ತಸ್ಯಾಗ್ರಜೋsಸಾವರುಣಸ್ಯ ಸೂನುಃ ಸೂರ್ಯ್ಯಸ್ಯ
ಬಿಮ್ಬಂ ಸಹ ತೇನ ಯಾತಃ ।
ಜವಂ ಪರೀಕ್ಷನ್ನಥ ತಂ ಸುತಪ್ತಂ
ಗುಪ್ತ್ವಾ ಪತತ್ರಕ್ಷಯಮಾಪ್ಯ ಚಾಪತತ್ ॥೬.೪೯॥
ಸಂಪಾತಿ ಜಟಾಯುವಿನ
ಅಣ್ಣ ಮತ್ತು ವರುಣನ ಮಗ. ಈತ ತನ್ನ ವೇಗವನ್ನು
ಪರೀಕ್ಷಿಸಲೋಸುಗ, ಜಟಾಯುವಿನಿಂದ ಕೂಡಿ, ಸೂರ್ಯನ ಬಿಂಬದತ್ತ ತೆರಳಿ, ಸೂರ್ಯ ಬಿಂಬದ ಬೇಗೆಯಿಂದ
ತಾಪಗೊಂಡ ಜಟಾಯುವನ್ನು ತನ್ನ ರೆಕ್ಕೆಯನ್ನು
ಹರಡುವ ಮುಖೇನ ರಕ್ಷಿಸಲು ಹೋಗಿ, ರೆಕ್ಕೆಯ ನಾಶವನ್ನು ಹೊಂದಿ, ಭೂಮಿಯಲ್ಲಿ ಬಿದ್ದಿದ್ದ.
ಸ ದಗ್ಧಪಕ್ಷಃ
ಸವಿತೃಪ್ರತಾಪಾಚ್ಛ್ರುತ್ವೈವ ರಾಮಸ್ಯ ಕಥಾಂ ಸಪಕ್ಷಃ ।
ಭೂತ್ವಾ ಪುನಶ್ಚಾಪಿ ಮೃತಿಂ ಜಟಾಯುಷಃ
ಶುಶ್ರಾವ ಪೃಷ್ಟ್ವಾ ಪುನರೇವ ಸಮ್ಯಕ್ ॥೬.೫೦॥
ಸೂರ್ಯನ ಬಿಸಿಲ ಬೇಗೆಯಿಂದ ಸುಟ್ಟ ರೆಕ್ಕೆ ಉಳ್ಳವನಾಗಿದ್ದ ಸಂಪಾತಿ,
ಆಕಸ್ಮಿಕವಾಗಿ ಶ್ರೀರಾಮಚಂದ್ರನ ಕಥೆಯನ್ನು ಕೇಳಿದ್ದರಿಂದ, ಪುನಃ ರೆಕ್ಕೆಯನ್ನು ಹೊಂದುತ್ತಾನೆ.
ರೆಕ್ಕೆ ಹೊಂದಿದ ಮೇಲೂ ಪುನಃ ಭಕ್ತಿಯಿಂದ ರಾಮಚಂದ್ರನ ಕಥೆಯನ್ನು ಕೇಳುತ್ತಾ, ಜಟಾಯುವಿನ ಮರಣದ
ಸುದ್ದಿಯನ್ನು ಸಂಪಾತಿ ತಿಳಿಯುತ್ತಾನೆ.
ಸ ರಾವಣಸ್ಯಾಥ ಗತಿಂ ಸುತೋಕ್ತಾಂ
ನಿವೇದ್ಯದೃಷ್ಟ್ವಾಜನಕಾತ್ಮಜಾಕೃತಿಮ್ ।
ಸ್ವಯಂ ತಥಾsಶೋಕವನೇ ನಿಷಣ್ಣಾಮವೋಚದೇಭ್ಯೋ
ಹರಿಪುಙ್ಗವೇಭ್ಯಃ ॥೬.೫೧॥
ಎಲ್ಲಾ ವಿಷಯವನ್ನು ತಿಳಿದಾದ ಮೇಲೆ, ಸಂಪಾತಿಯು ತನ್ನ ಮಗನಾದ ಸುಪಾರ್ಶ್ವವಿನಿಂದ ಕೇಳಿ
ತಿಳಿದಿರುವ ರಾವಣನ ಗತಿಯನ್ನು[ಸೀತೆಯನ್ನು ರಾವಣ ಅಪಹರಿಸಿಕೊಂಡು ಲಂಕೆಗೆ ಹೋಗಿರುವ ಸಂಗತಿಯನ್ನು]
ಈ ಎಲ್ಲಾ ಕಪಿಗಳಿಗೆ ಹೇಳುತ್ತಾನೆ. ರೆಕ್ಕೆಯನ್ನು
ಮರಳಿ ಪಡೆದಿದ್ದ ಆತ ತಕ್ಷಣ ಆಕಾಶಕ್ಕೆ ಹಾರಿ, ಸೀತೆಯ ಆಕೃತಿಯು ಅಶೋಕವನದಲ್ಲಿರುವುದನ್ನು
ನೋಡುತ್ತಾನೆ^ ಮತ್ತು ಆ ವಿಷಯವನ್ನು ಅಲ್ಲಿದ್ದ ಎಲ್ಲಾ ಕಪಿಗಳಿಗೂ ಹೇಳುತ್ತಾನೆ.
[^ಗೃಧ್ರಗಳಿಗೆ ಅತ್ಯಂತ ಸೂಕ್ಷ್ಮ ದೃಷ್ಟಿ ಎಂದು ಹೇಳುತ್ತಾರೆ.
ಅದರಂತೆ ಸಂಪಾತಿ ಅಲ್ಲೇ ಎತ್ತರಕ್ಕೇರಿ, ನೂರು ಯೋಜನ ದೂರದಲ್ಲಿರುವ ಅಶೋಕವನದಲ್ಲಿದ್ದ ಸೀತೆಯನ್ನು
ಗುರುತಿಸುತ್ತಾನೆ]
[ಕಿಷ್ಕಿಂಧಕಾಂಡದಲ್ಲಿ (೫೯.೮ - ೨೨) ಹೇಳುವಂತೆ: ತಂ ಮಾಮೇವಂ ಗತಂ ಪುತ್ರಃ ಸುಪಾರ್ಶ್ವೋ ನಾಮ ನಾಮತಃ । ಆಹಾರೇಣ
ಯಥಾಕಾಲಂ ಬಿಭಭರ್ತ್ತಿ ಪತತಾಂ ವರಃ ॥ ಸ
ಕದಾಚಿತ್ ಕ್ಷುಧಾರ್ತ್ತಸ್ಯ ಮಮಾsಹಾರಾಭಿಕಾಂಕ್ಷಿಣಃ ಗತಸೂರ್ಯ್ಯೋsಹನಿ ಪ್ರಾಪ್ತೋ ಮಮ ಪುತ್ರೋ
ಹ್ಯನಾಮಿಷಃ ॥.... ಸಂಪಾತಿ ರೆಕ್ಕೆ ಸುಟ್ಟ ವೃದ್ಧ.
ಆತನಿಗೆ ಅವನ ಮಗ ಸುಪಾರ್ಶ್ವ ದಿನಾಲು ಆಹಾರ ತಂದು ಕೊಡುತ್ತಿದ್ದ. ಒಂದು ದಿನ ಸುಪಾರ್ಶ್ವ ಬರುವಾಗ
ತಡವಾಯಿತು. ಸೂರ್ಯಾಸ್ತವಾದ ನಂತರ ಬಂದ ಮಗ ಮಾಂಸವಿಲ್ಲದೇ ಬಂದಿದ್ದನ್ನು ಕಂಡ ಸಂಪಾತಿ ಸುಪಾರ್ಶ್ವನಿಗೆ
ಬಯ್ಯುತ್ತಾನೆ. ಆಗ ಸುಪಾರ್ಶ್ವ ಹೇಳುತ್ತಾನೆ: “ನಾನು ಎಂದಿನಂತೆ ಆಕಾಶವನ್ನು ಏರಿ ಆಹಾರವನ್ನು ಹುಡುಕುತ್ತಾ
ಮಹೇಂದ್ರಪರ್ವತದ ಮೇಲೆ ಹಾರುತ್ತಿದ್ದೆ. ಆಗ ಅಲ್ಲಿ ಒಬ್ಬ ಕಪ್ಪು ಬಣ್ಣದ ರಾಕ್ಷಸ ಒಬ್ಬ ಕೆಂಪು-ಹಳದಿ
ಮಿಶ್ರಿತ ಬಣ್ಣದ ಹೆಣ್ಣುಮಗಳನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಕಂಡೆ. ಆಕೆ ‘ನಾನು ರಾಮನ ಹೆಂಡತಿ’
ಎಂದು ಕೂಗಿ ಹೇಳುತ್ತಿದ್ದಳು” ಎಂದು. ಈ ರೀತಿ ಸಂಪಾತಿಗೆ ಸೀತಾಪಹಾರದ ವಿಷಯ ಮೊದಲೇ ತಿಳಿದಿತ್ತು.]
No comments:
Post a Comment