ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 16, 2022

Mahabharata Tatparya Nirnaya Kannada 21: 205-211

 

ಸ ವಿಪ್ರಯಾದವೇಶ್ವರಂ ದ್ವಿಧಾಸ್ಥಿತಂ ಜನಾರ್ದ್ದನಮ್ ।

ಪುರೋ ನಿಧಾಯ ತದ್ ವಸು ಪ್ರಭೂತಮಾನಮತ್ ತದಾ             ೨೧.೨೦೫

 

ಭೀಮಸೇನನು ವ್ಯಾಸ-ಕೃಷ್ಣ ಎನ್ನುವ ಎರಡು ರೂಪದಲ್ಲಿರುವ ಶ್ರೀಮನ್ನಾರಾಯಣನ ಮುಂದೆ ದಿಗ್ವಿಜಯದಲ್ಲಿ ಗಳಿಸಿದ, ಬಹಳವಾಗಿರುವ ಸಂಪತ್ತನ್ನಿಟ್ಟು, ಅವರಿಬ್ಬರಿಗೂ ನಮಸ್ಕರಿಸಿದನು.

 

ಸೋsಭಿವಾದ್ಯಾಗ್ರಜಂ ಚೈವ ಯಥಾವೃತ್ತಂ ನ್ಯವೇದಯತ್ ।

ಆತ್ಮನಃ ಕೃಷ್ಣಯೋಃ ಸರ್ವಂ ಧರ್ಮ್ಮರಾಜಾಗ್ರತೋ ಮುದಾ             ೨೧.೨೦೬

 

ಭೀಮಸೇನನು ತನ್ನ ಅಣ್ಣನಾದ ಧರ್ಮರಾಜನನ್ನು ನಮಸ್ಕರಿಸಿ, ದಿಗ್ವಿಜಯಕಾಲದಲ್ಲಿ ಏನು ನಡೆಯಿತೋ ಎಲ್ಲವನ್ನೂ ಹಾಗೇ ಯುಧಿಷ್ಠಿರನ ಮುಂಭಾಗದಲ್ಲಿ ವೇದವ್ಯಾಸರಿಗೆ ಮತ್ತು ಶ್ರೀಕೃಷ್ಣನಿಗೆ ಹೇಳಿದ.

 

ಯಥಾ ಜಿತಾಃ ಕೀಚಕಾದ್ಯಾ ಏಕಲವ್ಯಸಹಾಯವಾನ್ ।

ಯಥಾ ಜಿತಃ ಪೌಣ್ಡ್ರಕಶ್ಚ ಕರ್ಣ್ಣಾದ್ಯಾಶ್ಚ ತಥಾsಪರೇ       ೨೧.೨೦೭

 

ಯಥಾ ಸಿಂಹಾದಿತನವಃ ಶೇಷವೀನ್ದ್ರೇನ್ದ್ರಪೂರ್ವಕಾಃ ।

ಯಥಾ ಗಜತನುಃ ಶರ್ವಸ್ತಚ್ಚ ಸರ್ವಮವರ್ಣ್ಣಯತ್        ೨೧.೨೦೮

 

ಯಾವ ರೀತಿ ಕೀಚಕನೇ ಮೊದಲಾದವರು ಸೋತರೋ, ಏಕಲವ್ಯನ ಜೊತೆಗೂಡಿದ ಪೌಣ್ಡ್ರಕ ವಾಸುದೇವನು ಹೇಗೆ ಸೋತನೋ, ಕರ್ಣಾದಿಗಳೂ ಕೂಡಾ ದಿಗ್ವಿಜಯದಲ್ಲಿ ಹೇಗೆ ತನ್ನಿಂದ ಸೋತರೋ, ಸಿಂಹ-ಹುಲಿ ಮೊದಲಾದ ರೂಪ ಧರಿಸಿದ ಶೇಷ-ಗರುಡ-ಇಂದ್ರನೇ ಮೊದಲಾಗಿ ಉಳ್ಳ ದೇವತೆಗಳು ಹೇಗೆ ಪರಾಜಿತರಾದರೋ, ಆನೆಯ ರೂಪದಲ್ಲಿದ್ದ ರುದ್ರನು ಹೇಗೆ ತನ್ನಿಂದ ಪರಾಜಿತನಾದನೋ, ಅದೆಲ್ಲವನ್ನೂ ಕೂಡಾ ಭೀಮ ವಿವರಿಸಿ ಹೇಳಿದ.

 

ಸಮ್ಭಾವಿತಶ್ಚ ಕೃಷ್ಣಾಭ್ಯಾಂ ರಾಜ್ಞಾ ಚ ಸುಮಹಾಬಲಃ ।

ಆಜ್ಞಯಾ ವ್ಯಾಸದೇವಸ್ಯ ಯಜ್ಞಾಙ್ಗಾನಿ ಸಮಾರ್ಜ್ಜಯತ್             ೨೧.೨೦೯

 

ವೇದವ್ಯಾಸರು, ಶ್ರೀಕೃಷ್ಣ ಮತ್ತು ಯುಧಿಷ್ಠಿರನಿಂದಲೂ ಕೂಡಾ ಸತ್ಕೃತನಾದ, ಮಹಾಬಲನಾದ ಭೀಮಸೇನನು, ವೇದವ್ಯಾಸರ ಅಣತಿಯಿಂದ ಯಜ್ಞಕ್ಕೆ ಬೇಕಾದ ದ್ರವ್ಯಗಳನ್ನು(ಸಾಧನಗಳನ್ನು) ಒಂದೆಡೆ ಕೂಡಿಸಿದನು.

 

ಊಚೇ ತಂ ಭಗವಾನ್ ವ್ಯಾಸೋ ಜಿತಂ ಸರ್ವಂ ತ್ವಯಾsರಿಹನ್ ।

ಜಯೇ ಸರ್ವಸ್ಯ ಯಜ್ಞೋsಯಂ ಪೂರ್ಣ್ಣೋ ಭವತಿ ನಾನ್ಯಥಾ             ೨೧.೨೧೦

 

ವಿರಿಞ್ಚಃ ಸರ್ವಜಿತ್ ಪೂರ್ವಂ ದ್ವಿತೀಯಸ್ತ್ವಮಿಹಾಭವಃ ।

ಇತ್ಯುಕ್ತ್ವೈನಂ ಸಮಾಶ್ಲಿಷ್ಯ ಯಜ್ಞಾಙ್ಗಾನಿ ಸಮಾದಿಶತ್             ೨೧.೨೧೧

 

ಷಡ್ಗುಣೈಶ್ವರ್ಯ ಸಂಪನ್ನರಾದ ವೇದವ್ಯಾಸರು ಭೀಮಸೇನನನ್ನು ಕುರಿತು ಹೀಗೆ ಹೇಳಿದರು: ‘ಹಗೆಗಳನ್ನು ನಿಗ್ರಹಿಸುವವನೇ, ನಿನ್ನಿಂದ ಎಲ್ಲವೂ ಗೆಲ್ಲಲ್ಪಟ್ಟಿದೆ. ಎಲ್ಲರನ್ನೂ ಗೆದ್ದರೆ ಮಾತ್ರ ಈ ರಾಜಸೂಯಯಾಗವು ಪೂರ್ಣವಾಗುತ್ತದೆ ಹೊರತು ಬೇರೆ ರೀತಿ ಅಲ್ಲ.

ಮೊದಲು ಬ್ರಹ್ಮದೇವನು ಎಲ್ಲರನ್ನೂ ಗೆದ್ದು ರಾಜಸೂಯಯಾಗವನ್ನು ಮಾಡಿದ್ದ. ಈ ಯಾಗವನ್ನು ಮಾಡುವ ಎರಡನೆಯವನು ನೀನಾದೆ’. ಈರೀತಿಯಾಗಿ ಹೇಳಿದ ವೇದವ್ಯಾಸರು ಭೀಮಸೇನನನ್ನು ಆಲಂಗಿಸಿ, ಯಜ್ಞಸಾಧನಗಳನ್ನು ಸಿದ್ಧಗೊಳಿಸಲು  ಅವನಿಗೆ ಆಜ್ಞೆ ಮಾಡಿದರು.

No comments:

Post a Comment