ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, September 25, 2023

Mahabharata Tatparya Nirnaya Kannada 30-169-179

 ಯದ್ಯಪ್ಯಲ್ಪಧನತ್ಯಕ್ತಂ ವಿತ್ತಂ ಬಹುಫಲಂ ಭವೇತ್ ।

ತಥಾSಪ್ಯನನ್ತಫಲದಾಃ ಕರ್ತ್ತುರೇವ ಮಹಾಗುಣಾಃ ॥ ೩೦.೧೬೯ ॥

 

ಅತ್ಯಂತ ಅಲ್ಪವಾಗಿರುವ ದ್ರವ್ಯವುಳ್ಳ ಬಡವನಿಂದ ಕೊಡಲ್ಪಟ್ಟ ದಾನವು ಬಹಳ ಫಲವನ್ನು ಕೊಡುತ್ತದೆ ಎನ್ನುವುದು ನಿಜವಾದರೂ ಕೂಡಾ, ಕರ್ತೃವಿನ ಜ್ಞಾನಾದಿ ಗುಣಗಳೇ ಮಹಾಫಲವನ್ನು ತಂದು ಕೊಡುವಂತಹದ್ದು.  

 

ಸತಾಂ ಪ್ರೀತಿಶ್ಚ ತತ್ರಾಪಿ ಸದ್ವರೋ ಹರಿರೇವ ಹಿ ।

ಪಾರ್ತ್ಥೇಭ್ಯೋSಭ್ಯಧಿಕಃ ಕರ್ತ್ತಾ ಸಮೋ ವಾ ಕೋ ಗುಣೈರ್ಭವೇತ್ ॥ ೩೦.೧೭೦ ॥

 

ಸಜ್ಜನರ ಪ್ರೀತಿಯೂ ಕೂಡಾ ಅನಂತ ಫಲವನ್ನು ಕೊಡುತ್ತದೆ. ಸಜ್ಜನರಲ್ಲಿ ಅಗ್ರಗಣ್ಯ ಶ್ರೀಮನ್ನಾರಾಯಣನೇ. ಜ್ಞಾನ-ಭಕ್ತಿ ಇತ್ಯಾದಿ ಮಹಾಗುಣಗಳಿರುವವರಲ್ಲಿ ಪಾಂಡವರನ್ನು ಮೀರಿಸುವವರಾಗಲೀ ಅಥವಾ ಅವರಿಗೆ ಸಮನಾದ  ಕರ್ತೃ  ಯಾರಿದ್ದಾರೆ? (ಯಾರೂ ಇಲ್ಲ).

 

ಸತಾಂ ಚ ಪ್ರವರೋ ವಿಷ್ಣುಃ ಸದ್ಭಿರ್ಮ್ಮುನಿವರೈರ್ಯ್ಯುತಃ ।

ಪ್ರತ್ಯಕ್ಷತಃ ಕಾರಯತಿ ಪಾರ್ತ್ಥೈಃ ಪ್ರಿಯತಮೈಶ್ಚ ತೈಃ ॥ ೩೦.೧೭೧ ॥

 

ಯಂ ಮಖಪ್ರವರಂ ತಸ್ಯ ಸಮಂ ಕಿಂ ಶುಭಸಾಧನಮ್ ।

ಪಠನ್ತಿ ಪೈಙ್ಗಿನಶ್ಚೈತಾನ್ ಮನ್ತ್ರಾನನ್ವರ್ತ್ಥಕಾನಿಹ ॥ ೩೦.೧೭೨ ॥

 

ಸಜ್ಜನರಲ್ಲಿಯೇ ಶ್ರೇಷ್ಠನಾದ ವಿಷ್ಣುವು, ಸಜ್ಜನರಾದ ಮುನಿಶ್ರೇಷ್ಠರಿಂದ ಕೂಡಿಕೊಂಡು(ಉಳಿದ ಎಲ್ಲಾ ಸಜ್ಜನರ ಸಾಕ್ಷಿಯಿಂದ) ತನಗೆ ಅತ್ಯಂತ ಪ್ರಿಯರಾದ ಪಾಂಡವರಿಂದ, ಪ್ರತ್ಯಕ್ಷವಾಗಿ ತಾನೇ ನಿಂತು ಶ್ರೇಷ್ಠವಾದ ಯಜ್ಞವನ್ನು ಮಾಡಿಸಿದ್ದಾನೆ. ಆದ್ದರಿಂದ ಈ ಯಜ್ಞಕ್ಕೆ ಎಣೆಯಾಗಿರುವ ಪುಣ್ಯಸಾಧನವು ಯಾವುದಿದೆ? (ಯಾವುದೂ ಇಲ್ಲ). ಪೈಙ್ಗಿ ಶ್ರುತಿಯನ್ನು ಅಭ್ಯಾಸ ಮಾಡುವವರು ಈ ಕುರಿತಾದ ಅತ್ಯಂತ ಅನ್ವರ್ತಕವಾದ ಮಂತ್ರಗಳನ್ನು ಹೀಗೆ ಹೇಳುತ್ತಾರೆ-

 

‘ಅವೈಷ್ಣವಕೃತಂ ಕರ್ಮ್ಮ ಸರ್ವಮನ್ತವದುಚ್ಯತೇ ।

‘ಅನನ್ತಂ ವೈಷ್ಣವಕೃತಂ ತತ್ರ ವರ್ಣ್ಣಕ್ರಮಾತ್ ಪರಮ್ ॥ ೩೦.೧೭೩ ॥

 

‘ವೈಷ್ಣವೇಷ್ವಪಿ ಮರ್ತ್ತ್ಯೈರ್ಯ್ಯತ್ ಕೃತಂ ಶತಗುಣಂ ತತಃ ।

‘ಗಾನ್ಧರ್ವಂ ಕರ್ಮ್ಮ ತಸ್ಮಾಚ್ಚ ಮುನಿಭಿಃ  ಪಿತೃಭಿಸ್ತತಃ ॥ ೩೦.೧೭೪ ॥

 

‘ದೇವಶಕ್ರಶಿವಬ್ರಹ್ಮಕೃತಂ ತಸ್ಮಾತ್ ಕ್ರಮೇಣ ಚ ।

‘ಶತೋತ್ತರಮಿತಿ ಜ್ಞೇಯಂ ನಾನ್ಯದ್ ಬ್ರಹ್ಮಕೃತೋಪಮಮ್ ॥ ೩೦.೧೭೫ ॥

 

‘ವೈಷ್ಣವತ್ವಂ ಕ್ರಮೋದ್ವೃದ್ಧಂ ಬ್ರಹ್ಮಾನ್ತಂ ಜೀವರಾಶಿಷು ।

‘ಫಲಾಧಿಕ್ಯಂ ಕರ್ಮ್ಮಣಾಂ ಹಿ ವಿಷ್ಣೋಃ ಪ್ರೀತ್ಯೈವ ನಾನ್ಯಥಾ ’ ॥ ೩೦.೧೭೬ ॥

 

ಯಾರು ವಿಷ್ಣುಭಕ್ತರಲ್ಲವೋ, ಅವರಿಂದ ಮಾಡಲ್ಪಟ್ಟ ಎಲ್ಲಾ ಕರ್ಮವೂ ಕೂಡಾ ಅಲ್ಪಫಲವುಳ್ಳದ್ದಾಗಿದೆ. (ಅದರ ಶ್ರೇಯಸ್ಸು-ಯಶಸ್ಸು ಮುಗಿದುಹೋಗುತ್ತದೆ). ವೈಷ್ಣವರಿಂದ ಮಾಡಲ್ಪಟ್ಟ ಕರ್ಮವು ಅನಂತ ಫಲವುಳ್ಳದ್ದಾಗಿದೆ ಮತ್ತು ಅದರ ಉತ್ತಮತ್ವವು ಬ್ರಾಹ್ಮಣಾದಿ ವರ್ಣಕ್ರಮದಲ್ಲಿರುತ್ತದೆ.

ವೈಷ್ಣವರಲ್ಲಿಯೂ ಕೂಡಾ, ಮನುಷ್ಯರು ಮಾಡಿದ ಕರ್ಮಕ್ಕಿಂತಲೂ ಗಂಧರ್ವರು ಮಾಡಿದ ಕರ್ಮ ಶತಗುಣ ಅಧಿಕವಾಗಿರುತ್ತದೆ. ಗಂಧರ್ವರ ಕರ್ಮಕ್ಕಿಂತ ಪಿತೃಗಳ ಕರ್ಮ ಶತಗುಣ ಅಧಿಕ. ಅದೇ ರೀತಿ  ಮುನಿಗಳು, ದೇವತೆಗಳು, ಇಂದ್ರ, ಶಿವ, ಹಾಗು ಬ್ರಹ್ಮ, ಈ ಪ್ರತಿಯೊಬ್ಬರ ಕರ್ಮವೂ ಇದೇ ಕ್ರಮದಲ್ಲಿ ನೂರು-ನೂರು ಪಟ್ಟು ಅಧಿಕವಾಗಿರುತ್ತದೆ.  ಬ್ರಹ್ಮನಿಗೆ ಎಣೆಯಾಗಿ ಯಾರೂ ಕೂಡಾ ಯಾವ ಕರ್ಮವನ್ನೂ ಮಾಡಲು ಸಾಧ್ಯವಿಲ್ಲ. ವಿಷ್ಣುಭಕ್ತಿ ಎನ್ನುವುದು ಬ್ರಹ್ಮನ ತನಕ ಕ್ರಮವಾಗಿ ಹೆಚ್ಚಾಗುತ್ತಾ ಬರುತ್ತದೆ. ಕರ್ಮಗಳ ಅಧಿಕಫಲಪ್ರದತ್ವವು ನಾರಾಯಣನ ಪ್ರೀತಿಯಿಂದಲೇ ಹೊರತು ಬೇರೆರೀತಿಯಾಗಿ ಇಲ್ಲ.

 

ಇತಿ ತೇನ ನ ಪಾರ್ತ್ಥಾನಾಂ ಕರ್ಮ್ಮಣಾSನ್ಯತ್  ಸಮಂ ಕ್ವಚಿತ್ ।

ಗುಣೈರ್ಜ್ಞಾನಾದಿಭಿರ್ವಾSಪಿ ತಸ್ಮಾತ್ ಕ್ರೋಧಃ ಸ ತಾಮಸಃ ।

ವಿನಿನ್ದ್ಯ ತಾನ್ ಸುಸತ್ತ್ವಸ್ಥಾಂಸ್ತಮೋSನ್ಧಮುಪಜಗ್ಮಿವಾನ್ ॥ ೩೦.೧೭೭ ॥

 

ಈ ರೀತಿ ಇರುವುದರಿಂದ ಗುಣದಿಂದಾಗಲೀ, ಜ್ಞಾನಾದಿಗಳಿಂದಾಗಲೀ. ಪಾಂಡವರ ಕರ್ಮಕ್ಕಿಂತ ಮಿಗಿಲಾದ ಅಥವಾ ಸಮನಾದ ಇನ್ನೊಂದು ಕರ್ಮವೇ ಇಲ್ಲ.  ಆ ಕಾರಣದಿಂದ ತಮೋಗುಣದ ಆ ಕ್ರೋಧನು ಅತ್ಯಂತ ಸಾತ್ವಿಕರಾಗಿರುವ ಪಾಂಡವರನ್ನು ನಿಂದಿಸಿ, ಅನ್ಧಂತಮಸ್ಸನ್ನು ಹೊಂದಿದನು.

 

ಅಥ ಪೃಷ್ಟೋ ವಾಸುದೇವಃ ಸುರವಿಪ್ರಾದಿಸಂಸದಿ ।

ಯುಧಿಷ್ಠಿರೇಣ ಸಂಹೃಷ್ಟೋ ಜಗಾದಾಶೇಷತಃ ಪ್ರಭುಃ ॥ ೩೦.೧೭೮ ॥

 

ಆನಂತರ ದೇವತೆಗಳು, ಬ್ರಾಹ್ಮಣರು, ಮೊದಲಾದವರು ಸೇರಿರುವ ಸಭೆಯಲ್ಲಿ, ಯುಧಿಷ್ಠಿರನಿಂದ ಕೇಳಲ್ಪಟ್ಟ ಶ್ರೀಕೃಷ್ಣನು, ಸಮಗ್ರವಾದ ಧರ್ಮಾದಿಗಳನ್ನು ಹೇಳಿದನು. (ವೈಷ್ಣವಧರ್ಮಪರ್ವ ಎಂದು ಆಶ್ವಮೇಧಿಕ ಪರ್ವದ ಕೊನೆಯಲ್ಲಿ ಈ ವಿವರಣೆಯನ್ನು ಕಾಣಬಹುದು)

 

ತೇ ಚ ಶ್ರುತ್ವಾSಖಿಲಾನ್ ಧರ್ಮ್ಮಾನ್ ಭಕ್ತ್ಯಾ ಪರಮಯಾ ಯುತಾಃ ।

ಪೂಜಯನ್ತೋ ಜಗನ್ನಾಥಮಾಪುಶ್ಚ ಪರಮಾಂ ಮುದಮ್ ॥ ೩೦.೧೭೯ ॥

 

ಉತ್ಕೃಷ್ಟವಾದ ಭಕ್ತಿಯಿಂದ ಕೂಡಿದ ಆ ಪಾಂಡವರು ಶ್ರೀಕೃಷ್ಣ ಹೇಳಿದ ಎಲ್ಲಾ ಧರ್ಮಗಳನ್ನೂ ಕೇಳಿ, ನಾರಾಯಣನನ್ನು ಪೂಜಿಸುತ್ತಾ, ಉತ್ಕೃಷ್ಟವಾದ ಆನಂದವನ್ನು ಹೊಂದಿದರು.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಯಾಗಸಮಾಪ್ತಿರ್ನ್ನಾಮ ತ್ರಿಂಶೋSದ್ಧ್ಯಾಯಃ ॥

[ ಆದಿತಃ ಶ್ಲೋಕಾಃ ೪೭೪೫+೧೭೯=೪೯೨೪ ]


No comments:

Post a Comment