ನೈವಾತ್ರ ವಿಶ್ರಮಣಮೈಚ್ಛತ ನಿಃಶ್ರಮೋsಸೌ ನಿಃಸ್ಸೀಮಪೌರುಷಗುಣಸ್ಯ ಕುತಃ
ಶ್ರಮೋsಸ್ಯ ।
ಆಶ್ಲಿಷ್ಯ ಪರ್ವತವರಂ ಸ ದದರ್ಶ
ಗಚ್ಛನ್ ದೈವೈಸ್ತು ನಾಗಜನನೀಂ ಪ್ರಹಿತಾಂ ವರೇಣ ೦೭.೦೪॥
ಸಮುದ್ರೋಲ್ಲಂಘನ ಮಾಡುತ್ತಿರುವ
ಹನುಮಂತನು ಯಾವುದೇ ಶ್ರಮ ಇಲ್ಲದೆ ಮುಂದೆ
ಸಾಗುತ್ತಿದ್ದುದರಿಂದ, ಸಮುದ್ರದಿಂದ ಮೇಲೆದ್ದು ಬಂದ ಮೈನಾಕ ಪರ್ವತದಲ್ಲಿ ವಿಶ್ರಾಂತಿಯನ್ನು
ಪಡೆಯಲು ಆತ ಬಯಸಲಿಲ್ಲ. ಎಣೆಯಿರದ ಬಲದ ಗುಣವುಳ್ಳ ಹನುಮಂತನಿಗೆ ಶ್ರಮವಾದರೂ ಎಲ್ಲಿಂದ? ಅವನಾದರೋ,
ಮೈನಾಕವನ್ನು ಅಪ್ಪಿ ಹೋಗತಕ್ಕವನಾಗಿ, ದೇವತೆಗಳಿಂದ ವರವನ್ನು ಕೊಟ್ಟು ಕಳುಹಿಸಲ್ಪಟ್ಟ
ಸುರಸೆಯನ್ನು ದಾರಿಯಲ್ಲಿ ಕಂಡ.
[ಇಲ್ಲಿ ಹೇಳಿರುವ ಸುರಸೆಯ ಕುರಿತು ವಾಲ್ಮೀಕಿ ರಾಮಾಯಣದಲ್ಲಿಯೇ ಸಂವಾದವಿದೆ: ‘ಸುರಸಾsಜನಯನ್ನಾಗಾನ್
ರಾಮ ಕದ್ರೂಸ್ತು ಪನ್ನಗಾನ್’ ಎಂದು ಅರಣ್ಯಕಾಂಡದಲ್ಲಿ (೧೪.೨೮) ಹೇಳಿದ್ದಾರೆ. (ಸುರಸೆಯು
ನಾಗಗಳಿಗೆ ಜನ್ಮ ನೀಡಿದರೆ, ಕದ್ರೂದೇವಿ ಸರ್ಪಗಳಿಗೆ ಜನ್ಮ ನೀಡಿದಳು) ‘ತತೋ ದೇವಾಃ
ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ । ಅಬ್ರುವನ್ ಸೂರ್ಯಸಂಕಾಶಾಂ ಸುರಸಾಂ ನಾಗಮಾತರಮ್’ –ನಾಗಗಳ
ತಾಯಿಯಾದ ಸುರಸೆಯನ್ನು ಕುರಿತು ದೇವತೆಗಳು
ಮಾತ್ರವಲ್ಲಾ, ಗಂಧರ್ವರು, ಸಿದ್ಧರು, ಋಷಿಗಳು ಹಾಗು ಎಲ್ಲರೂ ಕೂಡಾ ಪ್ರಾರ್ಥಿಸಿದರು ಎಂದು
ಸುಂದರಕಾಂಡದಲ್ಲಿ(೧.೧೪೫) ಹೇಳಿದ್ದಾರೆ. ಇದನ್ನು ಇಲ್ಲಿ ಆಚಾರ್ಯರು ‘ದೇವಾಃ; ಎಂದು ಹೇಳಿ
ಎಲ್ಲರನ್ನೂ ಗ್ರಹಿಸಿದ್ದಾರೆ. ಕೂರ್ಮಪುರಾಣದಲ್ಲಿ ಹೇಳುವಂತೆ: ‘ಸುರಸಾಯಾಃ ಸಹಸ್ರಂ ತು
ಸರ್ಪಾಣಾಂಭವದ್ ದ್ವಿಜಾಃ । ಅನೇಕಶಿರಸಾಂ ತದ್ವತ್ ಖೇಚರಾಣಾಂ ಮಹಾತ್ಮನಾಮ್’ ಸುರಸೆಗೆ ಸಾವಿರ
ಸರ್ಪಗಳು ಹುಟ್ಟಿದವು. ಅವುಗಳಲ್ಲಿ ಹೆಡೆ ಇರುವವುಗಳು ಮತ್ತು ಹೆಡೆ ಇಲ್ಲದಿರುವವುಗಳು ಇದ್ದವು. ಪಾದ್ಮ ಪುರಾಣದಲ್ಲಿ ‘ಸುರಸಾಯಾಂ ಸಹಸ್ರಂ ತು ಸರ್ಪಾಣಾಂಭವದ್ ಪುರಾ’ ಎಂದು
ಹೇಳಿದ್ದಾರೆ. ‘ಸುರಸಾಯಾಂ ಸಹಸ್ರಂ ತು ಸರ್ಪಾಣಾಂಮಿತೌಜಸಾಮ್’ ಎಂದು ವಿಷ್ಣು ಪುರಾಣ
ಹೇಳುತ್ತದೆ. ಹೀಗಾಗಿ ಸುರಸೆ ನಾಗಜನನಿ ಎನ್ನುವುದು ಎಲ್ಲರಿಗೂ ಸಮ್ಮತ.
ಆದರೆ ಭಾಗವತದಲ್ಲಿ(೬.೬.೨): ದಂದಶೂಕಾದಯಃ ಸರ್ಪಾ ರಾಜನ್ ಕ್ರೋಧವಶಾತ್ಮಜಾಃ
ಎಂದು ಬೇರೆ ರೀತಿಯಾಗಿ ‘ಕ್ರೋಧವಶಾ’ ಎನ್ನುವ
ಹೆಣ್ಣಿನಿಂದ ಹುಟ್ಟಿದ್ದು ಎನ್ನುತ್ತಾರೆ. ಕ್ರೋಧವಶಾ ಎನ್ನುವವಳೂ ಕೂಡಾ ದಕ್ಷನ ಮಗಳು.
ಕಶ್ಯಪಪ್ರಜಾಪತಿಯ ಹೆಂಡತಿ. ಇದು ‘ವ್ಯತ್ಯಾಸ’
ಮಾಡಿ ಹೇಳುವ ಪುರಾಣದ ರೀತಿಗೆ ಉತ್ತಮ ಉದಾಹರಣೆಯಾಗಿದೆ]
ದೇವತೆಗಳು ಏಕೆ ಸುರಸೆಯನ್ನು ಕಳುಹಿಸಿದರು ಎನ್ನುವುದನ್ನು ಮುಂದಿನ
ಶ್ಲೋಕ ವಿವರಿಸುತ್ತದೆ:
ಜಿಜ್ಞಾಸುಭಿರ್ನ್ನಿಜಬಲಂ ತವ
ಭಕ್ಷಮೇತು ಯದ್ಯತ್ ತ್ವಮಿಚ್ಛಸಿ ತದಿತ್ಯಮರೋದಿತಾಯಾಃ ।
ಆಸ್ಯಂ ಪ್ರವಿಶ್ಯ ಸಪದಿ
ಪ್ರವಿನಿಃಸೃತೋsಸ್ಮಾದ್ ದೇವಾನನನ್ದಯದುತ ಸ್ವೃತಮೇಷು ರಕ್ಷನ್ ॥೭-೦೫॥
‘ಯಾವುದನ್ನು ನೀನು ಬಯಸುತ್ತೀಯೋ ಅದು ನಿನ್ನ ಬಾಯೊಳಗೆ ಬರಲಿ’ ಎನ್ನುವ ವರ ಪಡೆದು
ಬಂದಿದ್ದ ಸುರಸೆಯ ಮುಖವನ್ನು ಪ್ರವೇಶಿಸಿ, ಕೂಡಲೇ
ಅಲ್ಲಿಂದ ಹೊರಬಂದ ಹನುಮಂತ, ತನ್ನನ್ನು ಪರೀಕ್ಷಿಸುವ ಸಲುವಾಗಿ ಸುರಸೆಯನ್ನು ಕಳುಹಿಸಿದ್ದ
ದೇವತೆಗಳ ಮಾತಿನ ಸತ್ಯತ್ತ್ವವನ್ನು ರಕ್ಷಿಸಿ, ಅವರನ್ನು ಸಂತಸಗೊಳಿಸಿದ. [ತಮ್ಮ ಮಾತನ್ನು
(ವರವನ್ನು) ವಿಫಲಗೊಳಿಸದ ಹನುಮಂತ, ತಾವು ನೀಡಿದ ವರವನ್ನು ಗೌರವಿಸಿರುವುದನ್ನು ಕಂಡ
ದೇವತೆಗಳೆಲ್ಲರೂ ಬಹಳ ಸಂತೋಷಪಟ್ಟರು]
ದೃಷ್ಟ್ವಾ ಸುರಪ್ರಣಯಿತಾಂ ಬಲಮಸ್ಯ
ಚೋಗ್ರಂ ದೇವಾಃ ಪ್ರತುಷ್ಟುವುರಮುಂ ಸುಮನೋsಭಿವೃಷ್ಟ್ಯಾ ।
ತೈರಾದೃತಃ ಪುನರಸೌ ವಿಯತೈವ ಗಚ್ಛನ್
ಛಾಯಾಗ್ರಹಂ ಪ್ರತಿದದರ್ಶ ಚ ಸಿಂಹಿಕಾಖ್ಯಮ್ ॥೭.೦೬॥
ಹೀಗೆ ತಮ್ಮ ಮೇಲಿನ ಹನುಮಂತನ ಪ್ರೀತಿಯನ್ನು, ಆತನ ಉಗ್ರವಾದ ಬಲವನ್ನು ಕಂಡ
ದೇವತೆಗಳು ಆತನ ಮೇಲೆ ಹೂವಿನ ಮಳೆಗೆರೆದು ಆತನನ್ನು ಹೊಗಳುತ್ತಾರೆ. ಆ ಎಲ್ಲಾ ದೇವತೆಗಳಿಂದ
ಪೂಜಿತನಾದ ಹನುಮಂತ ಆಕಾಶದಲ್ಲಿಯೇ ಮುಂದೆ ತೆರಳುತ್ತಾ, ‘ಸಿಂಹಿಕೆ’ ಎನ್ನುವ ನೆರಳನ್ನು
ಹಿಡಿಯಬಲ್ಲ ಭೂತವನ್ನು ಕಾಣುತ್ತಾನೆ.
No comments:
Post a Comment