ತದೈವಾನ್ಯೇ ದಿಶೋ
ಜಿತ್ವಾ ಸಮೀಯುಸ್ತಸ್ಯ ಯೇsನುಜಾಃ ।
ಸಹದೇವೋ ದಕ್ಷಿಣಾಶಾಂ
ಜಿತ್ವಾ ರತ್ನಾನ್ಯುಪಾಹರತ್ ॥೨೧.೨೧೨॥
ಅದೇ ಸಮಯದಲ್ಲಿ ಭೀಮಸೇನನ ಮೂರು ಜನ ತಮ್ಮಂದಿರು ದಿಕ್ಕುಗಳನ್ನು ಗೆದ್ದು ಇಂದ್ರಪ್ರಸ್ಥಕ್ಕೆ ಹಿಂತಿರುಗಿ ಬಂದರು.
ಸಹದೇವನು ದಕ್ಷಿಣದಿಕ್ಕನ್ನು ಗೆದ್ದು, ಶ್ರೇಷ್ಠವಾದ
ರತ್ನಗಳನ್ನು ತಂದನು.
[ದಕ್ಷಿಣದಲ್ಲಿ ವಿದರ್ಭದೇಶವಿದೆ.
ಅಲ್ಲಿನ ಅಧಿಪತಿ ರುಗ್ಮಿ ಸಹದೇವನಿಗಿಂತ ಬಲಿಷ್ಠನಾಗಿದ್ದ. ಹಾಗಿದ್ದರೆ ಹೇಗೆ ಸಹದೇವ ರುಗ್ಮಿಯನ್ನು
ಗೆದ್ದ ಎಂದರೆ:]
ತತ್ರ ರುಗ್ಮೀ ನ
ಯುಯುಧೇ ಸಹದೇವೇನ ವೀರ್ಯ್ಯವಾನ್ ।
ಜಿತಃ ಕೃಷ್ಣೇನ ಪೂರ್ವಂ
ಯಃ ಶರ್ವಾದಾಪ ಧನುರ್ವರಮ್ ॥೨೧.೨೧೩॥
ದಕ್ಷಿಣದಿಕ್ಕಿನಲ್ಲಿದ್ದ ಮಹಾಪರಾಕ್ರಮಶಾಲಿ ರುಗ್ಮಿ ಸಹದೇವನೊಂದಿಗೆ
ಯುದ್ಧ ಮಾಡಲಿಲ್ಲ. ಏಕೆಂದರೆ ರುಗ್ಮಿಯು ಹಿಂದೆ ಕೃಷ್ಣನಿಂದ
ಸೋತಾಗ ರುದ್ರದೇವರಿಂದ ಶ್ರೇಷ್ಠವಾದ ಬಿಲ್ಲನ್ನು ಪಡೆದಿದ್ದ.
ತಪಸಾ ತೋಷಿತಾತ್ ಕೃಷ್ಣಾದನ್ಯಾನೇವಾಮುನಾsಖಿಲಾನ್ ।
ವಿಜೇಷ್ಯಸಿ ಯದಾ
ಕೃಷ್ಣವಿರೋಧಸ್ತೇ ತದಾ ಧನುಃ ॥೨೧.೨೧೪॥
ಮಾಮೇಷ್ಯತೀತಿ
ತೇನೋಕ್ತೋ ನ ವ್ಯರುದ್ಧ್ಯತ ಕೇಶವೇ ।
ಸ್ವಸುಃ ಸ್ನೇಹಾಚ್ಚ
ಕೃಷ್ಣಸ್ಯ ಯಜ್ಞಕಾರಯಿತೃತ್ವತಃ ॥೨೧.೨೧೫॥
ಭೀಮಾರ್ಜ್ಜುನಬಲಾಚ್ಚೈವ ಮಾದ್ರೇಯಾಯ ದದೌ ಕರಮ್ ।
ಜಿಗ್ಯೇ
ಬಲೇನಾನ್ಯನೃಪಾನ್ ಸಹದೇವಃ ಪ್ರತಾಪವಾನ್ ॥೨೧.೨೧೬॥
ರುದ್ರನನ್ನು ಕುರಿತು ತಪಸ್ಸು ಮಾಡಿ ತಪಸ್ಸಿಗೆ ಸಂತುಷ್ಟನಾದ
ರುದ್ರನಿಂದ ಆತ
ಧನುಸ್ಸನ್ನು ಪಡೆಯುವಾಗ ಅವನಿಗೆ ರುದ್ರದೇವರಿಂದ ಈರೀತಿಯಾಗಿ ವರ ಕೊಡಲ್ಪಟ್ಟಿತ್ತು:
‘ಕೃಷ್ಣನಿಂದ ಹೊರತಾದವರನ್ನು ಈ ಧನುಸ್ಸಿನಿಂದ ನೀನು
ಗೆಲ್ಲುವೆ. ಆದರೆ ನೀನು ಕೃಷ್ಣನನ್ನು ವಿರೋಧ ಮಾಡಿದರೆ ಆಗ ಈ ಬಿಲ್ಲು ಹಿಂತಿರುಗಿ ನನ್ನನ್ನೇ ಹೊಂದುವುದು’ ಎಂದು. ಅದರಿಂದಾಗಿ ಆತ
ಶ್ರೀಕೃಷ್ಣನಿಗೆ ವಿರೋಧ ಮಾಡುತ್ತಿರಲಿಲ್ಲ. ಅಲ್ಲದೇ, ತಂಗಿ ರುಗ್ಮಿಣಿಯ ಮೇಲೆ ಅವನಿಗೆ ಅಪಾರವಾದ
ಪ್ರೀತಿಯಿತ್ತು. ಸ್ವಯಂ ಶ್ರೀಕೃಷ್ಣ ಯಜ್ಞ ಮಾಡಿಸುತ್ತಿರುವುದರಿಂದ ಸಹದೇವನಿಗೆ ವಿರೋಧ ಮಾಡಿದರೆ
ಅದು ಕೃಷ್ಣನನ್ನು ವಿರೋಧಿಸಿದಂತೆ. ಅದರಿಂದ ತಂಗಿ ರುಗ್ಮಿಣಿ ನೊಂದುಕೊಳ್ಳುತ್ತಾಳೆ ಎನ್ನುವ ಕಾರಣದಿಂದಲೂ
ಸಹದೇವನೊಂದಿಗೆ ರುಗ್ಮಿ ಯುದ್ಧ ಮಾಡಲಿಲ್ಲ. ಇದಲ್ಲದೇ ಭೀಮಸೇನಾರ್ಜುನರ ಬಲಕ್ಕೆ ಬೆದರಿ ರುಗ್ಮಿ ಸಹದೇವನಿಗೆ
ಕರವನ್ನು ನೀಡಿದ್ದ. ಸಹದೇವನು ದಕ್ಷಿಣದಲ್ಲಿ ರುಗ್ಮಿಯನ್ನು ಬಿಟ್ಟು ಉಳಿದ ಎಲ್ಲಾ ರಾಜರನ್ನೂ ತನ್ನ
ಬಲದಿಂದಲೇ ಗೆದ್ದಿದ್ದ.
ತಥಾ ಸ್ಮೃತಂ ಸಮಾಗತಂ
ಘಟೋತ್ಕಚಂ ವಿಭೀಷಣೇ ।
ಸಮಾದಿಶದ್ ಯಯೌ ಚ ಸೋsಪಿ ಸೋsದದಾನ್ಮಹಾಕರಮ್ ॥೨೧.೨೧೭॥
ಹಾಗೆಯೇ ಸ್ಮರಣೆ ಮಾಡಿದಾಗ ಬಂದ ಘಟೋತ್ಕಚನನ್ನು ಸಹದೇವ ವಿಭೀಷಣನ
ಬಳಿ ಕಳುಹಿಸಿದ. ವಿಭೀಷಣನಾದರೋ ಎಲ್ಲರಿಗಿಂತ ಹೆಚ್ಚಿನ ಕಪ್ಪವನ್ನು ಕೊಟ್ಟ.
[ಈರೀತಿ ವಿಭೀಷಣ ಕಪ್ಪವನ್ನು ಕೊಡಲು ಕಾರಣವೇನೆಂದು
ಹೇಳುತ್ತಾರೆ:]
ಪುರಾ ಹಿ ರಾಘವೋದಿತಂ
ತದಸ್ಯ ಸೋsಖಿಲಂ ತದಾ ।
ವಿಚಾರ್ಯ್ಯ ಕೇಶವಂ ಚ
ತಂ ಬಲಂ ಚ ಭೀಮಪಾರ್ತ್ಥಯೋಃ ।
ದಿವೌಕಸಶ್ಚ
ಪಾಣ್ಡವಾನವೇತ್ಯ ಸೋsದದಾತ್ ಕರಮ್ ॥೨೧.೨೧೮॥
ಹಿಂದೆ ಶ್ರೀರಾಮಚಂದ್ರ ವಿಭೀಷಣನಿಗೆ ಎಲ್ಲವನ್ನೂ ಹೇಳಿದ್ದ. (ಮುಂದೆ ಕೃಷ್ಣಾವತಾರದಲ್ಲಿ ಪಾಂಡವರ
ಮುಖೇನ ರಾಜಸೂಯ ಯಾಗವನ್ನು ಮಾಡಿಸುತ್ತೇನೆ. ಆಗ ಪಾಂಡವರಲ್ಲಿ ಒಬ್ಬನಾದ ಸಹದೇವ ನಿನ್ನ ಬಳಿ
ಘಟೋತ್ಕಚ ಎನ್ನುವ ರಾಕ್ಷಸನನ್ನು ಕಳುಹಿಸುತ್ತಾನೆ. ಆಗ ನೀನು ಅವನಿಗೆ ಕಪ್ಪವನ್ನು ಕೊಡಬೇಕು ಎಂದು
ರಾಮಾಯಣ ಕಾಲದಲ್ಲೇ ವಿಭೀಷಣನಿಗೆ ಭಗವಂತ ಹೇಳಿದ್ದ). ಕೃಷ್ಣನ ಬಗ್ಗೆ ವಿಚಾರಿಸಿ, ಭೀಮ
ಹಾಗೂ ಅರ್ಜುನರ ಬಲವನ್ನು ತಿಳಿದು, ಪಾಂಡವರನ್ನು ದೇವತೆಗಳು ಎಂದು
ತಿಳಿದು ವಿಭೀಷಣ ಕಪ್ಪವನ್ನು ಕೊಟ್ಟ.
ಮಹೌಘರತ್ನಸಞ್ಚಯಂ ಸ
ಆಪ್ಯ ಭೀಮಸೇನಜಃ ।
ಯಯೌ ಚ ಮಾದ್ರಿನನ್ದನಂ
ಸ ಚಾsಯಯೌ ಸ್ವಕಂ ಪುರಮ್ ॥೨೧.೨೧೯॥
ಭೀಮಸೇನನ ಮಗನಾದ ಘಟೋತ್ಕಜನು ಮಹೌಘ(ಕೋಟಿಯ-ಕೋಟಿ)
ಸಂಖ್ಯೆಯಲ್ಲಿರುವ ಕಪ್ಪವನ್ನು ಹಿಡಿದು ಸಹದೇವನ ಬಳಿ ಬಂದ. ಎಲ್ಲವನ್ನು ಸ್ವೀಕರಿಸಿದ ಸಹದೇವ ತನ್ನ
ಪಟ್ಟಣಕ್ಕೆ(ಇಂದ್ರಪ್ರಸ್ಥಕ್ಕೆ) ಹಿಂತಿರುಗಿದ.
ನಕುಲಃ ಪಶ್ಚಿಮಾಶಾಯಾಂ
ವಿಜಿಗ್ಯೇsಖಿಲಭೂಭೃತಃ ।
ಕರಮಾಪ ಚ ವೀರೋsಸೌ ಸೌಹಾರ್ದ್ದಾದೇವ ಮಾತುಲಾತ್ ।
ಆಯಯೌ ಚ
ಮಹಾರತ್ನಸಞ್ಚಯೇನ ಸ್ವಕಂ ಪುರಮ್ ॥೨೧.೨೨೦॥
ನಕುಲನು ಪಶ್ಚಿಮದಿಕ್ಕಿನಲ್ಲಿನ ಎಲ್ಲಾ ರಾಜರನ್ನೂ ಗೆದ್ದ. (ಆದರೆ
ಪಶ್ಚಿಮದಿಕ್ಕಿನಲ್ಲಿ ನಕುಲನಿಂದ ಮಣಿಸಲಾಗದವನೊಬ್ಬನಿದ್ದ. ಅವನು ಮಾದ್ರಿಯ ಅಣ್ಣನಾದ ಶಲ್ಯ). ಶಲ್ಯನೊಂದಿಗೆ
ಸೌಹಾರ್ದಯುತವಾಗಿ ಮಾತನಾಡಿದಾಗ ಅವನು ನಕುಲನಿಗೆ ಸಂತುಷ್ಟನಾಗಿ ಕರವನ್ನು ಕೊಟ್ಟ.
No comments:
Post a Comment