೩೧. ಧೃತರಾಷ್ಟ್ರಾದಿಸ್ವರ್ಗ್ಗಪ್ರಾಪ್ತಿಃ
ಓ̐ ॥
ಯಜ್ಞೇಶ್ವರೇಣಾಭಿಯುತೇಷು
ಯುಕ್ತ್ಯಾ ಮಹೀಂ ಪ್ರಶಾಸತ್ಸು ಪೃಥಾಸುತೇಷು ।
ಯಿಯಕ್ಷುರಾಗಾನ್ನಿಶಿ
ವಿಪ್ರವರ್ಯ್ಯೋ ಯುಧಿಷ್ಠಿರಂ ವಿತ್ತಮಭೀಪ್ಸಮಾನಃ ॥ ೩೧.೦೧ ॥
ಯಜ್ಞಪ್ರತಿಪಾದ್ಯನಾದ
ಶ್ರೀಕೃಷ್ಣನಿಂದ ಕೂಡಿಕೊಂಡು,
ಪ್ರಜ್ಞಾಪೂರ್ವಕವಾಗಿ ಪಾಂಡವರು ಭೂಮಿಯನ್ನು ಆಳುತ್ತಿರಲು, ಯಾಗಮಾಡಬೇಕೆಂಬ
ಇಚ್ಛೆಯುಳ್ಳ ಶ್ರೇಷ್ಠ ಬ್ರಾಹ್ಮಣನೊಬ್ಬನು ವಿತ್ತವನ್ನು ಬಯಸಿ ಯುಧಿಷ್ಠಿರನಲ್ಲಿಗೆ ರಾತ್ರಿಕಾಲದಲ್ಲಿ
ಬಂದನು.
ಪ್ರಾತರ್ದ್ದದಾನೀತಿ
ನೃಪಸ್ಯ ವಾಕ್ಯಂ ನಿಶಮ್ಯ ವಿಪ್ರಸ್ತ್ವರಿತೋ ಮಖಾರ್ತ್ಥೇ ।
ಭೀಮಂ ಯಯಾಚೇ ಸ
ನೃಪೋಕ್ತಮಾಶು ನಿಶಮ್ಯ ಚಾದಾನ್ನಿಜಹಸ್ತಭೂಷಣಮ್ ॥ ೩೧.೦೨ ॥
‘ಬೆಳಿಗ್ಗೆ
ಕೊಡುತ್ತೇನೆ’ ಎಂಬ ಯುಧಿಷ್ಟಿರನ ಮಾತನ್ನು ಕೇಳಿ, ಯಾಗಕ್ಕಾಗಿ ಬಹಳ ಅವಸರವುಳ್ಳವನಾಗಿದ್ದ ಆ ಬ್ರಾಹ್ಮಣನು ಭೀಮಸೇನನನ್ನು ಬೇಡಿದನು.
ಭೀಮನಾದರೋ, ಧರ್ಮರಾಜನಿಂದ ಹೇಳಲ್ಪಟ್ಟಿದ್ದನ್ನು ಕೇಳಿದವನಾಗಿ,
ಬ್ರಾಹ್ಮಣ ಕೇಳುತ್ತಿದ್ದಂತೆಯೇ ತನ್ನ ಕೈಯಲ್ಲಿ ಧರಿಸಿದ್ದ ಆಭರಣವನ್ನು ಕೊಟ್ಟನು.
ಅನರ್ಘಮಗ್ನಿಪ್ರತಿಮಂ
ವಿಚಿತ್ರರತ್ನಾಞ್ಚಿತಂ ವಿಪ್ರವರಸ್ತದಾಪ್ಯ ।
ಯಯೌ ಕೃತಾರ್ತ್ಥೋSಥ ಚ ನನ್ದಿಘೋಷಮಕಾರಯದ್
ವಾಯುಸುತಸ್ತದೈವ ॥ ೩೧.೦೩ ॥
ಬೆಲೆಕಟ್ಟಲು
ಸಾಧ್ಯವಿಲ್ಲದ, ಬೆಂಕಿಯಂತೆ ಹೊಳೆಯುವ, ಚಿತ್ರ ವಿಚಿತ್ರವಾದ ರತ್ನಗಳಿಂದ ಕೂಡಿರುವ ಆ ಆಭರಣವನ್ನು
ಬ್ರಾಹ್ಮಣನು ಹೊಂದಿ, ಕೃತಕೃತ್ಯನಾಗಿ
ತೆರಳಿದನು. ತದನಂತರ ಭೀಮಸೇನನು ಆ ಅರ್ಧರಾತ್ರಿಯಲ್ಲಿಯೇ ಸಂತೋಷದ ಘೋಷವನ್ನು ಮಾಡಿದನು. (ಅತ್ಯಂತ
ಆನಂದವಾದಾಗ ಮಾಡಲ್ಪಡುವ ವಿಶೇಷ ನಾದಘೋಷವನ್ನು ಮಾಡಿದನು).
ಅಕಾಲಜಂ ತಂ ತು ನಿಶಮ್ಯ
ರಾಜಾ ಪಪ್ರಚ್ಛ ದೂತೈಸ್ತಮುವಾಚ ಭೀಮಃ ।
ಯನ್ಮರ್ತ್ತ್ಯದೇಹೋSಪಿ
ವಿನಿಶ್ಚಿತಾಯುರಭೂನ್ನೃಪಸ್ತೇನ ಮಮಾSಸ ಹರ್ಷಃ ॥ ೩೧.೦೪ ॥
ಅಕಾಲದಲ್ಲಿ ಉಂಟಾದ
ಸಂತೋಷ-ಘೋಷವನ್ನು ಕೇಳಿ,
ಧರ್ಮರಾಜನು ಕಾರಣವನ್ನು ತಿಳಿಯಲು ಧೂತರನ್ನು
ಕಳುಹಿಸಿದನು. ಹಾಗೆ ಬಂದಿರುವ ಧೂತರಲ್ಲಿ ಭೀಮಸೇನ ಹೇಳುತ್ತಾನೆ- ‘ನಶ್ವರವಾದ ಮಾನುಷ
ಶರೀರದಲ್ಲಿರುವ ಧರ್ಮರಾಜನಿಗೆ ತನ್ನ ಆಯುಷ್ಯದ ಬಗ್ಗೆ ಖಚಿತತೆ ಇದೆಯಲ್ಲ ಅದರಿಂದಾಗಿ ನನಗೆ
ಸಂತೋಷವಾಯಿತು’ ಎಂದು. [ನಶ್ವರ ಶರೀರದಲ್ಲಿರುವ ಮಾನವರು ದಾನವನ್ನು ತಕ್ಷಣ ಮಾಡಬೇಕು. ನಾಳೆ
ಮಾಡುತ್ತೇನೆ ಎಂದರೆ ನಾಳೆ ಬದುಕಿರುತ್ತೇವೆ ಎನ್ನುವ ಖಾತರಿ ನಮಗಿರುವುದಿಲ್ಲ. ಹೀಗಿರುವಾಗ
ಧರ್ಮರಾಜ ಬ್ರಾಹ್ಮಣನಿಗೆ ನಾಳೆ ಕೊಡುತ್ತೇನೆ ಎಂದು ಹೇಳಿರುವುದು ತಪ್ಪು. ಅದನ್ನು ಅವನಿಗೆ ಮನವರಿಕೆ
ಮಾಡಿಕೊಡಲು ಭೀಮಸೇನ ‘ಧರ್ಮರಾಜನಿಗೆ ತಾನು ನಾಳೆಯ
ತನಕ ಬದುಕಿರುತ್ತೇನೆ ಎನ್ನುವ ಖಚಿತತೆ ಇದೆಯಲ್ಲ ಅದಕ್ಕಾಗಿ ನಾನು ಸಂತೋಷ ಘೋಷವನ್ನು ಮಾಡಿದೆ’
ಎಂದು ಹೇಳಿ, ಅವನಿಗೆ ತನ್ನ ತಪ್ಪಿನ ಮನವರಿಕೆಯಾಗುವಂತೆ ಮಾಡಿದ]
ಇತೀರಿತೋSಸೌ ನೃಪತಿಸ್ತ್ವರೇತ ಧರ್ಮ್ಮಾರ್ತ್ಥಮಿತ್ಯಸ್ಯ
ಮತಂ ಪ್ರಪೂಜಯನ್ ।
ಜಗಾದ ಸಾಧ್ವಿತ್ಯಥ ಭೂಯ
ಏವ ಧರ್ಮ್ಮೇ ತ್ವರಾವಾನಪಿ ಸಮ್ಬಭೂವ ॥ ೩೧.೦೫ ॥
ಈರೀತಿಯಾಗಿ ಹೇಳಲ್ಪಟ್ಟ
ಧರ್ಮರಾಜನು ‘ಧರ್ಮ ಮಾಡಲು ವೇಗ ಮುಖ್ಯ’ ಎಂಬ ಮುಖ್ಯಪ್ರಾಣನ ಅಭಿಪ್ರಾಯವನ್ನು ಗೌರವಿಸಿ, ‘ಒಳ್ಳೆಯದು’ ಎಂದು ಹೇಳಿದನು
ಮತ್ತು ಆನಂತರ ಧರ್ಮ ಕಾರ್ಯಗಳಲ್ಲಿ ಬಹಳ ವೇಗವುಳ್ಳವನಾದನು.
No comments:
Post a Comment