ಮೂರ್ಚ್ಛಿತಂ ತಂ ಗುರುಂ
ದೃಷ್ಟ್ವಾ ತದ್ಭಕ್ತ್ಯಾ ಭೃಶದುಃಖಿತಃ ।
ಪ್ರಾಯೋಪವಿಷ್ಟಸ್ತನ್ಮಾತಾ
ವಿಲಲಾಪಾತಿದುಃಖಿತಾ ॥ ೩೦.೧೦೭ ॥
ಹೀಗೆ ಎಚ್ಚರತಪ್ಪಿ
ಬಿದ್ದ ತಂದೆಯನ್ನು ಕಂಡು, ತಂದೆಯಮೇಲಿನ ಭಕ್ತಿಯಿಂದ, ಅತ್ಯಂತ ದುಃಖಕ್ಕೀಡಾದ ಬಭ್ರುವಾಹನ ಆಮರಣ
ಉಪವಾಸಕ್ಕೆ ಕುಳಿತ. ಅವನ ತಾಯಿ ಚಿತ್ರಾಂಗದೆಯು ಅತ್ಯಂತ ದುಃಖಿತಳಾಗಿ ಅತ್ತಳು.
ವಿಜಗರ್ಹ ತದೋಲೂಪೀಂ
ಧಿಗ್ ಜಗತ್ತ್ರಯಪೂಜಿತಮ್ ।
ಅಜೀಘನೋ ಮೇ ಭರ್ತ್ತಾರಂ
ಪುತ್ರೇಣೈವಾವಿಜಾನತಾ ॥ ೩೦.೧೦೮॥
ಚಿತ್ರಾಂಗದೆ ಉಲೂಪಿಯನ್ನು
ಬೈದಳು. ‘ಮೂರು ಲೋಕಕ್ಕೂ ಪೂಜಿತನಾಗಿರುವ ನನ್ನ ಗಂಡನನ್ನು, ಏನೂ ಅರಿಯದ ಮಗನಾದ ಬಭ್ರುವಾಹನನ
ಮೂಲಕ ಕೊಂದೆಯಲ್ಲವೇ?
ನಿನಗೆ ಧಿಕ್ಕಾರವಿರಲಿ.’
ಲೋಕವೀರಂ ಪತಿಂ ಹಿತ್ವಾ
ನ ಮೇ ಕಾರ್ಯಂ ಸುತೇನ ಚ ।
ಪತಿಲೋಕಮಹಂ ಯಾಸ್ಯೇ
ತೃಪ್ತಾ ಭವ ಕಲಿಪ್ರಿಯೇ ॥ ೩೦.೧೦೯ ॥
‘ಲೋಕದಲ್ಲಿಯೇ
ವೀರನಾಗಿರುವ ನನ್ನ ಗಂಡನನ್ನು ಬಿಟ್ಟು, ಮಗನಿಂದ ನನಗೆ ಯಾವುದೇ ಪ್ರಯೋಜನವಿಲ್ಲ. ನಾನು ಗಂಡನನ್ನು ಅನುಸರಿಸಿ ಅವನ ಜೊತೆಗೇ
ಹೊರಟುಬಿಡುತ್ತೇನೆ. ಜಗಳ ಹಚ್ಚುವುದರಲ್ಲಿ ಪ್ರಿಯಳಾದವಳೇ, ತೃಪ್ತಳಾಗು (ಈಗ ನಿನಗೆ ಸಂತೋಷವಾಯಿತೇ).’
ಇತ್ಯುಕ್ತ್ವಾ ಮರಣಾಯೈವ
ತಾಂ ವಿನಿಶ್ಚಿತಮಾನಸಾಮ್ ।
ಧರಾಯಾಂ ವಿಲುಠನ್ತೀಂ ಚ
ದೃಷ್ಟ್ವಾ ಭುಜಗನನ್ದಿನೀ ॥ ೩೦.೧೧೦ ॥
ನಾಗಲೋಕಾತ್ ಸಮಾದಾಯ
ವಿಶಲ್ಯಕರಣೀಂ ಕ್ಷಣಾತ್ ।
ಉತ್ಥಾಪಯಾಮಾಸ ಪತಿಂ
ತ್ರಿಲೋಕಾತಿರಥಂ ತಯಾ ॥ ೩೦.೧೧೧ ॥
ಈರೀತಿಯಾಗಿ ಹೇಳಿ, ಸಾಯಬೇಕೆಂದು ಮನಸ್ಸನ್ನು
ಗಟ್ಟಿಮಾಡಿಕೊಂಡು ಭೂಮಿಯಲ್ಲಿ ಹೊರಳಾಡುತ್ತಿರುವ ಚಿತ್ರಾಂಗದೆಯನ್ನು ಕಂಡ ಉಲೂಪಿಯು, ಕ್ಷಣದಲ್ಲಿ,
ನಾಗಲೋಕದಿಂದ ವಿಶಲ್ಯಕರಣಿಯನ್ನು(ಚಿಕಿತ್ಸೆಮಾಡುವ ಸಸ್ಯವನ್ನು) ತಂದು, ಮೂರುಲೋಕದಲ್ಲಿಯೇ ಅತ್ಯಂತ ವೀರನಾಗಿರುವ ಗಂಡನನ್ನು
ಎಬ್ಬಿಸಿದಳು.
ಪ್ರಹಸ್ಯೋವಾಚ ಚ ತದಾ
ಶ್ರುತಂ ವಾಕ್ಯಂ ಪುರಾ ಮಯಾ ।
ಸುರಲೋಕೇ ಸುರೈಃ
ಪ್ರೋಕ್ತಂ ಭೀಷ್ಮಾದ್ಯಾ ನಾತಿಧರ್ಮ್ಮತಃ ॥ ೩೦.೧೧೨ ॥
ಯದ್ಧತಾಸ್ತೇನ ದೋಷೇಣ
ಪಾರ್ತ್ಥಸ್ತೇನಾತಿವೇದನಾಮ್ ।
ರಣೇ ವ್ರಜೇದಿತಿ ನ ತತ್
ಪರತಃ ಸ್ಯಾದಿತಿ ಹ್ಯಹಮ್ ॥ ೩೦.೧೧೩ ॥
ವಚನಾದೇವ ದೇವಾನಾಂ ಯುದ್ಧ್ಯೇತ್ಯಾತ್ಮಜಮಬ್ರವಮ್
।
ದೇವಾನಾಮೇವ ಸಙ್ಕಲ್ಪಾನ್ಮೂರ್ಚ್ಛಿತಶ್ಚಾರ್ಜ್ಜುನೋSಭವತ್ ॥ ೩೦.೧೧೪ ॥
ಏಕೆ ಈ ಘಟನೆ ನಡೆಯಿತು
ಎನ್ನುವುದನ್ನು ಉಲೂಪಿಕೆಯು ನಕ್ಕು ಹೇಳುತ್ತಾಳೆ- ‘ಹಿಂದೆ ನನ್ನಿಂದ ದೇವಲೋಕದಲ್ಲಿ ದೇವತೆಗಳಿಂದ
ಹೇಳಿದ ಮಾತು ಕೇಳಲ್ಪಟ್ಟಿದೆ. (ಆ ಮಾತು ಏನೆಂದರೆ) “ಭೀಷ್ಮಾಚಾರ್ಯರೇ ಮೊದಲಾದವರೆಲ್ಲರು,
ಧರ್ಮದಿಂದ ಸಾಯಿಸಲ್ಪಡಲಿಲ್ಲ(ಬಲವಿದ್ದರೂ ಕೂಡಾ ನೇರವಾಗಿ ಅರ್ಜುನನ ಬಲದಿಂದ ಅವರು ಸಾಯಿಸಲ್ಪಡಲಿಲ್ಲ).
ಆ ಕಾರಣದಿಂದ ಬಂದ ದೋಷದಿಂದಾಗಿ ಅರ್ಜುನನು
ಆತ್ಯಂತಿಕವಾಗಿರುವ ನೋವನ್ನು ಯುದ್ಧದಲ್ಲಿ ಹೊಂದುವನು.” ಈ ವಿಷಯವನ್ನು ತಿಳಿದ ನಾನು, ಅರ್ಜುನನಿಗೆ
ಇನ್ನೊಬ್ಬರಿಂದ ನೋವುಂಟಾಗಬಾರದು ಎಂದು, ಯುದ್ಧಮಾಡೆಂದು ಮಗನಾದ ಬಭ್ರುವಾಹನನಿಗೆ ಹೇಳಿದೆ.
ದೇವತೆಗಳ ಸಂಕಲ್ಪ ಇರುವುದರಿಂದಲೇ ಅರ್ಜುನನು ಮೂರ್ಛೆಹೊಂದಿದ.
ಭುಕ್ತದೋಷಫಲಶ್ಚಾಯಂ
ಪುನರ್ಭೋಕ್ಷ್ಯತಿ ನಾನ್ಯತಃ ।
ಅನ್ಯೇನ ಪಾತಿತಸ್ಯಾಸ್ಯ
ಯಶೋ ನಶ್ಯೇತ್ ತ್ರಿಲೋಕಗಮ್ ॥ ೩೦.೧೧೫ ॥
ದೋಷದಿಂದ ಬಂದ ನೋವು
ಇದೀಗ ಸ್ವೀಕೃತವಾಗಿದೆ. ಅದರಿಂದ ಇನ್ನೊಬ್ಬರಿಂದ ಮತ್ತೆ ಈ ತರದ ದುಃಖವನ್ನು ಅರ್ಜುನ
ಹೊಂದುವುದಿಲ್ಲ. ಮಗನಲ್ಲದೇ ಬೇರೊಬ್ಬರು ಇವನನ್ನು ಬೀಳಿಸಿದ್ದರೆ, ಇವನ ಯಶಸ್ಸು, ಕೀರ್ತಿ,
ನಾಶವಾಗುತ್ತಿತ್ತು. (ಗುರುವನ್ನು/ತಂದೆಯನ್ನು ಶಿಷ್ಯ/ಮಗ ಸೋಲಿಸಿದರೆ, ಅದರಿಂದ ಗುರು/ತಂದೆ ಸಂತೋಷಪಡುತ್ತಾರೆ
ಮತ್ತು ಕೀರ್ತಿಯನ್ನು ಹೊಂದುತ್ತಾರೆ).
ನಾರ್ಜ್ಜುನಸ್ಯ ಯಶೋ
ನಶ್ಯೇದಿತಿ ದೈವೈರಿದಂ ಕೃತಮ್ ।
ಇತ್ಯುಕ್ತಃ
ಪ್ರೀತಿಮಾಪೇದೇ ಪುತ್ರಭಾರ್ಯ್ಯಾಯುತೋSರ್ಜ್ಜುನಃ ॥ ೩೦.೧೧೬ ॥
ಅರ್ಜುನನ ಕೀರ್ತಿ
ನಾಶವಾಗಬಾರದು ಎಂದು ದೇವತೆಗಳಿಂದಲೇ ಇದು(ಅರ್ಜುನ ಮೂರ್ಛೆಹೊಂದುವಂತೆ) ಮಾಡಲ್ಪಟ್ಟಿತು. ಈರೀತಿಯಾಗಿ ಉಲೂಪಿಯಿಂದ ಹೇಳಲ್ಪಟ್ಟ ಅರ್ಜುನನು ಹೆಂಡತಿ ಮಗನೊಡಗೂಡಿ ಬಹಳ ಸಂತೋಷ ಹೊಂದಿದನು.
No comments:
Post a Comment