ಸಾಶ್ವೇSರ್ಜ್ಜುನೇ ಯಜ್ಞವಾಟಂ
ಪ್ರವಿಷ್ಟೇSಸ್ಯ ಸಹೋದರಾಃ ।
ಪೂಜಿತಾಃ ಪೂಜಯಾಮಾಸುರ್ಮ್ಮುದಿತಾಃ
ಸಹಕೇಶವಾಃ ॥ ೩೦.೧೩೩ ॥
ಯಜ್ಞಾಶ್ವದೊಂದಿಗೆ ಅರ್ಜುನನು
ಯಜ್ಞ ಶಾಲೆಯನ್ನು ಪ್ರವೇಶಿಸಲು, ಶ್ರೀಕೃಷ್ಣನಿಂದ ಸಹಿತರಾದ ಅವನ ಸಹೋದರರು ಬಹಳ ಸಂತೋಷಗೊಂಡು ಅವನನ್ನು ಸತ್ಕರಿಸಿದರು. ಮತ್ತು
ಅವನಿಂದ ಸತ್ಕೃತರಾದರು.
ತತಃ ಸ ಯಜ್ಞೋ
ಯದುವೀರರಕ್ಷಿತೋ ವ್ಯಾಸೋಪದಿಷ್ಟೋ ಮುನಿಭಿಃ ಪ್ರವರ್ತ್ತಿತಃ ।
ಅಶೋಭತಾಲಂ ಸಕಲೈರ್ನ್ನೃಪೈಶ್ಚ
ಸಮಾಗತೈರ್ವಿಪ್ರವರೈಶ್ಚ ಜುಷ್ಟಃ ॥ ೩೦.೧೩೪ ॥
ಆ ಯಜ್ಞವು ಯದುವೀರ
ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟದ್ದಾಗಿ, ವೇದವ್ಯಾಸರಿಂದ ಉಪದೇಶೀಸಲ್ಪಟ್ಟದ್ದಾಗಿ, ಮುನಿಗಳಿಂದ
ಪ್ರವರ್ತಿತವಾಗಿ, ಬಂದಿರುವ ಎಲ್ಲಾ ರಾಜರಿಂದಲೂ, ಋಷಿಶ್ರೇಷ್ಠರಿಂದಲೂ ಸೇವಿಸಲ್ಪಟ್ಟದ್ದಾಗಿ ಚೆನ್ನಾಗಿ
ಶೋಭಿಸಿತು.
ಸ ಕೃಷ್ಣಯುಗ್ಮೇನ ಚ ಭಾರ್ಗ್ಗವೇಣ
ತ್ರಿಧಾ ವಿಭಕ್ತೇನ ಪರೇಣ ಪುಂಸಾ ।
ಅಧಿಷ್ಠಿತೋSಶೋಭತ ವಿಶ್ವಮೇತದ್ ವಿಶ್ವಾದಿರೂಪೇಣ
ಯಥೈವ ತೇನ ॥ ೩೦.೧೩೫ ॥
ವಿಶ್ವ-ತೈಜಸ-ಪ್ರಾಜ್ಞ
ಎನ್ನುವ ಮೂರು ಅವಸ್ಥಾ ಪ್ರೇರಕವಾದ ಭಗವಂತನ ರೂಪಗಳಿಂದ ಈ ಜಗತ್ತು ಹೇಗೆ ಶೋಭಿಸುತ್ತದೋ ಹಾಗೇ, ವೇದವ್ಯಾಸ, ಯಾದವನಂದನ ಮತ್ತು ಪರಶುರಾಮ
ಎನ್ನುವ ಮೂರು ರೀತಿಯಾಗಿ ಇರುವ ಭಗವಂತನ ರೂಪಗಳಿಂದ ಯುಕ್ತವಾದ ಆ ಅಶ್ವಮೇಧಯಾಗವು, ಅತ್ಯಂತವಾಗಿ
ಶೋಭಿಸಿತು.(ವಿಶ್ವಾಧಿರೂಪದಂತೆ ಶೋಭಿಸಿತು)
ಯಥಾ ವಿರಿಞ್ಚಸ್ಯ ಪುರಾSಸ್ಯ ಯಜ್ಞೋ ಯಥೈವ ಶಕ್ರಸ್ಯ
ಶತಕ್ರತುತ್ವೇ ।
ತಥೈವ ಸೋSಭೂದ್ ವಿಧಿಶರ್ವಶಕ್ರಪೂರ್ವೈಃ
ಸುರೈರಾವಿರಲಙ್ಕೃತೋSಧಿಕಮ್ ॥ ೩೦.೧೩೬ ॥
ಯಾವರೀತಿ ಮೊದಲು ಚತುರ್ಮುಖನ
ಯಜ್ಞವು ಶೋಭಿಸಿತ್ತೋ, ಯಾವ
ರೀತಿ ಇಂದ್ರನ ನೂರನೇ ಅಶ್ವಮೇಧಯಜ್ಞವು ಶೋಭಿಸಿತ್ತೋ, ಅದೇ ರೀತಿ, ಬ್ರಹ್ಮ, ರುದ್ರ, ಮೊದಲಾದವರಿಂದ ಅಲಂಕೃತವಾದ
ಈ ಯಜ್ಞವೂ ಕೂಡಾ ಶೋಭಿಸಿತು.
ನ
ದೇವಗನ್ಧರ್ವಮುನಿಸ್ವಧರ್ಮ್ಮಮರ್ತ್ತ್ಯಾದಿಕೇಷ್ವಾಸ ಸ ಯೋSತ್ರ ನಾSಸ ।
ಸ್ವಲಙ್ಕೃತೈರ್ನ್ನಾಕಿಜನೈಃ
ಸಕಾನ್ತೈರರೂರುಚನ್ನಾಕವದೇವ ಲೋಕಃ ॥ ೩೦.೧೩೭ ॥
ದೇವತೆಗಳೂ, ಗಂಧರ್ವರೂ, ಮುನಿಗಳೂ, ತಮ್ಮ
ಧರ್ಮದಲ್ಲಿ ಇರುವ ಮನುಷ್ಯೋತ್ತಮರೂ ಮೊದಲಾದವರು ಎಲ್ಲರೂ ಇದ್ದರು. ಪತ್ನೀಸಮೇತರಾಗಿರುವ ದೇವತೆಗಳಿಂದ ಕೂಡಿಕೊಂಡು, ಆ ಯಜ್ಞಸ್ಥಳವು
ಇನ್ನೊಂದು ಸ್ವರ್ಗವೋ ಎಂಬಂತೆ ಚೆನ್ನಾಗಿ ಶೋಭಿಸಿತು.
ತತ್ರೈವ ತತ್ವಾನಿ
ಸಸಂಶಯಾನಿ ನಿಸ್ಸಂಶಯಾನ್ಯಾಸುರಲಂ ವಿವಾದೇ ।
ಪರಸ್ಪರೋತ್ಥೇ ಹರಿಣಾ
ತ್ರಿರೂಪಿಣಾ ಸಂಸ್ಥಾಪಿತಾನ್ಯಗ್ರ್ಯವಚೋಭಿರುಚ್ಚೈಃ ॥ ೩೦.೧೩೮ ॥
ಆ ಯಜ್ಞಶಾಲೆಯಲ್ಲಿ
ಸಂಶಯಯುಕ್ತವಾಗಿರುವ ತತ್ವಗಳೆಲ್ಲವೂ ನಿಸ್ಸಂಶಯವಾಯಿತು.
(ಯಾವ ತತ್ವದ ಬಗ್ಗೆ ಸಂಶಯವಿತ್ತೋ, ಆ ಸಮಸ್ಯೆಗಳೆಲ್ಲವೂ ಪರಿಹಾರವಾಯಿತು). ಪರಸ್ಪರ ವಿವಾದ
ಹೊಂದಿದಾಗ ಮೂರು ರೂಪಗಳಿಂದ ನಿಂತ ಪರಮಾತ್ಮನೇ
ಪ್ರಾಶ್ನಿಕನಾಗಿ ಅದರ ನಿರ್ಣಯವನ್ನು ಕೊಟ್ಟ.
[ಯಜ್ಞದಲ್ಲಿ ತತ್ವ
ಜಿಜ್ಞಾಸೆಗೆ ಸ್ಥಾನವಿರಬೇಕು ಎನ್ನುವುದು ಇದರಿಂದ ನಮಗೆ ತಿಳಿಯುತ್ತದೆ]
ಪ್ರಗೀತಗನ್ಧರ್ವವರಃ
ಪ್ರನೃತ್ತಸದಪ್ಸರಾಃ ಸನ್ತತವಾದಿವಿಪ್ರಃ ।
ವಿವೇಚಯದ್ದೇವನೃಪೌಘ
ಏಕೋ ರರಾಜ ರಾಜಾSಖಿಲಸತ್ಕ್ರತೂನಾಮ್
॥ ೩೦.೧೩೯ ॥
ಗಂಧರ್ವರೆಲ್ಲರೂ
ಚೆನ್ನಾಗಿ ಹಾಡಿದರು. ಅಪ್ಸರೆಯರು ಕುಣಿದರು. ಬ್ರಾಹ್ಮಣರು ತತ್ವವಾದದಲ್ಲಿ ತೊಡಗಿದ್ದರು. ಇವರು ದೇವತೆಗಳು,
ಇವರು ಮನುಷ್ಯರು ಎಂದು ವಿವೇಚನೆ ಮಾಡಬಹುದಾದ ಒಂದೇ ಯಜ್ಞ ಇದಾಗಿತ್ತು. (ಮನುಷ್ಯರೂ, ದೇವತೆಗಳೂ
ಇದ್ದು, ಇದು ಮನುಷ್ಯರ ಪಾಲು, ಇದು ದೇವತೆಗಳ
ಪಾಲು ಎಂದು ಪ್ರತ್ಯೇಕಿಸಬಹುದಾದ ಏಕೈಕ ಯಜ್ಞ ಈ
ಪಾಂಡವರ ಯಜ್ಞವಾಗಿತ್ತು). ಎಲ್ಲಾ ಯಜ್ಞಗಳಲ್ಲೇ ಶ್ರೇಷ್ಠವಾದ ಯಜ್ಞವಾಗಿ ಪಾಂಡವರ ಯಜ್ಞ ಶೋಭಿಸಿತು.
ಸಮಸ್ತದೇವ್ಯಃ
ಸಹವಾಸುದೇವ್ಯಃ ಸ್ವಲಙ್ಕೃತಾಃ ಫುಲ್ಲಮುಖಾರವಿನ್ದಾಃ ।
ವಿಚೇರುರತ್ರೈವ
ಸಹಾಪ್ಸರೋಭಿರ್ನ್ನಿಷೇದುರಪ್ಯಚ್ಯುತಸತ್ಕಥಾರಮಾಃ ॥ ೩೦.೧೪೦ ॥
ಚೆನ್ನಾಗಿ ಅಲಂಕೃತರಾದ,
ಅರಳಿದ ತಾವರೆಯ ಮೊರೆಯುಳ್ಳವರಾದ, ಶ್ರೀಕೃಷ್ಣನ ಭಾರ್ಯೆರಿಂದಕೂಡಿದ ದೇವತೆಗಳ ಮಡದಿಯರು (ಸಮಸ್ತ ದೇವಿಯರು),
ಅಪ್ಸರೆಯರಿಂದ ಕೂಡಿಕೊಂಡು, ಪರಮಾತ್ಮನ ಸತ್ಕಥೆಯಲ್ಲಿ ಆಸಕ್ತರಾಗಿ ಕುಳಿತರು.
No comments:
Post a Comment