ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 30, 2023

Mahabharata Tatparya Nirnaya Kannada 31-06-10

 

ಅಥಾsಮ್ಬಿಕೇಯಂ ವಿಷಯೇಷು ಸಕ್ತಂ ದುಸ್ಸಙ್ಗದುಷ್ಟಂ ಕೃತಭೂರಿದೋಷಮ್ ।

ಸಮಸ್ತ ರಾಜಾಪ್ಯಯಹೇತುಭೂತಂ ನಿಚಾಯ್ಯ ತಂ ಮಾರುತಿರನ್ವಕಮ್ಪತ ॥ ೩೧.೦೬ ॥

 

ತದನಂತರ ಶಕುನಿ ಮೊದಲಾದ ದುಷ್ಟರಿಂದ ಕೂಡಿ ಕೆಟ್ಟುಹೋದ, ಬಹಳ ದೋಷವನ್ನು ಮಾಡಿರುವ, ಎಲ್ಲಾ ರಾಜರ ನಾಶಕ್ಕೆ ಮೂಲ ಕಾರಣನಾಗಿರುವ, ಇನ್ನೂ ಭೋಗದಲ್ಲಿಯೇ ಆಸಕ್ತನಾದ ಧೃತರಾಷ್ಟ್ರನನ್ನು ಕಂಡು ಭೀಮಸೇನನು ಅವನ ಮೇಲೆ ಅನುಕಂಪ ತೋರಿದನು.

 

ಅಕುರ್ವತಸ್ತೀಕ್ಷ್ಣತಪಃ ಕುತಶ್ಚಿನ್ನೈವಾಸ್ಯ ಲೋಕಾಪ್ತಿರಮುಷ್ಯ ಭೂಯಾತ್ ।

ರಾಗಾಧಿಕೋSಯಂ ನ ತಪಶ್ಚ ಕುರ್ಯ್ಯಾದಿತ್ಯಸ್ಯ ವೈರಾಗ್ಯಕರಾಣಿ ಚಕ್ರೇ ॥ ೩೧.೦೭ ॥

 

ತೀಕ್ಷ್ಣವಾಗಿರುವ ತಪಸ್ಸನ್ನು ಮಾಡದಿರುವ ಧೃತರಾಷ್ಟ್ರನಿಗೆ ತನ್ನ ಲೋಕ ಪ್ರಾಪ್ತಿಯಾಗಲಾರದು. ಅತ್ಯಂತವಾಗಿ  ವಿಷಯಾಸಕ್ತನಾಗಿರುವ ಇವನು, ತಪಸ್ಸನ್ನು ಮಾಡಲಾರ ಎಂದು ತಿಳಿದ ಭೀಮಸೇನನು,  ಧೃತರಾಷ್ಟ್ರನಿಗೆ ವೈರಾಗ್ಯ ಹುಟ್ಟಿಸುವ ಕರ್ಮಗಳನ್ನು ಮಾಡಿದನು.

 

ಆಜ್ಞಾಂ ಪರೈರಸ್ಯ ನಿಹನ್ತಿ ಸೋದರೈರ್ವಧೂಜನೈರಪ್ಯತಿಪೂಜಿತೇSಸ್ಮಿನ್ ।

ಸ ನಿಷ್ಟನತ್ಯೇವಮಪೀತರೈಃ ಸ ಸುಪೂಜಿತೋ ನಾSಸ ತದಾ ವಿರಾಗಃ ॥ ೩೧.೦೮ ॥

 

ಸಹೋದರರಿಂದಲೂ, ಸೊಸೆಯರಿಂದಲೂ ಅತ್ಯಂತ ಪೂಜಿತನಾದರೂ, ಭೀಮಸೇನ ಧೃತರಾಷ್ಟ್ರನ ಆದೇಶಗಳನ್ನು ಬೇರೊಬ್ಬರ ಮುಖಾಂತರ ಉಲ್ಲಂಘಿಸುವಂತೆ ಮಾಡುತ್ತಿದ್ದನು. ತಾನೂ ಕೂಡಾ (ತಿರಸ್ಕಾರ ಸೂಚಿಸುವ ನಿಷ್ಠುರ ಮಾತುಗಳಿಂದ) ಅದನ್ನೇ ಮಾಡುತ್ತಿದ್ದನು. ಇಷ್ಟಾದರೂ ಕೂಡಾ,  ಬೇರೊಬ್ಬರಿಂದ ಪೂಜಿಸಲ್ಪಟ್ಟವನಾದ ಧೃತರಾಷ್ಟ್ರನಿಗೆ ವೈರಾಗ್ಯ ಬರುತ್ತಿರಲಿಲ್ಲ.  

 

ಸರ್ವೇ ಹಿ ಪಾರ್ತ್ಥಸ್ತಮೃತೇ ಸಭಾರ್ಯ್ಯಾ ವೈಚಿತ್ರವೀರ್ಯ್ಯಂ ಪರಮಾದರೇಣ ।

ಪರ್ಯ್ಯೇವ ಚಕ್ರುಃ ಸತತಂ ಸಭಾರ್ಯ್ಯಂ ಕೃಷ್ಣಾ ಚ ನ ಸ್ಯಾತ್ ತನಯಾರ್ತ್ತಿಮಾನಿತಿ ॥ ೩೧.೦೯ ॥

 

ಭೀಮಸೇನನನ್ನು ಬಿಟ್ಟು, ಹೆಂಡಂದಿರಿಂದ ಒಡಗೂಡಿದ ಎಲ್ಲಾ ಪಾಂಡವರು ಗಾಂಧಾರಿಯಿಂದ ಕೂಡಿದ ಧೃತರಾಷ್ಟ್ರನನ್ನು ಪರಮ ಗೌರವದಿಂದ ಕಾಣುತ್ತಿದ್ದರು(ಪೂಜಿಸುತ್ತಿದ್ದರು). ದ್ರೌಪದಿಯೂ ಕೂಡಾ, ಮಕ್ಕಳನ್ನು ಕಳೆದುಕೊಂಡ ಸಂಕಟ ಅವನಿಗೆ ಇರಬಾರದು ಎಂದು ಅವನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು.

 

ಸ ಪ್ರೀಯಮಾಣೋ ನಿತರಾಂ ಚ ತೇಷು ನೈವಾಧಿಕಂ ಪ್ರೀಯತೇ ಭೀಮಸೇನೇ ।

ಸ್ಮರನ್ ಸುತಾಂಸ್ತೇನ ಹತಾನ್ ಸಮಸ್ತಾನಪಿ ಪ್ರಭಾವಂ ಪರಮಸ್ಯ ಜಾನನ್ ॥ ೩೧.೧೦ ॥

 

ಧೃತರಾಷ್ಟ್ರನು ಪಾಂಡವರಲ್ಲಿ ಪರಮ ಪ್ರೀತಿಯನ್ನಿಟ್ಟಿದ್ದರೂ ಕೂಡಾ, ಸತ್ತುಹೋದ ತನ್ನ ಮಕ್ಕಳನ್ನು ಸ್ಮರಣೆ ಮಾಡುತ್ತಾ, ಶ್ರೀಕೃಷ್ಣನ ಪ್ರಭಾವವನ್ನು ತಿಳಿದವನಾದರೂ ಕೂಡಾ, ಭೀಮಸೇನನಿಂದ ತನ್ನ ಮಕ್ಕಳು ಸತ್ತರು ಎಂದು ಅವನಲ್ಲಿ ಪ್ರೀತಿಯನ್ನು ಹೊಂದಿರಲಿಲ್ಲ.

Friday, September 29, 2023

Mahabharata Tatparya Nirnaya Kannada 31-01-05

 

೩೧. ಧೃತರಾಷ್ಟ್ರಾದಿಸ್ವರ್ಗ್ಗಪ್ರಾಪ್ತಿಃ

 

̐

ಯಜ್ಞೇಶ್ವರೇಣಾಭಿಯುತೇಷು ಯುಕ್ತ್ಯಾ ಮಹೀಂ ಪ್ರಶಾಸತ್ಸು ಪೃಥಾಸುತೇಷು ।

ಯಿಯಕ್ಷುರಾಗಾನ್ನಿಶಿ ವಿಪ್ರವರ್ಯ್ಯೋ ಯುಧಿಷ್ಠಿರಂ ವಿತ್ತಮಭೀಪ್ಸಮಾನಃ ॥ ೩೧.೦೧ ॥

 

ಯಜ್ಞಪ್ರತಿಪಾದ್ಯನಾದ ಶ್ರೀಕೃಷ್ಣನಿಂದ ಕೂಡಿಕೊಂಡು, ಪ್ರಜ್ಞಾಪೂರ್ವಕವಾಗಿ ಪಾಂಡವರು ಭೂಮಿಯನ್ನು ಆಳುತ್ತಿರಲು, ಯಾಗಮಾಡಬೇಕೆಂಬ ಇಚ್ಛೆಯುಳ್ಳ ಶ್ರೇಷ್ಠ ಬ್ರಾಹ್ಮಣನೊಬ್ಬನು ವಿತ್ತವನ್ನು ಬಯಸಿ ಯುಧಿಷ್ಠಿರನಲ್ಲಿಗೆ ರಾತ್ರಿಕಾಲದಲ್ಲಿ ಬಂದನು.

 

ಪ್ರಾತರ್ದ್ದದಾನೀತಿ ನೃಪಸ್ಯ ವಾಕ್ಯಂ ನಿಶಮ್ಯ ವಿಪ್ರಸ್ತ್ವರಿತೋ ಮಖಾರ್ತ್ಥೇ ।

ಭೀಮಂ ಯಯಾಚೇ ಸ ನೃಪೋಕ್ತಮಾಶು ನಿಶಮ್ಯ ಚಾದಾನ್ನಿಜಹಸ್ತಭೂಷಣಮ್ ॥ ೩೧.೦೨ ॥

 

‘ಬೆಳಿಗ್ಗೆ ಕೊಡುತ್ತೇನೆ’ ಎಂಬ ಯುಧಿಷ್ಟಿರನ ಮಾತನ್ನು ಕೇಳಿ, ಯಾಗಕ್ಕಾಗಿ ಬಹಳ ಅವಸರವುಳ್ಳವನಾಗಿದ್ದ ಆ ಬ್ರಾಹ್ಮಣನು ಭೀಮಸೇನನನ್ನು ಬೇಡಿದನು. ಭೀಮನಾದರೋ, ಧರ್ಮರಾಜನಿಂದ ಹೇಳಲ್ಪಟ್ಟಿದ್ದನ್ನು ಕೇಳಿದವನಾಗಿ, ಬ್ರಾಹ್ಮಣ ಕೇಳುತ್ತಿದ್ದಂತೆಯೇ ತನ್ನ ಕೈಯಲ್ಲಿ ಧರಿಸಿದ್ದ ಆಭರಣವನ್ನು ಕೊಟ್ಟನು.

 

ಅನರ್ಘಮಗ್ನಿಪ್ರತಿಮಂ ವಿಚಿತ್ರರತ್ನಾಞ್ಚಿತಂ ವಿಪ್ರವರಸ್ತದಾಪ್ಯ ।

ಯಯೌ ಕೃತಾರ್ತ್ಥೋSಥ ಚ ನನ್ದಿಘೋಷಮಕಾರಯದ್ ವಾಯುಸುತಸ್ತದೈವ ॥ ೩೧.೦೩ ॥

 

ಬೆಲೆಕಟ್ಟಲು ಸಾಧ್ಯವಿಲ್ಲದ, ಬೆಂಕಿಯಂತೆ ಹೊಳೆಯುವ, ಚಿತ್ರ ವಿಚಿತ್ರವಾದ ರತ್ನಗಳಿಂದ ಕೂಡಿರುವ ಆ ಆಭರಣವನ್ನು ಬ್ರಾಹ್ಮಣನು ಹೊಂದಿ, ಕೃತಕೃತ್ಯನಾಗಿ ತೆರಳಿದನು. ತದನಂತರ ಭೀಮಸೇನನು ಆ ಅರ್ಧರಾತ್ರಿಯಲ್ಲಿಯೇ ಸಂತೋಷದ ಘೋಷವನ್ನು ಮಾಡಿದನು. (ಅತ್ಯಂತ ಆನಂದವಾದಾಗ ಮಾಡಲ್ಪಡುವ ವಿಶೇಷ ನಾದಘೋಷವನ್ನು ಮಾಡಿದನು).

 

ಅಕಾಲಜಂ ತಂ ತು ನಿಶಮ್ಯ ರಾಜಾ ಪಪ್ರಚ್ಛ ದೂತೈಸ್ತಮುವಾಚ ಭೀಮಃ ।

ಯನ್ಮರ್ತ್ತ್ಯದೇಹೋSಪಿ ವಿನಿಶ್ಚಿತಾಯುರಭೂನ್ನೃಪಸ್ತೇನ ಮಮಾSಸ ಹರ್ಷಃ ॥ ೩೧.೦೪ ॥

 

ಅಕಾಲದಲ್ಲಿ ಉಂಟಾದ ಸಂತೋಷ-ಘೋಷವನ್ನು ಕೇಳಿ, ಧರ್ಮರಾಜನು ಕಾರಣವನ್ನು ತಿಳಿಯಲು  ಧೂತರನ್ನು ಕಳುಹಿಸಿದನು. ಹಾಗೆ ಬಂದಿರುವ ಧೂತರಲ್ಲಿ ಭೀಮಸೇನ ಹೇಳುತ್ತಾನೆ- ‘ನಶ್ವರವಾದ ಮಾನುಷ ಶರೀರದಲ್ಲಿರುವ ಧರ್ಮರಾಜನಿಗೆ ತನ್ನ ಆಯುಷ್ಯದ ಬಗ್ಗೆ ಖಚಿತತೆ ಇದೆಯಲ್ಲ ಅದರಿಂದಾಗಿ ನನಗೆ ಸಂತೋಷವಾಯಿತು’ ಎಂದು. [ನಶ್ವರ ಶರೀರದಲ್ಲಿರುವ ಮಾನವರು ದಾನವನ್ನು ತಕ್ಷಣ ಮಾಡಬೇಕು. ನಾಳೆ ಮಾಡುತ್ತೇನೆ ಎಂದರೆ ನಾಳೆ ಬದುಕಿರುತ್ತೇವೆ ಎನ್ನುವ ಖಾತರಿ ನಮಗಿರುವುದಿಲ್ಲ. ಹೀಗಿರುವಾಗ ಧರ್ಮರಾಜ ಬ್ರಾಹ್ಮಣನಿಗೆ ನಾಳೆ ಕೊಡುತ್ತೇನೆ ಎಂದು ಹೇಳಿರುವುದು ತಪ್ಪು. ಅದನ್ನು ಅವನಿಗೆ ಮನವರಿಕೆ ಮಾಡಿಕೊಡಲು ಭೀಮಸೇನ  ‘ಧರ್ಮರಾಜನಿಗೆ ತಾನು ನಾಳೆಯ ತನಕ ಬದುಕಿರುತ್ತೇನೆ ಎನ್ನುವ ಖಚಿತತೆ ಇದೆಯಲ್ಲ ಅದಕ್ಕಾಗಿ ನಾನು ಸಂತೋಷ ಘೋಷವನ್ನು ಮಾಡಿದೆ’ ಎಂದು ಹೇಳಿ, ಅವನಿಗೆ ತನ್ನ ತಪ್ಪಿನ ಮನವರಿಕೆಯಾಗುವಂತೆ ಮಾಡಿದ]

 

ಇತೀರಿತೋSಸೌ ನೃಪತಿಸ್ತ್ವರೇತ ಧರ್ಮ್ಮಾರ್ತ್ಥಮಿತ್ಯಸ್ಯ ಮತಂ ಪ್ರಪೂಜಯನ್ ।

ಜಗಾದ ಸಾಧ್ವಿತ್ಯಥ ಭೂಯ ಏವ ಧರ್ಮ್ಮೇ ತ್ವರಾವಾನಪಿ ಸಮ್ಬಭೂವ ॥ ೩೧.೦೫ ॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ‘ಧರ್ಮ ಮಾಡಲು ವೇಗ ಮುಖ್ಯ’ ಎಂಬ ಮುಖ್ಯಪ್ರಾಣನ ಅಭಿಪ್ರಾಯವನ್ನು ಗೌರವಿಸಿ, ‘ಒಳ್ಳೆಯದು’ ಎಂದು ಹೇಳಿದನು ಮತ್ತು ಆನಂತರ ಧರ್ಮ ಕಾರ್ಯಗಳಲ್ಲಿ ಬಹಳ ವೇಗವುಳ್ಳವನಾದನು.

Monday, September 25, 2023

Mahabharata Tatparya Nirnaya Kannada 30-169-179

 ಯದ್ಯಪ್ಯಲ್ಪಧನತ್ಯಕ್ತಂ ವಿತ್ತಂ ಬಹುಫಲಂ ಭವೇತ್ ।

ತಥಾSಪ್ಯನನ್ತಫಲದಾಃ ಕರ್ತ್ತುರೇವ ಮಹಾಗುಣಾಃ ॥ ೩೦.೧೬೯ ॥

 

ಅತ್ಯಂತ ಅಲ್ಪವಾಗಿರುವ ದ್ರವ್ಯವುಳ್ಳ ಬಡವನಿಂದ ಕೊಡಲ್ಪಟ್ಟ ದಾನವು ಬಹಳ ಫಲವನ್ನು ಕೊಡುತ್ತದೆ ಎನ್ನುವುದು ನಿಜವಾದರೂ ಕೂಡಾ, ಕರ್ತೃವಿನ ಜ್ಞಾನಾದಿ ಗುಣಗಳೇ ಮಹಾಫಲವನ್ನು ತಂದು ಕೊಡುವಂತಹದ್ದು.  

 

ಸತಾಂ ಪ್ರೀತಿಶ್ಚ ತತ್ರಾಪಿ ಸದ್ವರೋ ಹರಿರೇವ ಹಿ ।

ಪಾರ್ತ್ಥೇಭ್ಯೋSಭ್ಯಧಿಕಃ ಕರ್ತ್ತಾ ಸಮೋ ವಾ ಕೋ ಗುಣೈರ್ಭವೇತ್ ॥ ೩೦.೧೭೦ ॥

 

ಸಜ್ಜನರ ಪ್ರೀತಿಯೂ ಕೂಡಾ ಅನಂತ ಫಲವನ್ನು ಕೊಡುತ್ತದೆ. ಸಜ್ಜನರಲ್ಲಿ ಅಗ್ರಗಣ್ಯ ಶ್ರೀಮನ್ನಾರಾಯಣನೇ. ಜ್ಞಾನ-ಭಕ್ತಿ ಇತ್ಯಾದಿ ಮಹಾಗುಣಗಳಿರುವವರಲ್ಲಿ ಪಾಂಡವರನ್ನು ಮೀರಿಸುವವರಾಗಲೀ ಅಥವಾ ಅವರಿಗೆ ಸಮನಾದ  ಕರ್ತೃ  ಯಾರಿದ್ದಾರೆ? (ಯಾರೂ ಇಲ್ಲ).

 

ಸತಾಂ ಚ ಪ್ರವರೋ ವಿಷ್ಣುಃ ಸದ್ಭಿರ್ಮ್ಮುನಿವರೈರ್ಯ್ಯುತಃ ।

ಪ್ರತ್ಯಕ್ಷತಃ ಕಾರಯತಿ ಪಾರ್ತ್ಥೈಃ ಪ್ರಿಯತಮೈಶ್ಚ ತೈಃ ॥ ೩೦.೧೭೧ ॥

 

ಯಂ ಮಖಪ್ರವರಂ ತಸ್ಯ ಸಮಂ ಕಿಂ ಶುಭಸಾಧನಮ್ ।

ಪಠನ್ತಿ ಪೈಙ್ಗಿನಶ್ಚೈತಾನ್ ಮನ್ತ್ರಾನನ್ವರ್ತ್ಥಕಾನಿಹ ॥ ೩೦.೧೭೨ ॥

 

ಸಜ್ಜನರಲ್ಲಿಯೇ ಶ್ರೇಷ್ಠನಾದ ವಿಷ್ಣುವು, ಸಜ್ಜನರಾದ ಮುನಿಶ್ರೇಷ್ಠರಿಂದ ಕೂಡಿಕೊಂಡು(ಉಳಿದ ಎಲ್ಲಾ ಸಜ್ಜನರ ಸಾಕ್ಷಿಯಿಂದ) ತನಗೆ ಅತ್ಯಂತ ಪ್ರಿಯರಾದ ಪಾಂಡವರಿಂದ, ಪ್ರತ್ಯಕ್ಷವಾಗಿ ತಾನೇ ನಿಂತು ಶ್ರೇಷ್ಠವಾದ ಯಜ್ಞವನ್ನು ಮಾಡಿಸಿದ್ದಾನೆ. ಆದ್ದರಿಂದ ಈ ಯಜ್ಞಕ್ಕೆ ಎಣೆಯಾಗಿರುವ ಪುಣ್ಯಸಾಧನವು ಯಾವುದಿದೆ? (ಯಾವುದೂ ಇಲ್ಲ). ಪೈಙ್ಗಿ ಶ್ರುತಿಯನ್ನು ಅಭ್ಯಾಸ ಮಾಡುವವರು ಈ ಕುರಿತಾದ ಅತ್ಯಂತ ಅನ್ವರ್ತಕವಾದ ಮಂತ್ರಗಳನ್ನು ಹೀಗೆ ಹೇಳುತ್ತಾರೆ-

 

‘ಅವೈಷ್ಣವಕೃತಂ ಕರ್ಮ್ಮ ಸರ್ವಮನ್ತವದುಚ್ಯತೇ ।

‘ಅನನ್ತಂ ವೈಷ್ಣವಕೃತಂ ತತ್ರ ವರ್ಣ್ಣಕ್ರಮಾತ್ ಪರಮ್ ॥ ೩೦.೧೭೩ ॥

 

‘ವೈಷ್ಣವೇಷ್ವಪಿ ಮರ್ತ್ತ್ಯೈರ್ಯ್ಯತ್ ಕೃತಂ ಶತಗುಣಂ ತತಃ ।

‘ಗಾನ್ಧರ್ವಂ ಕರ್ಮ್ಮ ತಸ್ಮಾಚ್ಚ ಮುನಿಭಿಃ  ಪಿತೃಭಿಸ್ತತಃ ॥ ೩೦.೧೭೪ ॥

 

‘ದೇವಶಕ್ರಶಿವಬ್ರಹ್ಮಕೃತಂ ತಸ್ಮಾತ್ ಕ್ರಮೇಣ ಚ ।

‘ಶತೋತ್ತರಮಿತಿ ಜ್ಞೇಯಂ ನಾನ್ಯದ್ ಬ್ರಹ್ಮಕೃತೋಪಮಮ್ ॥ ೩೦.೧೭೫ ॥

 

‘ವೈಷ್ಣವತ್ವಂ ಕ್ರಮೋದ್ವೃದ್ಧಂ ಬ್ರಹ್ಮಾನ್ತಂ ಜೀವರಾಶಿಷು ।

‘ಫಲಾಧಿಕ್ಯಂ ಕರ್ಮ್ಮಣಾಂ ಹಿ ವಿಷ್ಣೋಃ ಪ್ರೀತ್ಯೈವ ನಾನ್ಯಥಾ ’ ॥ ೩೦.೧೭೬ ॥

 

ಯಾರು ವಿಷ್ಣುಭಕ್ತರಲ್ಲವೋ, ಅವರಿಂದ ಮಾಡಲ್ಪಟ್ಟ ಎಲ್ಲಾ ಕರ್ಮವೂ ಕೂಡಾ ಅಲ್ಪಫಲವುಳ್ಳದ್ದಾಗಿದೆ. (ಅದರ ಶ್ರೇಯಸ್ಸು-ಯಶಸ್ಸು ಮುಗಿದುಹೋಗುತ್ತದೆ). ವೈಷ್ಣವರಿಂದ ಮಾಡಲ್ಪಟ್ಟ ಕರ್ಮವು ಅನಂತ ಫಲವುಳ್ಳದ್ದಾಗಿದೆ ಮತ್ತು ಅದರ ಉತ್ತಮತ್ವವು ಬ್ರಾಹ್ಮಣಾದಿ ವರ್ಣಕ್ರಮದಲ್ಲಿರುತ್ತದೆ.

ವೈಷ್ಣವರಲ್ಲಿಯೂ ಕೂಡಾ, ಮನುಷ್ಯರು ಮಾಡಿದ ಕರ್ಮಕ್ಕಿಂತಲೂ ಗಂಧರ್ವರು ಮಾಡಿದ ಕರ್ಮ ಶತಗುಣ ಅಧಿಕವಾಗಿರುತ್ತದೆ. ಗಂಧರ್ವರ ಕರ್ಮಕ್ಕಿಂತ ಪಿತೃಗಳ ಕರ್ಮ ಶತಗುಣ ಅಧಿಕ. ಅದೇ ರೀತಿ  ಮುನಿಗಳು, ದೇವತೆಗಳು, ಇಂದ್ರ, ಶಿವ, ಹಾಗು ಬ್ರಹ್ಮ, ಈ ಪ್ರತಿಯೊಬ್ಬರ ಕರ್ಮವೂ ಇದೇ ಕ್ರಮದಲ್ಲಿ ನೂರು-ನೂರು ಪಟ್ಟು ಅಧಿಕವಾಗಿರುತ್ತದೆ.  ಬ್ರಹ್ಮನಿಗೆ ಎಣೆಯಾಗಿ ಯಾರೂ ಕೂಡಾ ಯಾವ ಕರ್ಮವನ್ನೂ ಮಾಡಲು ಸಾಧ್ಯವಿಲ್ಲ. ವಿಷ್ಣುಭಕ್ತಿ ಎನ್ನುವುದು ಬ್ರಹ್ಮನ ತನಕ ಕ್ರಮವಾಗಿ ಹೆಚ್ಚಾಗುತ್ತಾ ಬರುತ್ತದೆ. ಕರ್ಮಗಳ ಅಧಿಕಫಲಪ್ರದತ್ವವು ನಾರಾಯಣನ ಪ್ರೀತಿಯಿಂದಲೇ ಹೊರತು ಬೇರೆರೀತಿಯಾಗಿ ಇಲ್ಲ.

 

ಇತಿ ತೇನ ನ ಪಾರ್ತ್ಥಾನಾಂ ಕರ್ಮ್ಮಣಾSನ್ಯತ್  ಸಮಂ ಕ್ವಚಿತ್ ।

ಗುಣೈರ್ಜ್ಞಾನಾದಿಭಿರ್ವಾSಪಿ ತಸ್ಮಾತ್ ಕ್ರೋಧಃ ಸ ತಾಮಸಃ ।

ವಿನಿನ್ದ್ಯ ತಾನ್ ಸುಸತ್ತ್ವಸ್ಥಾಂಸ್ತಮೋSನ್ಧಮುಪಜಗ್ಮಿವಾನ್ ॥ ೩೦.೧೭೭ ॥

 

ಈ ರೀತಿ ಇರುವುದರಿಂದ ಗುಣದಿಂದಾಗಲೀ, ಜ್ಞಾನಾದಿಗಳಿಂದಾಗಲೀ. ಪಾಂಡವರ ಕರ್ಮಕ್ಕಿಂತ ಮಿಗಿಲಾದ ಅಥವಾ ಸಮನಾದ ಇನ್ನೊಂದು ಕರ್ಮವೇ ಇಲ್ಲ.  ಆ ಕಾರಣದಿಂದ ತಮೋಗುಣದ ಆ ಕ್ರೋಧನು ಅತ್ಯಂತ ಸಾತ್ವಿಕರಾಗಿರುವ ಪಾಂಡವರನ್ನು ನಿಂದಿಸಿ, ಅನ್ಧಂತಮಸ್ಸನ್ನು ಹೊಂದಿದನು.

 

ಅಥ ಪೃಷ್ಟೋ ವಾಸುದೇವಃ ಸುರವಿಪ್ರಾದಿಸಂಸದಿ ।

ಯುಧಿಷ್ಠಿರೇಣ ಸಂಹೃಷ್ಟೋ ಜಗಾದಾಶೇಷತಃ ಪ್ರಭುಃ ॥ ೩೦.೧೭೮ ॥

 

ಆನಂತರ ದೇವತೆಗಳು, ಬ್ರಾಹ್ಮಣರು, ಮೊದಲಾದವರು ಸೇರಿರುವ ಸಭೆಯಲ್ಲಿ, ಯುಧಿಷ್ಠಿರನಿಂದ ಕೇಳಲ್ಪಟ್ಟ ಶ್ರೀಕೃಷ್ಣನು, ಸಮಗ್ರವಾದ ಧರ್ಮಾದಿಗಳನ್ನು ಹೇಳಿದನು. (ವೈಷ್ಣವಧರ್ಮಪರ್ವ ಎಂದು ಆಶ್ವಮೇಧಿಕ ಪರ್ವದ ಕೊನೆಯಲ್ಲಿ ಈ ವಿವರಣೆಯನ್ನು ಕಾಣಬಹುದು)

 

ತೇ ಚ ಶ್ರುತ್ವಾSಖಿಲಾನ್ ಧರ್ಮ್ಮಾನ್ ಭಕ್ತ್ಯಾ ಪರಮಯಾ ಯುತಾಃ ।

ಪೂಜಯನ್ತೋ ಜಗನ್ನಾಥಮಾಪುಶ್ಚ ಪರಮಾಂ ಮುದಮ್ ॥ ೩೦.೧೭೯ ॥

 

ಉತ್ಕೃಷ್ಟವಾದ ಭಕ್ತಿಯಿಂದ ಕೂಡಿದ ಆ ಪಾಂಡವರು ಶ್ರೀಕೃಷ್ಣ ಹೇಳಿದ ಎಲ್ಲಾ ಧರ್ಮಗಳನ್ನೂ ಕೇಳಿ, ನಾರಾಯಣನನ್ನು ಪೂಜಿಸುತ್ತಾ, ಉತ್ಕೃಷ್ಟವಾದ ಆನಂದವನ್ನು ಹೊಂದಿದರು.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಯಾಗಸಮಾಪ್ತಿರ್ನ್ನಾಮ ತ್ರಿಂಶೋSದ್ಧ್ಯಾಯಃ ॥

[ ಆದಿತಃ ಶ್ಲೋಕಾಃ ೪೭೪೫+೧೭೯=೪೯೨೪ ]


Sunday, September 24, 2023

Mahabharata Tatparya Nirnaya Kannada 30-157-168

 

ತದ್ ಯಜ್ಞಪಞ್ಚಕಮಜಸ್ತ್ರಿಗುಣಾಂ ಸ ಏಭ್ಯಃ ಸದ್ದಕ್ಷಿಣಾಂ ಕ್ರತುಪತಿರ್ನ್ನಿಖಿಲಾಮವಾಪ್ಯ ।

ಚಕ್ರೇSಶ್ವಮೇಧತ್ರಯಮೇಕಮೇಕಂ ತೇಷಾಂ ಹರಿರ್ಬಹುಸುವರ್ಣ್ಣಕನಾಮಧೇಯಮ್ ॥ ೩೦.೧೫೭ ॥

 

ಪಾಂಡವರು (ಹದಿನೈದು ವರ್ಷಗಳಲ್ಲಿ)ನಡೆಸಿದ ಆ ಐದು ಅಶ್ವಮೇಧಯಜ್ಞ, (ಪಂಚಾತ್ಮಕನಾದ ಪರಮಾತ್ಮನಿಗೆ, ಪಂಚಾತ್ಮಕವಾದ ಜೀವಶಕ್ತಿಯಲ್ಲಿ) ಮೂರುಪಟ್ಟು ದಕ್ಷಿಣೆಯೊಂದಿಗೆ(ಭಗವಂತನ ಮೂರು ರೂಪಗಳ ಉಪಸ್ಥಿತಿಯಲ್ಲಿ) ನಡೆಯಿತು. ಹೀಗೆ ಸಮೀಚೀನವಾದ ದಕ್ಷಿಣೆಯನ್ನು ಹೊಂದಿ ‘ಬಹುಸುವರ್ಣಕ ಎಂದು ಹೆಸರುಳ್ಳ ಒಂದೊಂದು ಯಾಗವನ್ನು ವೇದವ್ಯಾಸರು ಮೂರು ಅಶ್ವಮೇಧವನ್ನಾಗಿ ಮಾಡಿದರು. (ಒಟ್ಟಿನಲ್ಲಿ ಅದು ಹದಿನೈದು ಅಶ್ವಮೇಧಕ್ಕೆ ಸಮನಾಗಿ ನಡೆಯಿತು).

 

ಸಕೃಷ್ಣೇಷ್ವಥ ಪಾರ್ತ್ಥೇಷು ಸುಸ್ನಾತಾವಭೃಥೇಷ್ವಲಮ್ ।

ಪಞ್ಚೇನ್ದ್ರವದ್ ವಿರಾಜತ್ಸು ಸ್ತೂಯಮಾನೇಷ್ವೃಷೀಶ್ವರೈಃ ॥ ೩೦.೧೫೮ ॥

 

ಸ್ಥೂಯಮಾನೇ ಚ ತದ್ಯಜ್ಞೇ ಕ್ರೋಧೋ ನಕುಲತಾಂ ಗತಃ ।

ಕೃತ್ವೋಗ್ರಗರ್ಜ್ಜನಂ ಯಜ್ಞಂ ತಾಂಶ್ಚ ಯಜ್ಞಕೃತೋSಖಿಲಾನ್ ॥ ೩೦.೧೫೯ ॥

 

ಗರ್ಹಯನ್ನೂಚಿವಾನಿತ್ಥಂ ಭಾರ್ಯ್ಯಾಪುತ್ರಸ್ನುಷಾಯುತಃ ।

ಸತ್ತ್ಕುಪ್ರಸ್ಥಮದಾದ್ ವಿಪ್ರ ಉಞ್ಛವೃತ್ತಿಃ ಸುಭಕ್ತಿತಃ ॥ ೩೦.೧೬೦ ॥

 

ಧರ್ಮ್ಮಾಯಾತಿಥಯೇ ತಸ್ಯ ಕಲಾಂ ನಾರ್ಹತಿ  ಷೋಡಶೀಮ್ ।

ಯಜ್ಞೋSಯಮಿತಿ ಹೇತುಂ ಚ ವಿಪ್ರೈಃ ಪೃಷ್ಟೋSಭ್ಯಭಾಷತ ॥ ೩೦.೧೬೧ ॥

 

ಶ್ರೀಕೃಷ್ಣನಿಂದ ಸಹಿತರಾದ  ಪಾಂಡವರು ಯಜ್ಞದ ಕೊನೆಯಲ್ಲಿ ಮಾಡುವ ಅವಭೃಸ್ನಾನವನ್ನು ಮಾಡಿದವರಾಗಿ, ಐದು ಇಂದ್ರರಂತೆ ಚೆನ್ನಾಗಿ ಶೋಭಿಸುತ್ತಿರಲು, ಋಷಿಗಳೆಲ್ಲರೂ ಸ್ತೋತ್ರ ಮಾಡುತ್ತಾ ಆ ಯಜ್ಞವನ್ನು ಹೊಗಳುತ್ತಿದ್ದರು. ಅದೇ ಸಮಯದಲ್ಲಿ ಕ್ರೋಧಾಭಿಮಾನಿಯಾದ ‘ಕ್ರೋಧ’ ನಾಮಕ ದೈತ್ಯನು ಮುಂಗುಸಿಯಾಗಿ ಬಂದು, ಕ್ರೂರ ಗರ್ಜನೆಯನ್ನು ಮಾಡಿ, ಆ ಯಜ್ಞವನ್ನೂ, ಯಜ್ಞ ಮಾಡಿದ ಎಲ್ಲರನ್ನೂ ನಿಂದಿಸುತ್ತಾ,  ಹೀಗೆ (ಕಥೆಯೊಂದನ್ನು) ಹೇಳಿದನು- ‘ಹೆಂಡತಿ, ಮಗ ಹಾಗೂ ಸೊಸೆಯಿಂದ ಕೂಡಿರುವ ಒಬ್ಬ ಬ್ರಾಹ್ಮಣನಿದ್ದ. ಅವನು ಉಞ್ಛವೃತ್ತಿಯಿಂದ (ಕೇವಲ ನೆಲದಲ್ಲಿ ಬಿದ್ದ ದಾನ್ಯವನ್ನು ಮಾತ್ರ ಆಹಾರವಾಗಿ ಬಳಸಿ) ಬದುಕುತ್ತಿದ್ದ. (ಅದರಿಂದಾಗಿ ಅವನಿಗೆ ದಿನಾಲೂ ಊಟವಿರುತ್ತಿರಲಿಲ್ಲ). ಹೀಗಿರುವಾಗ ಒಮ್ಮೆ ಒಬ್ಬ ಅತಿಥಿ ಆ ಬ್ರಾಹ್ಮಣನ ಮನೆಗೆ ಬಂದ. ಸ್ವಯಂ ಯಮಧರ್ಮನೇ ಅವರನ್ನು ಪರೀಕ್ಷಿಸಲು ಅತಿಥಿ ವೇಷದಲ್ಲಿ ಬಂದಿದ್ದ. ಹಾಗೆ ಬಂದ ಅತಿಥಿಗೆ ಆ ಬ್ರಾಹ್ಮಣ, ತಾವು ತಿನ್ನಲು ಇಟ್ಟುಕೊಂಡಿದ್ದ ಎಲ್ಲಾ ಹಿಟ್ಟನ್ನು(ಆಹಾರವನ್ನು) ನೀಡಿದ.’ ಮುಂದುವರಿದು ಆ ದೈತ್ಯ ಅಲ್ಲಿ ಎಲ್ಲರನ್ನು ನಿಂದಿಸುತ್ತಾ ಹೇಳುತ್ತಾನೆ- ‘ ಆ ಬ್ರಾಹ್ಮಣ ಕೊಟ್ಟ ದಾನದ ಹದಿನಾರನೇ ಒಂದು ಭಾಗ ಈ ಯಜ್ಞ ಹೊಂದಿಲ್ಲ’ ಎಂದು. ಆಗ ಬ್ರಾಹ್ಮಣರಿಂದ ಕಾರಣವನ್ನು ಕೇಳಲ್ಪಟ್ಟವನಾಗಿ ಅವನು ಹೀಗೆ ನುಡಿದ-

 

ಅತಿಥೇಸ್ತಸ್ಯ ಪಾದೋದಕ್ಲಿನ್ನಃ ಪಾರ್ಶ್ವೋ ಹಿರಣ್ಮಯಃ ।

ಏಕೋ ಮಮಾಭೂದಪರಃ ಸರ್ವತೀರ್ತ್ಥಾದಿಕೇಷ್ವಪಿ ॥ ೩೦.೧೬೨ ॥

 

ಮಜ್ಜತೋSವಭೃಥೇಷ್ವದ್ಧಾ ಯಜ್ಞಾನಾಮತ್ರ ಚಾSದರಾತ್ ।

ನಾಭೂದಿತ್ಯಥ ತತ್ತತ್ವವೇದಿಭಿರ್ಮ್ಮುನಿಪುಙ್ಗವೈಃ ॥ ೩೦.೧೬೩ ॥

 

ಕೃಷ್ಣೇನ ಚ ತಮೋSನ್ಧಂ ತಂ ಪ್ರಾಪಯದ್ಭಿಃ ಸ್ಮಿತೇ ಕೃತೇ ।

ಅದರ್ಶನಂ ಜಗಾಮಾSಶು ತಮಃ ಪ್ರಾಪ ಚ ಕಾಲತಃ ॥ ೩೦.೧೬೪ ॥

 

‘ಆ ಅತಿಥಿಯ ಪಾದವನ್ನು ತೊಳೆದ ನೀರಿನಿಂದ ಒದ್ದೆಯಾದ ನನ್ನ ಒಂದು ಭಾಗವು ಬಂಗಾರವಾಯಿತು. ಇನ್ನೊಂದು ಭಾಗವನ್ನು ಬಂಗಾರವಾಗಿ ಮಾಡಿಕೊಳ್ಳಬೇಕು ಎಂದು ಪ್ರತಿಯೊಂದು ತೀರ್ಥದಲ್ಲಿ ಸ್ನಾನ ಮಾಡಿದರೂ, ಬೇಕಾದಷ್ಟು ಯಜ್ಞದ ಅವಭೃದಲ್ಲಿ ಸ್ನಾನ ಮಾಡಿದರೂ, ಇನ್ನೊಂದು ಭಾಗ ಬಂಗಾರ ಆಗಲೇ ಇಲ್ಲ.’  ದೈತ್ಯ ಈ ರೀತಿಯಾಗ ಹೇಳಿದಾಗ ಇದರ ರಹಸ್ಯ ಮುನಿಗಳಿಗೆ ಅರ್ಥವಾಯಿತು. ಆಗ ಶ್ರೀಕೃಷ್ಣ ಹಾಗೂ ಎಲ್ಲಾ ಋಷಿಗಳಿಂದ. (ಅವನನ್ನು ಅನ್ಧಂತಮಸ್ಸಿಗೆ ಕಳುಹಿಸಲೋಸುಗ) ಒಂದು ಸಣ್ಣ ನಗು ತೋರಿಸಲ್ಪಟ್ಟಿತು. ಆಗ ಆ ದೈತ್ಯನು ಅಲ್ಲಿಂದ ಮಾಯವಾದ ಮತ್ತು ಕಾಲಕ್ರಮೇಣ ಅನ್ದಂತಮಸ್ಸನ್ನು ಹೊಂದಿದ ಕೂಡಾ.

 

ತದರ್ತ್ಥಮೇವ ಹೈರಣ್ಯಃ ಪಾರ್ಶ್ವಸ್ತಸ್ಯಾಭವತ್ ಪುರಾ ।

ಕೃಷ್ಣಸ್ಯ ಪಾಣ್ಡವಾನಾಂ ಚ ಮಖಾದೇಶ್ಚ ಗುಣಾನ್ ಬಹೂನ್ ॥ ೩೦.೧೬೫ ॥

 

ವದನ್ತೋ ಭತ್ಸಯಾಞ್ಚಕ್ರುಸ್ತನ್ಮತಜ್ಞಾ ಮಧುದ್ವಿಷಃ ।

ಶ್ರಾದ್ಧಾರ್ಥಂ ಹಿ ಪಯಃ ಪೂರ್ವಂ ಜಮದಗ್ನೇರದೂಷಯತ್ ॥ ೩೦.೧೬೬ ॥

 

ನಾಕುಲೇನೈವ ರೂಪೇಣ ಕ್ರೋಧಸ್ತಂ ಪಿತರೋSಶಪನ್ ।

ಭವ ತ್ವಂ ನಕುಲಸ್ತಾವದ್ ಯಾವದ್ ಧರ್ಮ್ಮಾದಿಕಾನ್ ಸುರಾನ್  ॥ ೩೦.೧೬೭ ॥

 

ಕ್ಷೇಪ್ಸ್ಯಸೀತಿ ತಮೋ ಘೋರಂ ಭೂಯಃ ಪಾಪೇನ ಯಾತ್ವಯಮ್ ।

ಇತ್ಯಭಿಪ್ರೇತ್ಯ ತೈಃ ಶಪ್ತಸ್ತಥಾ ಕೃತ್ವಾ ತಮೋSಭ್ಯಯಾತ್ ॥ ೩೦.೧೬೮ ॥

 

ಪಾಂಡವರ ಯಾಗವನ್ನು ನಿಂದಿಸಿ ಅನ್ಧಂತಮಸ್ಸನ್ನು ಹೊಂದಲಿಕ್ಕಾಗಿಯೇ ಮುಂಗುಸಿಯ ರೂಪದಲ್ಲಿರುವ ಆ ದೈತ್ಯನ ಒಂದು ಭಾಗ ಬಂಗಾರವಾಗಿತ್ತು. ಶ್ರೀಕೃಷ್ಣನ,  ಪಾಂಡವರ ಮತ್ತು  ಯಜ್ಞದ ಅನೇಕ ಗುಣಗಳನ್ನು ಸ್ತೋತ್ರಮಾಡುತ್ತಾ, ದೈತ್ಯನ ಕುರಿತಾಗಿ ಶ್ರೀಕೃಷ್ಣನ ಅಭಿಪ್ರಾಯವನ್ನು ತಿಳಿದ ಬ್ರಾಹ್ಮಣರು ಆ ಅಸುರನನ್ನು ನಿಂದಿಸಿದರು.

(ಆ ಮುಂಗುಸಿ ರೂಪದ ದೈತ್ಯನ ಪೂರ್ವ ಕಥೆಯನ್ನು ಹೇಳುತ್ತಾರೆ-) ಹಿಂದೆ ಜಮದಗ್ನಿಯು ಶ್ರಾದ್ಧಕ್ಕೆಂದೇ ಇಟ್ಟಿರುವ ಹಾಲನ್ನು ಈ ಕ್ರೋಧನಾಮಕ ದೈತ್ಯನು ಮುಂಗುಸಿಯ ರೂಪದಿಂದ ಬಂದು ನೆಕ್ಕಿ ಅಪವಿತ್ರ ಮಾಡಿದ್ದನು. ಅಂತಹ ಕ್ರೋಧನನ್ನು ಪಿತೃದೇವತೆಗಳು ಶಪಿಸಿದರು- ‘ನೀನು ಎಲ್ಲಿಯ ತನಕ ಯಮನೇ ಮಾಡಲಾಗಿರುವ ದೇವತೆಗಳನ್ನು ನಿಂದಿಸುತ್ತೀಯೋ, ಅಲ್ಲಿಯ ತನಕ ಮುಂಗುಸಿಯಾಗಿಯೇ ಇರು’ ಎಂದು. ಅವರನ್ನು ನಿಂದಿಸಿದ ಪಾಪದಿಂದ ಅನ್ಧಂತಮಸ್ಸನ್ನು ಕುರಿತು ಹೊಗಲಿ ಎನ್ನುವ ಅಭಿಪ್ರಾಯವನ್ನು ಮನದಲ್ಲಿ ಇಟ್ಟುಕೊಂಡು ಈರೀತಿಯಾಗಿ ಅವರಿಂದ ಅವನು ಶಪಿಸಲ್ಪಟ್ಟನು. ಅದೇರೀತಿಯಾಗಿ ಮಾಡಿ ಅನ್ಧಂತಮಸ್ಸನ್ನು ಹೊಂದಿದ ಕೂಡಾ.

[ಇದು ಮಹಾಭಾರತದಲ್ಲಿಯೇ(ಆಶ್ವಮೇಧಿಕಪರ್ವ) ಇರುವ ಕಥೆ. ‘ಪಿತೄಣಾಮಭಿಷಙ್ಗಾಚ್ಚ ನಕುಲತ್ವಮುಪಾಗತಃ’ (೯೫.೧೧)  ‘ತೈಶ್ಚಾಪ್ಯುಕ್ತಃ ಕ್ಷಿಪನ್ ಧರ್ಮಂ ಶಾಪಸ್ಯಾನ್ತಮವಾಪ್ಸ್ಯಸಿ’ (೧೨)

ಪಿತೃಗಳ ಶಾಪದಿಂದ ಅವನು ಮುಂಗುಸಿಯಾಗಿ ತಿರುಗಾಡುತ್ತಿದ್ದ. ಬ್ರಾಹ್ಮಣನ ಮನೆಯಬಳಿ ತಿರುಗಾಡುತ್ತಿರುವಾಗ ಅವನ ಒಂದು ಭಾಗ ಬಂಗಾರವಾಯಿತು. ಅದಕ್ಕಾಗಿ ಅವನು ತನ್ನ ಇನ್ನೊಂದು ಭಾಗ ಬಂಗಾರವಾಗಬೇಕು ಎಂದು ಎಲ್ಲಾ ಕಡೆ ತಿರುಗಾಡಿದನು. ಆದರೆ ಏನೂ ಆಗಲಿಲ್ಲ. ಅದಕ್ಕಾಗಿ ಅವನು ತನಗೆ ಸಿಗಲಿಲ್ಲ ಎಂದು ಸಂಕುಚಿತ ಮನೋಭಾವದಿಂದ ಈ ಯಜ್ಞ ಕಳಪೆ ಎಂದು ಹೇಳಿರುವುದು. ಹೀಗಾಗಿ ಎಲ್ಲರಿಂದ ಬೈಯಲ್ಪಟ್ಟ ಅವನು ಅನ್ಧಂತಮಸ್ಸನ್ನು ಹೊಂದಿದ. ಹೀಗೆ ಪಾಂಡವರ ಯಜ್ಞ  ಸಮೃದ್ಧವಾಗಿ  ನಡೆಯಿತು.]

Mahabharata Tatparya Nirnaya Kannada 30-147-156

 

ಯಜ್ಞಾವಸಾನೇ  ನಿಖಿಲಾಶ್ಚ ಪಾಣ್ಡವಾಃ ಕೃಷ್ಣಾ ಚ ಪೃಥ್ವೀಮಖಿಲಾಂ ಸವಿತ್ತಾಮ್ ।

ಮಙ್ಗಲ್ಯಮಾತ್ರಂ ದಯಿತಾಶರೀರೇ ನಿಧಾಯ ಸರ್ವಾಭರಣಾನಿ ಚೈವ ॥ ೩೦.೧೪೭ ॥

 

ಸಮರ್ಪ್ಪಯಾಮಾಸುರಜೇ ವರೇಣ್ಯೇ ವ್ಯಾಸೇ ವಿಭಾಗಾಯ ಯಥೋಕ್ತಮೃತ್ವಿಜಾಮ್ ।

ಪ್ರಿಯೋ ವಿಭಾಗೋ ಯದಮುಷ್ಯ ವಿಷ್ಣೋರತೋ ವಿಭಾಗಾರ್ತ್ಥಮಿವಾSರ್ಪ್ಪಯಂಸ್ತೇ ॥ ೩೦.೧೪೮ ॥

 

ಹೃದಾ ಸಮಸ್ತಂ ಹರಯೇSರ್ಪ್ಪಿತಂ ತೈಃ ಸ ಹಿ ದ್ವಿಜಸ್ಥೋSಪಿ ಸಮಸ್ತಕರ್ತ್ತಾ ।

ದೇಹೇನ್ದ್ರಿಯಪ್ರಾಣಮನಾಂಸಿ ಚೇತನೈಃ ಸಹೈವ ತಸ್ಮಾ ಅತಿಸೃಜ್ಯ ನೇಮುಃ ॥ ೩೦.೧೪೯ ॥

 

ಯಜ್ಞ ಮುಗಿದೊಡನೆ ದ್ರೌಪದಿ ಸಹಿತರಾದ ಎಲ್ಲಾ ಪಾಂಡವರು, ಹಣದಿಂದ ಕೂಡಿರುವ ಎಲ್ಲಾ ಭೂಮಿಯನ್ನೂ ಕೂಡಾ ದಾನ ಮಾಡಿದರು. ಅವರು ತಮ್ಮ ಹೆಂಡದಿರ ಮೈಮೇಲೆ ಇರುವ ಮಾಂಗಲ್ಯವನ್ನು ಬಿಟ್ಟು, ಇತರ ಎಲ್ಲಾ ಆಭರಣಗಳನ್ನೂ ಕೂಡಾ ದಾನ ಮಾಡಿ ವೇದವ್ಯಾಸ ದೇವರಲ್ಲಿ ವಿಭಾಗಮಾಡಿಕೊಡುವುದಕ್ಕಾಗಿ ಸಮರ್ಪಣೆ ಮಾಡಿದರು. ಪರಮಾತ್ಮನಿಗೆ ಆ ರೀತಿಯಾಗಿ ಸಮರ್ಪಣೆ ಮಾಡುವುದು ಅತ್ಯಂತ ಪ್ರಿಯ. (ಭರತನೂ ಕೂಡಾ ಪಾದುಕೆಯ ಮುಂದೆ ಎಲ್ಲವನ್ನೂ ಇಟ್ಟು, ನೀನು ಆಜ್ಞೆ ಮಾಡಬೇಕು, ನಾನು ನಿನ್ನ ದಾಸ ಎಂದು ಹೇಳಿದ. ಯಾವುದೇ ಪದಾರ್ಥವನ್ನು ದೇವರ ಮುಂದೆ ಇಟ್ಟು, ದೇವರೇ, ನೀನು ಇದಕ್ಕೆ ಒಡೆಯ, ಇದನ್ನು ನಿನ್ನ ಪ್ರೇರಣೆಯಿಂದ ಬೇರೊಬ್ಬರಿಗೆ ಕೊಡುತ್ತಿದ್ದೇನೆ ಎಂದು ಅರ್ಪಿಸಿದರೆ, ಆಗ ಅದು ನಮ್ಮ ಮನೆಯಲ್ಲಿ ದೇವರಿದ್ದಾನೆ ಎಂದು ಮಾಡುವ ಕರ್ಮವಾಗುತ್ತದೆ.)  ಹೀಗೆ  ಪಾಂಡವರು ಎಲ್ಲವನ್ನೂ ಹೃದಯದಿಂದ ವೇದವ್ಯಾಸ ದೇವರಲ್ಲಿ ಅರ್ಪಿಸಿದರು. ಎಲ್ಲಾ ಬ್ರಾಹ್ಮಣರಲ್ಲಿ ಇರುವುದೂ ಆ ಪರಮಾತ್ಮನೇ ಆಗಿರುವುದರಿಂದ ಪಾಂಡವರು ದೇಹ, ಇಂದ್ರಿಯ, ಪ್ರಾಣ, ಮನಸ್ಸು, ಎಲ್ಲವನ್ನೂ ಕೂಡಾ ಅವನಿಗಾಗಿಯೇ ಕೊಟ್ಟು, ನಮಸ್ಕರಿಸಿದರು.

 

ತ್ವದೀಯಮೇತನ್ನಿಖಿಲಂ ವಯಂ ಚ ನಾಸ್ತ್ಯಸ್ಮದೀಯಂ ಕ್ವಚ ಕಿಞ್ಚನೇಶ ।

ಸ್ವತನ್ತ್ರ ಏಕೋSಸಿ ನ ಕಶ್ಚಿದನ್ಯಃ ಸರ್ವತ್ರ ಪೂರ್ಣ್ಣೋSಸಿ ಸದೇತಿ ಹೃಷ್ಟಾಃ ॥ ೩೦.೧೫೦ ॥

 

ಅತ್ಯಂತ ಸಂತಸದಿಂದ ಪಾಂಡವರು ‘ಇದೆಲ್ಲವೂ ನಿನ್ನದು. ಇಲ್ಲಿ ನಮ್ಮದು ಎಂದು ಯಾವುದೂ ಕೂಡಾ ಇಲ್ಲ. ನೀನು ಸ್ವತಂತ್ರನಾಗಿದ್ದೀಯ. ನಿನಗಿಂತ ಸಮರ್ಥನಾಗಿರುವವನು ಇನ್ನ್ಯಾರೂ ಇಲ್ಲ. ನೀನು ಎಲ್ಲಾ ಕಡೆಗಳಲ್ಲೂ ಯಾವಾಗಲೂ ಪೂರ್ಣನಾಗಿರುವೆ’ ಎಂದು ಹೇಳಿ ಎಲ್ಲವನ್ನೂ ಅರ್ಪಿಸಿದರು.

[‘ವನಂ ಪ್ರವೇಕ್ಷ್ಯೇ ವಿಪ್ರಾಗ್ರ್ಯಾ ವಿಭಜಧ್ವಂ ಮಹೀಮಿಮಾಮ್’ (ಆಶ್ವಮೇಧಿಕ ಪರ್ವ ೯೦.೧೨) – ಎಲ್ಲವನ್ನೂ ಅರ್ಪಿಸಿದ ಯುಧಿಷ್ಠಿರ ‘ನಾನು ಕಾಡಿಗೆ ಹೋಗುತ್ತೇನೆ’ ಎಂದು ಹೇಳಿದ]

 

ತತೋ ವಿಭಕ್ತೇ ಮುನಯೋSವದಂಸ್ತೇ ಪ್ರತ್ಯರ್ಪ್ಪಯಾಮೋ ವಯಮೇಷು ರಾಜ್ಯಮ್ ।

ಪೂರ್ಣ್ಣಾ ಹಿರಣ್ಯೇನ ವಯಂ ಧರಾಯಾಃ ಪ್ರಪಾಲನೇ ಯೋಗ್ಯತಮಾ ಇಮೇ ಹಿ ॥ ೩೦.೧೫೧ ॥

 

ತದನಂತರ ವೇದವ್ಯಾಸರು ಎಲ್ಲವನ್ನೂ ವಿಭಾಗ ಮಾಡಿ ಕೊಡುತ್ತಿರಲು ಮುನಿಗಳು ‘ನಾವು ಈ ಪಾಂಡವರಲ್ಲಿ ರಾಜ್ಯವನ್ನು ಹಿಂತಿರುಗಿ ಕೊಡುತ್ತೇವೆ. ಹಿರಣ್ಯಾದಿಗಳಿಂದಲೇ ನಾವು ತೃಪ್ತರಾಗಿದ್ದೇವೆ. ನಾವು ಭೂಮಿಯ ಆಳುವಿಕೆಯಲ್ಲಿ ಯೋಗ್ಯರಲ್ಲ. ಇವರಲ್ಲವೇ ಯೋಗ್ಯರು?’ ಎಂದು ಹೇಳಿದರು.  

 

ಪಾರ್ತ್ಥಾಃ ಸಭಾರ್ಯ್ಯಾ ದ್ವಿಜವಾಕ್ಯಮೇತನ್ನಿಶಮ್ಯ ಕೃಷ್ಣಾಯ ಪುನಃ ಪ್ರಣಮ್ಯ ।

ಊಚುಸ್ತಪೋ ನೋSಸ್ತು ವನೇSರ್ಪ್ಪಯಿತ್ವಾ ರಾಜ್ಯಂ ಮಖಾನ್ತೇ ತ್ವಯಿ ಧರ್ಮ್ಮಲಬ್ಧಮ್ ॥ ೩೦.೧೫೨ ॥

 

ಹೆಂಡಂದಿರೊಡಗೂಡಿದ ಪಾಂಡವರು ಬ್ರಾಹ್ಮಣರ ಈ ಮಾತನ್ನು ಕೇಳಿ, ವೇದವ್ಯಾಸರಿಗೆ ಮತ್ತೆ ನಮಸ್ಕರಿಸಿ ಹೇಳಿದರು- ‘ನಾವು ಕಾಡಿನಲ್ಲಿ ತಪಸ್ಸನ್ನು ಮಾಡಿಕೊಂಡು ಇರುತ್ತೇವೆ. ನಿಮ್ಮಲ್ಲಿ ಈ ರಾಜ್ಯವನ್ನು ಇಟ್ಟಿದ್ದೇವೆ. ನಾವು ಕಾಡಿಗೆ ಹೋಗುತ್ತೇವೆ’ ಎಂದು.

 

ಇತೀರಿತಃ ಪ್ರಾಹ ಸ ಬಾದರಾಯಣೋ ಮುನೀಶ್ವರೈರಪ್ಯನುಯಾಚಿತಃ ಪ್ರಭುಃ ।

ಹಿರಣ್ಯಮೇವ ಸ್ವಮಿದಂ ಮುನೀನಾಂ ಮದಾಜ್ಞಯಾ ಭುಙ್ಗ್ಧ್ವಮಶೇಷರಾಜ್ಯಮ್ ॥ ೩೦.೧೫೩ ॥

 

ಈರೀತಿಯಾಗಿ ಹೇಳಲ್ಪಟ್ಟ ವೇದವ್ಯಾಸರು, ಮುನಿಗಳಿಂದಲೂ ಕೂಡಾ ‘ಪಾಂಡವರು ಕಾಡಿಗೆ ಹೋಗದಂತೆ ತಡೆಯಿರಿ, ಅವರೇ ರಾಜ್ಯವನ್ನು ಪಾಲಿಸಲಿ’ ಎಂದು ಹೇಳಲ್ಪಟ್ಟವರಾಗಿ ಹೇಳುತ್ತಾರೆ- ‘ಮುನಿಗಳಿಗೆ ಬಂಗಾರವೇ ಅವರ ಹಣ. ನನ್ನದೇ ಆಗಿರುವ ಈ ರಾಜ್ಯವನ್ನು ನನ್ನ ಆಜ್ಞೆಯಿಂದ ನೀವು ಉಪಭೋಗಿಸಿ’ ಎಂದು.

 

[ಕೊಟ್ಟದ್ದನ್ನು  ಹಿಂದೆ ತೆಗೆದುಕೊಂಡರೆ  ದತ್ತಾಪಹಾರ ದೋಷ ಬರುತ್ತದೆ ಎಂಬ ಸಂಶಯವನ್ನು ನಿವಾರಿಸುತ್ತಾ ವೇದವ್ಯಾಸರು ಹೇಳುತ್ತಾರೆ-]

 

ಸಮರ್ಪ್ಪಿತಂ ಮೇ ಫಲವಚ್ಚ ತತ್ ಸ್ಯಾತ್ ಪುನರ್ಗ್ಗ್ರಹೋ ನೈವ ಚ ದೋಷಕಾರೀ ।

ಪಿತಾಮಹೋSಹಂ ಭವತಾಂ ವಿಶೇಷತೋ ಗುರುಃ ಪತಿಶ್ಚೈವ ತತೋ ಮದರ್ಹಥ ॥ ೩೦.೧೫೪ ॥

 

ನನಗೆ ಸಮರ್ಪಣೆ ಮಾಡಿರುವುದರಿಂದ ಇದು ಫಲವಾಗುತ್ತದೆ. ಇನ್ನು ನಾನು ನಿಮಗೆ ಕೊಡುತ್ತಿರುವುದರಿಂದ, ಅದನ್ನು ನೀವು ತೆಗೆದುಕೊಂಡರೆ ಅದು ದೋಷಕಾರಿ ಅಲ್ಲ. ಅಷ್ಟೇ ಅಲ್ಲದೇ, ನಾನು ನಿಮ್ಮೆಲ್ಲರ ಅಜ್ಜ, ವಿಶೇಷವಾಗಿ ಗುರು. ನಿಮ್ಮ ಒಡೆಯ. ಆ ಕಾರಣದಿಂದ ನನ್ನಿಂದ ಬಂದ ಸಂಪತ್ತನ್ನು ಉಪಭೋಗಿಸಲು ನೀವು ಯೋಗ್ಯರಿದ್ದೀರಿ.

 

ಇತೀರಿತಾಸ್ತೇ ಪ್ರತಿಪದ್ಯ ರಾಜ್ಯಂ ದದುರ್ಹಿರಣ್ಯಂ ನಿಖಿಲಂ ಚ ತಸ್ಮೈ ।

ವಿಭಜ್ಯ ವಿಪ್ರಾನ್ ಸ ನಿಜಂ ತು ಭಾಗಮದಾತ್ ಪೃಥಾಯೈ ನಿಖಿಲಂ ಪ್ರಸನ್ನಃ ॥ ೩೦.೧೫೫ ॥

 

ಈರೀತಿಯಾಗಿ ಹೇಳಲ್ಪಟ್ಟ ಪಾಂಡವರು ರಾಜ್ಯವನ್ನು ಹೊಂದಿ, ಎಲ್ಲಾ ದ್ರವ್ಯವನ್ನೂ ಕೂಡಾ ವೇದವ್ಯಾಸರಿಗೆ ಅರ್ಪಿಸಿದರು. ವೇದವ್ಯಾಸರು ಅದನ್ನು ಬ್ರಾಹ್ಮಣರಿಗೆ ವಿಭಾಗಮಾಡಿ ಕೊಟ್ಟು, ತನ್ನದಾದ ಭಾಗವನ್ನು ಕುಂತಿಗೆ ನೀಡಿದರು.

 

ಸಭಾರ್ಯ್ಯಕಾಣಾಂ ವರರತ್ನಭೂಷಣಾನ್ಯಶೇಷತಃ ಪುತ್ರಭುವಾಂ ಪ್ರದಾಯ ।

ಪೃಥಕ್ಪೃಥಗ್ ಯೋಗ್ಯವರಾನಥೈಭ್ಯಃ ಪ್ರಾದಾತ್ ಪ್ರಭುಸ್ತೇ ಮುದಿತಾಃ ಪ್ರಣೇಮುಃ ॥ ೩೦.೧೫೬ ॥

 

ಆನಂತರ ವೇದವ್ಯಾಸರು ಹೆಂಡಂದಿರಿಂದ ಸಹಿತರಾದ ತನ್ನ ಮೊಮ್ಮೊಕ್ಕಳಾಗಿರುವ ಪಾಂಡವರಿಗೆ ಆಭರಣ ಮೊದಲಾದವುಗಳನ್ನು ಕೊಟ್ಟು, ಅವರಿಗೆ ಯೋಗ್ಯವಾಗಿರುವ ವರವನ್ನು, ಪ್ರತ್ಯೇಕ ಪ್ರತ್ಯೇಕವಾಗಿ ಕೊಟ್ಟರು. ಸಂತುಷ್ಟರಾದ ಪಾಂಡವರು ಸಂತಸಗೊಂಡು ನಮಸ್ಕಾರ ಮಾಡಿದರು.