ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 10, 2023

Mahabharata Tatparya Nirnaya Kannada 30-85-95

 

ಧನಂ ಕೃಷ್ಣಃ ಸಮಾದಾಯ ಸಮನ್ತಾಚ್ಛತಯೋಜನಮ್ ।

ದದೌ ತೇಷಾಂ ತೇSಪಿ ಚೋಹುರ್ಹಸ್ತ್ಯುಷ್ಟ್ರಾಶ್ವನರಾದಿಭಿಃ ॥ ೩೦.೮೫ ॥

 

ವೇದವ್ಯಾಸರು ಶತಯೋಜನ ಪರಿಮಿತವಾದ ಅಪಾರ ಪ್ರಮಾಣದ ಧನರಾಶಿಯನ್ನು ಪಾಂಡವರಿಗೆ  ಕೊಟ್ಟರು. ಅವರಾದರೋ, ಆನೆ, ಒಂಟೆ, ಅಶ್ವ, ಮನುಷ್ಯರು, ಮೊದಲಾದವರಿಂದ ಅದನ್ನು ಹೊರಿಸಿದರು.

 

ಯುಧಿಷ್ಠಿರಮೃತೇ ಸರ್ವೇ ಭೀಮಸೇನಪುರೋಗಮಾಃ ।

ಯಜ್ಞಾರ್ತ್ಥಮೂಹಿರೇ ಭೂರಿ ಸ್ವರ್ಣ್ಣಮುದ್ಯದ್ರವಿಪ್ರಭಮ್ ॥ ೩೦.೮೬ ॥

 

ಯುಧಿಷ್ಠಿರನನ್ನು ಹೊರತು ಭೀಮಸೇನನೇ ಮೊದಲಾದ ಎಲ್ಲರೂ ಕೂಡಾ ಯಜ್ಞಕ್ಕಾಗಿ ಉದಯಿಸುವ ಕಾಂತಿಯುಳ್ಳ ಬಹಳವಾದ ಬಂಗಾರವನ್ನು ಯಾಗಕ್ಕಾಗಿ ತಾವೇ ಹೊತ್ತುಕೊಂಡರು.

 

ತದೈವ ವಾಸುದೇವೋSಪಿ ಸಭಾರ್ಯ್ಯಃ ಸಹ ಭದ್ರಯಾ ।

ಆಗಚ್ಛನ್ ಹಸ್ತಿನಪುರಂ ಪಥ್ಯುದಙ್ಕೇನ ಪೂಜಿತಃ ॥ ೩೦.೮೭ ॥

 

ಆಗಲೇ ಸುಭದ್ರೆ ಹಾಗೂ ತನ್ನ ಪತ್ನಿಯರಿಂದ ಕೂಡಿಕೊಂಡು ಹಸ್ತಿನಪುರಕ್ಕೆ ಬರುತ್ತಿರುವ ಶ್ರೀಕೃಷ್ಣನು, ದಾರಿಯಲ್ಲಿ ಉದಙ್ಕನಿಂದ ಪೂಜಿತನಾದ.

 

ತತ್ಕಾಮವರ್ಷಿಣೋ ಮೇಘಾಂಸ್ತಸ್ಯ ದತ್ವೋದಕಾರ್ತ್ಥಿನಃ ।

ಸಫಲಂ ಸ್ವವರಂ ಕೃತ್ವಾ ಜಗಾಮ ಗಜಸಾಹ್ವಯಮ್ ॥ ೩೦.೮೮ ॥

 

ನೀರು ಬೇಕೆಂದು ಬಯಸುತ್ತಿರುವ ಉದಙ್ಕನಿಗೆ ಅವನು ಬೇಕೆಂದಾಗ ಮಳೆಸುರಿಸುವ ಮೋಡಗಳನ್ನು ಕೊಟ್ಟು  ತನ್ನ ವರವನ್ನು ಸಫಲವನ್ನಾಗಿ ಮಾಡಿ, ಶ್ರೀಕೃಷ್ಣ ಹಸ್ತಿನಪುರಕ್ಕೆ  ತೆರಳಿದ.

[ಉದಙ್ಕ ಅಮೃತ ಬಯಸಿರುವುದು ನೀರಿಗಾಗಿ. ಅದರಿಂದ ಅವನಿಗೆ ಬಯಸಿದಾಗ ಮಳೆ ಬರುವ ವರವನ್ನು ನೀಡಿ ಕೃಷ್ಣ ತಾನು ಹಿಂದೆ ಕೊಟ್ಟ ವರವನ್ನು ಸಫಲವನ್ನಾಗಿ ಮಾಡಿದ.]

 

ಆಸನ್ನೇಷ್ವೇವ ಪಾರ್ತ್ಥೇಷು ವ್ಯಾಸೇ ಚ ಪುರುಷೋತ್ತಮೇ ।

ಪ್ರವಿವೇಶ ಪುರಂ ಕೃಷ್ಣಸ್ತದಾSಸೂತೋತ್ತರಾ ಮೃತಮ್ ॥ ೩೦.೮೯ ॥

 

ಪಾಂಡವರು ಹಾಗೂ ವೇದವ್ಯಾಸರು ಹಸ್ತಿನಾವತಿಯನ್ನು ಸಮೀಪಿಸುತ್ತಿರುವ ಸಮಯದಲ್ಲಿ ಶ್ರೀಕೃಷ್ಣನು  ನಗರದ ಒಳಗೆ ಬಂದನು. ಆಗಲೇ  ಅಭಿಮನ್ಯುವಿನ ಪತ್ನಿಯಾದ ಉತ್ತರೆಯು ಸತ್ತ ಮಗನನ್ನು ಹೆತ್ತಳು.

 

ದ್ರೌಣ್ಯಸ್ತ್ರಸೂದಿತಂ ಬಾಲಂ ದೃಷ್ಟ್ವಾ ಕುನ್ತ್ಯಾದಿಕಾಃ ಸ್ತ್ರಿಯಃ ।

ಶರಣ್ಯಂ ಶರಣಂ ಜಗ್ಮುರ್ವಾಸುದೇವಂ ಜಗತ್ಪತಿಮ್ ॥ ೩೦.೯೦ ॥

 

ಅಶ್ವತ್ಥಾಮ ಕಾಯ್ದಿರಿಸಿದ ಬ್ರಹ್ಮಾಸ್ತ್ರದಿಂದ ಸತ್ತ ಬಾಲಕನನ್ನು ಕಂಡು ಕುಂತಿಯೇ ಮೊದಲಾದ ಹೆಣ್ಣು ಮಕ್ಕಳು, ಮೊರೆಹೋಗಲು ಯೋಗ್ಯನಾದ, ಜಗತ್ತಿಗೇ ಒಡೆಯನಾಗಿರುವ, ಶ್ರೀಕೃಷ್ಣ ಪರಮಾತ್ಮನನ್ನು ರಕ್ಷಣೆಗಾಗಿ ಬೇಡಿದರು.

 

ಪ್ರತ್ಯಕ್ಷಮಾತ್ಮನಾ ಗರ್ಭೇ ರಕ್ಷಿತಂ ಪ್ರಸವೇ ಹತಮ್ ।

ಪುನರುಜ್ಜೀವಯಾಮಾಸ ಕೇಶವಃ ಪಾರ್ತ್ಥತನ್ತವೇ ॥ ೩೦.೯೧ ॥

 

ತನ್ನಿಂದ ಗರ್ಭದಲ್ಲಿ ರಕ್ಷಿತನಾದ, ಆದರೆ ಹೆತ್ತಕೂಡಲೇ ಸತ್ತ ಈ ಮಗುವನ್ನು ಎಲ್ಲರೂ ನೋಡುತ್ತಿರುವಾಗಲೇ ಪಾಂಡವರ ಸಂತತಿಯ ಮುಂದುವರಿಕೆಗಾಗಿ ಶ್ರೀಕೃಷ್ಣ ಬದುಕಿಸಿದ.

[‘ಮಗು ಗರ್ಭದಲ್ಲಿರುವಾಗ ಭಗವಂತ ಹೆಬ್ಬೆಟ್ಟಿನ ಗಾತ್ರದ ರೂಪದಲ್ಲಿ ಮಗುವಿಗೆ ಕಾಣಿಸಿಕೊಂಡು ಆ ಮಗುವನ್ನು ರಕ್ಷಿಸುತ್ತಿದ್ದ’ ಎಂದು ಭಾಗವತ ಹೇಳಿದರೆ, ಹೆತ್ತ ಕೂಡಲೇ ಸತ್ತ ಮಗುವನ್ನು ಕೃಷ್ಣ ಮರಳಿ ಬದುಕಿಸಿ ರಕ್ಷಿಸಿದ ಎಂದು ಮಹಾಭಾರತ ಹೇಳುತ್ತದೆ. ಈ ರೀತಿ ಪಾಂಡವರ ಸಂತತಿಗೆ ಗರ್ಭದ ಒಳಗೂ ಹೊರಗೂ ಭಗವಂತ ರಕ್ಷಕನಾಗಿ ನಿಂತು ಕಾಪಾಡಿದ.]

 

ತದೈವ ವಿವಿಶುಃ ಪಾರ್ತ್ಥಾಃ ಸಕೃಷ್ಣಾಃ ಸಧನೋಚ್ಚಯಾಃ ।

ಸರ್ವೇ ಮುಮುದಿರೇ ದೃಷ್ಟ್ವಾ ಪೌತ್ರಂ ಕೇಶವರಕ್ಷಿತಮ್ ॥ ೩೦.೯೨ ॥

 

ಆಗಲೇ ವೇದವ್ಯಾಸರೊಂದೊಡಗೂಡಿದ ಪಾಂಡವರು ಧನರಾಶಿಯೊಂದಿಗೆ ಪಟ್ಟಣವನ್ನು ಪ್ರವೇಶಮಾಡಿದರು,. ಎಲ್ಲರೂ ಶ್ರೀಕೃಷ್ಣನಿಂದ ರಕ್ಷಿತವಾದ ಮಗುವನ್ನು (ಪರೀಕ್ಷಿತನನ್ನು) ಕಂಡು ಸಂತೋಷಪಟ್ಟರು.

 

 

ದದೌ ದಾನಾನಿ ಬಹುಶೋ ಧರ್ಮ್ಮಪುತ್ರೋ ಯುಧಿಷ್ಠಿರಃ ।

ಪೌತ್ರಜನ್ಮನಿ ಹೃಷ್ಟಾತ್ಮಾ ವಾಸುದೇವಂ ನನಾಮ ಚ ॥ ೩೦.೯೩ ॥

 

ಧರ್ಮಪುತ್ರನಾಗಿರುವ ಯುಧಿಷ್ಠಿರನು ಮೊಮ್ಮಗ ಹುಟ್ಟಿರುವುದಕ್ಕೆ ಬಹಳ ಸಂತಸಗೊಂಡು ಅನೇಕಾನೇಕ ದಾನಗಳನ್ನು ಕೊಟ್ಟನು ಮತ್ತು ಶ್ರೀಕೃಷ್ಣನಿಗೆ ನಮಸ್ಕರಿಸಿದನು.

 

ಕುನ್ತೀಕೃಷ್ಣಾಸುಭದ್ರಾಭಿರ್ವೈರಾಟ್ಯಾSನ್ಯಾಭಿರೇವ ಚ ।

ಪಾಣ್ಡವೈಃ ಪುರುಷೈಶ್ಚಾನ್ಯೈಃ ಸಂಸ್ತುತಃ ಪ್ರಣತೋ ಹರಿಃ ॥ ೩೦.೯೪ ॥

 

ಕುಂತಿ, ದ್ರೌಪದಿ, ಸುಭದ್ರೆ, ಉತ್ತರೆ ಮತ್ತು ಇತರ ಹೆಣ್ಣುಮಕ್ಕಳಿಂದ, ಪಾಂಡವರಿಂದ, ಉಳಿದ ಪುರುಷರಿಂದ ಪರಮಾತ್ಮನು ಚೆನ್ನಾಗಿ ಸ್ತೋತ್ರಮಾಡಲ್ಪಟ್ಟ ಹಾಗೂ ನಮಿಸಲ್ಪಟ್ಟ ಕೂಡಾ.

 

ತತಃ ಕೃಷ್ಣಾಭ್ಯನುಜ್ಞಾತಾಃ ಪಾರಾಶರ್ಯ್ಯಸದಸ್ಯಕಾಃ ।

ಆರೇಭಿರೇSಶ್ವಮೇಧಂ ತೇ ಮುನಿಭಿರ್ಬ್ರಹ್ಮವಾದಿಭಿಃ ॥ ೩೦.೯೫ ॥

 

ತದನಂತರ ಶ್ರೀಕೃಷ್ಣನ ಅನುಜ್ಞೆಯಂತೆ, ವೇದವ್ಯಾಸರನ್ನೇ ಮುಖ್ಯ ಸದಸ್ಯರನ್ನಾಗಿ ಮಾಡಿಕೊಂಡ ಪಾಂಡವರು ಬ್ರಹ್ಮವಾದಿಗಳಾದ ಮುನಿಗಳಿಂದ ಕೂಡಿ, ಅಶ್ವಮೇಧವನ್ನು ಮಾಡಿದರು.   

No comments:

Post a Comment