ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, May 30, 2018

Mahabharata Tatparya Nirnaya Kannada 7.16-7.21

ಕೃತ್ವಾ ಕಾರ್ಯಮಿದಂ ಸರ್ವಂ ವಿಶಙ್ಕಃ ಪವನಾತ್ಮಜಃ ।
ಆತ್ಮಾವಿಷ್ಕರಣೇ ಚಿತ್ತಂ ಚಕ್ರೇ ಮತಿಮತಾಂ ವರಃ ॥೭.೧೬॥

ಯಾವುದೇ ಭಯವಿಲ್ಲದ, ಈ ಎಲ್ಲಾ ಕೆಲಸಗಳನ್ನು ಮಾಡಿದ, ಬುದ್ಧಿವಂತರಲ್ಲೇ ಶ್ರೇಷ್ಠನಾದ ಹನುಮಂತನು, ತನ್ನನ್ನು ತೋರಿಸಿಕೊಳ್ಳಲು ಸಂಕಲ್ಪ ಮಾಡಿದನು[ರಾಮಧೂತನಾಗಿ ಬಂದಿರುವ ತಾನು ಗುಟ್ಟಾಗಿ ಬಂದು ಹೋಗುವುದು ಸರಿಯಲ್ಲ. ತನ್ನ ಪರಾಕ್ರಮದ ರುಚಿಯನ್ನು ರಾವಣನಿಗೆ ತೋರಿಸಿಯೇ ಹೋಗಬೇಕು ಎಂದು ಸಂಕಲ್ಪ ಮಾಡಿದನು].

ಅಥವನಮಖಿಲಂ ತದ್ ರಾವಣಸ್ಯಾವಲುಪ್ಯ ಕ್ಷಿತಿರುಹಮಿಮಮೇಕಂ ವರ್ಜ್ಜಯಿತ್ವಾssಶು ವೀರಃ ।
ರಜನಿಚರವಿನಾಶಂ ಕಾಙ್ಕ್ಷಮಾಣೋsತಿವೇಲಂ ಮುಹುರತಿರವನಾದೀ ತೋರಣಂ ಚಾsರುರೋಹ ॥೭.೧೭॥

ಸೀತೆ ಕುಳಿತಿದ್ದ ಶಿಂಶಪಾವೃಕ್ಷ ಒಂದನ್ನು ಬಿಟ್ಟು, ರಾವಣನ ಆ ಎಲ್ಲಾ  ಕಾಡನ್ನು ನಾಶಮಾಡಿ, ರಾಕ್ಷಸರ ನಾಶವನ್ನು ಉತ್ಕಂಠತೆಯಿಂದ ಮಾಡಲು ಬಯಸಿದ ಹನುಮಂತ, ಮತ್ತೆ ದೊಡ್ಡದಾಗಿ ಶಬ್ದ ಮಾಡುತ್ತಾ ತೋರಣವನ್ನು ಹತ್ತಿ ಕುಳಿತನು.

ಅಥಾಶೃಣೋದ್ ದಶಾನನಃ ಕಪೀನ್ದ್ರಚೇಷ್ಟಿತಂ ಪರಮ್ ।
ದಿದೇಶ ಕಿಙ್ಕರಾನ್ ಬಹೂನ್ ಕಪಿರ್ನ್ನಿಗೃಹ್ಯತಾಮಿತಿ ॥೭.೧೮॥

ತದನಂತರ ರಾವಣನು ಉತ್ಕೃಷ್ಟವಾದ ಕಪಿಯ ಕ್ರಿಯೆಯನ್ನು ಕೇಳಿ, ಬಹುಮಂದಿ ಕಿಂಕರರೆಂಬ ರಾಕ್ಷಸರನ್ನು ಕರೆದು ‘ಕಪಿಯನ್ನು ಹಿಡಿಯಲು’ ಆದೇಶಿಸಿದನು.

ಸಮಸ್ತಶೋ ವಿಮೃತ್ಯವೋ ವರಾದ್ಧರಸ್ಯ ಕಿಙ್ಕರಾಃ ।
ಸಮಾಸದನ್ ಮಹಾಬಲಂ ಸುರಾನ್ತರಾತ್ಮನೋsಙ್ಗಜಮ್ ॥೭.೧೯॥

ಅವರೆಲ್ಲರೂ ಕೂಡಾ ಮರಣ ಇಲ್ಲದ ರಾಕ್ಷಸರು. ಅವರಿಗೆ ರುದ್ರ ದೇವರ ವರವಿತ್ತು. ಆ ಎಲ್ಲಾ ದೈತ್ಯರು  ಮಹಾ ಬಲಿಷ್ಠನಾದ ಹನುಮಂತನನ್ನು ಹೊಂದಿದರು. ಆಚಾರ್ಯರು ಹನುಮಂತನನ್ನು ಇಲ್ಲಿ ‘ಸುರಾನ್ತರಾತ್ಮನಃ ಅಙ್ಗಜಮ್’ ಎನ್ನುವ ವಿಶೇಷಣದಿಂದ ಸಂಬೋಧಿಸಿದ್ದಾರೆ.  ಅಂದರೆ ‘ದೇವತೆಗಳ ಅಂತರ್ಯಾಮಿಯಾಗಿರುವ ಮುಖ್ಯಪ್ರಾಣನ ಮಗ’ ಎಂದರ್ಥ.

ಅಶೀತಿಕೋಟಿಯೂಥಪಂ ಪುರಸ್ಸರಾಷ್ಟಕಾಯುತಮ್ ।
ಅನೇಕಹೇತಿಸಙ್ಕುಲಮ್ ಕಪೀನ್ದ್ರಮಾವೃಣೋದ್ ಬಲಮ್ ॥೭.೨೦॥

ಎಂಬತ್ತೆಂಟು ಕೋಟಿ ಜನ ಯೂಥಪರನ್ನೊಳಗೊಂಡ(ಸೇನಾಧಿಪತಿಗಳನ್ನೊಳಗೊಂಡ), ತರತರದ ಆಯುಧಗಳಿಂದ ಕೂಡಿದ ಸೈನ್ಯ ಹನುಮಂತನನ್ನು ಸುತ್ತುವರಿಯಿತು. 

ಸಮಾವೃತಸ್ತಥಾssಯುಧೈಃ ಸತಾಡಿತಶ್ಚತೈರ್ಭೃಶಮ್ ।
ಚಕಾರ ತಾನ್ ಸಮಸ್ತಶಸ್ತಳಪ್ರಹಾರಚೂರ್ಣ್ಣಿತಾನ್ ॥೭.೨೧॥

ಆಯುಧಗಳಿಂದ ಹೊಡೆಯಲ್ಪಟ್ಟವನಾಗಿ, ಅವರಿಂದ ಆವರಿಸಲ್ಪಟ್ಟವನಾಗಿ ಹನುಮಂತನು ಅವರೆಲ್ಲರನ್ನು ಅಂಗೈಯಿಂದ(ಕೈ ಮುಷ್ಠಿಯೂ  ಮಾಡದೇ) ಪುಡಿಪುಡಿ ಮಾಡಿದನು.  

Mahabharata Tatparya Nirnaya Kannada 7.10-7.15


ಮಾರ್ಗ್ಗಮಾಣೋ ಬಹಿಶ್ಚಾನ್ತಃ ಸೋsಶೋಕವನಿಕಾತಳೇ ।
ದದರ್ಶ ಶಿಂಶಪಾವೃಕ್ಷಮೂಲಸ್ಥಿತರಮಾಕೃತಿಮ್ ॥೭.೧೦॥

ಹನುಮಂತನು ಲಂಕಾ ನಗರದ ಒಳಗೂ ಹೊರಗೂ ಹುಡುಕುತ್ತಾ, ಅಶೋಕ ವೃಕ್ಷಗಳ ತೋಪಿನ ಮಧ್ಯೆ, ಶಿಂಶಪಾವೃಕ್ಷದ(ಒಂದು ಜಾತಿಯ ಅಶೋಕ ವೃಕ್ಷ)  ಮೂಲದಲ್ಲಿ ಇರುವ ಸೀತಾಕೃತಿಯನ್ನು ಕಂಡನು.
 [ಈ ವಿವರವನ್ನು ನಾರಸಿಂಹ ಪುರಾಣದಲ್ಲಿ(೫೧.೧೭-೧೯)  ಕಾಣಬಹುದು. ‘ಅಶೋಕವನಿಕಾಂ ಪ್ರಾಪ್ತೋ ನಾನಾಪುಷ್ಪಸಮನ್ವಿತಾಂ । ಜುಷ್ಟಾಂ  ಮಲಯಜಾತೇನ ಚಂದನೇನ ಸುಗಂಧಿನಾ । ಪ್ರವಿಶ್ಯ  ಶಿಂಶಪಾವೃಕ್ಷಮಾಶ್ರಿತಾಂ ಜನಕಾತ್ಮಜಾಮ್’]

ನರಲೋಕವಿಡಮ್ಬಸ್ಯ ಜಾನನ್ ರಾಮಸ್ಯ ಹೃದ್ಗತಮ್ ।
ತಸ್ಯ ಚೇಷ್ಟಾನುಸಾರೇಣ ಕೃತ್ವಾ ಚೇಷ್ಟಾಶ್ಚ ಸಂವಿದಃ ॥೭.೧೧॥

ತಾದೃಕ್ ಚೇಷ್ಟಾಸಮೇತಾಯಾ ಅಙ್ಗುಲೀಯಮದಾತ್ ತತಃ ।
ಸೀತಾಯ ಯಾನಿ ಚೈವಾsಸನ್ನಾಕೃತೇಸ್ತಾನಿ ಸರ್ವಶಃ ॥೭.೧೨॥

ಭೂಷಣಾನಿ ದ್ವಿಧಾ ಭೂತ್ವಾ ತಾನ್ಯೇವಾsಸಂಸ್ತಥೈವ ಚ ।
ಅಥ ಚೂಳಾಮಣಿಂ ದಿವ್ಯಂ ದಾತುಂ ರಾಮಾಯ ಸಾ ದದೌ ॥೭.೧೩॥

ಮನುಷ್ಯರೂಪದಲ್ಲಿ ಅವತರಿಸಿ ಮನುಷ್ಯರನ್ನೇ ಅನುಕರಿಸುವ ರಾಮಚಂದ್ರನ ಅಂತರಂಗದ ಅಭಿಪ್ರಾಯವನ್ನು ತಿಳಿದಿರುವ ಹನುಮಂತನು, ರಾಮನ ಅಸುರ ಮೋಹನರೂಪವಾದ ಕ್ರಿಯೆಯಂತೆಯೇ  ಅನೇಕ ಚೇಷ್ಟೆಗಳನ್ನು^ ಮಾಡುತ್ತಾ, ಅಂತದೇ ಕ್ರಿಯೆಯನ್ನು ಮಾಡುತ್ತಿರುವ ಸೀತಾಕೃತಿಯೊಂದಿಗೆ (ಮಾಯಾಸೀತೆಯೊಂದಿಗೆ) ಸಂವಾದವನ್ನು ನಡೆಸಿ, ತದನಂತರ ಉಂಗುರವನ್ನು ಕೊಡುತ್ತಾನೆ.
[^ಏನೂ ತಿಳಿಯದವನಂತೆ  ನಗರದ ಒಳಗೂ ಹೊರಗೂ ಸೀತೆಯನ್ನು ಹುಡುಕಿದುದು,  ಸೀತೆ ಸಿಗಲಿಲ್ಲಾ ಎಂದು ಅಸಮಾಧಾನ ಮಾಡಿಕೊಳ್ಳುವುದು, ಸೀತೆ ಸಿಗಲಿಲ್ಲಾ ಎಂದರೆ ಇಲ್ಲೇ ಪ್ರಾಣ ಕಳೆದುಕೊಳ್ಳುತ್ತೇನೆ ಎಂದುಕೊಳ್ಳುವುದು, ರಾವಣನ ಅಂತಃಪುರವನ್ನು ನೋಡಿದ ನಂತರ ತನ್ನ ಬ್ರಹ್ಮಚರ್ಯ ಸುರಕ್ಷಿತವಾಗಿಯೇ ಇದೆ ಎಂದು ದೃಢೀಕರಿಸಿಕೊಳ್ಳುವುದು, ಇತ್ಯಾದಿ ಚೇಷ್ಟೆಗಳನ್ನು ಹನುಮಂತ ಲಂಕೆಯಲ್ಲಿ ಮಾಡಿ ತೋರಿಸಿದ. ಇದರ ವಿಸ್ತಾರವಾದ ವಿವರಣೆ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗುತ್ತದೆ].

ಸೀತೆ ಹನುಮಂತನಿಗೆ ಚೂಡಾಮಣಿಯನ್ನು ನೀಡಿರುವ ಕುರಿತು ಆಚಾರ್ಯರು ವಿಶ್ಲೇಷಿಸುತ್ತಾ ಹೇಳುತ್ತಾರೆ: ‘ಸೀತೆಗೆ ಯಾವ-ಯಾವ ಆಭರಣಗಳು ಇದ್ದವೋ, ಅವೆಲ್ಲವೂ  ಸೀತಾಕೃತಿಯಲ್ಲೂ ಇದ್ದಿತ್ತು. ಆ ಆಭರಣದ ವಿನ್ಯಾಸದಲ್ಲಿ ಸ್ವಲ್ಪವೂ ವ್ಯತ್ಯಾಸವಿರಲಿಲ್ಲ’ ಎಂದು.
ಹನುಮಂತನೊಂದಿಗೆ ಮಾತನಾಡಿ ಕೆಲವು ಹೊತ್ತಿನ ನಂತರ, ತನ್ನ ಚೂಡಾಮಣಿಯನ್ನು ಆತನಿಗೆ ಕೊಟ್ಟ ಸೀತೆ, ಅದನ್ನು  ಶ್ರೀರಾಮನಿಗೆ ಕೊಡುವಂತೆ ಹೇಳುತ್ತಾಳೆ.

ಇಲ್ಲಿ  ಈರೀತಿಯ ಲೀಲಾನಾಟಕವಾಡಲು ಕಾರಣವೇನು? ಯಾರು ಇದನ್ನು ನೋಡುತ್ತಿದ್ದಾರೆ? ಈ ಪ್ರಶ್ನೆಗೆ ಆಚಾರ್ಯರು ಮುಂದಿನ ಶ್ಲೋಕಗಳಲ್ಲಿ ಉತ್ತರಿಸಿದ್ದಾರೆ:

ಯದ್ಯಪ್ಯೇತನ್ನ ಪಶ್ಯನ್ತಿ ನಿಶಾಚರಗಣಾಸ್ತುತೇ ।
ದ್ಯುಲೋಕಚಾರಿಣಃ ಸರ್ವಂ ಪಶ್ಯಂತ್ಯೃಷಯ ಏವ ಚ ॥೭.೧೪॥

ತೇಷಾಂ ವಿಡಮ್ಬನಾಯೈವ ದೈತ್ಯಾನಾಂ ವಞ್ಚನಾಯ ಚ ।
ಪಶ್ಯತಾಂ ಕಲಿಮುಖ್ಯಾನಾಂ ವಿಡಮ್ಬೋsಯಂ ಕೃತೋ ಭವೇತ್ ॥೭.೧೫॥

ನಿಜವಾಗಿಯೂ ಲಂಕೆಯಲ್ಲಿದ್ದ ರಾಕ್ಷಸರು ಹನುಮಂತ ಮತ್ತು ಸೀತೆಯ ನಡುವಿನ ಸಂವಾದವನ್ನು ಅಲ್ಲಿ ನಿಂತು ನೋಡುತ್ತಿರಲಿಲ್ಲ. ಆದರೆ ಅಲ್ಲಿ ಓಡಾಡುವ ಋಷಿಗಳು(ದ್ವಿಲೋಕಾಚಾರಿಗಳಾದ ಋಷಿಗಳು ಮತ್ತು ದಿವ್ಯಜ್ಞಾನವುಳ್ಳ ಭೂಲೋಕದಲ್ಲಿರುವ ಋಷಿಗಳು)  ಎಲ್ಲವನ್ನೂ ನೋಡುತ್ತಿರುತ್ತಾರೆ.
ಅಂತಹ ಋಷಿಗಳಿಗೆ ವಿಡಂಬನ ವಿಷಯಕವಾದ ತತ್ತ್ವಜ್ಞಾನವನ್ನು ನೀಡಲು ಹಾಗು ಕಲಿಯೇ ಪ್ರಧಾನನಾಗಿ ಇರುವ  ದೈತ್ಯರಿಗೆ ಮಿಥ್ಯಾಜ್ಞಾನದಿಂದ ವಂಚನೆ ಮಾಡಲು ‘ಈ ರೀತಿಯ ವಿಡಂಬನವು ಮಾಡತಕ್ಕದ್ದು’ ಎನ್ನುವುದು ರಾಮಚಂದ್ರನ ಸಂಕಲ್ಪವಾಗಿತ್ತು. ಅದರಂತೆ ಹನುಮಂತ ಲೀಲಾನಾಟಕದ ಪಾತ್ರಧಾರಿಯಾಗಿ ಎಲ್ಲವನ್ನೂ ಮಾಡಿದ.

Mahabharata Tatparya Nirnaya Kannada 7.07-7.09


ಲಙ್ಕಾವನಾಯ ಸಕಲಸ್ಯ ಚ ನಿಗ್ರಹೇsಸ್ಯಾಃ ಸಾಮರ್ತ್ಥ್ಯಮಪ್ರತಿಹತಂ ಪ್ರದದೌ ವಿಧಾತಾ ।
ಛಾಯಾಮವಾಕ್ಷಿಪದಸೌ ಪವನಾತ್ಮಜಸ್ಯ ಸೋsಸ್ಯಾಃ ಶರೀರಮನುವಿಶ್ಯ ಬಿಭೇದ ಚಾsಶು ॥೭.೦೭॥

ಲಂಕೆಯನ್ನು ರಕ್ಷಿಸಲು ‘ಸಿಂಹಿಕೆ’ ಎಂಬ ರಾಕ್ಷಸಿಗೆ  ಎದುರಿಲ್ಲದ ಶಕ್ತಿಯನ್ನು ಬ್ರಹ್ಮನು ವರವಾಗಿ  ನೀಡಿದ್ದನು. ಆ ಪಿಶಾಚಿಯು ಲಂಕೆಯತ್ತ ಸಾಗುತ್ತಿದ್ದ ಹನುಮಂತನ ನೆರಳನ್ನು ಹಿಡಿದುಕೊಂಡಿತು. ಆಗ ಹನುಮಂತನು ಅವಳ ಶರೀರವನ್ನು ಪ್ರವೇಶಿಸಿ, ಆಕೆಯ ದೇಹವನ್ನು ಸೀಳಿದನು.

ನಿಸ್ಸೀಮಮಾತ್ಮಬಲಮಿತ್ಯನುದರ್ಶಯಾನೋ ಹತ್ವೈವ ತಾಮಪಿ ವಿಧಾತೃವರಾಭಿಗುಪ್ತಾಮ್ 
ಲಮ್ಬೇ ಸ ಲಮ್ಬಶಿಖರೇ ನಿಪಪಾತ ಲಙ್ಕಾಪ್ರಾಕಾರರೂಪಕಗಿರಾವಥ ಸಞ್ಚುಕೋಚ ॥೭.೦೮॥

ತನ್ನ ಬಲ ಎಣೆಯಿಲ್ಲದ್ದು ಎಂದು ಲೋಕಕ್ಕೆ ತೋರುತ್ತಾ, ಬ್ರಹ್ಮನ ವರಬಲದಿಂದ ರಕ್ಷಿತಳಾಗಿದ್ದ ‘ಸಿಂಹಿಕೆ’ಯನ್ನು ಕೊಂದ ಹನುಮಂತ, ಲಂಕೆಯ ಪ್ರಾಖಾರ ರೂಪದಲ್ಲಿ ಇರುವ ‘ಲಮ್ಬ’ ಎನ್ನುವ ಎತ್ತರದ ಶಿಖರದ ಮೇಲೆ ಇಳಿದನು. ಈರೀತಿ ಲಂಕೆಯನ್ನು ತಲುಪಿದ ಹನುಮಂತ, ಲಂಕಾ ನಗರವನ್ನು ಪ್ರವೇಶ ಮಾಡಲು ನಿಶ್ಚಯಿಸಿಯಾದಮೇಲೆ ತನ್ನ ರೂಪವನ್ನು ಸಂಕುಚಗೊಳಿಸಿಕೊಂಡನು.

ಭೂತ್ವಾಬಿಲಾಳಸಮಿತೋ ನಿಶಿತಾಂ ಪುರೀಂ ಚ ಪ್ರಾಪ್ಸ್ಯನ್ ದದರ್ಶ ನಿಜರೂಪವತೀಂ ಸ ಲಙ್ಕಾಮ್ ।

ರುದ್ಧೋsನಯಾssಶ್ವಥ ವಿಜಿತ್ಯ ಚ ತಾಂ ಸ್ವಮುಷ್ಟಿಪಿಷ್ಟಾಂ ತಯಾsನುಮತ ಏವ ವಿವೇಶ ಲಙ್ಕಾಮ್ ॥೭.೦೯॥


ಬೆಕ್ಕಿಗೆ ಸಮವಾದ ಪರಿಮಾಣದ ದೇಹವನ್ನು ಹೊಂದಿ, ರಾತ್ರಿಯಲ್ಲಿ ಆ ಪಟ್ಟಣವನ್ನು ಹೊಂದುತ್ತಾ, ಲಂಕಾಭಿಮಾನಿ ದೇವತೆಯೇ ಎದ್ದು ಬಂದದ್ದನ್ನು ಹನುಮಂತ ಕಂಡನು. ಅವಳಿಂದ ತಡೆಯಲ್ಪಟ್ಟವನಾಗಿ, ಕೂಡಲೇ ತನ್ನ ಎಡಗೈ ಹೊಡೆತದಿಂದ ಅವಳನ್ನು ಗೆದ್ದು, ಅವಳಿಂದ ಅನುಮತಿಯನ್ನು ತೆಗೆದುಕೊಂಡೇ ಲಂಕೆಯನ್ನು ಪ್ರವೇಶಿಸಿದನು.


[ವಾಲ್ಮೀಕಿ ರಾಮಾಯಣದಲ್ಲಿ (ಸುಂದರಕಾಂಡ ೩.೪೭-೫೦)  ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ಸ್ವಯಂಭುವಾ ಪುರಾ ದತ್ತಂ ವರದಾನಂ ಯಥಾ ಮಮ । ಯದಾ ತ್ವಾಂ ವಾನರಃ  ಕಶ್ಚಿದ್ ವಿಕ್ರಮಾದ್  ವಶಮಾನಯೇತ್ ।  ತದಾ ತ್ವಯಾ ಹಿ ವಿಜ್ಞೇಯಂ ರಕ್ಷಸಾಂ ಭಯಮಾಗತಂ’. ಲಂಕಾಭಿಮಾನಿ ದೇವತೆಯನ್ನು ಹನುಮಂತ ಪರಾಕ್ರಮದಿಂದ ಜಯಿಸಿದಾಗ ಆಕೆ ಹೇಳುತ್ತಾಳೆ:  “ಹಿಂದೆ ನನಗೆ ಬ್ರಹ್ಮದೇವರು ಒಂದು ವರವನ್ನು ನೀಡಿದ್ದರು. ‘ಒಬ್ಬ ಕಪಿ ಪರಾಕ್ರಮದಿಂದ ನನ್ನನ್ನು ವಶಪಡಿಸಿಕೊಂಡರೆ ಆಗ ರಾಕ್ಷಸರಿಗೆ ಮಹಾ ವಿಪತ್ತು ಬಂದಿದೆ ಎಂದು ತಿಳಿಯತಕ್ಕದ್ದು’ ಎನ್ನುವುದು ಬ್ರಹ್ಮದೇವರ ಮಾತಾಗಿದೆ.  ತತ್ ಪ್ರವಿಶ್ಯ ಹರಿಶ್ರೇಷ್ಠ ಪುರೀಂ ರಾವಣಪಾಲಿತಾಮ್ ವಿಧಸ್ತ್ವ ಸರ್ವಕಾರ್ಯಾಣಿ  ಯಾನಿಯಾನೀಹ ವಾಂಛಸಿ . ಆದ್ದರಿಂದ ಆ ಕಾಲ ಈಗ ಕೂಡಿ ಬಂದಿದೆ ಎನ್ನುವುದು ನನಗೆ ಅರ್ಥವಾಗಿದೆ. ಹಾಗಾಗಿ ನೀನು ಲಂಕೆಯನ್ನು ಪ್ರವೇಶಿಸಬಹುದು”  ಎಂದು ಹೇಳಿ ಅವಳು ಹನುಮಂತನಿಗೆ  ಲಂಕೆಯನ್ನು ಪ್ರವೇಶಿಸಲು ಅನುಮತಿಯನ್ನು ನೀಡುತ್ತಾಳೆ.]

Tuesday, May 29, 2018

Mahabharata Tatparya Nirnaya Kannada 7.04-7.06


ನೈವಾತ್ರ ವಿಶ್ರಮಣಮೈಚ್ಛತ ನಿಃಶ್ರಮೋsಸೌ ನಿಃಸ್ಸೀಮಪೌರುಷಗುಣಸ್ಯ ಕುತಃ ಶ್ರಮೋsಸ್ಯ ।
ಆಶ್ಲಿಷ್ಯ ಪರ್ವತವರಂ ಸ ದದರ್ಶ ಗಚ್ಛನ್ ದೈವೈಸ್ತು ನಾಗಜನನೀಂ ಪ್ರಹಿತಾಂ ವರೇಣ ೦೭.೦೪॥

ಸಮುದ್ರೋಲ್ಲಂಘನ ಮಾಡುತ್ತಿರುವ  ಹನುಮಂತನು ಯಾವುದೇ ಶ್ರಮ ಇಲ್ಲದೆ  ಮುಂದೆ ಸಾಗುತ್ತಿದ್ದುದರಿಂದ, ಸಮುದ್ರದಿಂದ ಮೇಲೆದ್ದು ಬಂದ ಮೈನಾಕ ಪರ್ವತದಲ್ಲಿ ವಿಶ್ರಾಂತಿಯನ್ನು ಪಡೆಯಲು ಆತ ಬಯಸಲಿಲ್ಲ. ಎಣೆಯಿರದ ಬಲದ ಗುಣವುಳ್ಳ ಹನುಮಂತನಿಗೆ ಶ್ರಮವಾದರೂ ಎಲ್ಲಿಂದ? ಅವನಾದರೋ, ಮೈನಾಕವನ್ನು ಅಪ್ಪಿ ಹೋಗತಕ್ಕವನಾಗಿ, ದೇವತೆಗಳಿಂದ ವರವನ್ನು ಕೊಟ್ಟು ಕಳುಹಿಸಲ್ಪಟ್ಟ ಸುರಸೆಯನ್ನು ದಾರಿಯಲ್ಲಿ ಕಂಡ.
[ಇಲ್ಲಿ ಹೇಳಿರುವ ಸುರಸೆಯ ಕುರಿತು  ವಾಲ್ಮೀಕಿ ರಾಮಾಯಣದಲ್ಲಿಯೇ ಸಂವಾದವಿದೆ: ‘ಸುರಸಾsಜನಯನ್ನಾಗಾನ್ ರಾಮ ಕದ್ರೂಸ್ತು ಪನ್ನಗಾನ್’ ಎಂದು ಅರಣ್ಯಕಾಂಡದಲ್ಲಿ (೧೪.೨೮) ಹೇಳಿದ್ದಾರೆ. (ಸುರಸೆಯು ನಾಗಗಳಿಗೆ ಜನ್ಮ ನೀಡಿದರೆ, ಕದ್ರೂದೇವಿ ಸರ್ಪಗಳಿಗೆ ಜನ್ಮ ನೀಡಿದಳು) ‘ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ । ಅಬ್ರುವನ್ ಸೂರ್ಯಸಂಕಾಶಾಂ ಸುರಸಾಂ ನಾಗಮಾತರಮ್’ –ನಾಗಗಳ ತಾಯಿಯಾದ  ಸುರಸೆಯನ್ನು ಕುರಿತು ದೇವತೆಗಳು ಮಾತ್ರವಲ್ಲಾ, ಗಂಧರ್ವರು, ಸಿದ್ಧರು, ಋಷಿಗಳು ಹಾಗು ಎಲ್ಲರೂ ಕೂಡಾ ಪ್ರಾರ್ಥಿಸಿದರು ಎಂದು ಸುಂದರಕಾಂಡದಲ್ಲಿ(೧.೧೪೫) ಹೇಳಿದ್ದಾರೆ. ಇದನ್ನು ಇಲ್ಲಿ ಆಚಾರ್ಯರು ‘ದೇವಾಃ; ಎಂದು ಹೇಳಿ ಎಲ್ಲರನ್ನೂ ಗ್ರಹಿಸಿದ್ದಾರೆ. ಕೂರ್ಮಪುರಾಣದಲ್ಲಿ ಹೇಳುವಂತೆ: ‘ಸುರಸಾಯಾಃ ಸಹಸ್ರಂ ತು ಸರ್ಪಾಣಾಂಭವದ್ ದ್ವಿಜಾಃ । ಅನೇಕಶಿರಸಾಂ ತದ್ವತ್ ಖೇಚರಾಣಾಂ ಮಹಾತ್ಮನಾಮ್’ ಸುರಸೆಗೆ ಸಾವಿರ ಸರ್ಪಗಳು ಹುಟ್ಟಿದವು. ಅವುಗಳಲ್ಲಿ ಹೆಡೆ ಇರುವವುಗಳು ಮತ್ತು  ಹೆಡೆ ಇಲ್ಲದಿರುವವುಗಳು ಇದ್ದವು. ಪಾದ್ಮ ಪುರಾಣದಲ್ಲಿ  ‘ಸುರಸಾಯಾಂ ಸಹಸ್ರಂ ತು ಸರ್ಪಾಣಾಂಭವದ್ ಪುರಾ’ ಎಂದು ಹೇಳಿದ್ದಾರೆ. ‘ಸುರಸಾಯಾಂ ಸಹಸ್ರಂ ತು ಸರ್ಪಾಣಾಂಮಿತೌಜಸಾಮ್’ ಎಂದು ವಿಷ್ಣು ಪುರಾಣ ಹೇಳುತ್ತದೆ. ಹೀಗಾಗಿ ಸುರಸೆ ನಾಗಜನನಿ ಎನ್ನುವುದು ಎಲ್ಲರಿಗೂ ಸಮ್ಮತ.
ಆದರೆ ಭಾಗವತದಲ್ಲಿ(೬.೬.೨): ದಂದಶೂಕಾದಯಃ ಸರ್ಪಾ ರಾಜನ್ ಕ್ರೋಧವಶಾತ್ಮಜಾಃ  ಎಂದು ಬೇರೆ ರೀತಿಯಾಗಿ ‘ಕ್ರೋಧವಶಾ’ ಎನ್ನುವ ಹೆಣ್ಣಿನಿಂದ ಹುಟ್ಟಿದ್ದು ಎನ್ನುತ್ತಾರೆ. ಕ್ರೋಧವಶಾ ಎನ್ನುವವಳೂ ಕೂಡಾ ದಕ್ಷನ ಮಗಳು. ಕಶ್ಯಪಪ್ರಜಾಪತಿಯ ಹೆಂಡತಿ.  ಇದು ‘ವ್ಯತ್ಯಾಸ’ ಮಾಡಿ ಹೇಳುವ ಪುರಾಣದ ರೀತಿಗೆ ಉತ್ತಮ ಉದಾಹರಣೆಯಾಗಿದೆ]

ದೇವತೆಗಳು ಏಕೆ ಸುರಸೆಯನ್ನು ಕಳುಹಿಸಿದರು ಎನ್ನುವುದನ್ನು ಮುಂದಿನ ಶ್ಲೋಕ ವಿವರಿಸುತ್ತದೆ:

ಜಿಜ್ಞಾಸುಭಿರ್ನ್ನಿಜಬಲಂ ತವ ಭಕ್ಷಮೇತು ಯದ್ಯತ್ ತ್ವಮಿಚ್ಛಸಿ ತದಿತ್ಯಮರೋದಿತಾಯಾಃ ।
ಆಸ್ಯಂ ಪ್ರವಿಶ್ಯ ಸಪದಿ ಪ್ರವಿನಿಃಸೃತೋsಸ್ಮಾದ್ ದೇವಾನನನ್ದಯದುತ ಸ್ವೃತಮೇಷು ರಕ್ಷನ್ ॥೭-೦೫॥

‘ಯಾವುದನ್ನು ನೀನು ಬಯಸುತ್ತೀಯೋ  ಅದು ನಿನ್ನ ಬಾಯೊಳಗೆ ಬರಲಿ’ ಎನ್ನುವ ವರ ಪಡೆದು ಬಂದಿದ್ದ  ಸುರಸೆಯ ಮುಖವನ್ನು ಪ್ರವೇಶಿಸಿ, ಕೂಡಲೇ ಅಲ್ಲಿಂದ ಹೊರಬಂದ ಹನುಮಂತ, ತನ್ನನ್ನು ಪರೀಕ್ಷಿಸುವ ಸಲುವಾಗಿ ಸುರಸೆಯನ್ನು ಕಳುಹಿಸಿದ್ದ ದೇವತೆಗಳ ಮಾತಿನ ಸತ್ಯತ್ತ್ವವನ್ನು ರಕ್ಷಿಸಿ, ಅವರನ್ನು ಸಂತಸಗೊಳಿಸಿದ. [ತಮ್ಮ ಮಾತನ್ನು (ವರವನ್ನು) ವಿಫಲಗೊಳಿಸದ ಹನುಮಂತ, ತಾವು ನೀಡಿದ ವರವನ್ನು ಗೌರವಿಸಿರುವುದನ್ನು ಕಂಡ ದೇವತೆಗಳೆಲ್ಲರೂ ಬಹಳ ಸಂತೋಷಪಟ್ಟರು]

ದೃಷ್ಟ್ವಾ ಸುರಪ್ರಣಯಿತಾಂ ಬಲಮಸ್ಯ ಚೋಗ್ರಂ ದೇವಾಃ ಪ್ರತುಷ್ಟುವುರಮುಂ ಸುಮನೋsಭಿವೃಷ್ಟ್ಯಾ ।
ತೈರಾದೃತಃ ಪುನರಸೌ ವಿಯತೈವ ಗಚ್ಛನ್ ಛಾಯಾಗ್ರಹಂ ಪ್ರತಿದದರ್ಶ ಚ ಸಿಂಹಿಕಾಖ್ಯಮ್ ॥೭.೦೬॥


ಹೀಗೆ ತಮ್ಮ ಮೇಲಿನ ಹನುಮಂತನ ಪ್ರೀತಿಯನ್ನು, ಆತನ ಉಗ್ರವಾದ ಬಲವನ್ನು ಕಂಡ ದೇವತೆಗಳು ಆತನ ಮೇಲೆ ಹೂವಿನ ಮಳೆಗೆರೆದು ಆತನನ್ನು ಹೊಗಳುತ್ತಾರೆ. ಆ ಎಲ್ಲಾ ದೇವತೆಗಳಿಂದ ಪೂಜಿತನಾದ ಹನುಮಂತ ಆಕಾಶದಲ್ಲಿಯೇ ಮುಂದೆ ತೆರಳುತ್ತಾ, ‘ಸಿಂಹಿಕೆ’ ಎನ್ನುವ ನೆರಳನ್ನು ಹಿಡಿಯಬಲ್ಲ ಭೂತವನ್ನು ಕಾಣುತ್ತಾನೆ.

Sunday, May 27, 2018

Mahabharata Tatparya Nirnaya Kannada 7.01-7.03


೭. ಹನೂಮತ್ ಪ್ರತಿಯಾನಮ್


ಓಂ॥
ರಾಮಾಯ ಶಾಶ್ವತಸುವಿಸ್ತೃತಷಡ್ಗುಣಾಯ ಸರ್ವೇಶ್ವರಾಯ ಸುಖಸಾರಮಹಾರ್ಣ್ಣವಾಯ।
ನತ್ವಾ ಲಿಲಙ್ಘಯಿಷುರರ್ಣ್ಣವಮುತ್ಪಪಾತ ನಿಷ್ಪೀಡ್ಯತಂ ಗಿರಿವರಂ ಪವನಸ್ಯಸೂನುಃ ॥೦೭-೦೧॥

ಪವನಪುತ್ರ ಹನುಮಂತನು ಎಂದೆಂದೂ ಇರುವ, ಅತ್ಯಂತ ವಿಸ್ತೃತಿಯನ್ನು ಹೊಂದಿರುವ, ಐಶ್ವರ್ಯ-ವೀರ್ಯ ಮೊದಲಾದ ಆರು ಗುಣಗಳನ್ನು ಹೊಂದಿರುವ, ಎಲ್ಲರ ಒಡೆಯನಾದ, ಸುಖದ ಸಾರಕ್ಕೆ ಕಡಲಿನಂತೆ ಇರುವ ರಾಮಚಂದ್ರನಿಗೆ ನಮಸ್ಕರಿಸಿ, ಸಮುದ್ರವನ್ನು ದಾಟಲು ಬಯಸಿದವನಾಗಿ ಗಟ್ಟಿಯಾಗಿ ಮಹೇಂದ್ರ ಪರ್ವತಕ್ಕೆ ಕಾಲನ್ನು ಒತ್ತಿ ಮೇಲಕ್ಕೆ ಹಾರಿದನು.

ಚುಕ್ಷೋಭ ವಾರಿಧಿರನುಪ್ರಯಯೌ ಚ ಶೀಘ್ರಂ ಯಾದೋಗಣೈಃ ಸಹ ತದೀಯಬಲಾಭಿಕೃಷ್ಟಃ ।
ವೃಕ್ಷಾಶ್ಚ  ಪರ್ವತಗತಾಃ ಪವನೇನ ಪೂರ್ವಂ ಕ್ಷಿಪ್ತೋsರ್ಣ್ಣವೇ ಗಿರಿರುದಾಗಮದಸ್ಯ ಹೇತೋಃ॥೦೭.೦೨॥

ಹನುಮಂತನ ಬಲದಿಂದ ಸೆಳೆಯಲ್ಪಟ್ಟ ಸಮುದ್ರವು, ಜಲಚರ ಪ್ರಾಣಿಗಳಿಂದ ಕೂಡಿಕೊಂಡು ಅಲ್ಲೋಲ-ಕಲ್ಲೋಲವಾಗಿ ಹನುಮಂತನನ್ನು ಹಿಂಬಾಲಿಸಿತು. ಹನುಮಂತ ನಿಂತಿದ್ದ ಮಹೇಂದ್ರ ಪರ್ವತದಲ್ಲಿರುವ ವೃಕ್ಷಗಳೂ ಕೂಡಾ ಹನುಮಂತನನ್ನು ಅನುಸರಿಸಿದವು. [ವಾಲ್ಮೀಕಿ ರಾಮಾಯಣದಲ್ಲಿ ಈ ಪ್ರಸಂಗವನ್ನು ವಿವರವಾಗಿ ವಿವರಿಸಿರುವುದನ್ನು ನಾವು ಕಾಣಬಹುದು. ಅಲ್ಲಿ ಈ ದೃಶ್ಯವನ್ನು ಪ್ರಸ್ಥಿತಂ ದೀರ್ಘಮಧ್ವಾನಂ  ಸ್ವಬಂಧುಮಿವ ಬಾಂಧವಾಃ(ಸುಂದರಕಾಂಡ ೧.೪೭)  ಎಂದು ವರ್ಣಿಸಿದ್ದಾರೆ. ಯಾವ ರೀತಿ ಬಹಳ ದೂರ ಹೊರಟಿರುವ ಬಂಧುವನ್ನು ಬೀಳ್ಕೊಡಲು ಬಂಧುಗಳೆಲ್ಲರೂ  ಸ್ವಲ್ಪದೂರ ಜೊತೆಗೆ ಬರುತ್ತಾರೋ ಹಾಗೆ,  ಬುಡಸಹಿತ ಕಿತ್ತುಬಂದ ವೃಕ್ಷಗಳು ಹನುಮಂತನನ್ನು ಹಿಂಬಾಲಿಸಿದವು.]   
ಹನುಮಂತನು ಹೀಗೆ ಲಂಕೆಯತ್ತ ಸಾಗುತ್ತಿರಲು, ಹಿಂದೆ ಮುಖ್ಯಪ್ರಾಣನಿಂದ ಸಮುದ್ರದಲ್ಲಿ ಎಸೆಯಲ್ಪಟ್ಟ ಮೈನಾಕ ಎಂಬ  ಪರ್ವತವು ಮೇಲೆ ಬಂದಿತು(ಹನುಮಂತನ ಕಾರಣದಿಂದ ಮೇಲೆ ಬಂದಿತು).

ಸ್ಯಾಲೋ ಹರಸ್ಯ ಗಿರಿಪಕ್ಷವಿನಾಶಕಾಲೇ ಕ್ಷಿಪ್ತ್ವಾsರ್ಣ್ಣವೇ ಸ ಮರುತೋರ್ವರಿತಾತ್ಮಪಕ್ಷಃ ।
ಹೈಮೋ ಗಿರಿಃ ಪವನಜಸ್ಯ ತು ವಿಶ್ರಮಾರ್ತ್ಥಮುದ್ಭಿದ್ಯ ವಾರಿಧಿಮವರ್ದ್ಧದನೇಕಸಾನುಃ ॥೭.೦೩॥

ಹಿಂದೆ, ಪರ್ವತಗಳಿಗೆ ರೆಕ್ಕೆ ಇದ್ದು, ಇಂದ್ರನು ಎಲ್ಲಾ ಪರ್ವತಗಳ ರೆಕ್ಕೆಯನ್ನು ಛೇದಿಸುವ ಕಾಲದಲ್ಲಿ, ರುದ್ರನ ಹೆಂಡತಿಯ ತಮ್ಮನಾಗಿರುವ ಮೈನಾಕ ಎನ್ನುವ ಪರ್ವತವು, ಮುಖ್ಯಪ್ರಾಣನಿಂದ  ಸಮುದ್ರಕ್ಕೆ ಎಸೆಯಲ್ಪಟ್ಟು, ತನ್ನ ರೆಕ್ಕೆಯನ್ನು ಉಳಿಸಿಕೊಂಡಿತ್ತು. ಬಂಗಾರದ ಬಣ್ಣದ ಈ ಮೈನಾಕ, (ಉಪಕಾರ ಸ್ಮರಣೆಯಿಂದ)ಹನುಮಂತನ ವಿಶ್ರಾಂತಿಗಾಗಿ ಸಮುದ್ರವನ್ನು ಸೀಳಿ ಮೇಲೆ ಬಂದು,  ಬಹಳ ಶಿಖರವುಳ್ಳದ್ದಾಗಿ ಕಾಣಿಸಿಕೊಂಡಿತು.

Friday, May 25, 2018

Mahabharata Tatparya Nirnaya Kannada 6.56-6.59


ಅಪೂರಿತೇ ತೈಃ ಸಕಲೈಃ ಶತಸ್ಯ ಗಮಾಗಮೇ ಶತ್ರುಬಲಂ ಚ ವೀಕ್ಷ್ಯ ।
ಸುದುರ್ಗ್ಗಮತ್ವಂ ಚ ನಿಶಾಚರೇಶಪುರ್ಯ್ಯಾಃ ಸ ಧಾತುಃ ಸುತ ಆಬಭಾಷೇ ॥೬.೫೬॥

ಅವರೆಲ್ಲರಿಂದಲೂ  ನೂರು ಯೋಜನ ದೂರ ಹಾರಿ ಹೋಗಿ-ಬರುವುದರಲ್ಲಿ ಶಕ್ತಿಯು ಪೂರ್ಣವಾಗಿರದಿರಲು, ಬ್ರಹ್ಮನ ಮಗನಾದ ಜಾಂಬವಂತನು ಲಂಕೆಯಲ್ಲಿರಬಹುದಾದ ಶತ್ರು ಬಲವನ್ನು,  ರಾವಣನ ಪಟ್ಟಣವನ್ನು ಪ್ರವೇಶಿಸಲು ಇರಬಹುದಾದ  ಕಷ್ಟಗಳನ್ನು ವಿಚಾರ ಮಾಡಿ ಮಾತನಾಡುತ್ತಾನೆ: 

ಅಯಂ ಹಿ ಗೃಧ್ರಃ ಶತಯೋಜನಂ ಗಿರಿಂ ತ್ರಿಕೂಟಮಾಹೇತ ಉತಾತ್ರ ವಿಘ್ನಾಃ ।
ಭವೇಯುರನ್ಯೇsಪಿ ತತೋ ಹನೂಮಾನೇಕಃ ಸಮರ್ತ್ಥೋ ನ ಪರೋsಸ್ತಿ ಕಶ್ಚಿತ್ ॥೬.೫೭॥

ಜಾಂಬವಂತ ಹೇಳುತ್ತಾನೆ: “ಸಂಪಾತಿ ಹೇಳುವಂತೆ ಲಂಕಾಪಟ್ಟಣದ ಬಳಿ ಇರುವ ತ್ರಿಕೂಟ ಪರ್ವತ ಸುಮಾರು ನೂರು ಯೋಜನ  ದೂರದಲ್ಲಿದೆ. ಅಲ್ಲಿಗೆ ಕೇವಲ ಹಾರಿ ತಲುಪಿದರೆ ಸಾಲದು. ಅಲ್ಲಿ ಅನೇಕ ವಿಘ್ನಗಳು ಸಂಭವಿಸಬಹುದು. ಅದಲ್ಲದೆ  ಅಲ್ಲಿ ಬೇರೆಬೇರೆ  ಸಮಸ್ಯೆಗಳೂ ಎದುರಾಗಬಹುದು. ಆ ಕಾರಣದಿಂದ ನಮ್ಮಲ್ಲಿ ಈ ಕಾರ್ಯಕ್ಕೆ ಸಮರ್ಥನೆನಿಸಿರುವವನು ಕೇವಲ  ಹನುಮಂತನೊಬ್ಬನೇ.  ಇನ್ನ್ಯಾರಿಂದಲೂ ಈ ಕಾರ್ಯ ಸಾಧ್ಯವಿಲ್ಲಾ”  ಎಂದು.

ಉಕ್ತ್ವಾಸ ಇತ್ಥಂ ಪುನರಾಹ ಸೂನುಂ ಪ್ರಾಣಸ್ಯ ನಿಃಸ್ಸೀಮಬಲಂ ಪ್ರಶಂಸಯನ್ ।
ತ್ವಮೇಕ ಏವಾತ್ರ ಪರಂ ಸಮರ್ತ್ಥಃ ಕುರುಷ್ವ ಚೈತತ್ ಪರಿಪಾಹಿ ವಾನರಾನ್ ॥೬.೫೮॥

ಜಾಂಬವಂತ ‘ಹನುಮಂತನೊಬ್ಬನಿಂದಲೇ ಈ ಕಾರ್ಯ ಸಾಧ್ಯ’ ಎಂದು ಹೇಳಿ, ಆತನ  (ಮುಖ್ಯಪ್ರಾಣನ) ಸೀಮೆ ಇಲ್ಲದ ಬಲವನ್ನು ಪ್ರಶಂಸೆ ಮಾಡುತ್ತಾ ಸ್ತೋತ್ರ ಮಾಡುತ್ತಾನೆ. “ನೀನೊಬ್ಬನೇ ಈ ವಿಷಯದಲ್ಲಿ ಸಮರ್ಥನಾಗಿರುವುದರಿಂದ ಈ ಕಾರ್ಯವನ್ನು ನೀನು ಮಾಡಿ ಎಲ್ಲಾ ಕಪಿಗಳನ್ನು ರಕ್ಷಿಸು” ಎನ್ನುತ್ತಾನೆ ಜಾಂಬವಂತ.

ಇತೀರಿತೋsಸೌ ಹನುಮಾನ್ ನಿಜೇಪ್ಸಿತಂ ತೇಷಾಮಶಕ್ತಿಂ ಪ್ರಕಟಾಂ ವಿಧಾಯ ।
ಅವರ್ದ್ಧತಾsಶು ಪ್ರವಿಚಿನ್ತ್ಯ ರಾಮಂ ಸುಪೂರ್ಣ್ಣಶಕ್ತಿಂ ಚರಿತೋಸ್ತದಾಜ್ಞಾಮ್ ॥೬.೫೯॥

ಈ ರೀತಿಯಾಗಿ ತನಗೆ ಇಷ್ಟವಾದ ಕೆಲಸದ ಕುರಿತೇ ಹೇಳಲ್ಪಟ್ಟವನಾದ ಹನುಮಂತನು, ಆ ಎಲ್ಲಾ ಕಪಿಗಳ ಅಸಾಮರ್ಥ್ಯವನ್ನು ಎಲ್ಲರಿಗೂ ಸ್ಪಷ್ಟವಾಗಿ ತೋರುವ ಹಾಗೆ ಮಾಡಿ, ಪೂರ್ಣಬಲವುಳ್ಳ ಶ್ರೀರಾಮನನ್ನು ಚಿಂತಿಸಿ, ಅವನ ಆಜ್ಞೆಯನ್ನು ನೆರವೇರಿಸುವುದಕ್ಕಾಗಿ ಬೆಳೆದು ನಿಂತನು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ ಸಮುದ್ರತರಣನಿಶ್ಚಯೋನಾಮ ಷಷ್ಠೋsಧ್ಯಾಯಃ ॥


*********

Mahabharata Tatparya Nirnaya Kannada 6.52-6.55


ತತಸ್ತು ತೇ ಬ್ರಹ್ಮಸುತೇನ ಪೃಷ್ಟಾ ನ್ಯವೇದಯನ್ಮಾತ್ಮಬಲಂ ಪೃಥಕ್ ಪೃಥಕ್ ।
ದಶೈವ ಚಾsರಭ್ಯ ದಶೋತ್ತರಸ್ಯ ಕ್ರಮಾತ್ ಪಥೋ ಯೋಜನತೋsತಿಯಾನೇ ॥೬.೫೨॥

ರಾಮನ ಕಥೆಯನ್ನು ಕೇಳಿ, ಸೀತೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡ ನಂತರ, ‘ಸಮುದ್ರವನ್ನು ಹಾರಲು ಯಾರಿಗೆ ಬಲವಿದೆ’ ಎಂದು ಜಾಂಬವಂತನಿಂದ ಪ್ರಶ್ನೆಮಾಡಲ್ಪಟ್ಟವರಾದ ಕಪಿಗಳು, ಬೇರೆಬೇರೆಯಾಗಿ ತಮಗಿರುವ ಬಲವನ್ನು ನಿವೇದಿಸಿಕೊಳ್ಳುತ್ತಾರೆ. ಹತ್ತು ಯೋಜನದಿಂದ ಆರಂಭಿಸಿ, ಹತ್ತು-ಹತ್ತು ಅಧಿಕವಾಗಿ  ಸುಮಾರು ಎಂಬತ್ತು ಯೋಜನ ಪರ್ಯಂತ ಎಲ್ಲರೂ ತಮ್ಮ ಹಾರುವ  ಬಲವನ್ನು ನಿವೇದಿಸಿಕೊಳ್ಳುತ್ತಾರೆ.   


ಸನೀಲಮೈನ್ದದ್ವಿವಿದಾಃ ಸತಾರಾಃ ಸರ್ವೇsಪ್ಯಶೀತ್ಯಾಃ ಪರತೋ ನ ಶಕ್ತಾಃ ।
ಗನ್ತುಂ ಯಧsಥಾsತ್ಮಬಲಂ ಸ ಜಾಮ್ಬವಾನ್ ಜಗಾದ ತಸ್ಮಾತ್ ಪುನರಷ್ಟಮಾಂಶಮ್ ॥೬.೫೩॥

ನೀಲ, ಮೈಂದ, ದ್ವಿವಿದಾ ಮತ್ತು ತಾರನಿಂದ ಸಹಿತರಾದ  ಎಲ್ಲಾ ಕಪಿಗಳೂ, ಎಂಬತ್ತು ಯೋಜನಕ್ಕಿಂತ ಹೆಚ್ಚು ಹಾರಲು ಶಕ್ತರಲ್ಲ ಎಂದು ತಿಳಿದೊಡನೆ,  ಪ್ರಶ್ನೆ ಹಾಕಿದ್ದ ಜಾಂಬವಂತ ತೊಂಬತ್ತು ಯೋಜನ ಹಾರುವ ತನ್ನ ಆತ್ಮ ಬಲವನ್ನು ತಿಳಿಸುತ್ತಾನೆ.

ಬಲೇರ್ಯ್ಯದಾ ವಿಷ್ಣುರವಾಪ ಲೋಕಾಂಸ್ತ್ರಿಭಿಃ ಕ್ರಮೈರ್ನ್ನನ್ದಿರವಂ ಪ್ರಕುರ್ವತಾ ।
ತದಾ ಮಯಾ ಭ್ರಾನ್ತಮಿದಂ ಜಗತ್ರಯಂ ಸವೇದನಂ ಜಾನು ಮಮಾsಸ ಮೇರುತಃ ॥೬.೫೪॥

ತನ್ನ ಹಾರುವ ಸಾಮರ್ಥ್ಯವನ್ನು ಹೇಳಿದ ಜಾಂಬವಂತ, ಹಿಂದೆ ಇದ್ದ ಬಲ ಇಂದು ತನ್ನಲ್ಲಿಲ್ಲದೇ ಇರುವುದಕ್ಕೆ ಕಾರಣವನ್ನು ನೀಡುತ್ತಾ ಹೇಳುತ್ತಾನೆ:  “ಯಾವ ಕ್ಷಣದಲ್ಲಿ ಮೂರು ಹೆಜ್ಜೆಗಳಿಂದ ವಿಷ್ಣುವು ಬಲಿಯಿಂದ ಮೂರು ಲೋಕಗಳನ್ನು ಪಡೆದನೋ, ಆಗ ಸಂತೋಷದ ದ್ವನಿಯನ್ನು ಮಾಡುತ್ತಾ ನಾನು ಮೂರು ಜಗತ್ತನ್ನು ಸುತ್ತಿದೆ. ಆಗ ಮೇರು ಪರ್ವತಕ್ಕೆ ತಾಗಿ ನನ್ನ ಮೊಣಕಾಲು ನೋವಿನಿಂದ ಕೂಡಿತು” ಎಂದು.
[ಈ ಮಾತಿಗೆ ಪೂರಕವಾದ ಕಥೆಯನ್ನು ಭಾಗವತದ ಎಂಟನೇ ಸ್ಕಂಧದ ಇಪ್ಪತ್ತನೇ ಅಧ್ಯಾಯದಲ್ಲಿ ಕಾಣುತ್ತೇವೆ. ಅಲ್ಲಿ ಹೀಗೆ ಹೇಳಿದ್ದಾರೆ: ಜಾಮ್ಬವಾನ್ರಕ್ಷರಾಜಸ್ತು ಭೇರೀಶಬ್ದೌರ್ಮನೋಜವಃ । ವಿಜಯಂ ದಿಕ್ಷು ಸರ್ವಾಸು ಮಹೋತ್ಸವಮಘೋಷಯತ್॥]     

ಅತೋ ಜವೋ ಮೇ ನಹಿ ಪೂರ್ವಸಮ್ಮಿತಃ ಪುರಾ ತ್ವಹಂ ಷಣ್ಣವತಿಪ್ಲವೋsಸ್ಮಿ ।
ತತಃ ಕುಮಾರೋsಙ್ಗದ ಆಹ ಚಾಸ್ಮಾಚ್ಛತಂ ಪ್ಲವೇಯಂ ನ ತತೋsಭಿಜಾನೇ ॥೬.೫೫॥

“ಆ ಕಾರಣದಿಂದ ಮೊದಲಿನ ವೇಗಕ್ಕೆ ಸದೃಶವಾದ  ವೇಗ ಇಂದು ತನ್ನಲಿಲ್ಲ. ಹಿಂದಾದರೋ  ೯೬ ಯೋಜನ ಜಿಗಿಯಬಲ್ಲ ಸಾಮರ್ಥ್ಯ ನನ್ನಲ್ಲಿತ್ತು” ಎನ್ನುತ್ತಾನೆ ಜಾಂಬವಂತ.
ಎಲ್ಲರೂ ತಮ್ಮ ಸಾಮರ್ಥ್ಯದ ಕುರಿತು ಹೇಳಿದ ಮೇಲೆ, ಚಿಕ್ಕವನಾದ ಅಂಗದ ಹೇಳುತ್ತಾನೆ: “ನಾನು ಇಲ್ಲಿಂದ ನೂರು ಯೋಜನ ಜಿಗಿದೇನು. ಆದರೆ ಆಮೇಲೆ ನನಗೆ ಏನು ಮಾಡಲೂ ಶಕ್ತಿ ಇರದು” ಎಂದು.

Thursday, May 24, 2018

Mahabharata Tatparya Nirnaya Kannada 6.49-6.51


ತಸ್ಯಾಗ್ರಜೋsಸಾವರುಣಸ್ಯ ಸೂನುಃ ಸೂರ್ಯ್ಯಸ್ಯ ಬಿಮ್ಬಂ ಸಹ ತೇನ ಯಾತಃ ।
ಜವಂ ಪರೀಕ್ಷನ್ನಥ ತಂ ಸುತಪ್ತಂ ಗುಪ್ತ್ವಾ ಪತತ್ರಕ್ಷಯಮಾಪ್ಯ ಚಾಪತತ್ ॥೬.೪೯॥

ಸಂಪಾತಿ ಜಟಾಯುವಿನ  ಅಣ್ಣ ಮತ್ತು ವರುಣನ ಮಗ. ಈತ  ತನ್ನ ವೇಗವನ್ನು ಪರೀಕ್ಷಿಸಲೋಸುಗ, ಜಟಾಯುವಿನಿಂದ ಕೂಡಿ, ಸೂರ್ಯನ ಬಿಂಬದತ್ತ ತೆರಳಿ, ಸೂರ್ಯ ಬಿಂಬದ ಬೇಗೆಯಿಂದ ತಾಪಗೊಂಡ ಜಟಾಯುವನ್ನು ತನ್ನ  ರೆಕ್ಕೆಯನ್ನು ಹರಡುವ ಮುಖೇನ ರಕ್ಷಿಸಲು ಹೋಗಿ, ರೆಕ್ಕೆಯ ನಾಶವನ್ನು ಹೊಂದಿ, ಭೂಮಿಯಲ್ಲಿ ಬಿದ್ದಿದ್ದ.

ಸ ದಗ್ಧಪಕ್ಷಃ ಸವಿತೃಪ್ರತಾಪಾಚ್ಛ್ರುತ್ವೈವ ರಾಮಸ್ಯ ಕಥಾಂ ಸಪಕ್ಷಃ ।
ಭೂತ್ವಾ ಪುನಶ್ಚಾಪಿ ಮೃತಿಂ ಜಟಾಯುಷಃ ಶುಶ್ರಾವ ಪೃಷ್ಟ್ವಾ ಪುನರೇವ ಸಮ್ಯಕ್ ॥೬.೫೦॥

ಸೂರ್ಯನ ಬಿಸಿಲ ಬೇಗೆಯಿಂದ ಸುಟ್ಟ ರೆಕ್ಕೆ ಉಳ್ಳವನಾಗಿದ್ದ ಸಂಪಾತಿ, ಆಕಸ್ಮಿಕವಾಗಿ ಶ್ರೀರಾಮಚಂದ್ರನ ಕಥೆಯನ್ನು ಕೇಳಿದ್ದರಿಂದ, ಪುನಃ ರೆಕ್ಕೆಯನ್ನು ಹೊಂದುತ್ತಾನೆ. ರೆಕ್ಕೆ ಹೊಂದಿದ ಮೇಲೂ ಪುನಃ ಭಕ್ತಿಯಿಂದ ರಾಮಚಂದ್ರನ ಕಥೆಯನ್ನು ಕೇಳುತ್ತಾ, ಜಟಾಯುವಿನ ಮರಣದ ಸುದ್ದಿಯನ್ನು ಸಂಪಾತಿ ತಿಳಿಯುತ್ತಾನೆ.

ಸ ರಾವಣಸ್ಯಾಥ ಗತಿಂ ಸುತೋಕ್ತಾಂ ನಿವೇದ್ಯದೃಷ್ಟ್ವಾಜನಕಾತ್ಮಜಾಕೃತಿಮ್ ।
ಸ್ವಯಂ ತಥಾsಶೋಕವನೇ ನಿಷಣ್ಣಾಮವೋಚದೇಭ್ಯೋ ಹರಿಪುಙ್ಗವೇಭ್ಯಃ ॥೬.೫೧॥

ಎಲ್ಲಾ ವಿಷಯವನ್ನು ತಿಳಿದಾದ ಮೇಲೆ,  ಸಂಪಾತಿಯು ತನ್ನ ಮಗನಾದ ಸುಪಾರ್ಶ್ವವಿನಿಂದ ಕೇಳಿ ತಿಳಿದಿರುವ ರಾವಣನ ಗತಿಯನ್ನು[ಸೀತೆಯನ್ನು ರಾವಣ ಅಪಹರಿಸಿಕೊಂಡು ಲಂಕೆಗೆ ಹೋಗಿರುವ ಸಂಗತಿಯನ್ನು]  ಈ ಎಲ್ಲಾ ಕಪಿಗಳಿಗೆ ಹೇಳುತ್ತಾನೆ. ರೆಕ್ಕೆಯನ್ನು ಮರಳಿ ಪಡೆದಿದ್ದ ಆತ ತಕ್ಷಣ ಆಕಾಶಕ್ಕೆ ಹಾರಿ, ಸೀತೆಯ ಆಕೃತಿಯು ಅಶೋಕವನದಲ್ಲಿರುವುದನ್ನು ನೋಡುತ್ತಾನೆ^ ಮತ್ತು ಆ ವಿಷಯವನ್ನು ಅಲ್ಲಿದ್ದ ಎಲ್ಲಾ ಕಪಿಗಳಿಗೂ ಹೇಳುತ್ತಾನೆ.
[^ಗೃಧ್ರಗಳಿಗೆ ಅತ್ಯಂತ ಸೂಕ್ಷ್ಮ ದೃಷ್ಟಿ ಎಂದು ಹೇಳುತ್ತಾರೆ. ಅದರಂತೆ ಸಂಪಾತಿ ಅಲ್ಲೇ ಎತ್ತರಕ್ಕೇರಿ, ನೂರು ಯೋಜನ ದೂರದಲ್ಲಿರುವ ಅಶೋಕವನದಲ್ಲಿದ್ದ ಸೀತೆಯನ್ನು ಗುರುತಿಸುತ್ತಾನೆ]
[ಕಿಷ್ಕಿಂಧಕಾಂಡದಲ್ಲಿ (೫೯.೮ - ೨೨) ಹೇಳುವಂತೆ: ತಂ ಮಾಮೇವಂ ಗತಂ ಪುತ್ರಃ ಸುಪಾರ್ಶ್ವೋ ನಾಮ ನಾಮತಃ । ಆಹಾರೇಣ ಯಥಾಕಾಲಂ ಬಿಭಭರ್ತ್ತಿ ಪತತಾಂ ವರಃ ॥  ಸ ಕದಾಚಿತ್ ಕ್ಷುಧಾರ್ತ್ತಸ್ಯ ಮಮಾsಹಾರಾಭಿಕಾಂಕ್ಷಿಣಃ ಗತಸೂರ್ಯ್ಯೋsಹನಿ ಪ್ರಾಪ್ತೋ ಮಮ ಪುತ್ರೋ ಹ್ಯನಾಮಿಷಃ ॥.... ಸಂಪಾತಿ ರೆಕ್ಕೆ ಸುಟ್ಟ ವೃದ್ಧ. ಆತನಿಗೆ ಅವನ ಮಗ ಸುಪಾರ್ಶ್ವ ದಿನಾಲು ಆಹಾರ ತಂದು ಕೊಡುತ್ತಿದ್ದ. ಒಂದು ದಿನ ಸುಪಾರ್ಶ್ವ ಬರುವಾಗ ತಡವಾಯಿತು. ಸೂರ್ಯಾಸ್ತವಾದ ನಂತರ ಬಂದ ಮಗ ಮಾಂಸವಿಲ್ಲದೇ ಬಂದಿದ್ದನ್ನು ಕಂಡ ಸಂಪಾತಿ ಸುಪಾರ್ಶ್ವನಿಗೆ ಬಯ್ಯುತ್ತಾನೆ. ಆಗ ಸುಪಾರ್ಶ್ವ ಹೇಳುತ್ತಾನೆ: “ನಾನು ಎಂದಿನಂತೆ ಆಕಾಶವನ್ನು ಏರಿ ಆಹಾರವನ್ನು ಹುಡುಕುತ್ತಾ ಮಹೇಂದ್ರಪರ್ವತದ ಮೇಲೆ ಹಾರುತ್ತಿದ್ದೆ. ಆಗ ಅಲ್ಲಿ ಒಬ್ಬ ಕಪ್ಪು ಬಣ್ಣದ ರಾಕ್ಷಸ ಒಬ್ಬ ಕೆಂಪು-ಹಳದಿ ಮಿಶ್ರಿತ ಬಣ್ಣದ ಹೆಣ್ಣುಮಗಳನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಕಂಡೆ. ಆಕೆ ‘ನಾನು ರಾಮನ ಹೆಂಡತಿ’ ಎಂದು ಕೂಗಿ ಹೇಳುತ್ತಿದ್ದಳು” ಎಂದು. ಈ ರೀತಿ ಸಂಪಾತಿಗೆ ಸೀತಾಪಹಾರದ ವಿಷಯ ಮೊದಲೇ ತಿಳಿದಿತ್ತು.]

Tuesday, May 22, 2018

Mahabharata Tatparya Nirnaya Kannada 6.46-6.48


ಇತೀರಿತಂ ತತ್ ಪವನಾತ್ಮಜಸ್ಯ ಶ್ರುತ್ವಾsತಿಭೀತಾ ಧೃತಮೂಕಭಾವಾಃ ।
ಸರ್ವೇsನುಜಗ್ಮುಸ್ತಮಥಾದ್ರಿಮುಖ್ಯಂ ಮಹೇನ್ದ್ರಮಾಸೇದುರಗಾಧಭೋಧಾಃ ॥೬.೪೬॥

ಈ ರೀತಿಯಾಗಿ ಹನುಮಂತನು ಹೇಳಲು, ಆ ಮಾತನ್ನು ಕೇಳಿ ಅತ್ಯಂತ ಭಯಗೊಂಡು, ಮೂಕಭಾವರಾದ  ತಾರಾದಿಗಳು, ಹನುಮಂತನ ಮಾತಿನಂತೆ ಆತನನ್ನು ಅನುಸರಿಸಿ, ಗುಹೆಯಿಂದ ತಕ್ಷಣ ಹೊರಬಂದು, ಪರ್ವತ ಶ್ರೇಷ್ಠವಾದ ಮಹೇಂದ್ರ ಪರ್ವತವನ್ನು ಹೊಂದಿದರು.  

ನಿರೀಕ್ಷ್ಯ ತೇ ಸಾಗರಮಪ್ರಧೃಷ್ಯಮಪಾರಮೇಯಂ ಸಹಸಾ ವಿಷಣ್ಣಾಃ ।
ದೃಢಂ ನಿರಾಶಾಶ್ಚ ಮತಿಂ ಹಿ ದಧ್ರುಃ ಪ್ರಾಯೋಪವೇಶಾಯ ತಥಾ ಚ ಚಕ್ರುಃ ॥೬.೪೭॥

ಅವರು ಹಾರಲಾಗದ, ದಡ ಕಾಣದ ಸಮುದ್ರವನ್ನು ನೋಡಿ, ಕೂಡಲೇ ದುಃಖಿತರಾಗಿ, ಬಹಳವಾಗಿ ಭರವಸೆಯನ್ನು ಕಳೆದುಕೊಂಡು, ಸಾಯುವತನಕ ಉಪವಾಸವನ್ನು ನಿಶ್ಚಯಿಸಿದರು. ಅದರಂತೆಯೇ ಆಹಾರವನ್ನು ಸ್ವೀಕರಿಸದೇ ಕುಳಿತರು.

ಪ್ರಾಯೋಪವಿಷ್ಟಾಶ್ಚ ಕಥಾ ವದನ್ತೋ ರಾಮಸ್ಯ ಸಂಸಾರವಿಮುಕ್ತಿದಾತುಃ ।
ಜಟಾಯುಷಃ ಪಾತನಮೂಚುರೇತತ್ ಸಮ್ಪಾತಿನಾಮ್ನಃ ಶ್ರವಣಂ ಜಗಾಮ ॥೬.೪೮॥

‘ಸಾಯುವ ತನಕ ಉಪವಾಸ’ ಎನ್ನುವ ವ್ರತಕ್ಕೆ ಕಟ್ಟುಬಿದ್ದವರಾಗಿ,  ಸಂಸಾರದಿಂದ ಮುಕ್ತಿಯನ್ನು ನೀಡುವ ರಾಮಚಂದ್ರನ ಕಥೆಗಳನ್ನು ಹೇಳುತ್ತಾ, ಜಟಾಯುಪಕ್ಷಿಯ ಸಾವಿನ ಕಥೆಯನ್ನೂ ಹೇಳಿದರು. ಅವರು ಹೇಳುತ್ತಿದ್ದ   ಜಟಾಯುವಿನ ಸಾವಿನ ಕಥೆ ಅಲ್ಲಿದ್ದ  ಸಂಪಾತಿ ಎಂಬ ಪಕ್ಷಿಯ ಕಿವಿಗೆ ಬಿತ್ತು.

Monday, May 21, 2018

Mahabharata Tatparya Nirnaya Kannada 6.42-6.45


ಇತೀರಿತೇ ಶಕ್ರಸುತಾತ್ಮಜೇನ ತಥೇತಿ ಹೋಚುಃ ಸಹ ಜಾಮ್ಬವನ್ಮುಖಾಃ ।
ಸರ್ವೇsಪಿ ತೇಷಾಮಥ ಚೈಕಮತ್ಯಂ ದೃಷ್ಟ್ವಾ  ಹನೂಮಾನಿದಮಾಬಭಾಷೇ ॥೬.೪೨॥

ಅಂಗದನಿಂದ ಹೀಗೆ ಹೇಳಲ್ಪಡುತ್ತಿರಲು, ಜಾಂಬವಂತನೇ ಮೊದಲಾದವರು ‘ಹಾಗೇ ಆಗಲಿ’ ಎಂದು ಹೇಳಿದರು.  ಅವರೆಲ್ಲರ ಒಗ್ಗಟ್ಟನ್ನು ನೋಡಿದ  ಹನುಮಂತನು ಅವರಿಗೆ ತಿಳಿ ಹೇಳುತ್ತಾನೆ:

ವಿಜ್ಞಾತಮೇತದ್ಧಿ ಮಯಾsಙ್ಗದಸ್ಯ ರಾಜ್ಯಾಯ ತಾರಾಭಿಹಿತಂ ಹಿ ವಾಕ್ಯಮ್ ।
ಸಾಧ್ಯಂ ನ ಚೈತನ್ನಹಿ ವಾಯುಸೂನೂ ರಾಮಪ್ರತೀಪಂ ವಚನಂ ಸಹೇತ ॥೬.೪೩॥

“ ‘ಅಂಗದನಿಗೆ ರಾಜ್ಯಾಭಿಷೇಕ ಆಗಬೇಕು^’ ಎನ್ನುವ ಒಂದೇ ಕಾರಣದಿಂದ ತಾರ ಈರೀತಿಯ ವಾಕ್ಯವನ್ನು ಹೇಳಿರುವನು ಎನ್ನುವುದನ್ನು ನಾನು ತಿಳಿಯಬಲ್ಲೆ. ಆದರೆ ಇದು ಸಾಧ್ಯವಿಲ್ಲ. ಈ ವಾಯುಪುತ್ರನು ರಾಮನಿಗೆ ವಿರುದ್ಧವಾದ ಮಾತನ್ನು ಸಹಿಸಲಾರ” ಎನ್ನುತ್ತಾನೆ ಹನುಮಂತ.
[^ ವಹಿಸಿದ ಕಾರ್ಯವನ್ನು ಮಾಡಲು ವಿಪುಲನಾದ ಸುಗ್ರೀವನನ್ನು ಕೋಪದಿಂದ ಶ್ರೀರಾಮನು ಕೊಂದರೆ, ಆಗ ಅಂಗದನಿಗೆ ಪಟ್ಟಾಭಿಷೇಕ ಮಾಡಬಹುದು ಎನ್ನುವುದು ತಾರನ ಮಾತಿನ ಹಿಂದಿರುವ ತಾತ್ಪರ್ಯ ಎನ್ನುವುದನ್ನು ತಕ್ಷಣ ಹನುಮಂತ ತಿಳಿದುಕೊಳ್ಳುತ್ತಾನೆ]

ನಚಾಹಮಾಕ್ರಷ್ಟುಮುಪಾಯತೋsಪಿ ಶಕ್ಯಃ ಕಥಞ್ಚಿತ್ ಸಕಲೈಃ ಸಮೇತೈಃ ।
ಸನ್ಮಾರ್ಗ್ಗತೋ ನೈವ ಚ ರಾಘವಸ್ಯ ದುರನ್ತಶಕ್ತೇರ್ಬಿಲಮಪ್ರದೃಷ್ಯಮ್ ॥೬.೪೪॥

ಶ್ರೀರಾಮನಿಗೆ ಈ ಬಿಲವು ಅಗಮ್ಯ  ಎಂದು ನೀವು ಭಾವಿಸಿದ್ದೀರಿ. ಆದರೆ ಅದು ನಿಜವಲ್ಲ.  ಇನ್ನು ನೀವು ನನ್ನನ್ನು ಯಾವುದೋ ಪ್ರಲೋಭನೆಯಿಂದ ಆಕರ್ಷಿಸಬಹುದು ಎಂದುಕೊಂಡಿದ್ದರೆ  ಅದು ನಿಮ್ಮಿಂದ ಸಾಧ್ಯವಿಲ್ಲ.  ನೀವೆಲ್ಲರೂ ಸೇರಿದರೂ ಕೂಡಾ, ಒಳ್ಳೆಯ ಮಾರ್ಗದಿಂದ ಆಚೆ  ನನ್ನನ್ನು ಸೆಳೆದುಕೊಳ್ಳಲು ನಿಮ್ಮಿಂದ ಸಾಧ್ಯವಿಲ್ಲ.

ವಚೋ ಮಮೈತದ್ ಯದಿ ಚಾsದರೇಣ ಗ್ರಾಹ್ಯಂ ಭವೇದ್ ವಸ್ತದತಿಪ್ರಿಯಂ ಮೇ ।
ನ ಚೇದ್ ಬಲಾದಪ್ಯನಯೇ ಪ್ರವೃತ್ತಾನ್ ಪ್ರಶಾಸ್ಯ ಸನ್ಮಾರ್ಗ್ಗಗತಾನ್ ಕರೋಮಿ ॥೬.೪೫॥

“ರಾಮನ ಬಾಣಗಳಿಗೆ ಈ ಬಿಲ ಸಿಗುವುದಿಲ್ಲ ಎನ್ನುವುದು ಕೇವಲ ಭ್ರಮೆ. ಭಗವಂತನ ಶಕ್ತಿಗೆ ಅಂತ್ಯವೇ ಇಲ್ಲ. ಹಾಗಿರುವಾಗ ಈ ಬಿಲ ಅವನಿಗೆ ಯಾವ ಲೆಕ್ಕ. ನನ್ನ ಮಾತನ್ನು ನೀವು ಆದರದಿಂದ ಸ್ವೀಕರಿಸಿದರೆ ನನಗೆ ಅತ್ಯಂತ ಪ್ರಿಯ. ಹಾಗಲ್ಲದೇ ಹೋದರೆ, ಅನ್ಯಾಯದಿಂದ ಪ್ರವೃತ್ತಿ ಮಾಡಿದವರನ್ನು ನನ್ನ ಬಲದಿಂದ ಶಾಸನೆ ಮಾಡಿ ಸನ್ಮಾರ್ಗದಲ್ಲಿ ಇರುವಂತೆ ನಾನು ಮಾಡುತ್ತೇನೆ” ಎನ್ನುತ್ತಾನೆ ಹನುಮಂತ.

Thursday, May 17, 2018

Mahabharata Tatparya Nirnaya Kannada 6.36-6.41


ಸಮಸ್ತದುರ್ಗ್ಗಪ್ರವರೇ ದುರಾಸದಂ ವಿಮಾರ್ಗ್ಗತಾಂ ವಿನ್ಧ್ಯಗಿರಿಂ ಮಹಾತ್ಮನಾಮ್ ।
ಗತಃ ಸ ಕಾಲೋ ಹರಿರಾಡುದೀರಿತಃ ಸಮಾಸದಂಶ್ಚಾಥ ಬಿಲಂ ಮಹಾದ್ಭುತಮ್ ॥೬.೩೬॥

ಸುಗ್ರೀವನು ನೀಡಿದ ಕಾಲಮಿತಿಯು ಕಳೆಯುತ್ತಿರಲು, ಸೀತಾದೇವಿಯನ್ನು ಹುಡುಕುತ್ತಿರುವ ಹನುಮಂತನೇ ಮೊದಲಾದವರು ಅತ್ಯಂತ ಶ್ರೇಷ್ಠವಾಗಿರುವ ವಿನ್ದ್ಯಗಿರಿಯನ್ನು  ಹೊಂದಿ, ಅಲ್ಲಿ  ಅತ್ಯದ್ಭುತವಾದ ಬಿಲವೊಂದನ್ನು ಕಂಡು ಅದನ್ನು  ಪ್ರವೇಶ ಮಾಡುತ್ತಾರೆ. 

ಕೃತಂ ಮಯೇನಾತಿವಿಚಿತ್ರಮುತ್ತಮಂ ಸಮೀಕ್ಷ್ಯ ತತ್ ತಾರ ಉವಾಚ ಚಾಙ್ಗದಮ್ ।
ವಯಂ ನ ಯಾಮೋ ಹರಿರಾಜಸನ್ನಿಧಿಂ ವಿಲಙ್ಘಿತೋ ನಃ ಸಮಯೋ ಯತೋsಸ್ಯ ॥೬.೩೭॥

ಮಯನಿಂದ ನಿರ್ಮಿಸಲ್ಪಟ್ಟ ಅತಿ ವಿಚಿತ್ರ ಮತ್ತು ಅತ್ಯಂತ ಉತ್ತಮವಾದ ಆ ಗುಹೆಯನ್ನು ನೋಡಿ, ಬೃಹಸ್ಪತಿಯ ಅವತಾರವಾದ ತಾರನು ಅಂಗದನನ್ನು ಕುರಿತು ಹೇಳುತ್ತಾನೆ:  “ಸುಗ್ರೀವ ಕೊಟ್ಟ ಕಾಲಮಿತಿ ಮೀರಿ ಹೋಗಿದೆ. ನಾವು ಇನ್ನು ಸುಗ್ರೀವನ ಸನ್ನಿಧಿಯನ್ನು ಹೊಂದಲಾರೆವು” ಎಂದು.

ದುರಾಸದೋsಸಾವತಿಚಣ್ಡಶಾಸನೋ ಹನಿಷ್ಯತಿ ತ್ವಾಮಪಿ ಕಿಂ ಮದಾದಿಕಾನ್ ।
ಅಗಮ್ಯಮೇತದ್ ಬಿಲಮಾಪ್ಯ ತತ್ ಸುಖಂ ವಸಾಮ ಸರ್ವೇ ಕಿಮಸಾವಿಹಾsಚರೇತ್ ॥೬.೩೮॥

ಮುಂದುವರಿದು ತಾರ ಹೇಳುತ್ತಾನೆ: “ಸುಗ್ರೀವನ ಹತ್ತಿರ ಹಿಂತಿರುಗಿ ಅವನಿಗೆ ತಿಳಿ ಹೇಳುವುದು ಕಷ್ಟ. ಕೊಟ್ಟ ಆಜ್ಞೆಯನ್ನು ಮೀರಿದವರಿಗೆ  ಅತ್ಯಂತ ಭಯಂಕರ ಶಿಕ್ಷೆಯನ್ನು ಆತ ನೀಡುತ್ತಾನೆ. (ಇದಕ್ಕಾಗಿ ಇಂದಿಗೂ ಕೂಡಾ ‘ಸುಗ್ರೀವಾಜ್ಞೆ’ ಎನ್ನುವ ಪದ ಬಳಕೆಯಲ್ಲಿದೆ). ನಿನ್ನನ್ನೂ ಕೂಡಾ ‘ಅಣ್ಣನ ಮಗ’ ಎನ್ನುವ ಕರುಣೆ ಇಲ್ಲದೆ ಆತ ಕೊಲ್ಲಬಲ್ಲ. ಇನ್ನು ನಮ್ಮನ್ನು ಕೊಲ್ಲುವುದರಲ್ಲೇನೂ  ಆಶ್ಚರ್ಯವಿಲ್ಲ. ಅದಕ್ಕಾಗಿ ಯಾರೂ ಹೊಂದದ ಈ ಬಿಲವನ್ನು ಹೊಂದಿ, ನಾವೆಲ್ಲರೂ ಇಲ್ಲಿಯೇ ವಾಸ ಮಾಡೋಣ. ನಾವಿಲ್ಲಿದ್ದರೆ ಅವನಿಗೆ ಏನೂ ಮಾಡಲು ಸಾಧ್ಯವಿಲ್ಲ”.

ನಚೈವ ರಾಮೇಣ ಸಲಕ್ಷ್ಮಣೇನ ಪ್ರಯೋಜನಂ ನೋ ವನಚಾರಿಣಾಂ ಸದಾ ।
ನಚೇಹ ನಃ ಪೀಡಯಿತುಂ ಸ ಚ ಕ್ಷಮಃ ತತೋ ಮಮೇಯಂ ಸುವಿನಿಶ್ಚಿತಾ ಮತಿಃ ॥೬.೩೯॥

“ಕಾಡಿನಲ್ಲಿ ತಿರುಗುವ ನಮಗೆ ರಾಮನಿಂದಾಗಲೀ, ಲಕ್ಷ್ಮಣನಿಂದಾಗಲೀ ಏನೂ ಪ್ರಯೋಜನವಿಲ್ಲಾ. ನಮ್ಮನ್ನು ಇಲ್ಲಿ ಪೀಡಿಸಲು ಅವರು  ಸಮರ್ಥರಲ್ಲಾ. ಹೀಗಾಗಿ ನಮ್ಮ ಬುದ್ಧಿಯು ಈ ವಿಚಾರದಲ್ಲಿ ನಿಶ್ಚಿತವಾಗಿದೆ” ಎನ್ನುತ್ತಾನೆ ತಾರ.

ಇತೀರಿತಂ ಮಾತುಲವಾಕ್ಯಮಾಶು ಸ ಆದದೇ ವಾಲಿಸುತೋsಪಿ ಸಾದರಮ್ ।
ಉವಾಚ ವಾಕ್ಯಂ ಚ ನ ನೋ ಹರೀಶ್ವರಃ ಕ್ಷಮೀ ಭವೇಲ್ಲಙ್ಘಿತಶಾಸನಾನಾಮ್ ॥೬.೪೦॥

ತಕ್ಷಣ, ಯಾವುದೇ ವಿಚಾರ ಮಾಡದೇ, ತನ್ನ ಸೋದರಮಾವನಾದ ತಾರನ ಮಾತನ್ನು ಅಂಗದನು ಭಕ್ತಿಯಿಂದ ಸ್ವೀಕರಿಸಿ ಹೇಳುತ್ತಾನೆ: “ಸುಗ್ರೀವನ ಆಜ್ಞೆಯನ್ನು ಮೀರಿರುವ ನಮ್ಮನ್ನು ಆತ  ಎಂದೂ  ಕ್ಷಮಿಸುವುದಿಲ್ಲ”.   

ರಾಜ್ಯಾರ್ಥಿನಾ ಯೇನ ಹಿ ಘಾತಿತೋsಗ್ರಜೋ ಹೃತಾಶ್ಚ ದಾರಾಃ ಸುನೃಶಂಸಕೇನ ।
ಸ ನಃ ಕಥಂ ರಕ್ಷ್ಯತಿ ಶಾಸನಾತಿಗಾನ್ ನಿರಾಶ್ರಯಾನ್ ದುರ್ಬಲಕಾನ್ ಬಲೇ ಸ್ಥಿತಃ ॥೬.೪೧॥

“ರಾಜ್ಯ ಬೇಕು ಎಂಬ ಬಯಕೆಯಿಂದ ತನ್ನ ಅಣ್ಣನನ್ನೇ ಕೊಲ್ಲಿಸಿ,  ಅತ್ತಿಗೆಯನ್ನು  ಅಪಹರಿಸಿರುವವನು ಆತ. ಅಂತಹ ಅತ್ಯಂತ ಕ್ರೂರನಾದ  ಸುಗ್ರೀವನ ಅಪ್ಪಣೆಯನ್ನು ಉಲ್ಲಂಘಿಸಿರುವ ನಮ್ಮನ್ನು ಆತ ಹೇಗೆ ತಾನೇ ರಕ್ಷಣೆ ಮಾಡಿಯಾನು?  ನಾವು ನಿರಾಶ್ರಿತರು, ದುರ್ಬಲರು. ಅವನಾದರೋ ರಾಮನ ಬೆಂಬಲದೊಂದಿಗಿದ್ದಾನೆ” ಎನ್ನುತ್ತಾನೆ ಅಂಗದ.