ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 24, 2023

Mahabharata Tatparya Nirnaya Kannada 30-157-168

 

ತದ್ ಯಜ್ಞಪಞ್ಚಕಮಜಸ್ತ್ರಿಗುಣಾಂ ಸ ಏಭ್ಯಃ ಸದ್ದಕ್ಷಿಣಾಂ ಕ್ರತುಪತಿರ್ನ್ನಿಖಿಲಾಮವಾಪ್ಯ ।

ಚಕ್ರೇSಶ್ವಮೇಧತ್ರಯಮೇಕಮೇಕಂ ತೇಷಾಂ ಹರಿರ್ಬಹುಸುವರ್ಣ್ಣಕನಾಮಧೇಯಮ್ ॥ ೩೦.೧೫೭ ॥

 

ಪಾಂಡವರು (ಹದಿನೈದು ವರ್ಷಗಳಲ್ಲಿ)ನಡೆಸಿದ ಆ ಐದು ಅಶ್ವಮೇಧಯಜ್ಞ, (ಪಂಚಾತ್ಮಕನಾದ ಪರಮಾತ್ಮನಿಗೆ, ಪಂಚಾತ್ಮಕವಾದ ಜೀವಶಕ್ತಿಯಲ್ಲಿ) ಮೂರುಪಟ್ಟು ದಕ್ಷಿಣೆಯೊಂದಿಗೆ(ಭಗವಂತನ ಮೂರು ರೂಪಗಳ ಉಪಸ್ಥಿತಿಯಲ್ಲಿ) ನಡೆಯಿತು. ಹೀಗೆ ಸಮೀಚೀನವಾದ ದಕ್ಷಿಣೆಯನ್ನು ಹೊಂದಿ ‘ಬಹುಸುವರ್ಣಕ ಎಂದು ಹೆಸರುಳ್ಳ ಒಂದೊಂದು ಯಾಗವನ್ನು ವೇದವ್ಯಾಸರು ಮೂರು ಅಶ್ವಮೇಧವನ್ನಾಗಿ ಮಾಡಿದರು. (ಒಟ್ಟಿನಲ್ಲಿ ಅದು ಹದಿನೈದು ಅಶ್ವಮೇಧಕ್ಕೆ ಸಮನಾಗಿ ನಡೆಯಿತು).

 

ಸಕೃಷ್ಣೇಷ್ವಥ ಪಾರ್ತ್ಥೇಷು ಸುಸ್ನಾತಾವಭೃಥೇಷ್ವಲಮ್ ।

ಪಞ್ಚೇನ್ದ್ರವದ್ ವಿರಾಜತ್ಸು ಸ್ತೂಯಮಾನೇಷ್ವೃಷೀಶ್ವರೈಃ ॥ ೩೦.೧೫೮ ॥

 

ಸ್ಥೂಯಮಾನೇ ಚ ತದ್ಯಜ್ಞೇ ಕ್ರೋಧೋ ನಕುಲತಾಂ ಗತಃ ।

ಕೃತ್ವೋಗ್ರಗರ್ಜ್ಜನಂ ಯಜ್ಞಂ ತಾಂಶ್ಚ ಯಜ್ಞಕೃತೋSಖಿಲಾನ್ ॥ ೩೦.೧೫೯ ॥

 

ಗರ್ಹಯನ್ನೂಚಿವಾನಿತ್ಥಂ ಭಾರ್ಯ್ಯಾಪುತ್ರಸ್ನುಷಾಯುತಃ ।

ಸತ್ತ್ಕುಪ್ರಸ್ಥಮದಾದ್ ವಿಪ್ರ ಉಞ್ಛವೃತ್ತಿಃ ಸುಭಕ್ತಿತಃ ॥ ೩೦.೧೬೦ ॥

 

ಧರ್ಮ್ಮಾಯಾತಿಥಯೇ ತಸ್ಯ ಕಲಾಂ ನಾರ್ಹತಿ  ಷೋಡಶೀಮ್ ।

ಯಜ್ಞೋSಯಮಿತಿ ಹೇತುಂ ಚ ವಿಪ್ರೈಃ ಪೃಷ್ಟೋSಭ್ಯಭಾಷತ ॥ ೩೦.೧೬೧ ॥

 

ಶ್ರೀಕೃಷ್ಣನಿಂದ ಸಹಿತರಾದ  ಪಾಂಡವರು ಯಜ್ಞದ ಕೊನೆಯಲ್ಲಿ ಮಾಡುವ ಅವಭೃಸ್ನಾನವನ್ನು ಮಾಡಿದವರಾಗಿ, ಐದು ಇಂದ್ರರಂತೆ ಚೆನ್ನಾಗಿ ಶೋಭಿಸುತ್ತಿರಲು, ಋಷಿಗಳೆಲ್ಲರೂ ಸ್ತೋತ್ರ ಮಾಡುತ್ತಾ ಆ ಯಜ್ಞವನ್ನು ಹೊಗಳುತ್ತಿದ್ದರು. ಅದೇ ಸಮಯದಲ್ಲಿ ಕ್ರೋಧಾಭಿಮಾನಿಯಾದ ‘ಕ್ರೋಧ’ ನಾಮಕ ದೈತ್ಯನು ಮುಂಗುಸಿಯಾಗಿ ಬಂದು, ಕ್ರೂರ ಗರ್ಜನೆಯನ್ನು ಮಾಡಿ, ಆ ಯಜ್ಞವನ್ನೂ, ಯಜ್ಞ ಮಾಡಿದ ಎಲ್ಲರನ್ನೂ ನಿಂದಿಸುತ್ತಾ,  ಹೀಗೆ (ಕಥೆಯೊಂದನ್ನು) ಹೇಳಿದನು- ‘ಹೆಂಡತಿ, ಮಗ ಹಾಗೂ ಸೊಸೆಯಿಂದ ಕೂಡಿರುವ ಒಬ್ಬ ಬ್ರಾಹ್ಮಣನಿದ್ದ. ಅವನು ಉಞ್ಛವೃತ್ತಿಯಿಂದ (ಕೇವಲ ನೆಲದಲ್ಲಿ ಬಿದ್ದ ದಾನ್ಯವನ್ನು ಮಾತ್ರ ಆಹಾರವಾಗಿ ಬಳಸಿ) ಬದುಕುತ್ತಿದ್ದ. (ಅದರಿಂದಾಗಿ ಅವನಿಗೆ ದಿನಾಲೂ ಊಟವಿರುತ್ತಿರಲಿಲ್ಲ). ಹೀಗಿರುವಾಗ ಒಮ್ಮೆ ಒಬ್ಬ ಅತಿಥಿ ಆ ಬ್ರಾಹ್ಮಣನ ಮನೆಗೆ ಬಂದ. ಸ್ವಯಂ ಯಮಧರ್ಮನೇ ಅವರನ್ನು ಪರೀಕ್ಷಿಸಲು ಅತಿಥಿ ವೇಷದಲ್ಲಿ ಬಂದಿದ್ದ. ಹಾಗೆ ಬಂದ ಅತಿಥಿಗೆ ಆ ಬ್ರಾಹ್ಮಣ, ತಾವು ತಿನ್ನಲು ಇಟ್ಟುಕೊಂಡಿದ್ದ ಎಲ್ಲಾ ಹಿಟ್ಟನ್ನು(ಆಹಾರವನ್ನು) ನೀಡಿದ.’ ಮುಂದುವರಿದು ಆ ದೈತ್ಯ ಅಲ್ಲಿ ಎಲ್ಲರನ್ನು ನಿಂದಿಸುತ್ತಾ ಹೇಳುತ್ತಾನೆ- ‘ ಆ ಬ್ರಾಹ್ಮಣ ಕೊಟ್ಟ ದಾನದ ಹದಿನಾರನೇ ಒಂದು ಭಾಗ ಈ ಯಜ್ಞ ಹೊಂದಿಲ್ಲ’ ಎಂದು. ಆಗ ಬ್ರಾಹ್ಮಣರಿಂದ ಕಾರಣವನ್ನು ಕೇಳಲ್ಪಟ್ಟವನಾಗಿ ಅವನು ಹೀಗೆ ನುಡಿದ-

 

ಅತಿಥೇಸ್ತಸ್ಯ ಪಾದೋದಕ್ಲಿನ್ನಃ ಪಾರ್ಶ್ವೋ ಹಿರಣ್ಮಯಃ ।

ಏಕೋ ಮಮಾಭೂದಪರಃ ಸರ್ವತೀರ್ತ್ಥಾದಿಕೇಷ್ವಪಿ ॥ ೩೦.೧೬೨ ॥

 

ಮಜ್ಜತೋSವಭೃಥೇಷ್ವದ್ಧಾ ಯಜ್ಞಾನಾಮತ್ರ ಚಾSದರಾತ್ ।

ನಾಭೂದಿತ್ಯಥ ತತ್ತತ್ವವೇದಿಭಿರ್ಮ್ಮುನಿಪುಙ್ಗವೈಃ ॥ ೩೦.೧೬೩ ॥

 

ಕೃಷ್ಣೇನ ಚ ತಮೋSನ್ಧಂ ತಂ ಪ್ರಾಪಯದ್ಭಿಃ ಸ್ಮಿತೇ ಕೃತೇ ।

ಅದರ್ಶನಂ ಜಗಾಮಾSಶು ತಮಃ ಪ್ರಾಪ ಚ ಕಾಲತಃ ॥ ೩೦.೧೬೪ ॥

 

‘ಆ ಅತಿಥಿಯ ಪಾದವನ್ನು ತೊಳೆದ ನೀರಿನಿಂದ ಒದ್ದೆಯಾದ ನನ್ನ ಒಂದು ಭಾಗವು ಬಂಗಾರವಾಯಿತು. ಇನ್ನೊಂದು ಭಾಗವನ್ನು ಬಂಗಾರವಾಗಿ ಮಾಡಿಕೊಳ್ಳಬೇಕು ಎಂದು ಪ್ರತಿಯೊಂದು ತೀರ್ಥದಲ್ಲಿ ಸ್ನಾನ ಮಾಡಿದರೂ, ಬೇಕಾದಷ್ಟು ಯಜ್ಞದ ಅವಭೃದಲ್ಲಿ ಸ್ನಾನ ಮಾಡಿದರೂ, ಇನ್ನೊಂದು ಭಾಗ ಬಂಗಾರ ಆಗಲೇ ಇಲ್ಲ.’  ದೈತ್ಯ ಈ ರೀತಿಯಾಗ ಹೇಳಿದಾಗ ಇದರ ರಹಸ್ಯ ಮುನಿಗಳಿಗೆ ಅರ್ಥವಾಯಿತು. ಆಗ ಶ್ರೀಕೃಷ್ಣ ಹಾಗೂ ಎಲ್ಲಾ ಋಷಿಗಳಿಂದ. (ಅವನನ್ನು ಅನ್ಧಂತಮಸ್ಸಿಗೆ ಕಳುಹಿಸಲೋಸುಗ) ಒಂದು ಸಣ್ಣ ನಗು ತೋರಿಸಲ್ಪಟ್ಟಿತು. ಆಗ ಆ ದೈತ್ಯನು ಅಲ್ಲಿಂದ ಮಾಯವಾದ ಮತ್ತು ಕಾಲಕ್ರಮೇಣ ಅನ್ದಂತಮಸ್ಸನ್ನು ಹೊಂದಿದ ಕೂಡಾ.

 

ತದರ್ತ್ಥಮೇವ ಹೈರಣ್ಯಃ ಪಾರ್ಶ್ವಸ್ತಸ್ಯಾಭವತ್ ಪುರಾ ।

ಕೃಷ್ಣಸ್ಯ ಪಾಣ್ಡವಾನಾಂ ಚ ಮಖಾದೇಶ್ಚ ಗುಣಾನ್ ಬಹೂನ್ ॥ ೩೦.೧೬೫ ॥

 

ವದನ್ತೋ ಭತ್ಸಯಾಞ್ಚಕ್ರುಸ್ತನ್ಮತಜ್ಞಾ ಮಧುದ್ವಿಷಃ ।

ಶ್ರಾದ್ಧಾರ್ಥಂ ಹಿ ಪಯಃ ಪೂರ್ವಂ ಜಮದಗ್ನೇರದೂಷಯತ್ ॥ ೩೦.೧೬೬ ॥

 

ನಾಕುಲೇನೈವ ರೂಪೇಣ ಕ್ರೋಧಸ್ತಂ ಪಿತರೋSಶಪನ್ ।

ಭವ ತ್ವಂ ನಕುಲಸ್ತಾವದ್ ಯಾವದ್ ಧರ್ಮ್ಮಾದಿಕಾನ್ ಸುರಾನ್  ॥ ೩೦.೧೬೭ ॥

 

ಕ್ಷೇಪ್ಸ್ಯಸೀತಿ ತಮೋ ಘೋರಂ ಭೂಯಃ ಪಾಪೇನ ಯಾತ್ವಯಮ್ ।

ಇತ್ಯಭಿಪ್ರೇತ್ಯ ತೈಃ ಶಪ್ತಸ್ತಥಾ ಕೃತ್ವಾ ತಮೋSಭ್ಯಯಾತ್ ॥ ೩೦.೧೬೮ ॥

 

ಪಾಂಡವರ ಯಾಗವನ್ನು ನಿಂದಿಸಿ ಅನ್ಧಂತಮಸ್ಸನ್ನು ಹೊಂದಲಿಕ್ಕಾಗಿಯೇ ಮುಂಗುಸಿಯ ರೂಪದಲ್ಲಿರುವ ಆ ದೈತ್ಯನ ಒಂದು ಭಾಗ ಬಂಗಾರವಾಗಿತ್ತು. ಶ್ರೀಕೃಷ್ಣನ,  ಪಾಂಡವರ ಮತ್ತು  ಯಜ್ಞದ ಅನೇಕ ಗುಣಗಳನ್ನು ಸ್ತೋತ್ರಮಾಡುತ್ತಾ, ದೈತ್ಯನ ಕುರಿತಾಗಿ ಶ್ರೀಕೃಷ್ಣನ ಅಭಿಪ್ರಾಯವನ್ನು ತಿಳಿದ ಬ್ರಾಹ್ಮಣರು ಆ ಅಸುರನನ್ನು ನಿಂದಿಸಿದರು.

(ಆ ಮುಂಗುಸಿ ರೂಪದ ದೈತ್ಯನ ಪೂರ್ವ ಕಥೆಯನ್ನು ಹೇಳುತ್ತಾರೆ-) ಹಿಂದೆ ಜಮದಗ್ನಿಯು ಶ್ರಾದ್ಧಕ್ಕೆಂದೇ ಇಟ್ಟಿರುವ ಹಾಲನ್ನು ಈ ಕ್ರೋಧನಾಮಕ ದೈತ್ಯನು ಮುಂಗುಸಿಯ ರೂಪದಿಂದ ಬಂದು ನೆಕ್ಕಿ ಅಪವಿತ್ರ ಮಾಡಿದ್ದನು. ಅಂತಹ ಕ್ರೋಧನನ್ನು ಪಿತೃದೇವತೆಗಳು ಶಪಿಸಿದರು- ‘ನೀನು ಎಲ್ಲಿಯ ತನಕ ಯಮನೇ ಮಾಡಲಾಗಿರುವ ದೇವತೆಗಳನ್ನು ನಿಂದಿಸುತ್ತೀಯೋ, ಅಲ್ಲಿಯ ತನಕ ಮುಂಗುಸಿಯಾಗಿಯೇ ಇರು’ ಎಂದು. ಅವರನ್ನು ನಿಂದಿಸಿದ ಪಾಪದಿಂದ ಅನ್ಧಂತಮಸ್ಸನ್ನು ಕುರಿತು ಹೊಗಲಿ ಎನ್ನುವ ಅಭಿಪ್ರಾಯವನ್ನು ಮನದಲ್ಲಿ ಇಟ್ಟುಕೊಂಡು ಈರೀತಿಯಾಗಿ ಅವರಿಂದ ಅವನು ಶಪಿಸಲ್ಪಟ್ಟನು. ಅದೇರೀತಿಯಾಗಿ ಮಾಡಿ ಅನ್ಧಂತಮಸ್ಸನ್ನು ಹೊಂದಿದ ಕೂಡಾ.

[ಇದು ಮಹಾಭಾರತದಲ್ಲಿಯೇ(ಆಶ್ವಮೇಧಿಕಪರ್ವ) ಇರುವ ಕಥೆ. ‘ಪಿತೄಣಾಮಭಿಷಙ್ಗಾಚ್ಚ ನಕುಲತ್ವಮುಪಾಗತಃ’ (೯೫.೧೧)  ‘ತೈಶ್ಚಾಪ್ಯುಕ್ತಃ ಕ್ಷಿಪನ್ ಧರ್ಮಂ ಶಾಪಸ್ಯಾನ್ತಮವಾಪ್ಸ್ಯಸಿ’ (೧೨)

ಪಿತೃಗಳ ಶಾಪದಿಂದ ಅವನು ಮುಂಗುಸಿಯಾಗಿ ತಿರುಗಾಡುತ್ತಿದ್ದ. ಬ್ರಾಹ್ಮಣನ ಮನೆಯಬಳಿ ತಿರುಗಾಡುತ್ತಿರುವಾಗ ಅವನ ಒಂದು ಭಾಗ ಬಂಗಾರವಾಯಿತು. ಅದಕ್ಕಾಗಿ ಅವನು ತನ್ನ ಇನ್ನೊಂದು ಭಾಗ ಬಂಗಾರವಾಗಬೇಕು ಎಂದು ಎಲ್ಲಾ ಕಡೆ ತಿರುಗಾಡಿದನು. ಆದರೆ ಏನೂ ಆಗಲಿಲ್ಲ. ಅದಕ್ಕಾಗಿ ಅವನು ತನಗೆ ಸಿಗಲಿಲ್ಲ ಎಂದು ಸಂಕುಚಿತ ಮನೋಭಾವದಿಂದ ಈ ಯಜ್ಞ ಕಳಪೆ ಎಂದು ಹೇಳಿರುವುದು. ಹೀಗಾಗಿ ಎಲ್ಲರಿಂದ ಬೈಯಲ್ಪಟ್ಟ ಅವನು ಅನ್ಧಂತಮಸ್ಸನ್ನು ಹೊಂದಿದ. ಹೀಗೆ ಪಾಂಡವರ ಯಜ್ಞ  ಸಮೃದ್ಧವಾಗಿ  ನಡೆಯಿತು.]

No comments:

Post a Comment