ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 12, 2023

Mahabharata Tatparya Nirnaya Kannada 30-101-106

 

ಮಣಲೂರಂ ಕ್ರಮಾತ್ ಪ್ರಾಪ್ತಸ್ತತ್ರೈನಂ ಬಭ್ರುವಾಹನಃ ।

ಅಭ್ಯಯಾದರ್ಘ್ಯಪಾದ್ಯಾದ್ಯೈಸ್ತಮಾಹ ವಿಜಯಃ ಸುತಮ್ ॥ ೩೦.೧೦೧ ॥

 

ದಿಗ್ವಿಜಯದ ಕ್ರಮದಲ್ಲಿ ಸಂಚರಿಸುತ್ತಾ ಅರ್ಜುನನು ಮಣಲೂರ ಪ್ರದೇಶಕ್ಕೆ ಬಂದನು. ಅಲ್ಲಿ (ಅರ್ಜುನನಿಂದ ಚಿತ್ರಾಂಗದೆಯಲ್ಲಿ ಪುತ್ರಿಕಾಪುತ್ರ ಧರ್ಮದಲ್ಲಿ ಹುಟ್ಟಿದ) ಬಭ್ರುವಾಹನನು ಅವನನ್ನು ಅರ್ಘ್ಯ, ಪಾದ್ಯ, ಇತ್ಯಾದಿಗಳಿಂದ ಪೂಜಿಸಲೆಂದು ಬಂದನು. ಆಗ ಅರ್ಜುನನು ಅವನಿಗೆ ಹೀಗೆ ಹೇಳಿದನು-

 

ಯೋದ್ಧುಕಾಮೋSರ್ಘ್ಯಮಾದಾಯ ತ್ವಯಾSದ್ಯಾಭಿಗತೋ ಹ್ಯಹಮ್ ।

ನ ಪ್ರೀಯೇ ಪೌರುಷಂ ಧಿಕ್ ತೇ ಯನ್ಮೇದ್ಧ್ಯಾಶ್ವೋ ನ ವಾರಿತಃ ॥ ೩೦.೧೦೨ ॥

 

ನಾನು ಯುದ್ಧಮಾಡಲು ಬಯಸಿ ಬಂದರೆ ನೀನು ನನ್ನನ್ನು ಅರ್ಘ್ಯದಿಂದ ಸ್ವಾಗತಿಸುತ್ತಿರುವೆ. ನಿನ್ನ ಬಗೆಗೆ ನನಗೆ ಸಂತೋಷವಿಲ್ಲ. ಯಾವ ಕಾರಣದಿಂದ ನಿನ್ನಿಂದ ಅಶ್ವಮೇಧದ ಕುದುರೆಯು ತಡೆಯಲಿಲ್ಲವೋ, ಆ ಕಾರಣದಿಂದ ನಿನ್ನ ಪೌರುಷಕ್ಕೆ ಧಿಕ್ಕಾರವಿರಲಿ.

 

ತದಾSಪಿ ಪಿತೃಭಕ್ತ್ಯೈನಮಯುದ್ಧ್ಯನ್ತಮುಲೂಪಿಕಾ ।

ಪ್ರಾಹ ಯುದ್ಧ್ಯಸ್ವ ಯತ್ ಪ್ರೀತ್ಯೈ ಗುರೋಃ ಕಾರ್ಯ್ಯಮಸಂಶಯಮ್ ॥ ೩೦.೧೦೩ ॥

 

ಆಗಲೂ, ತಂದೆಯ ಮೇಲಿನ ಭಕ್ತಿಯಿಂದ ಯುದ್ಧ ಮಾಡದ ಬಭ್ರುವಾಹನನನ್ನು ಕುರಿತು ನಾಗಕನ್ನಿಕೆಯಾದ ಉಲೂಪಿಕೆಯು ‘ನಿನ್ನ ಅಪ್ಪನ ಸಂತೋಷಕ್ಕಾಗಿ  ನೀನು ಯುದ್ಧವನ್ನು ಮಾಡಲೇಬೇಕು’ ಎಂದು ಹೇಳುತ್ತಾಳೆ.  

 

ಪ್ರೀಣನಾಯೈವ ಯುದ್ಧ್ಯಸ್ವ ಪಿತ್ರೇ ಸನ್ದರ್ಶಯನ್ ಬಲಮ್ ।

ಇತ್ಯುಕ್ತೋ ಯುಯುಧೇ ಪಿತ್ರಾ ಬಲಂ ಸರ್ವಂ ಪ್ರದರ್ಶಯನ್ ॥ ೩೦.೧೦೪ ॥

 

‘ನಿನ್ನ ತಂದೆಯನ್ನು ಪ್ರೀತಿಗೊಳಿಸಲೆಂದೇ, ನಿನ್ನ ಬಲವನ್ನು ತೋರಿಸುತ್ತಾ ಯುದ್ಧಮಾಡು’ ಎಂದು ಹೇಳಲ್ಪಟ್ಟ ಬಭ್ರುವಾಹನನು, ತನ್ನ ಎಲ್ಲಾ ಬಲವನ್ನು ಪ್ರದರ್ಶನ ಮಾಡುತ್ತಾ, ತಂದೆಯೊಂದಿಗೆ ಯುದ್ಧಮಾಡಿದನು.

[ ಈ ಹಿನ್ನೆಲೆಯಲ್ಲಿ ಇಂದು ಪ್ರಚಲಿತದಲ್ಲಿರುವ, ‘ಅರ್ಜುನನಿಗೆ ಬಭ್ರುವಾಹನ ತನ್ನ  ಮಗ ಎನ್ನುವುದು ಮರೆತುಹೋದ ಕಥೆ’ ಕಟ್ಟುಕಥೆಯಾಗಿದ್ದು, ಮಹಾಭಾರತದ ಮೂಲದಲ್ಲಿ ಆ ರೀತಿಯ ವಿವರಣೆ ಇರುವುದಿಲ್ಲ]

 

ಅರ್ಜ್ಜುನಸ್ತು ಸುತಸ್ನೇಹಾನ್ಮನ್ದಂ ಯೋಧಯತಿ ಸ್ಮಯನ್ ।

ಸ ತು ಸರ್ವಾಯುಧಕ್ಷೇಪೇSಪ್ಯವಿಕಾರಂ ಧನಞ್ಜಯಮ್  ॥ ೩೦.೧೦೫ ॥

 

ದೃಷ್ಟ್ವಾ ಬಾಲ್ಯಾತ್ ಪರೀಕ್ಷಾಯೈ ಮನ್ತ್ರಪೂತಂ ಮಹಾಶರಮ್ ।

ಚಿಕ್ಷೇಪ ಪಿತ್ರೇ ದೈವೇನ ತೇನೈನಂ ಮೋಹ ಆವಿಶತ್ ॥ ೩೦.೧೦೬ ॥

 

ಅರ್ಜುನನಾದರೋ, ಮಗನ ಮೇಲಿನ ಪ್ರೀತಿಯಿಂದ ನಗುತ್ತಾ, ನಿಧಾನವಾಗಿ ಯುದ್ಧಮಾಡುತ್ತಿದ್ದ. ಬಭ್ರುವಾಹನ ಯಾವುದೇ ಅಸ್ತ್ರವನ್ನು ಎಸೆದರೂ ಕೂಡಾ, ಅದರಿಂದ ಧನಂಜಯನಿಗೆ ಯಾವುದೇ ರೀತಿಯ ವಿಕಾರ ಉಂಟಾಗಲಿಲ್ಲ. ಇದನ್ನು ಕಂಡ ಬಭ್ರುವಾಹನ ಬಾಲಿಷ್ಯತನದಿಂದ, ಪರೀಕ್ಷೆಮಾಡಲೋಸುಗ ಮಂತ್ರದಿಂದ ಕೂಡಿರುವ ದೊಡ್ಡ ಬಾಣವನ್ನು ಬಿಟ್ಟ. ಇದು ದೇವಸಂಕಲ್ಪಕ್ಕೆ ಅನುಗುಣವಾಗಿ ನಡೆಯಿತು ಮತ್ತು ಆ ಅಸ್ತ್ರದಿಂದ ಅರ್ಜುನ ಮೂರ್ಛೆಹೋದ.

[ಅರ್ಜುನನ ತಲೆ ಕತ್ತರಿಸಲ್ಪಟ್ಟಿತು, ಇತ್ಯಾದಿಯಾಗಿ ಇಂದು ಪ್ರಚಲಿತದಲ್ಲಿರುವ ಕಥೆಗಳು ಕೇವಲ  ಕಟ್ಟುಕಥೆ]

No comments:

Post a Comment