ಮಾರ್ಗ್ಗಮಾಣೋ ಬಹಿಶ್ಚಾನ್ತಃ ಸೋsಶೋಕವನಿಕಾತಳೇ ।
ದದರ್ಶ
ಶಿಂಶಪಾವೃಕ್ಷಮೂಲಸ್ಥಿತರಮಾಕೃತಿಮ್ ॥೭.೧೦॥
ಹನುಮಂತನು ಲಂಕಾ ನಗರದ ಒಳಗೂ ಹೊರಗೂ ಹುಡುಕುತ್ತಾ, ಅಶೋಕ ವೃಕ್ಷಗಳ
ತೋಪಿನ ಮಧ್ಯೆ, ಶಿಂಶಪಾವೃಕ್ಷದ(ಒಂದು ಜಾತಿಯ ಅಶೋಕ ವೃಕ್ಷ) ಮೂಲದಲ್ಲಿ ಇರುವ ಸೀತಾಕೃತಿಯನ್ನು ಕಂಡನು.
[ಈ ವಿವರವನ್ನು
ನಾರಸಿಂಹ ಪುರಾಣದಲ್ಲಿ(೫೧.೧೭-೧೯) ಕಾಣಬಹುದು. ‘ಅಶೋಕವನಿಕಾಂ
ಪ್ರಾಪ್ತೋ ನಾನಾಪುಷ್ಪಸಮನ್ವಿತಾಂ । ಜುಷ್ಟಾಂ ಮಲಯಜಾತೇನ
ಚಂದನೇನ ಸುಗಂಧಿನಾ । ಪ್ರವಿಶ್ಯ ಶಿಂಶಪಾವೃಕ್ಷಮಾಶ್ರಿತಾಂ
ಜನಕಾತ್ಮಜಾಮ್’]
ನರಲೋಕವಿಡಮ್ಬಸ್ಯ ಜಾನನ್ ರಾಮಸ್ಯ
ಹೃದ್ಗತಮ್ ।
ತಸ್ಯ ಚೇಷ್ಟಾನುಸಾರೇಣ ಕೃತ್ವಾ
ಚೇಷ್ಟಾಶ್ಚ ಸಂವಿದಃ ॥೭.೧೧॥
ತಾದೃಕ್ ಚೇಷ್ಟಾಸಮೇತಾಯಾ
ಅಙ್ಗುಲೀಯಮದಾತ್ ತತಃ ।
ಸೀತಾಯ ಯಾನಿ ಚೈವಾsಸನ್ನಾಕೃತೇಸ್ತಾನಿ ಸರ್ವಶಃ ॥೭.೧೨॥
ಭೂಷಣಾನಿ ದ್ವಿಧಾ ಭೂತ್ವಾ ತಾನ್ಯೇವಾsಸಂಸ್ತಥೈವ ಚ ।
ಅಥ ಚೂಳಾಮಣಿಂ ದಿವ್ಯಂ ದಾತುಂ ರಾಮಾಯ
ಸಾ ದದೌ ॥೭.೧೩॥
ಮನುಷ್ಯರೂಪದಲ್ಲಿ ಅವತರಿಸಿ ಮನುಷ್ಯರನ್ನೇ ಅನುಕರಿಸುವ ರಾಮಚಂದ್ರನ ಅಂತರಂಗದ
ಅಭಿಪ್ರಾಯವನ್ನು ತಿಳಿದಿರುವ ಹನುಮಂತನು, ರಾಮನ ಅಸುರ ಮೋಹನರೂಪವಾದ ಕ್ರಿಯೆಯಂತೆಯೇ ಅನೇಕ ಚೇಷ್ಟೆಗಳನ್ನು^ ಮಾಡುತ್ತಾ, ಅಂತದೇ ಕ್ರಿಯೆಯನ್ನು
ಮಾಡುತ್ತಿರುವ ಸೀತಾಕೃತಿಯೊಂದಿಗೆ (ಮಾಯಾಸೀತೆಯೊಂದಿಗೆ) ಸಂವಾದವನ್ನು ನಡೆಸಿ, ತದನಂತರ
ಉಂಗುರವನ್ನು ಕೊಡುತ್ತಾನೆ.
[^ಏನೂ ತಿಳಿಯದವನಂತೆ
ನಗರದ ಒಳಗೂ ಹೊರಗೂ ಸೀತೆಯನ್ನು ಹುಡುಕಿದುದು,
ಸೀತೆ ಸಿಗಲಿಲ್ಲಾ ಎಂದು ಅಸಮಾಧಾನ ಮಾಡಿಕೊಳ್ಳುವುದು, ಸೀತೆ ಸಿಗಲಿಲ್ಲಾ ಎಂದರೆ ಇಲ್ಲೇ
ಪ್ರಾಣ ಕಳೆದುಕೊಳ್ಳುತ್ತೇನೆ ಎಂದುಕೊಳ್ಳುವುದು, ರಾವಣನ ಅಂತಃಪುರವನ್ನು ನೋಡಿದ ನಂತರ ತನ್ನ
ಬ್ರಹ್ಮಚರ್ಯ ಸುರಕ್ಷಿತವಾಗಿಯೇ ಇದೆ ಎಂದು ದೃಢೀಕರಿಸಿಕೊಳ್ಳುವುದು, ಇತ್ಯಾದಿ ಚೇಷ್ಟೆಗಳನ್ನು
ಹನುಮಂತ ಲಂಕೆಯಲ್ಲಿ ಮಾಡಿ ತೋರಿಸಿದ. ಇದರ ವಿಸ್ತಾರವಾದ ವಿವರಣೆ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗುತ್ತದೆ].
ಸೀತೆ ಹನುಮಂತನಿಗೆ ಚೂಡಾಮಣಿಯನ್ನು ನೀಡಿರುವ ಕುರಿತು ಆಚಾರ್ಯರು ವಿಶ್ಲೇಷಿಸುತ್ತಾ
ಹೇಳುತ್ತಾರೆ: ‘ಸೀತೆಗೆ ಯಾವ-ಯಾವ ಆಭರಣಗಳು ಇದ್ದವೋ, ಅವೆಲ್ಲವೂ ಸೀತಾಕೃತಿಯಲ್ಲೂ ಇದ್ದಿತ್ತು. ಆ ಆಭರಣದ ವಿನ್ಯಾಸದಲ್ಲಿ ಸ್ವಲ್ಪವೂ
ವ್ಯತ್ಯಾಸವಿರಲಿಲ್ಲ’ ಎಂದು.
ಹನುಮಂತನೊಂದಿಗೆ ಮಾತನಾಡಿ ಕೆಲವು ಹೊತ್ತಿನ ನಂತರ, ತನ್ನ ಚೂಡಾಮಣಿಯನ್ನು
ಆತನಿಗೆ ಕೊಟ್ಟ ಸೀತೆ, ಅದನ್ನು ಶ್ರೀರಾಮನಿಗೆ ಕೊಡುವಂತೆ
ಹೇಳುತ್ತಾಳೆ.
ಇಲ್ಲಿ ಈರೀತಿಯ ಲೀಲಾನಾಟಕವಾಡಲು
ಕಾರಣವೇನು? ಯಾರು ಇದನ್ನು ನೋಡುತ್ತಿದ್ದಾರೆ? ಈ ಪ್ರಶ್ನೆಗೆ ಆಚಾರ್ಯರು ಮುಂದಿನ ಶ್ಲೋಕಗಳಲ್ಲಿ ಉತ್ತರಿಸಿದ್ದಾರೆ:
ಯದ್ಯಪ್ಯೇತನ್ನ ಪಶ್ಯನ್ತಿ
ನಿಶಾಚರಗಣಾಸ್ತುತೇ ।
ದ್ಯುಲೋಕಚಾರಿಣಃ ಸರ್ವಂ ಪಶ್ಯಂತ್ಯೃಷಯ
ಏವ ಚ ॥೭.೧೪॥
ತೇಷಾಂ ವಿಡಮ್ಬನಾಯೈವ ದೈತ್ಯಾನಾಂ
ವಞ್ಚನಾಯ ಚ ।
ಪಶ್ಯತಾಂ ಕಲಿಮುಖ್ಯಾನಾಂ ವಿಡಮ್ಬೋsಯಂ ಕೃತೋ ಭವೇತ್ ॥೭.೧೫॥
ನಿಜವಾಗಿಯೂ ಲಂಕೆಯಲ್ಲಿದ್ದ ರಾಕ್ಷಸರು ಹನುಮಂತ ಮತ್ತು ಸೀತೆಯ ನಡುವಿನ
ಸಂವಾದವನ್ನು ಅಲ್ಲಿ ನಿಂತು ನೋಡುತ್ತಿರಲಿಲ್ಲ. ಆದರೆ ಅಲ್ಲಿ ಓಡಾಡುವ ಋಷಿಗಳು(ದ್ವಿಲೋಕಾಚಾರಿಗಳಾದ
ಋಷಿಗಳು ಮತ್ತು ದಿವ್ಯಜ್ಞಾನವುಳ್ಳ ಭೂಲೋಕದಲ್ಲಿರುವ ಋಷಿಗಳು) ಎಲ್ಲವನ್ನೂ ನೋಡುತ್ತಿರುತ್ತಾರೆ.
ಅಂತಹ ಋಷಿಗಳಿಗೆ ವಿಡಂಬನ ವಿಷಯಕವಾದ ತತ್ತ್ವಜ್ಞಾನವನ್ನು ನೀಡಲು ಹಾಗು
ಕಲಿಯೇ ಪ್ರಧಾನನಾಗಿ ಇರುವ ದೈತ್ಯರಿಗೆ ಮಿಥ್ಯಾಜ್ಞಾನದಿಂದ
ವಂಚನೆ ಮಾಡಲು ‘ಈ ರೀತಿಯ ವಿಡಂಬನವು ಮಾಡತಕ್ಕದ್ದು’ ಎನ್ನುವುದು ರಾಮಚಂದ್ರನ ಸಂಕಲ್ಪವಾಗಿತ್ತು.
ಅದರಂತೆ ಹನುಮಂತ ಲೀಲಾನಾಟಕದ ಪಾತ್ರಧಾರಿಯಾಗಿ ಎಲ್ಲವನ್ನೂ ಮಾಡಿದ.
No comments:
Post a Comment