ಇತೀರಿತಃ ಪಾಪತಮ ಆಹ
ಗಾನ್ಧಾರಕೋ ನೃಪಃ ।
ಪಾಪಾನಾಮಖಿಲಾನಾಂ ಚ
ಪ್ರಧಾನಂ ಚಕ್ರವರ್ತ್ತಿನಮ್ ॥೨೧.೨೯೨॥
ಈರೀತಿಯಾಗಿ ದುರ್ಯೋಧನ ಮಾತನಾಡಿದಾಗ, ಅತ್ಯಂತ ಪಾಪಿಷ್ಠನಾದ ಗಾಂಧಾರರಾಜ
ಶಕುನಿಯು, ಎಲ್ಲಾ ಪಾಪಿಗಳ ಮುಖ್ಯರಿಗೆ ಚಕ್ರವರ್ತಿಯಾಗಿರುವ ದುರ್ಯೋಧನನನ್ನು ಕುರಿತು ಹೇಳಿದನು.
ಯಾನ್ತಾಂ ಶ್ರಿಯಂ
ಪ್ರದೀಪ್ತಾಂ ತ್ವಂ ಪಾಣ್ಡವೇಷು ಪ್ರಪಶ್ಯಸಿ ।
ತಾಮಕ್ಲೇಶತ ಆದಾಸ್ಯೇ
ಕ್ರೀಡನ್ನ ಕ್ಷೈಸ್ತ್ವದನ್ತಿಕೇ ॥೨೧.೨೯೩॥
‘ನೀನು ಯಾವಯಾವ ಸಂಪತ್ತು ಪಾಂಡವರಲ್ಲಿ ಬೆಳಗುತ್ತಿರುವುದನ್ನು
ನೋಡುತ್ತೀಯೋ, ಆ ಎಲ್ಲಾ ಸಂಪತ್ತನ್ನು ಅನಾಯಾಸವಾಗಿ ದಾಳಗಳನ್ನು ಉರುಳಿಸುತ್ತಾ(ಪಗಡೆ/ಜೂಜಾಡುತ್ತಾ)
ನಿನ್ನಲ್ಲಿಗೆ ಕರೆತರುತ್ತೇನೆ’.
ಇತೀರಿತಃ ಪ್ರಸನ್ನಧೀಃ
ಸುಯೋಧನೋ ಬಭೂವ ಹ ।
ಪ್ರಜಗ್ಮತುಶ್ಚ ತಾವುಭೌ
ವಿಚಿತ್ರವೀರ್ಯ್ಯಜಂ ನೃಪಮ್ ॥೨೧.೨೯೪॥
ಈರೀತಿಯಾಗಿ ಶಕುನಿಯಿಂದ ಹೇಳಲ್ಪಟ್ಟ ಸುಯೋಧನನು ಸಂತಸಗೊಂಡ.
ಅವರಿಬ್ಬರೂ ಧೃತರಾಷ್ಟ್ರನ ಹತ್ತಿರ ಹೋದರು.
ಧೃತರಾಷ್ಟ್ರಮಥೋವಾಚ
ದ್ವಾಪರಾಂಶೋsತಿಪಾಪಕೃತ್ ।
ನಾಸ್ತಿಕ್ಯರೂಪಃ
ಶಕುನಿರ್ವಿವರ್ಣ್ಣಂ ಹರಿಣಂ ಕೃಶಮ್ ॥೨೧.೨೯೫॥
ತದನಂತರ ದ್ವಾಪರ ನಾಮಕ ದೈತ್ಯನ ಅಂಶವಾದ, ಅತ್ಯಂತ ಪಾಪವನ್ನು
ಮಾಡಲು ಕಾರಣವಾದ, ಜನರಲ್ಲಿ ನಾಸ್ತಿಕ್ಯವನ್ನು ಬಿತ್ತುವ ಶಕುನಿಯು ದುರ್ಯೋಧನನನ್ನು ಬಿಳಿಚಿಕೊಂಡಿದ್ದಾನೆ, ಕಪ್ಪುಬಣ್ಣದವನಾಗಿದ್ದಾನೆ , ಕೃಶವಾಗಿದ್ದಾನೆಂದು ಧೃತರಾಷ್ಟ್ರನಲ್ಲಿ ಹೇಳಿದ.
ದುರ್ಯ್ಯೋಧನಂ ತು ತಚ್ಛ್ರುತ್ವಾ ಕುತ ಇತ್ಯಾಹ ದುರ್ಮ್ಮನಾಃ ।
ಅಬ್ರೂತಾಂ ತೌ ನೃಪಾಯಾsಶು ದ್ವಾಭ್ಯಾಂ ಯನ್ಮನ್ತ್ರಿತಂ ಪಥಿ ॥೨೧.೨೯೬॥
ಈ ಮಾತನ್ನು ಕೇಳಿ ದುಃಖಿತನಾದ ಧೃತರಾಷ್ಟ್ರನು ‘ಏಕೆ ಹೀಗೆ’ ಎಂದು ಕೇಳಿದ. ಆಗ ಅವರಿಬ್ಬರೂ ತಾವು ದಾರಿಯಲ್ಲಿ
ಏನನ್ನು ಯೋಚನೆಮಾಡಿದ್ದರೋ ಅದನ್ನು ಹೇಳಿದರು.
ಶ್ರುತ್ವೈವ
ತನ್ನೇತ್ಯವದತ್ ಸ ಭೂಪತಿರ್ವಿರೋಧಿ ಧರ್ಮ್ಮಸ್ಯ ವಿನಾಶಕಾರಣಮ್ ।
ಕುಮನ್ತ್ರಿತಂ ವೋ ನ
ಮಮೈತದಿಷ್ಟಂ ಸ್ವಬಾಹುವೀರ್ಯ್ಯಾಪ್ತಮಹಾಶ್ರಿಯೋ ಹಿ ತೇ ॥೨೧.೨೯೭॥
ತ್ವಯಾsಪಿ ನಿರ್ಜ್ಜಿತ್ಯ ದಿಶೋ ಮಖಾಗ್ರ್ಯಾಃ ಕಾರ್ಯ್ಯಾಃ ಸ್ಪೃಧೋ ಮಾ
ಗುಣವತ್ತಮೈಸ್ತೈಃ ।
ವಿಶೇಷತೋ
ಭ್ರಾತೃಭಿರಗ್ರ್ಯಪೌರುಷೈರಿತ್ಯುಕ್ತ ಆಹಾsಶು ಸುಯೋಧನಸ್ತಮ್ ॥೨೧.೨೯೮॥
ಅವರ ಮಾತನ್ನು ಕೇಳಿದೊಡನೆ ಧೃತರಾಷ್ಟ್ರನು ‘ಇದು ಸರಿಯಲ್ಲ,
ಧರ್ಮಕ್ಕೆ ವಿರುದ್ಧವಾಗಿ ನಡೆದರೆ ವಿನಾಶಕ್ಕೆ ಕಾರಣವಾಗುತ್ತದೆ. ನಿಮ್ಮ ಕೆಟ್ಟ ಆಲೋಚನೆಯೂ ನನಗೆ
ಇಷ್ಟ ಅಲ್ಲ. ಪಾಂಡವರು ತಮ್ಮ ತೋಳ್ಬಲದಿಂದ ಸಕಲ ಸಂಪತ್ತನ್ನೂ ಪಡೆದಿದ್ದಾರೆ. ಅವರ ಮೇಲೆ ಸ್ಪರ್ಧೆ ಒಳ್ಳೆಯದಲ್ಲ.
ನಿನ್ನಿಂದಲೂ ದಿಕ್ಕುಗಳನ್ನು ಗೆದ್ದು, ಶ್ರೇಷ್ಠವಾದ ಯಜ್ಞಗಳು ಮಾಡಲ್ಪಡತಕ್ಕದ್ದು. ಆದರೆ
ಗುಣಗಳಿಂದ ಶ್ರೇಷ್ಠರಾಗಿರುವ ಅವರೊಂದಿಗೆ ಸ್ಪರ್ಧಿಸಬೇಡ. ವಿಶೇಷತಃ ನಿನ್ನ
ಅಣ್ಣ-ತಮ್ಮಂದಿರೊಂದಿಗೆ ಬೇಡ’ ಎಂದನು. ಈರೀತಿ ಹೇಳಲ್ಪಟ್ಟ ದುರ್ಯೋಧನನು ಅವನನ್ನು ಕುರಿತು
ಹೇಳಿದನು.
ಯದಿ ಶ್ರಿಯಂ
ಪಾಣ್ಡವಾನಾಂ ನಾಕ್ಷೈರಾಚ್ಛೇತ್ತುಮಿಚ್ಛಸಿ ।
ಮೃತಮೇವಾದ್ಯ ಮಾಂ
ವಿದ್ಧಿ ಪಾಣ್ಡವೈಸ್ತ್ವಂ ಸುಖೀ ಭವ ॥೨೧.೨೯೯॥
ಯದಿ ಮಜ್ಜೀವಿತಾರ್ತ್ಥೀ
ತ್ವಮಾನಯಾsಶ್ವಿಹ ಪಾಣ್ಡವಾನ್ ।
ಸಭಾರ್ಯ್ಯಾನ್
ದೇವನಾಯೈವ ನಚಾಧರ್ಮ್ಮೋsತ್ರ ಕಶ್ಚನ ॥೨೧.೩೦೦॥
‘ಒಂದುವೇಳೆ ಪಾಂಡವರ ಸಂಪತ್ತನ್ನು ದಾಳಗಳಿಂದ ಕಿತ್ತುಕೊಳ್ಳಲು ಬಯಸುವುದಿಲ್ಲವಾದರೆ
ಈಗಲೇ ನಾನು ಸತ್ತಿದ್ದೇನೆ ಎಂದು ತಿಳಿದುಕೋ. ನೀನು ಪಾಂಡವರ ಜೊತೆಗೆ ಸುಖವಾಗಿರು.
ಒಂದುವೇಳೆ ನೀನು ನಾನು ಬದುಕಬೇಕು ಎಂದು ಬಯಸುವಿಯಾದರೆ ಕೂಡಲೇ ಇಲ್ಲಿಗೆ
ದ್ರೌಪದಿಯಿಂದ ಒಡಗೂಡಿದ ಪಾಂಡವರನ್ನು ಜೂಜಿಗಾಗಿಯೇ ಕರೆ. ಈ ಜೂಜಾಡುವಿಕೆಯಲ್ಲಿ ಅಧರ್ಮವಿಲ್ಲ.
ವೇದಾನುಜೀವಿನೋ
ವಿಪ್ರಾಃ ಕ್ಷತ್ರಿಯಾಃ ಶಸ್ತ್ರಜೀವಿನಃ ।
ತ್ರುಟ್ಯತೇ ಯೇನ
ಶತ್ರುಶ್ಚ ತಚ್ಛಸ್ತ್ರಂ ನೈವ ಚೇತರತ್ ॥೨೧.೩೦೧॥
ಬ್ರಾಹ್ಮಣರು ವೇದವನ್ನಿಟ್ಟುಕೊಂಡು ಬದುಕುತ್ತಾರೆ. ಕ್ಷತ್ರಿಯರು ಶಸ್ತ್ರವನ್ನಿಟ್ಟುಕೊಂಡು ಬಾಳುತ್ತಾರೆ. ಯಾವುದರಿಂದ ಶತ್ರುವು ನಾಶಮಾಡಲ್ಪಡುತ್ತಾನೋ ಅದೇ ಶಸ್ತ್ರ
ಬೇರೆ ಅಲ್ಲವೇ ಅಲ್ಲ.
ಅತಃ ಸ್ವಧರ್ಮ್ಮ ಏವಾಯಂ
ತವಾಪಿ ಸ್ಯಾತ್ ಫಲಂ ಮಹತ್ ।
ಇತ್ಯುಕ್ತೋ ಮಾ ಫಲಂ ಮೇsಸ್ತು ತವೈವಾಸ್ತ್ವಿತಿ ಸೋsಬ್ರವೀತ್ ॥೨೧.೩೦೨॥
ಹೀಗಾಗಿ ನಾನು ಪಾಂಡವರೆಂಬ ಶತ್ರುಗಳನ್ನು ನಾಶಮಾಡಲು, ಜೂಜು ಎಂಬ ಶಸ್ತ್ರವನ್ನು ಬಳಸುತ್ತಿದ್ದೇನೆ. ಜೂಜೂ
ಕೂಡಾ ಸ್ವಧರ್ಮವೇ (ವೇದದಲ್ಲಿ ಕ್ಷತ್ರಿಯರು ಶಸ್ತ್ರವನ್ನು
ಆಶ್ರಯಿಸಿ ಬದುಕಬೇಕು ಎಂದಿದೆ. ನನ್ನ ಪ್ರಕಾರ ಜೂಜೂ ಕೂಡಾ ನಮ್ಮ ಶಸ್ತ್ರ. ಹಾಗಾಗಿ ಇದು
ಧರ್ಮ ಎನ್ನುವ ವಾದ). ಇದರಿಂದ ನಿನಗೂ ಕೂಡಾ ಒಳ್ಳೆಯ ಫಲ ಸಿಗುತ್ತದೆ.’ ಈರೀತಿಯಾಗಿ ಹೇಳಲ್ಪಟ್ಟ
ಧೃತರಾಷ್ಟ್ರನು ‘ನನಗೆ ಫಲ ಬೇಡ’ ಎಂದು ಹೇಳಿ ಸುಮ್ಮನಾದನು.
ಏವಂ ಬ್ರುವನ್ನಪಿ ನೃಪ
ಆವಿಷ್ಟಃ ಕಲಿನಾ ಸ್ವಯಮ್ ।
ಪುತ್ರಸ್ನೇಹಾಚ್ಚ
ವಿದುರಮಾದಿಶತ್ ಪಾಣ್ಡವಾನ್ ಪ್ರತಿ ॥೨೧.೩೦೩॥
ಈರೀತಿಯಾಗಿ ಹೇಳುತ್ತಿದ್ದರೂ ಧೃತರಾಷ್ಟ್ರನು ಕಲಿಯ ಆವೇಶಕ್ಕೆ
ಒಳಗಾಗಿ ಪುತ್ರನ ಮೇಲಿನ ಪ್ರೀತಿಯಿಂದಲೂ, ಪಾಂಡವರನ್ನು ಕುರಿತು ತೆರಳಲು ವಿದುರನನ್ನು ಆದೇಶಿಸಿದ.
No comments:
Post a Comment