ಪಾರ್ತ್ಥೋ ಜಿತ್ವಾSಷ್ಟವರ್ಷಾಣಿ
ಷಡ್ ದ್ವೀಪಾನಪರಾನಪಿ ।
ಅಜಯಚ್ಚತುರ್ದ್ದಿಶಮಪಿ
ಸರ್ವಶಃ ಶಸ್ತ್ರತೇಜಸಾ ॥೨೧.೨೨೭॥
ಅರ್ಜುನನು ಇಳಾವೃತ, ರಮ್ಯಕ, ಹಿರಣ್ಮಯ, ಕುರುವರ್ಷ, ಹರಿವರ್ಷ, ಕಿಮ್ಪುರುಷ, ಕೇತುಮೂಲ,
ಭದ್ರಾಶ್ವಾ ಎನ್ನುವ ಎಂಟು ವರ್ಷಗಳನ್ನು; ಪ್ಲಕ್ಷ, ಶಾಲ್ಮಲ, ಕುಶ, ಕ್ರೌಞ್ಚ ಶಾಕಃ ಮತ್ತು
ಪುಷ್ಕರ ಎನ್ನುವ ಆರು ದ್ವೀಪಗಳನ್ನು ಗೆದ್ದು, ನಾಲ್ಕೂ ದಿಕ್ಕುಗಳಲ್ಲಿ ಸಂಚಾರಮಾಡಿ, ತನ್ನ ಆಯುಧದ
ಗರಿಮೆಯಿಂದ ಎಲ್ಲರನ್ನೂ ಗೆದ್ದ.
ಪಾತಾಳಸಪ್ತಕಂ ಗತ್ವಾ
ಜಿತ್ವಾ ದೈತೇಯದಾನವಾನ್ ।
ಬಲೇಶ್ಚ ವಿಷ್ಣುವಚನಾತ್
ಕರಂ ಜಗ್ರಾಹ ಸಾಮತಃ ॥೨೧.೨೨೮॥
ಹಾಗೆಯೇ, ಪಾತಾಳ ಮೊದಲಾದ (ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳ ಎನ್ನುವ) ಏಳು ಲೋಕಗಳನ್ನು ಗೆದ್ದ. ಭಗವಂತನ ಮಾತಿನಂತೆ ನಮ್ರನಾಗಿ ಬಲಿ ಎಂಬ
ದೈತ್ಯನಿಂದಲೂ ಅರ್ಜುನ ಕಪ್ಪವನ್ನು ಸ್ವೀಕರಿಸಿದ. (ಬಲಿ ಚಕ್ರವರ್ತಿಯ ದ್ವಾರದಲ್ಲಿ ಸದಾ
ಭಗವಂತನಿರುತ್ತಾನೆ ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು).
[ಈ ವಿವರವನ್ನು ನಾವು ಭಾಗವತದಲ್ಲಿ(೫.೨೩.೨೦) ನೋಡಬಹುದು: ‘ತತೋSಧಸ್ತಾತ್ ಸುತಳ ಉರುಶ್ರವಾಃ ಪುಣ್ಯ-ಶ್ಲೋಕೋ ವಿರೋಚನಾತ್ಮಜೋ ಬಲಿಃ’ ]
ಜಿತ್ವಾ ಚ ವಾಸುಕಿಂ ಭೂರಿ ರತ್ನಮಾದಾಯ ಸತ್ವರಃ ।
ಆಜಗಾಮ ಪುರಂ ಸ್ವೀಯಂ
ವೀರೋ ವತ್ಸರಮಾತ್ರತಃ ॥೨೧.೨೨೯॥
ವಾಸುಕಿ ಎಂಬ ಸರ್ಪವನ್ನು ಗೆದ್ದು, ಬಹಳವಾದ ಸಂಪತ್ತಿನೊಂದಿಗೆ ವೇಗದಿಂದ, ಒಂದು
ವರ್ಷಮಾತ್ರದಲ್ಲೇ ಅರ್ಜುನ ತನ್ನ ಪಟ್ಟಣವಾದ ಇಂದ್ರಪ್ರಸ್ಥಕ್ಕೆ ಹಿಂತಿರುಗಿ ಬಂದ.
ಸುವರ್ಣ್ಣರತ್ನಗಿರಯಶ್ಚತುರ್ಭಿಸ್ತೈಃ
ಸಮಾರ್ಜ್ಜಿತಾಃ ।
ಚತ್ವಾರೋ ಯೋಜನಾನಾಂ ಹಿ
ದಶ ತ್ರಿಂಶಚ್ಛತಂ ತಥಾ ॥೨೧.೨೩೦॥
ಚತುಃಶತಂ ಚ ಕ್ರಮಶ
ಉಚ್ಛ್ರಿತಾ ದಿಗ್ಜಯಾರ್ಜ್ಜಿತಾಃ ।
ಪ್ರತೀಚ್ಯಾದ್ಯಪಸವ್ಯೇನ
ಕ್ರಮಾದ್ ದಿಗ್ಭ್ಯಃ ಸಮಾರ್ಜ್ಜಿತಾಃ
॥೨೧.೨೩೧॥
ಪಾಂಡವರು ದಿಗ್ವಿಜಯದಲ್ಲಿ ತಂದಿರುವ ಸಂಪತ್ತನ್ನು ಒಟ್ಟು
ಹಾಕಿದಾಗ ಸುವರ್ಣರತ್ನಗಳ ಬೆಟ್ಟವಾಯಿತು. ನಕುಲನಿಂದ ಸಂಪಾದಿಸಲ್ಪಟ್ಟ ಸುವರ್ಣರತ್ನಗಳ ಪರ್ವತವು ಹತ್ತು
ಯೋಜನ ವಿಸ್ತಾರವಾಗಿತ್ತು, ಸಹದೇವನದು ಮೂವತ್ತು ಯೋಜನ ವಿಸ್ತಾರ, ಭೀಮನದು
ನೂರು ಯೋಜನ ವಿಸ್ತಾರವಾದರೆ, ಅರ್ಜುನ ಸಂಪಾದಿಸಿದ ಸುವರ್ಣರತ್ನ ಪರ್ವತವು ನಾಲ್ಕುನೂರು ಯೋಜನ
ವಿಸ್ತಾರವಾಗಿತ್ತು. ಹೀಗೆ ದಿಕ್ಕುಗಳ ಜಯದಿಂದ ಸಂಪಾದಿಸಲ್ಪಟ್ಟ
ನಾಲ್ಕು ಪರ್ವತಗಳು ಕ್ರಮವಾಗಿ ಈ ವಿಸ್ತಾರವುಳ್ಳವುಗಳಾಗಿದ್ದವು.
[ಇಷ್ಟೊಂದು ಸಂಪತ್ತಿನ ರಾಶಿ ಇಂದ್ರಪ್ರಸ್ಥದಂತಹ ಕಿರಿದಾದ
ಪ್ರದೇಶದಲ್ಲಿ ಹೇಗೆ ಹಿಡಿಸಿತು ಎಂದರೆ : ]
ವಿಶ್ವಕರ್ಮ್ಮಕೃತತ್ವಾತ್ತು
ಪುರಸ್ಯಾಲ್ಪೇSಪಿ ಚ ಸ್ಥಲೇ ।
ಅನ್ತರ್ಗ್ಗತಾಸ್ತೇ
ಗಿರಯಸ್ತದದ್ಭುತಮಿವಾಭವತ್ ॥೨೧.೨೩೨॥
ವಿಶ್ವಕರ್ಮನ ನಿರ್ಮಾಣವಾದ್ದರಿಂದ ಪಟ್ಟಣದ ಅತ್ಯಂತ ಕಿರಿದಾದ
ಸ್ಥಳದಲ್ಲಿಯೂ ಆ ಸುವರ್ಣರತ್ನ ಬೆಟ್ಟಗಳು ಹಿಡಿಸಿದವು. ಅದೊಂದು ಅಚ್ಚರಿಯಲ್ಲಿ ಅಚ್ಚರಿಯಾಯಿತು.
No comments:
Post a Comment