ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 15, 2022

Mahabharata Tatparya Nirnaya Kannada 21: 191-197

 

ಪ್ರಯಾಹಿ ಚ ತ್ವಂ ಧನದಪ್ರಪಾಲಿತಾಂ ದಿಶಂ ದ್ವೀಪಾನ್ ಸಪ್ತ ಚಾಶೇಷದಿಕ್ಷು ।

ನಾಗಾಂಶ್ಚ ದೈತ್ಯಾಂಶ್ಚ ತಥಾsಧರಸ್ಥಾನ್ ವಿಜಿತ್ಯ ಶೀಘ್ರಂ ಪುನರೇಹಿ ಚಾತ್ರ             ೨೧.೧೯೧

 

ನೀನು ಕುಬೇರನಿಂದ ಪಾಲಿಸಲ್ಪಟ್ಟ ಉತ್ತರದಿಕ್ಕನ್ನೂ, ಎಲ್ಲಾ ದಶೆಗಳಲ್ಲಿ ಇರುವ ಏಳುದ್ವೀಪಗಳನ್ನೂ,  ನಾಗರನ್ನೂ, ದೈತ್ಯರನ್ನೂ, ಪಾತಾಳಲೋಕದಲ್ಲಿರುವವರನ್ನೂ ಕೂಡಾ ಗೆದ್ದು ಬೇಗನೇ ಇಲ್ಲಿಗೆ ಬಾ.

 

ರಥೋ ಹಿ ದಿವ್ಯೋsಮ್ಬರಗಸ್ತವಾಸ್ತಿ ದಿವ್ಯಾನಿ ಚಾಸ್ತ್ರಾಣಿ ಧನುಶ್ಚ ದಿವ್ಯಮ್ ।

ಯೇsನ್ಯೇ ಚ ಬಾಣಪ್ರಮುಖಾ ಅಜೇಯಾಃ ಶರ್ವಾಶ್ರಯಾಸ್ತಾನಪಿ ಭೀಮ ಏತು             ೨೧.೧೯೨

 

ನಿನ್ನಲ್ಲಿ ಅಲೌಕಿಕವಾದ, ಆಕಾಶದಲ್ಲಿ ಓಡುವ ರಥವಿದೆ. ದಿವ್ಯವಾಗಿರುವ ಅಸ್ತ್ರವೂ, ಅಲೌಕಿಕವಾಗಿರುವ ಬಿಲ್ಲೂ ನಿನ್ನಲ್ಲಿದೆ. ಬಾಣನೇ ಮೊದಲಾದ ರುದ್ರದೇವರ ವರವನ್ನು ಪಡೆದು ಅವಧ್ಯರಾದವರಲ್ಲಿಗೆ ನೀನು ಹೋಗಬೇಡ. ಅವರನ್ನು ಕುರಿತು ಭೀಮಸೇನ ತೆರಳಲಿ.

 

ತಥಾ ಸುರಾಶ್ಚಾಪಿ ಸಮಸ್ತತೋsಸ್ಯ ಬಲಿಂ ಪ್ರಯಚ್ಛನ್ತಿ ಮದಾಜ್ಞಯೇತರೇ ।

ದಿಶಂ ಪ್ರತೀಚೀಮಥ ದಕ್ಷಿಣಾಂ ಚ ಯಾತಾಂ ಯಮೌ ಕ್ರಮಶೋ ಹ್ಯಧ್ವರಾರ್ತ್ಥೇ ೨೧.೧೯೩

 

ಹಾಗೆಯೇ, ದೇವತೆಗಳೂ ಕೂಡಾ ನನ್ನ ಆಜ್ಞೆಯಿಂದ ಭೀಮಸೇನನಿಗೆ ಕರವನ್ನು ಕೊಡುತ್ತಾರೆ. ಉಳಿದವರೂ (ಗಂಧರ್ವ, ಯಕ್ಷ, ಮೊದಲಾದವರು)ಕೂಡಾ.  ತದನಂತರ ಕ್ರಮವಾಗಿ ಪಶ್ಚಿಮದಿಕ್ಕನ್ನೂ, ದಕ್ಷಿಣದಿಕ್ಕನ್ನು ಕುರಿತು ನಕುಲ ಸಹದೇವರು ತೆರಳಲಿ.

 

ಯಶಶ್ಚ ಧರ್ಮ್ಮಶ್ಚ ತಯೋರಪಿ ಸ್ಯಾದಿತಿ ಸ್ಮ ಕೃಷ್ಣೇನ ಸುತೇನ ಕಾಳ್ಯಾಃ ।

ಉಕ್ತೇ ಯಯುಸ್ತೇ ತಮಭಿಪ್ರಣಮ್ಯ ದಿಶೋ ಯಥೋಕ್ತಾಃ ಪರಮೋರುಸದ್ಗುಣಾಃ ೨೧.೧೯೪

 

ನಕುಲ-ಸಹದೇವರಿಗೂ ಕೂಡಾ ಕೀರ್ತಿಯೂ ಪುಣ್ಯವೂ ಸಿಗಲಿ ಎಂದು ಸತ್ಯವತಿಯ ಮಗನಾದ ವೇದವ್ಯಾಸರಿಂದ ಹೇಳಲ್ಪಡುತ್ತಿರಲು, ಎಲ್ಲರೂ ಕೂಡಾ ವೇದವ್ಯಾಸರನ್ನು ನಮಸ್ಕರಿಸಿ, ಅವರು ಸೂಚಿಸಿರುವ ದಿಕ್ಕಿಗೆ ತೆರಳಿದರು.  

 

ವೃಕೋದರೋ ಜಯನ್ನೃಪಾನ್ ವಿರಾಟಮಾಸಸಾದ ಹ ।

ಜಿತೇsತ್ರ ಕೀಚಕೇ ರಣೇ ಸಮಾದದೇ ಕರಂ ತತಃ         ೨೧.೧೯೫

 

ಭೀಮಸೇನನು ರಾಜರನ್ನು ಗೆಲ್ಲುತ್ತಾ ವಿರಾಟರಾಜನನ್ನು ಹೊಂದಿದನು. ವಿರಾಟ ನಗರದಲ್ಲಿ  ಕೀಚಕನು ಸೋಲಲು, ಅವನಿಂದ ಕಪ್ಪವನ್ನು ಸ್ವೀಕರಿಸಿದನು.

 

ತತಃ ಕ್ರಮಾನ್ನೃಪಾನ್ ಜಿತ್ವಾ ಚೇದೀನಾಂ ವಿಷಯಂ ಗತಃ ।

ಮಾತೃವಾಕ್ಯಾದ್ ಭಯಾಚ್ಚೈವ ಶಿಶುಪಾಲೇನ ಪೂಜಿತಃ             ೨೧.೧೯೬

 

ತದನಂತರ ಕ್ರಮವಾಗಿ ರಾಜರನ್ನು ಗೆದ್ದ ಭೀಮಸೇನ, ಚೇದೀದೇಶಕ್ಕೆ ಬಂದನು. ಅಲ್ಲಿ ತಾಯಿಯ ಮಾತಿನಿಂದಲೂ, ಭಯದಿಂದಲೂ ಶಿಶುಪಾಲ ಭೀಮಸೇನನನ್ನು ಪೂಜಿಸಿದ. [ಭೀಮಸೇನ ಕೇವಲ ಪೂರ್ವದಿಕ್ಕಿಗೆ ಮಾತ್ರ ಹೋಗಿರುವುದಲ್ಲ. ಎಲ್ಲೆಲ್ಲಿ ಅರ್ಜುನ ಗೆಲ್ಲಲು ಸಾಧ್ಯವಿಲ್ಲವೋ ಆ ರಾಜರರಲ್ಲಿಗೆ  ಭೀಮಸೇನ ಹೋಗಿದ್ದ ಎನ್ನುವುದನ್ನು ಓದುಗರು ಗಮನಿಸಬೇಕು].

 

ಮಾತೃಷ್ವಸುರ್ಗ್ಗೃಹೇ ಚೋಷ್ಯ ದಿವಸಾನ್ ಕತಿಚಿತ್ ಸುಖಮ್

ಕರಂ ಸುಮಹದಾದಾಯ ತತಃ ಪೂರ್ವಾಂ ದಿಶಂ ಯಯೌ             ೨೧.೧೯೭

 

ಹಾಗೆಯೇ, ದೊಡ್ಡಮ್ಮನ ಮನೆಯಲ್ಲಿ ಕೆಲವು ದಿನಗಳ ಕಾಲ ಸುಖವಾಗಿ ವಾಸಮಾಡಿದ ಭೀಮಸೇನ, ಬಹಳ ಕಪ್ಪವನ್ನು ಸ್ವೀಕರಿಸಿ, ಅಲ್ಲಿಂದ ಪೂರ್ವದಿಕ್ಕಿಗೆ ತೆರಳಿದ.

[ಮಹಾಭಾರತದ ಸಭಾಪರ್ವದಲ್ಲಿ(೩೦.೧೬) ಈ ವಿವರಣೆ ಬರುತ್ತದೆ: ‘ತತೋ ಭೀಮಸ್ತತ್ರ ರಾಜನ್ನುಷಿತ್ವಾ ತ್ರಿದಶಾಃ ಕ್ಷಪಾಃ’ - ಭೀಮಸೇನನು ಚೇದೀದೇಶದಲ್ಲಿ ಹದಿಮೂರು ದಿನಗಳ ಕಾಲ(ಹತ್ತು ಮತ್ತು ಮೂರು ದಿನಗಳ ಕಾಲ) ವಾಸಮಾಡಿ, ನಂತರ ಅಲ್ಲಿಂದ ತೆರಳಿದ. (ಇಲ್ಲಿ ತ್ರಿದಶಾಃ ಎಂದರೆ ಹದಿಮೂರೋ ಅಥವಾ ಮೂವತ್ತು ದಿನಗಳೋ ತಿಳಿಯುವುದಿಲ್ಲ. ಆದರೆ ಆಚಾರ್ಯರು ನಿರ್ಣಯದಲ್ಲಿ ‘ಕೆಲವು ದಿನಗಳು’ ಎಂದು ಹೇಳಿರುವುದರಿಂದ ಇಲ್ಲಿ ನಾವು ಹದಿಮೂರು ದಿನ ಎಂದು ಊಹಿಸಬಹುದು ಅಷ್ಟೇ)].

No comments:

Post a Comment