ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 24, 2023

Mahabharata Tatparya Nirnaya Kannada 30-147-156

 

ಯಜ್ಞಾವಸಾನೇ  ನಿಖಿಲಾಶ್ಚ ಪಾಣ್ಡವಾಃ ಕೃಷ್ಣಾ ಚ ಪೃಥ್ವೀಮಖಿಲಾಂ ಸವಿತ್ತಾಮ್ ।

ಮಙ್ಗಲ್ಯಮಾತ್ರಂ ದಯಿತಾಶರೀರೇ ನಿಧಾಯ ಸರ್ವಾಭರಣಾನಿ ಚೈವ ॥ ೩೦.೧೪೭ ॥

 

ಸಮರ್ಪ್ಪಯಾಮಾಸುರಜೇ ವರೇಣ್ಯೇ ವ್ಯಾಸೇ ವಿಭಾಗಾಯ ಯಥೋಕ್ತಮೃತ್ವಿಜಾಮ್ ।

ಪ್ರಿಯೋ ವಿಭಾಗೋ ಯದಮುಷ್ಯ ವಿಷ್ಣೋರತೋ ವಿಭಾಗಾರ್ತ್ಥಮಿವಾSರ್ಪ್ಪಯಂಸ್ತೇ ॥ ೩೦.೧೪೮ ॥

 

ಹೃದಾ ಸಮಸ್ತಂ ಹರಯೇSರ್ಪ್ಪಿತಂ ತೈಃ ಸ ಹಿ ದ್ವಿಜಸ್ಥೋSಪಿ ಸಮಸ್ತಕರ್ತ್ತಾ ।

ದೇಹೇನ್ದ್ರಿಯಪ್ರಾಣಮನಾಂಸಿ ಚೇತನೈಃ ಸಹೈವ ತಸ್ಮಾ ಅತಿಸೃಜ್ಯ ನೇಮುಃ ॥ ೩೦.೧೪೯ ॥

 

ಯಜ್ಞ ಮುಗಿದೊಡನೆ ದ್ರೌಪದಿ ಸಹಿತರಾದ ಎಲ್ಲಾ ಪಾಂಡವರು, ಹಣದಿಂದ ಕೂಡಿರುವ ಎಲ್ಲಾ ಭೂಮಿಯನ್ನೂ ಕೂಡಾ ದಾನ ಮಾಡಿದರು. ಅವರು ತಮ್ಮ ಹೆಂಡದಿರ ಮೈಮೇಲೆ ಇರುವ ಮಾಂಗಲ್ಯವನ್ನು ಬಿಟ್ಟು, ಇತರ ಎಲ್ಲಾ ಆಭರಣಗಳನ್ನೂ ಕೂಡಾ ದಾನ ಮಾಡಿ ವೇದವ್ಯಾಸ ದೇವರಲ್ಲಿ ವಿಭಾಗಮಾಡಿಕೊಡುವುದಕ್ಕಾಗಿ ಸಮರ್ಪಣೆ ಮಾಡಿದರು. ಪರಮಾತ್ಮನಿಗೆ ಆ ರೀತಿಯಾಗಿ ಸಮರ್ಪಣೆ ಮಾಡುವುದು ಅತ್ಯಂತ ಪ್ರಿಯ. (ಭರತನೂ ಕೂಡಾ ಪಾದುಕೆಯ ಮುಂದೆ ಎಲ್ಲವನ್ನೂ ಇಟ್ಟು, ನೀನು ಆಜ್ಞೆ ಮಾಡಬೇಕು, ನಾನು ನಿನ್ನ ದಾಸ ಎಂದು ಹೇಳಿದ. ಯಾವುದೇ ಪದಾರ್ಥವನ್ನು ದೇವರ ಮುಂದೆ ಇಟ್ಟು, ದೇವರೇ, ನೀನು ಇದಕ್ಕೆ ಒಡೆಯ, ಇದನ್ನು ನಿನ್ನ ಪ್ರೇರಣೆಯಿಂದ ಬೇರೊಬ್ಬರಿಗೆ ಕೊಡುತ್ತಿದ್ದೇನೆ ಎಂದು ಅರ್ಪಿಸಿದರೆ, ಆಗ ಅದು ನಮ್ಮ ಮನೆಯಲ್ಲಿ ದೇವರಿದ್ದಾನೆ ಎಂದು ಮಾಡುವ ಕರ್ಮವಾಗುತ್ತದೆ.)  ಹೀಗೆ  ಪಾಂಡವರು ಎಲ್ಲವನ್ನೂ ಹೃದಯದಿಂದ ವೇದವ್ಯಾಸ ದೇವರಲ್ಲಿ ಅರ್ಪಿಸಿದರು. ಎಲ್ಲಾ ಬ್ರಾಹ್ಮಣರಲ್ಲಿ ಇರುವುದೂ ಆ ಪರಮಾತ್ಮನೇ ಆಗಿರುವುದರಿಂದ ಪಾಂಡವರು ದೇಹ, ಇಂದ್ರಿಯ, ಪ್ರಾಣ, ಮನಸ್ಸು, ಎಲ್ಲವನ್ನೂ ಕೂಡಾ ಅವನಿಗಾಗಿಯೇ ಕೊಟ್ಟು, ನಮಸ್ಕರಿಸಿದರು.

 

ತ್ವದೀಯಮೇತನ್ನಿಖಿಲಂ ವಯಂ ಚ ನಾಸ್ತ್ಯಸ್ಮದೀಯಂ ಕ್ವಚ ಕಿಞ್ಚನೇಶ ।

ಸ್ವತನ್ತ್ರ ಏಕೋSಸಿ ನ ಕಶ್ಚಿದನ್ಯಃ ಸರ್ವತ್ರ ಪೂರ್ಣ್ಣೋSಸಿ ಸದೇತಿ ಹೃಷ್ಟಾಃ ॥ ೩೦.೧೫೦ ॥

 

ಅತ್ಯಂತ ಸಂತಸದಿಂದ ಪಾಂಡವರು ‘ಇದೆಲ್ಲವೂ ನಿನ್ನದು. ಇಲ್ಲಿ ನಮ್ಮದು ಎಂದು ಯಾವುದೂ ಕೂಡಾ ಇಲ್ಲ. ನೀನು ಸ್ವತಂತ್ರನಾಗಿದ್ದೀಯ. ನಿನಗಿಂತ ಸಮರ್ಥನಾಗಿರುವವನು ಇನ್ನ್ಯಾರೂ ಇಲ್ಲ. ನೀನು ಎಲ್ಲಾ ಕಡೆಗಳಲ್ಲೂ ಯಾವಾಗಲೂ ಪೂರ್ಣನಾಗಿರುವೆ’ ಎಂದು ಹೇಳಿ ಎಲ್ಲವನ್ನೂ ಅರ್ಪಿಸಿದರು.

[‘ವನಂ ಪ್ರವೇಕ್ಷ್ಯೇ ವಿಪ್ರಾಗ್ರ್ಯಾ ವಿಭಜಧ್ವಂ ಮಹೀಮಿಮಾಮ್’ (ಆಶ್ವಮೇಧಿಕ ಪರ್ವ ೯೦.೧೨) – ಎಲ್ಲವನ್ನೂ ಅರ್ಪಿಸಿದ ಯುಧಿಷ್ಠಿರ ‘ನಾನು ಕಾಡಿಗೆ ಹೋಗುತ್ತೇನೆ’ ಎಂದು ಹೇಳಿದ]

 

ತತೋ ವಿಭಕ್ತೇ ಮುನಯೋSವದಂಸ್ತೇ ಪ್ರತ್ಯರ್ಪ್ಪಯಾಮೋ ವಯಮೇಷು ರಾಜ್ಯಮ್ ।

ಪೂರ್ಣ್ಣಾ ಹಿರಣ್ಯೇನ ವಯಂ ಧರಾಯಾಃ ಪ್ರಪಾಲನೇ ಯೋಗ್ಯತಮಾ ಇಮೇ ಹಿ ॥ ೩೦.೧೫೧ ॥

 

ತದನಂತರ ವೇದವ್ಯಾಸರು ಎಲ್ಲವನ್ನೂ ವಿಭಾಗ ಮಾಡಿ ಕೊಡುತ್ತಿರಲು ಮುನಿಗಳು ‘ನಾವು ಈ ಪಾಂಡವರಲ್ಲಿ ರಾಜ್ಯವನ್ನು ಹಿಂತಿರುಗಿ ಕೊಡುತ್ತೇವೆ. ಹಿರಣ್ಯಾದಿಗಳಿಂದಲೇ ನಾವು ತೃಪ್ತರಾಗಿದ್ದೇವೆ. ನಾವು ಭೂಮಿಯ ಆಳುವಿಕೆಯಲ್ಲಿ ಯೋಗ್ಯರಲ್ಲ. ಇವರಲ್ಲವೇ ಯೋಗ್ಯರು?’ ಎಂದು ಹೇಳಿದರು.  

 

ಪಾರ್ತ್ಥಾಃ ಸಭಾರ್ಯ್ಯಾ ದ್ವಿಜವಾಕ್ಯಮೇತನ್ನಿಶಮ್ಯ ಕೃಷ್ಣಾಯ ಪುನಃ ಪ್ರಣಮ್ಯ ।

ಊಚುಸ್ತಪೋ ನೋSಸ್ತು ವನೇSರ್ಪ್ಪಯಿತ್ವಾ ರಾಜ್ಯಂ ಮಖಾನ್ತೇ ತ್ವಯಿ ಧರ್ಮ್ಮಲಬ್ಧಮ್ ॥ ೩೦.೧೫೨ ॥

 

ಹೆಂಡಂದಿರೊಡಗೂಡಿದ ಪಾಂಡವರು ಬ್ರಾಹ್ಮಣರ ಈ ಮಾತನ್ನು ಕೇಳಿ, ವೇದವ್ಯಾಸರಿಗೆ ಮತ್ತೆ ನಮಸ್ಕರಿಸಿ ಹೇಳಿದರು- ‘ನಾವು ಕಾಡಿನಲ್ಲಿ ತಪಸ್ಸನ್ನು ಮಾಡಿಕೊಂಡು ಇರುತ್ತೇವೆ. ನಿಮ್ಮಲ್ಲಿ ಈ ರಾಜ್ಯವನ್ನು ಇಟ್ಟಿದ್ದೇವೆ. ನಾವು ಕಾಡಿಗೆ ಹೋಗುತ್ತೇವೆ’ ಎಂದು.

 

ಇತೀರಿತಃ ಪ್ರಾಹ ಸ ಬಾದರಾಯಣೋ ಮುನೀಶ್ವರೈರಪ್ಯನುಯಾಚಿತಃ ಪ್ರಭುಃ ।

ಹಿರಣ್ಯಮೇವ ಸ್ವಮಿದಂ ಮುನೀನಾಂ ಮದಾಜ್ಞಯಾ ಭುಙ್ಗ್ಧ್ವಮಶೇಷರಾಜ್ಯಮ್ ॥ ೩೦.೧೫೩ ॥

 

ಈರೀತಿಯಾಗಿ ಹೇಳಲ್ಪಟ್ಟ ವೇದವ್ಯಾಸರು, ಮುನಿಗಳಿಂದಲೂ ಕೂಡಾ ‘ಪಾಂಡವರು ಕಾಡಿಗೆ ಹೋಗದಂತೆ ತಡೆಯಿರಿ, ಅವರೇ ರಾಜ್ಯವನ್ನು ಪಾಲಿಸಲಿ’ ಎಂದು ಹೇಳಲ್ಪಟ್ಟವರಾಗಿ ಹೇಳುತ್ತಾರೆ- ‘ಮುನಿಗಳಿಗೆ ಬಂಗಾರವೇ ಅವರ ಹಣ. ನನ್ನದೇ ಆಗಿರುವ ಈ ರಾಜ್ಯವನ್ನು ನನ್ನ ಆಜ್ಞೆಯಿಂದ ನೀವು ಉಪಭೋಗಿಸಿ’ ಎಂದು.

 

[ಕೊಟ್ಟದ್ದನ್ನು  ಹಿಂದೆ ತೆಗೆದುಕೊಂಡರೆ  ದತ್ತಾಪಹಾರ ದೋಷ ಬರುತ್ತದೆ ಎಂಬ ಸಂಶಯವನ್ನು ನಿವಾರಿಸುತ್ತಾ ವೇದವ್ಯಾಸರು ಹೇಳುತ್ತಾರೆ-]

 

ಸಮರ್ಪ್ಪಿತಂ ಮೇ ಫಲವಚ್ಚ ತತ್ ಸ್ಯಾತ್ ಪುನರ್ಗ್ಗ್ರಹೋ ನೈವ ಚ ದೋಷಕಾರೀ ।

ಪಿತಾಮಹೋSಹಂ ಭವತಾಂ ವಿಶೇಷತೋ ಗುರುಃ ಪತಿಶ್ಚೈವ ತತೋ ಮದರ್ಹಥ ॥ ೩೦.೧೫೪ ॥

 

ನನಗೆ ಸಮರ್ಪಣೆ ಮಾಡಿರುವುದರಿಂದ ಇದು ಫಲವಾಗುತ್ತದೆ. ಇನ್ನು ನಾನು ನಿಮಗೆ ಕೊಡುತ್ತಿರುವುದರಿಂದ, ಅದನ್ನು ನೀವು ತೆಗೆದುಕೊಂಡರೆ ಅದು ದೋಷಕಾರಿ ಅಲ್ಲ. ಅಷ್ಟೇ ಅಲ್ಲದೇ, ನಾನು ನಿಮ್ಮೆಲ್ಲರ ಅಜ್ಜ, ವಿಶೇಷವಾಗಿ ಗುರು. ನಿಮ್ಮ ಒಡೆಯ. ಆ ಕಾರಣದಿಂದ ನನ್ನಿಂದ ಬಂದ ಸಂಪತ್ತನ್ನು ಉಪಭೋಗಿಸಲು ನೀವು ಯೋಗ್ಯರಿದ್ದೀರಿ.

 

ಇತೀರಿತಾಸ್ತೇ ಪ್ರತಿಪದ್ಯ ರಾಜ್ಯಂ ದದುರ್ಹಿರಣ್ಯಂ ನಿಖಿಲಂ ಚ ತಸ್ಮೈ ।

ವಿಭಜ್ಯ ವಿಪ್ರಾನ್ ಸ ನಿಜಂ ತು ಭಾಗಮದಾತ್ ಪೃಥಾಯೈ ನಿಖಿಲಂ ಪ್ರಸನ್ನಃ ॥ ೩೦.೧೫೫ ॥

 

ಈರೀತಿಯಾಗಿ ಹೇಳಲ್ಪಟ್ಟ ಪಾಂಡವರು ರಾಜ್ಯವನ್ನು ಹೊಂದಿ, ಎಲ್ಲಾ ದ್ರವ್ಯವನ್ನೂ ಕೂಡಾ ವೇದವ್ಯಾಸರಿಗೆ ಅರ್ಪಿಸಿದರು. ವೇದವ್ಯಾಸರು ಅದನ್ನು ಬ್ರಾಹ್ಮಣರಿಗೆ ವಿಭಾಗಮಾಡಿ ಕೊಟ್ಟು, ತನ್ನದಾದ ಭಾಗವನ್ನು ಕುಂತಿಗೆ ನೀಡಿದರು.

 

ಸಭಾರ್ಯ್ಯಕಾಣಾಂ ವರರತ್ನಭೂಷಣಾನ್ಯಶೇಷತಃ ಪುತ್ರಭುವಾಂ ಪ್ರದಾಯ ।

ಪೃಥಕ್ಪೃಥಗ್ ಯೋಗ್ಯವರಾನಥೈಭ್ಯಃ ಪ್ರಾದಾತ್ ಪ್ರಭುಸ್ತೇ ಮುದಿತಾಃ ಪ್ರಣೇಮುಃ ॥ ೩೦.೧೫೬ ॥

 

ಆನಂತರ ವೇದವ್ಯಾಸರು ಹೆಂಡಂದಿರಿಂದ ಸಹಿತರಾದ ತನ್ನ ಮೊಮ್ಮೊಕ್ಕಳಾಗಿರುವ ಪಾಂಡವರಿಗೆ ಆಭರಣ ಮೊದಲಾದವುಗಳನ್ನು ಕೊಟ್ಟು, ಅವರಿಗೆ ಯೋಗ್ಯವಾಗಿರುವ ವರವನ್ನು, ಪ್ರತ್ಯೇಕ ಪ್ರತ್ಯೇಕವಾಗಿ ಕೊಟ್ಟರು. ಸಂತುಷ್ಟರಾದ ಪಾಂಡವರು ಸಂತಸಗೊಂಡು ನಮಸ್ಕಾರ ಮಾಡಿದರು.

No comments:

Post a Comment