ಪ್ರದತ್ತೇ ತು ಕರೇ ನೈವಾsಹ ಚೋತ್ತರಮ್ ।

ಅರ್ಜ್ಜುನೋ ವ್ಯರ್ತ್ಥಕಲಹಮನಿಚ್ಛನ್ ಸ್ನೇಹಯನ್ತ್ರಿತಃ                  ೨೧.೨೨೬

 

ಗೆಳೆತನದಿಂದ ಕಪ್ಪವನ್ನು ಕೊಟ್ಟಾಗ ಅರ್ಜುನ ವ್ಯರ್ಥ ಕಲಹವನ್ನು ಮಾಡದೇ, ಭಗದತ್ತನ ಮೇಲಿನ ಗೌರವ-ಪ್ರೀತಿಯಿಂದ ಅವನ ಮಾತಿಗೆ ಪ್ರತ್ಯುತ್ತರವನ್ನು ನೀಡಲಿಲ್ಲ.

No comments:

Post a Comment