ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, September 22, 2023

Mahabharata Tatparya Nirnaya Kannada 30-141-146

 

ನ ವೈ ಮುಮುಕ್ಷುರ್ನ್ನ ಬುಭೂಷುರತ್ರ ನ ವೈ ಪ್ರಪಿತ್ಸುಶ್ಚ ಕುತೋ ಬುಭುಕ್ಷುಃ ।

ಅಸತ್ಯಕಾಮಾ ಅಭವನ್ ಕುತಶ್ಚಿತ್ ಪ್ರದಾತರಿ ಪ್ರಾಜ್ಞವರೇSನಿಲಾತ್ಮಜೇ ॥ ೩೦.೧೪೧ ॥

 

ಪ್ರಾಜ್ಞರಲ್ಲಿಯೇ ಶ್ರೇಷ್ಠನಾದ, ಭೀಮಸೇನನೇ ದಾನದ ವಿಭಾಗದ ಮುಖ್ಯನಾಗಿದ್ದ ಪಾಂಡವರ ಆ ಅಶ್ವಮೇಧದಲ್ಲಿ, ಮೋಕ್ಷ ಹೊಂದಲು ಬಯಸುವವರ ನಡುವೆ ಎಲ್ಲರೂ ಸಂತಸದಿಂದಿದ್ದರು.(ಐಶ್ವರ್ಯವಾಗಲೀ, ಭೋಜನವಾಗಲೀ, ಅಥವಾ ಇನ್ನೇನನ್ನೇ ಆಗಲೀ, ಇನ್ನೂಬೇಕು ಎಂದು ಹೇಳುವ ಒಬ್ಬನೂ ಅಲ್ಲಿರಲಿಲ್ಲ. ಅಂದರೆ ಎಲ್ಲರೂ ಅವರಿಗೆ ಏನು ಬೇಕೋ ಅದನ್ನು ಪಡೆದು ಸಂತೃಪ್ತರಾಗಿದ್ದರು) ಅಲ್ಲಿ ಯಾರಿಗೂ ಕೂಡಾ ಅಯೋಗ್ಯವಾದ ಯಾವುದೇ ಕಾಮನೆ ಇರಲಿಲ್ಲ.

 

ದಿನೇದಿನೇ ತತ್ರ ಮಹಾನ್ನಪರ್ವತಾಃ ಸಭಕ್ಷಸಾರಾ ರಸವನ್ತ ಊರ್ಜ್ಜಿತಾಃ ।

ನದ್ಯಃ ಪಯಃಸರ್ಪ್ಪಿರಜಸ್ರಪೂರ್ಣ್ಣಾಃ ಸಮಾಕ್ಷಿಕಾದ್ಯಾ ಅಪಿ ಪಾಯಸಹ್ರದಾಃ ॥ ೩೦.೧೪೨ ॥

 

ಹ್ರದಾ ಮಹಾನ್ತಸ್ತ್ರಿದಶಾದಿಯೋಗ್ಯಾಃ ಸುಯೋಗಯುಕ್ತಾ ಹರಿಚನ್ದನಾದೇಃ ।

ತಥಾsಞ್ಜನಾಲಕ್ತಕಮುಖ್ಯಮಣ್ಡನದ್ರವ್ಯಾಗ್ರ್ಯವಾಪ್ಯೋ ಮಣಿಕಾಞ್ಚನೋದ್ಭವಾಃ ॥ ೩೦.೧೪೩ ॥

 

ಯಥೇಷ್ಟಪಾನಾಶನಭೋಗಶಿಷ್ಟಾಃ ಸಹಸ್ರಶೋ ಮಾರುತಿನಾ ತು ಕಾರಿತಾಃ ।

ಗನ್ಧಾ ರಸಾದ್ಯಾಶ್ಚ ಸಮಸ್ತಭೋಗಾ ದಿವೀವ ತತ್ರಾSಸುರತೀವ ಹೃದ್ಯಾಃ ॥ ೩೦.೧೪೪ ॥

 

ಆ ಯಜ್ಞದಲ್ಲಿ ಪ್ರತಿನಿತ್ಯ ಮಾಹಾನ್ನದ(ಆಹಾರದ) ಪರ್ವತವಿರುತ್ತಿತ್ತು. ಸಮಸ್ತ ಭಕ್ಷಗಳು, ರಸಗಳಿರುತ್ತಿತ್ತು. ಹಾಲಿನ, ತುಪ್ಪದ ನದಿಗಳೇ ಅಲ್ಲಿ ಹರಿಯಿತು. ಶ್ರೀಖಂಡ(ಸೀಕರಣಿ)*, ಪಾಯಸದ ಸರೋವರವೇ ಅಲ್ಲಿತ್ತು.

ಅಲ್ಲಿ ದೇವತೆಗಳಿಗೆ ಯೋಗ್ಯವಾಗಿರುವ ಒಳ್ಳೆಯ ಆಭರಣ, ಚಂದನ ಮೊದಲಾದವುಗಳಿದ್ದವು. ಅಂಜನ(ಕಾಡಿಗೆ), ಅಲಕ್ತಕ(ಮದರಂಗಿ), ಇವೆಲ್ಲವುಗಳಿಂದ ಕೂಡಿದ ಬಾವಿಯೇ ಅಲ್ಲಿತ್ತು. ಆ ಬಾವಿಗೆ ಮುತ್ತು ಹಾಗೂ ಕಾಂಚನವೇ ಕಟ್ಟೆಯಾಗಿತ್ತು.  ಬೇಕಾದಷ್ಟು ಪಾನೀಯಗಳು,  ಆಹಾರಗಳು, ಹೀಗೆ ಸಹಸ್ರಾರು ರೀತಿಯ ಗಂಧ, ರಸ, ಮೊದಲಾದ ಸಮಸ್ತ ಭೋಗ ವಿಷಯಗಳು ಭೀಮಸೇನನಿಂದ ಮಾಡಿಸಲ್ಪಟ್ಟಿತ್ತು.

[*ಪಾಕಶಾಸ್ತ್ರದಲ್ಲಿ ಈ ಕುರಿತು ಹೇಳಿರುವುದನ್ನು ಕಾಣುತ್ತೇವೆ- ಅರ್ಧಾಢಕಃ ಸುಚಿರಪರ್ಯುಷಿತಸ್ಯ ದಧ್ನಃ ಖಣ್ಡಸ್ಯ ಷೋಡಶ ಪಲಾನಿ  ಶಶಿಪ್ರಭಸ್ಯ । ಸರ್ಪಿಃ ಪಲಂ ಮಧು ಪಲಂ ಮರಿಚಂ ದ್ವಿಕರ್ಷಂ ಶುಣ್ಠ್ಯಾಃ ಪಲಾರ್ಧಮಪಿ ಚಾರ್ಧಪಲಂ ಚತುರ್ಣಾಮ್ । ಸೂಕ್ಷ್ಮೇ ಪಟೇ ಲಲನಯಾ ಮೃದುಪಾಣಿಘೃಷ್ಟಾ  ಕರ್ಪೂರಧೂಲಿಸುರಭಿಕೃತಪಾತ್ರಸಂಸ್ಥಾ । ಏಷಾ ವೃಕೋದರಕೃತಾ ಸರಲಾ ರಸಾಲಾ ಯಾSSಸ್ವಾದಿತಾ ಭಗವತಾ ಮಧುಸೂದನೇನ ಚೆನ್ನಾಗಿ ಹೆಪ್ಪುಗಟ್ಟಿರುವ ಮೊಸರು,  ತುಪ್ಪ, ಜೇನು, ಸಕ್ಕರೆ, ಶುಂಠಿ, ಇವಿಷ್ಟುನ್ನು ಸೇರಿಸಿ, ಸೂಕ್ಷ್ಮವಾದ ಬಟ್ಟೆಯಲ್ಲಿ ಹಾಕಿ, ಅದರ ಸಾರವನ್ನು ಇಳಿಸಿ, ಅದನ್ನು ಗಟ್ಟಿಯಾಗಿ ಮಾಡಿರಬೇಕು. ಅದು ಪಚ್ಚಕರ್ಪೂರ, ಕೇಸರ ಮೊದಲಾದವುಗಳಿಂದ ಕೂಡಿರಬೇಕು. ಇದು ಭೀಮಸೇನ ಕಂಡುಹಿಡಿದ, ಪರಮಾತ್ಮನಿಂದಲೇ ರುಚಿ ನೋಡಲ್ಪಟ್ಟ ಭಕ್ಷ್ಯ. ಹಾಗಾಗಿ ಅತ್ಯಂತ ಶ್ರೇಷ್ಠವಾದದ್ದು. (ಇದನ್ನು ಶ್ರೀಖಂಡ/ಸೀಕರಣಿ ಎಂದು ಮಹಾರಾಷ್ಟ್ರದ ಕಡೆ ಹೇಳುತ್ತಾರೆ).]

 

ನೈತಾದೃಶಃ ಕಶ್ಚನ ಭೂತಪೂರ್ವೋ ಮಖೋ ವಿನಾ ರಾಮವಿರಿಞ್ಚವಜ್ರಿಣಾಮ್ ।

ಮಖಾನಿತಿ ಪ್ರೋಚುರಶೇಷಲೋಕಾ ದೃಷ್ಟ್ವಾ ಮಖಂ ತಂ ಪುರುಷೋತ್ತಮೇರಿತಮ್ ॥ ೩೦.೧೪೫ ॥

 

ರಾಮಚಂದ್ರ, ಚತುರ್ಮುಖ ಬ್ರಹ್ಮ, ಇಂದ್ರ, ಈ ಮೂರು ಜನರ ಯಜ್ಞ ಬಿಟ್ಟರೆ ಇನ್ನು ಯಾವ ಯಜ್ಞವೂ ಕೂಡಾ ಈರೀತಿಯಾಗಿ ಇರಲಿಲ್ಲ ಎಂದು ಎಲ್ಲರೂ ಹೇಳಿದರು.

 

ಸ ಏವಮದ್ಧಾ ಹರಿದೈವತಃ ಕ್ರತುಃ  ಪಞ್ಚಾಶ್ವಮೇಧಾತ್ಮಕ ಉಚ್ಚಕಲ್ಪಃ ।

ದಿನೇದಿನೇ ಸ್ವೃದ್ಧಗುಣೋ ಬಭೂವ ಮುದಾವಹೋ ವತ್ಸರಪಞ್ಚಕತ್ರಯಮ್ ॥ ೩೦.೧೪೬ ॥

 

ಈರೀತಿಯಾಗಿ ಪರಮಾತ್ಮನನ್ನೇ ಪ್ರತ್ಯಕ್ಷ ದೇವತೆಯಾಗಿ ಒಳಗೊಂಡ, ಐದು ಅಶ್ವಮೇಧಕ್ಕೆ ಸಮಾನವಾದ,  ದಿನದಿಂದ ದಿನಕ್ಕೆ ಉತ್ಕೃಷ್ಟವಾಗಿ ನಡೆದ ಆ ಯಜ್ಞವು ಹದಿನೈದು ವರ್ಷಗಳ ಕಾಲ ನಡೆಯಿತು ಮತ್ತು ಅದು ಎಲ್ಲಾ ಸಜ್ಜನರಿಗೆ ಸಂತಸವನ್ನುಂಟುಮಾಡಿತು.

No comments:

Post a Comment