ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, May 11, 2018

Mahabharata Tatparya Nirnaya Kannada 6.19-6.20


ಭಕ್ತೋ ಮಮೈಷ ಯದಿ ಮಾಮಭಿಪಶ್ಯತೀಹ ಪಾದೌ ಧ್ರುವಂ ಮಮ ಸಮೇಷ್ಯತಿ ನಿರ್ವಿಚಾರಃ ।
ಯೋಗ್ಯೋ ವಧೋ ನಹಿ ಜನಸ್ಯ ಪದಾನತಸ್ಯ ರಾಜ್ಯಾರ್ತ್ಥಿನಾ ರವಿಸುತೇನ ವಧೋsರ್ತ್ಥಿತಶ್ಚ ॥೬.೧೯॥

ನನ್ನ ಭಕ್ತನಾಗಿರುವ ವಾಲಿಯು ಒಂದು ವೇಳೆ ನನ್ನನ್ನು ಈ ಜಾಗದಲ್ಲಿ ನೋಡುತ್ತಾನಾದರೆ, ನನ್ನ ಪಾದವನ್ನು ಖಂಡಿತವಾಗಿಯೂ ಹೊಂದುತ್ತಾನೆ. (ನನ್ನ ಪಾದದಲ್ಲಿ ಶರಣಾಗುತ್ತಾನೆ). ಯಾವುದೇ ವಿಚಾರ ಮಾಡದೇ ಕಾಲಿಗೆ ಬಿದ್ದ ಭಕ್ತನ ಹತ್ತ್ಯೆ ಸಾಧ್ಯವಿಲ್ಲ.
ಆದರೆ ರಾಜ್ಯವನ್ನು ಬಯಸಿದ ಸುಗ್ರೀವನಿಂದ ವಾಲಿಯ ಸಂಹಾರವು ಬೇಡಲ್ಪಟ್ಟಿದೆ. (ಅದರಿಂದಾಗಿ ಕೊಲ್ಲಲೇಬೇಕಾದ ಅನಿವಾರ್ಯತೆ ಇದೆ.  ಏಕೆಂದರೆ ಕೇವಲ ರಾಜ್ಯ ಬೇಕು ಎಂದು ಸುಗ್ರೀವ ಕೇಳಲಿಲ್ಲ. ವಾಲಿಯ ವದೆಯನ್ನೇ ಆತ ಬಯಸಿದ್ದ)

ಕಾರ್ಯ್ಯಂ ಹ್ಯಭೀಷ್ಟಮಪಿ ತತ್ ಪ್ರಣತಸ್ಯ ಪೂರ್ವಂ ಶಸ್ತೋ ವಧೋ ನ ಪದಯೋಃ ಪ್ರಣತಸ್ಯ ಚೈವ ।
ತಸ್ಮಾದದೃಶ್ಯತನುರೇವ ನಿಹನ್ಮಿ ಶಕ್ರ-ಪುತ್ರಂ ತ್ವಿತೀಹ ತಮದೃಷ್ಟತಯಾ ಜಘಾನ ॥೬.೨೦॥

ಮೊದಲು ಶ್ರೀರಾಮಚಂದ್ರನ ಪಾದಕ್ಕೆರಗಿದವನು ಸುಗ್ರೀವ. ಮೊದಲು ನಮಸ್ಕರಿಸಿದ ಸುಗ್ರೀವನ ಅಭೀಷ್ಟವನ್ನು ಪೂರೈಸುವುದು ಧರ್ಮ.  ಆ ಕಾರಣದಿಂದಲೇ ಅದೃಷ್ಯನಾಗಿದ್ದು ವಾಲಿಯನ್ನು ಸಂಹರಿಸುತ್ತೇನೆ ಎಂದು ಹೇಳಿದ ಶ್ರೀರಾಮಚಂದ್ರ, ವಾಲಿಗೆ ಕಾಣಿಸಿಕೊಳ್ಳದೆ ಆತನ ಮೇಲೆ ಬಾಣಪ್ರಯೋಗಿಸಿ ಆತನನ್ನು ಕೊಲ್ಲುತ್ತಾನೆ.
[ವಾಲ್ಮೀಕಿ ರಾಮಾಯಣದಲ್ಲಿ ನಾವು ಕಾಣುವಂತೆ:   ಸುಗ್ರೀವ ವಾಲಿಯ ಕುರಿತು  ಶ್ರೀರಾಮಚಂದ್ರನಿಗೆ ವಿವರಿಸುತ್ತಾ: ವಾಲಿ ಮತ್ತು ರಾವಣರ  ನಡುವೆ ಒಪ್ಪಂದವಾಗಿರುವ ವಿಷಯವನ್ನೂ ಹೇಳಿರುತ್ತಾನೆ. ಈ ಕಾರಣದಿಂದ ಶ್ರೀರಾಮಚಂದ್ರ ವಾಲಿಯ ಜೊತೆಗೆ ಸಂಧಾನಕ್ಕೆ ಪ್ರಯತ್ನ ನಡೆಸಲಿಲ್ಲ. ಇದಲ್ಲದೇ ತಾನು ರಾಮನ ಕೈಯಲ್ಲೇ ಸಾಯಬೇಕು ಎನ್ನುವ ಬಯಕೆಯಿಂದ ವಾಲಿ ಯುದ್ಧಕ್ಕೆ ಬಂದಿದ್ದ.  ಕೊನೆಯಲ್ಲಿ ವಾಲಿಯೇ ಈ ಮಾತನ್ನು ಹೇಳುವುದನ್ನು ನಾವು ವಾಲ್ಮೀಕಿ ರಾಮಾಯಣದಲ್ಲಿ ಕಾಣುತ್ತೇವೆ.  “ನಿನ್ನಿಂದಲೇ ಸಾವನ್ನು ಬಯಸಿ, ತಾರೆಯಿಂದ ತಡೆಯಲ್ಪಟ್ಟರೂ  ಸುಗ್ರೀವನೊಂದಿಗೆ ಯುದ್ಧ ಮಾಡಲು ಬಂದೆ” ಎನ್ನುತ್ತಾನೆ ವಾಲಿ(ತ್ವತ್ತೋsಹಂ ವಧಮಾಕಾಂಕ್ಷನ್ ವಾರ್ಯ್ಯಮಾಣೋsಪಿ ತಾರಯಾ ॥ ಸುಗ್ರೀವೇಣ ಸಹ ಭ್ರಾತ್ರಾ ದ್ವಂದ್ವ ಯುದ್ಧಮುಪಾಗತಃ-ಕಿಷ್ಕಂಧಾಕಂಡ ೧೮.೫೭)  )].   

No comments:

Post a Comment