ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 10, 2023

Mahabharata Tatparya Nirnaya Kannada 30-68-84

 

ವಞ್ಚಯಿತ್ವೈವ ತಂ ಶಕ್ರೋ ಯಯೌ ಪ್ರೀತಃ ಸ್ವಮಾಲಯಮ್ ।

ಅಸಾಧಾರಣಮನ್ನಂ ಹಿ ದೇವಾನಾಮಮೃತಂ ಸದಾ ॥ ೩೦.೬೮ ॥

 

ಹೀಗೆ ಇಂದ್ರನು ಉದಙ್ಕನನ್ನು ಮೋಸಗೊಳಿಸಿ, ಸಂತೋಷದಿಂದ ತನ್ನ ಮನೆಗೆ ತೆರಳಿದನು. (ಇಂದ್ರ ಉದಙ್ಕನಿಗೆ ಏಕೆ ಮೋಸ ಮಾಡಿದ ಎಂದರೆ-) ದೇವತೆಗಳಿಗೆ ಅಮೃತವು ಅಸಾಧಾರಣ ಅನ್ನ. (ದೇವತೆಗಳು ಮಾತ್ರ ಅಮೃತವನ್ನು ತೆಗೆದುಕೊಳ್ಳಬೇಕು, ಬೇರೆಯವರು ತೆಗೆದುಕೊಳ್ಳುವಂತಿಲ್ಲ ಎನ್ನುವುದು ಅನಾದಿಕಾಲದ ನಿಯಮ)

 

 

ಅನ್ಯಪೀತಿಸ್ತತಸ್ತಸ್ಯ ದೇವಾನಾಂ ಪರಮಾಪ್ರಿಯಾ ।

ಆತ್ಮದತ್ತಪ್ರಸಾದಾಚ್ಚ ಸ್ವಾಪರಾಧಾತ್ ಪ್ರಚಾಲಿತೇ ॥ ೩೦.೬೯ ॥

 

ಉದಙ್ಕೇ ವಾಸುದೇವಸ್ತು ಯುಕ್ತಮಿತ್ಯೇವ ಮನ್ಯತೇ ।

ಸ್ವಪುರೀಂ ಪ್ರಾಪ್ಯ ಯದುಭಿಃ ಪೂಜಿತಃ ಶೂರಸೂನವೇ ॥ ೩೦.೭೦ ॥

 

ವೃತ್ತಾನ್ತಂ ಕಥಯಾಮಾಸ ಕೇಶವೋ ಯದುಸಂಸದಿ ।

ವಧಮನ್ತರಿತಂ ಸೂನೋಃ ಸಾತ್ವತೇಶೇನ ಸಾತ್ವತೀ ॥ ೩೦.೭೧ ॥

 

ಪ್ರಣಮ್ಯ ಕಥಯೇತ್ಯೂಚೇ ತತ ಆಹ ಜನಾರ್ದ್ದನಃ ।

ತತಃ ಸುದುಃಖಿತಾಃ ಶೂರಪುತ್ರಾದ್ಯಾ ಅಭಿಮನ್ಯವೇ ॥ ೩೦.೭೨ ॥

 

ಶ್ರಾದ್ಧದಾನಾನಿ ಬಹುಶಶ್ಚಕ್ರುಃ ಕೇಶವಸಂಯುತಾಃ ।

ನಿವಸತ್ಯತ್ರ ವಿಶ್ವೇಶೇ ಧರ್ಮ್ಮಪುತ್ರಃ ಕ್ರತೂತ್ತಮಮ್ ॥ ೩೦.೭೩ ॥

 

ಅಶ್ವಮೇಧಮನುಷ್ಠಾತುಂ ನಾವಿನ್ದದ್ ವಿತ್ತಮಞ್ಜಸಾ ।

ಹತಶೇಷಾತ್ ಕ್ಷತ್ರಸಙ್ಘಾತ್ ಕರಂ ನೈಚ್ಛದ್ ದಯಾಪರಃ ॥ ೩೦.೭೪ ॥

 

ಅಮೃತವನ್ನು ದೇವೇತರರು ಸೇವಿಸುವುದು ದೇವತೆಗಳಿಗೆ ಅತ್ಯಂತ ಅಪ್ರಿಯ. ಉದಙ್ಕನಿಗೆ ಶ್ರೀಕೃಷ್ಣ ಅನುಗ್ರಹ ಮಾಡಿದ್ದರೂ ಕೂಡಾ ಅವನು ತನ್ನ ಅಜ್ಞಾನರೂಪವಾದ ಅಪರಾಧದಿಂದ ಅದನ್ನು ಕಳೆದುಕೊಂಡ. ಅದರಿಂದಾಗಿ ಶ್ರೀಕೃಷ್ಣನು ಅದನ್ನು ಯುಕ್ತವೆಂದೇ ತಿಳಿದನು.

ಇತ್ತ ಶ್ರೀಕೃಷ್ಣ ತನ್ನ ಪಟ್ಟಣಕ್ಕೆ ತೆರಳಿ, ಯಾದವರಿಂದ ಸತ್ಕಾರಕ್ಕೊಳಗಾಗಿ, ವಸುದೇವನಿಗೆ ಯಾದವರೆಲ್ಲರೂ ಸೇರಿರುವಾಗ ಎಲ್ಲಾ ವೃತ್ತಾಂತವನ್ನು ಹೇಳಿದನು. ಶ್ರೀಕೃಷ್ಣನಿಂದ ತನ್ನ ಮಗನ ಸಂಹಾರದ ಕಥೆಯು ಮಧ್ಯದಲ್ಲಿ ಹಾರಿಸಲ್ಪಟ್ಟಿದ್ದನ್ನು ನೋಡಿ(ಸ್ಪಷ್ಟವಾಗಿ ವಿವರಿಸಿ ಹೇಳಲ್ಪಡದೇ ಇದ್ದಾಗ), ಸುಭದ್ರೆಯು ಶ್ರೀಕೃಷ್ಣನಿಗೆ ನಮಸ್ಕಾರ ಮಾಡಿ, ‘ಅಭಿಮನ್ಯುವಿನ ಸಾವಿನ ಕುರಿತೂ ಹೇಳು’ ಎಂದು ಕೇಳಿಕೊಂಡಳು. ತದನಂತರ ಶ್ರೀಕೃಷ್ಣ ಪರಮಾತ್ಮನು ಅದನ್ನೂ ಹೇಳಿದನು. ಆಗ ಅತ್ಯಂತ ದುಃಖಿತರಾದ ವಸುದೇವ ಮೊದಲಾದವರು, ಕೇಶವನಿಂದ ಕೂಡಿಕೊಂಡು ಅಭಿಮನ್ಯುವಿಗೆ ಶ್ರಾದ್ಧ ಮೊದಲಾದವುಗಳನ್ನು ಮಾಡಿದರು.  ಹೀಗೆ ದ್ವಾರಕಾ ಪಟ್ಟಣದಲ್ಲಿ ಶ್ರೀಕೃಷ್ಣನು ವಾಸಮಾಡುತ್ತಿರಲು, ಇತ್ತ ಧರ್ಮರಾಜನು ಯಜ್ಞಗಳಲ್ಲಿಯೇ ಮಿಗಿಲೆನಿಸಿಕೊಂಡ ಅಶ್ವಮೇಧವನ್ನು ಮಾಡಲು ತನ್ನಲ್ಲಿರುವ ದ್ರವ್ಯ ಅಪೂರ್ಣ ಎಂದು ತಿಳಿದನು. ದಯಾವಂತನಾಗಿರುವ ಅವನು ಅದಕ್ಕಾಗಿ ಯುದ್ಧದಲ್ಲಿ ಅಳಿದು-ಉಳಿದ ಕ್ಷತ್ರಿಯರಿಂದ ಕಂದಾಯವನ್ನು ಪಡೆಯಲು ಬಯಸಲಿಲ್ಲ.

 

ನಚ ಮದ್ಧ್ಯಮಕಲ್ಪೇನ ಯಷ್ಟುಂ ತಸ್ಯ ಮನೋಗತಮ್ ।

ವಿಜ್ಞಾಯ ನಿತ್ಯವಿಜ್ಞಾತನಿಖಿಲೋ ಬಾದರಾಯಣಃ ॥ ೩೦.೭೫ ॥

 

ಆವಿರ್ಭೂತೋ ಹಿಮವತಃ ಶೃಙ್ಗಂ ಯತ್ರಾಭಿಸಙ್ಗತಮ್ ।

ಮೇರುಶೃಙ್ಗೇಣ ಯತ್ರೈವ ವಿಷ್ಣುಃ ಸ್ವಾತ್ಮಾನಮವ್ಯಯಮ್ ॥ ೩೦.೭೬ ॥

 

ಲೋಕಸ್ಯ ಸಙ್ಗ್ರಹಾಯೇಜೇ ಕರ್ಮ್ಮಬನ್ಧೋಜ್ಝಿತೋSಪಿ ಸನ್ ।

ಶಙ್ಕರಾದ್ಯಾಃ ಸುರಾ ಯತ್ರ ಮರುತ್ತಶ್ಚೇಜಿರೇ ಹರಿಮ್ ॥ ೩೦.೭೭ ॥

 

ದಾನವೋ ವೃಷಪರ್ವಾ ಚ ತತ್ರಾಸ್ತಿ ಧನಮಕ್ಷಯಮ್ ।

ತಚ್ಛಙ್ಕರಶರೀರಸ್ಥಂ ಜಾಮದಗ್ನ್ಯಂ ಹರಿಂ ಪರಮ್ ॥ ೩೦.೭೮ ॥

 

ಇಷ್ಟ್ವೈವಾನುಜ್ಞಯಾ ತಸ್ಯ ಸ್ವೀಕೃತ್ಯ ಯಜ ತೇನ ಚ ।

ಇತ್ಯಾಹ ವ್ಯಾಸವಾಕ್ಯಾನು ಭೀಮೋSಪ್ಯಾಹ ನೃಪೋತ್ತಮಮ್ ॥ ೩೦.೭೯ ॥

 

ಧನಸ್ಯ ದೇವತಾ ವಿಷ್ಣುರ್ಜ್ಜಾಮದಗ್ನ್ಯೋSಖಿಲೇಶ್ವರಃ ।

ಸ ಶಙ್ಕರಶರೀರಸ್ಥೋ ಯಜ್ಞೋಚ್ಛಿಷ್ಟಧನಾಧಿಪಃ ॥ ೩೦.೮೦ ॥

 

ಮಧ್ಯಮ ಕಲ್ಪದಲ್ಲಿ (ತನ್ನಲ್ಲಿರುವಷ್ಟು ವಿತ್ತದಲ್ಲಿ) ಯಾಗ ಮಾಡಲು ಯುಧಿಷ್ಠಿರನಿಗೆ ಇಷ್ಟವಿರಲಿಲ್ಲ. ಆಗ ಅವನ ಮನಸ್ಸಿನಲ್ಲಿ ಇರುವ ವಿಷಯವನ್ನು ತಿಳಿದ, ಎಲ್ಲವನ್ನೂ ಬಲ್ಲ ವೇದವ್ಯಾಸರು ಆವಿರ್ಭೂತರಾಗಿ ಹೇಳಿದರು-‘ಹಿಮಾಲಯ ಪರ್ವತಶ್ರೇಣಿಯಲ್ಲಿ ಮೇರುಪರ್ವತವೂ ಒಂದು. ಅಲ್ಲಿ ಲೋಕಕ್ಕೆ ತಿಳಿಯಲಿ ಎನ್ನುವ ಉದ್ದೇಶದಿಂದ ಕರ್ಮಬಂಧದಿಂದ ರಹಿತನಾದರೂ ನಾರಾಯಣನು ಯಾಗಗಳನ್ನು ಮಾಡಿದ್ದನು. ಎಲ್ಲಿ ರುದ್ರನೇ ಮೊದಲಾದವರು, ಮರುತ್ತನೂ ಕೂಡಾ, ಪರಮಾತ್ಮನನ್ನು ಯಜ್ಞದಿಂದ ಪೂಜಿಸಿದರೋ, ದಾನವನಾಗಿರುವ ವೃಷಪರ್ವನು ಎಲ್ಲಿ ಯಾಗವನ್ನು ಮಾಡಿದನೋ, ಅಲ್ಲಿ ಎಣೆಯಿರದ, ಮಿಗಿಲಾದ ಸಂಪತ್ತಿದೆ. ಶಂಕರನ ಶರೀರದೊಳಗಿರುವ ಉತ್ಕೃಷ್ಟನಾದ ಪರಶುರಾಮನನ್ನು ಪೂಜಿಸಿ, ಅವನ ಅನುಜ್ಞೆಯಿಂದ ಆ ದ್ರವ್ಯವನ್ನು ಸ್ವೀಕರಿಸಿ, ಅದರಿಂದ ಯಾಗ ಮಾಡು’ ಎಂದು. ವೇದವ್ಯಾಸರ ಮಾತಿನ ನಂತರ ಧರ್ಮರಾಜನನ್ನು ಕುರಿತು ಭೀಮಸೇನನು ಮಾತನಾಡಿದನು- ‘ಎಲ್ಲಕ್ಕೂ ಒಡೆಯನಾದ ಪರಶುರಾಮರೂಪಿ ನಾರಾಯಣನು ಧನಕ್ಕೆ ಒಡೆಯ. ಅವನು ಶಂಕರನ ಶರೀರದಲ್ಲಿದ್ದು ಯಜ್ಞೋಚ್ಛಿಷ್ಟಕ್ಕೆ ಒಡೆಯನೆನಿಸಿದ್ದಾನೆ’ ಎಂದನು.

[ಮಹಾಭಾರತದ ಅಶ್ವಮೇಧಿಕಪರ್ವದಲ್ಲಿ ಈ ಕುರಿತಾಗಿ ಹೇಳಿರುವುದನ್ನು ಕಾಣುತ್ತೇವೆ: ಮಹಾದೇವಾಯ ಕೃಷ್ಣಾಯ ತ್ರ್ಯಮ್ಬಕಾಯಾನಘಾಯ ಚ (೮.೨೫). ಪುರುಷಸೂಕ್ತದಲ್ಲಿ ಬಂದಿರುವ ಚಿಂತನೆಯನ್ನೂ ಅಲ್ಲಿ ಹೇಳಿರುವುದನ್ನು ಕಾಣುತ್ತೇವೆ. ಸಹಸ್ರಶಿರಸೇ ಚೈವ ಸಹಸ್ರಚರಣಾಯ ಚ (೨೭),  ಇದು ಅಂತರ್ಯಾಮಿಯನ್ನು ವಿವಕ್ಷೆ ಮಾಡಿಯೇ ಹೇಳಿರುವುದು ಎನ್ನುವುದು ಬ್ರಹ್ಮಸೂತ್ರನಿರ್ಣಯ ಮೊದಲಾದವುಗಳಿಂದ ಸ್ಪಷ್ಟವಾಗುತ್ತದೆ. ಜಗತ್ತಿನಲ್ಲಿ ಯಜ್ಞೋಚ್ಛಿಷ್ಟವೆನ್ನುವುದೇನಿದೆ, ಅದೆಲ್ಲಕ್ಕೂ ಒಡೆಯ ಸದಾಶಿವನೇ ಆಗಿದ್ದಾನೆ. ಸದಾಶಿವನ ಒಳಗಡೆ ಎಲ್ಲಾ ಯಾಗದ ಹಣಕ್ಕೆ ಒಡೆಯ ಪರಶುರಾಮನೇ ಆಗಿದ್ದಾನೆ. ಅದರಿಂದಾಗಿ ಧರ್ಮರಾಜನಿಗೆ ಪರಶುರಾಮನನ್ನು ವಿಶೇಷವಾಗಿ ಪೂಜೆಮಾಡಿ ಹಿಮಾಲಯದ ಮೇರುಪರ್ವತದಲ್ಲಿರುವ ಸಂಪತ್ತನ್ನು ಪಡೆದು ಯಾಗ ಮಾಡು ಎಂದು ವೇದವ್ಯಾಸರು ಹೇಳಿದರು]

 

ತೇನೈವ ವಿಷ್ಣುನಾ ದತ್ತಮರ್ಜ್ಜುನಾಯಾಸ್ತ್ರಮುತ್ತಮಮ್ ।

ಕಾರ್ಯ್ಯಾಣ್ಯನ್ಯಾನಿ ಚಾಸ್ಮಾಕಂ ಕೃತಾನ್ಯೇತೇನ ವಿಷ್ಣುನಾ ॥ ೩೦.೮೧ ॥

 

ಮುಂದುವರಿದು ಭೀಮಸೇನ ಹೇಳುತ್ತಾನೆ- ‘ರುದ್ರನ ಅಂತರ್ಯಾಮಿಯಾಗಿರುವ ಅದೇ ಪರಶುರಾಮನಿಂದ ಅರ್ಜುನನಿಗೆ ಉತ್ತಮವಾದ ಅಸ್ತ್ರವು(ಪಾಶುಪತಾಸ್ತ್ರವು) ಕೊಡಲ್ಪಟ್ಟಿತು. ನಮ್ಮ ಇತರವಾದ ಎಲ್ಲಾ ಕಾರ್ಯಗಳನ್ನೂ ಕೂಡಾ ಇದೇ ನಾರಾಯಣನು ಮಾಡಿರುವುದು.

 

ಸ ಬ್ರಹ್ಮರುದ್ರಶಕ್ರಾದಿಪದದಾತಾSಖಿಲಪ್ರದಃ ।

ಸ್ವತನ್ತ್ರಃ ಪರತನ್ತ್ರಾಂಸ್ತಾನಾವರ್ತ್ತಯತಿ ಚೇಚ್ಛಯಾ ॥ ೩೦.೮೨ ॥

 

ಬ್ರಹ್ಮ, ರುದ್ರ, ಇಂದ್ರ, ಮೊದಲಾದವರಿಗೆ ಪದವಿಯನ್ನು ಕೊಟ್ಟವನು ಹಾಗೂ ಇತರ ಎಲ್ಲವನ್ನೂ ಕೊಡುವ ಸ್ವತಂತ್ರನಾದ ಆ ಪರಮಾತ್ಮನು ತನ್ನ ಇಚ್ಛೆಗೆ ಅನುಗುಣವಾಗಿ ಜೀವರನ್ನು ಬೇರೆಬೇರೆ ಕಡೆ ತೊಡಗಿಸುತ್ತಾನೆ.

 

ಪ್ರಿಯೋSಸ್ಮಾಕಂ ಪ್ರಿಯಾಸ್ತಸ್ಯ ಸರ್ವದೈವ ವಯಂ ನೃಪ ।

ಅತಸ್ತದಭ್ಯನುಜ್ಞಾತಧನೇನೈವ ಯಜಾಮಹೇ ॥ ೩೦.೮೩ ॥

 

ನಮಗೆ ಪರಮಾತ್ಮನು ಪ್ರಿಯನಾಗಿದ್ದಾನೆ. ಅವನಿಗೆ ನಾವು ಯಾವಾಗಲೂ ಪ್ರೀತಿಪಾತ್ರರು. ಆ ಕಾರಣದಿಂದ ಅವನು ಕೊಟ್ಟ ಧನದಿಂದ ಅವನನ್ನೇ ಯಾಗದ ಮೂಲಕ ಪೂಜಿಸೋಣ.

 

ಸೋSಯಂ ಪಿತಾಮಹೋSಸ್ಮಾಕಂ ವ್ಯಾಸಸ್ತನ್ನಃ ಪ್ರದಾಸ್ಯತಿ ।

ಇತ್ಯುಕ್ತ್ವಾ ತಂ ಪುರಸ್ಕೃತ್ಯ ಕೃಷ್ಣದ್ವೈಪಾಯನಂ ಯಯುಃ ॥ ೩೦.೮೪ ॥

 

ಆ ಪರಶುರಾಮನೇ ನಮ್ಮ ಪಿತಾಮಹನಾಗಿಯೂ ಇರುವ ವೇದವ್ಯಾಸರು. ಅವರು ನಮಗೆ ದ್ರವ್ಯವನ್ನು  ಕೊಡುತ್ತಾರೆ.’ ಹೀಗೆ ಹೇಳಿ, ಆ ವೇದವ್ಯಾಸರನ್ನು ಮುಂದೆ ಮಾಡಿಕೊಂಡು ಅವರು ಹಿಮವತ್ ಪರ್ವತದತ್ತ ತೆರಳಿದರು.

No comments:

Post a Comment