ದೃಷ್ಟ್ವಾ
ಬಲಂ ಭಗವತೋsಥ ಹರೀಶ್ವರೋsಸಾವಗ್ರೇ ನಿಧಾಯ ತಮಯಾತ್
ಪುರಮಗ್ರಜಸ್ಯ।
ಆಶ್ರುತ್ಯ
ರಾವಮನುಜಸ್ಯ ಬಿಲಾತ್ ಸ ಚಾsಗಾದಭ್ಯೇನಮಾಶು ದಯಿತಾಪ್ರತಿವಾರಿತೋsಪಿ ॥೬.೧೨॥
ರಾಮಚಂದ್ರನ ಬಲವನ್ನು ಕಂಡು ಸುಗ್ರೀವನು, ರಾಮಚಂದ್ರನನ್ನು ಮುಂದೆ
ಮಾಡಿಕೊಂಡು, ವಾಲಿಯ ಪಟ್ಟಣದತ್ತ ಕುರಿತು
ಹೊರಟನು. ಸುಗ್ರೀವನ ಯುದ್ಧದ ಆಹ್ವಾನವನ್ನು ಕೇಳಿ, ವಾಲಿಯು, ಪತ್ನಿ ತಾರೆ ತಡೆದರೂ ಕೂಡಾ,
ಬಿಲದಿಂದ ಹೊರಬಂದನು.
ತನ್ಮುಷ್ಟಿಭಿಃ ಪ್ರತಿಹತಃ
ಪ್ರಯಯಾವಶಕ್ತಃ ಸುಗ್ರೀವ ಆಶು ರಘುಪೋsಪಿ ಹಿ ಧರ್ಮ್ಮಮೀಕ್ಷನ್ ।
ನೈನಂ ಜಘಾನ ವಿದಿತಾಖಿಲಲೋಕಚೇಷ್ಟೋsಪ್ಯೇನಂ ಸ ಆಹ ಯುಧಿ ವಾಂ ನ ಮಯಾ
ವಿವಿಕ್ತೌ ॥೬.೧೩ ॥
ವಾಲೀ-ಸುಗ್ರೀವರ ಯುದ್ಧದಲ್ಲಿ ವಾಲಿಯ ಮುಷ್ಠಿಯಿಂದ
ಹೊಡೆಯಲ್ಪಟ್ಟವನಾಗಿ, ಬಲಗುಂದಿದ ಸುಗ್ರೀವನು ಕೂಡಲೇ ಯುದ್ಧಸ್ಥಳದಿಂದ ಓಡಿ ಬರುತ್ತಾನೆ. ರಾಮಚಂದ್ರನೂ ಕೂಡಾ ಧರ್ಮವನ್ನು
ಕಾಣುತ್ತಾ ವಾಲಿಯನ್ನು ಆಗ ಕೊಲ್ಲುವುದಿಲ್ಲ. ಎಲ್ಲವನ್ನು ಬಲ್ಲವನಾದರೂ, ಸುಗ್ರೀವನನ್ನು ಕುರಿತು ಶ್ರೀರಾಮ
ಹೇಳುತ್ತಾನೆ: “ನೋಡಲು ಹಾಗು ಯುದ್ಧದಲ್ಲಿ ಒಂದೇ
ರೀತಿ ಇರುವ ನೀವಿಬ್ಬರು ನನ್ನಿಂದ ತಿಳಿಯಲ್ಪಡಲಿಲ್ಲ” ಎಂದು.
[ವಾಲಿಯನ್ನು ಕೊಲ್ಲುತ್ತೇನೆ ಎಂದು ಹೇಳಿದ್ದ ಶ್ರೀರಾಮಚಂದ್ರ ತಕ್ಷಣ ಆರೀತಿ ಮಾಡುವುದಿಲ್ಲ. ‘ತದ್ರೂಪಿಗಳಂತಿರುವ
ನಿಮ್ಮಿಬ್ಬರಲ್ಲಿ ಯಾರು ವಾಲೀ ಎನ್ನುವುದು ತಿಳಿಯಲಿಲ್ಲಾ’ ಎನ್ನುತ್ತಾನೆ ರಾಮಚಂದ್ರ. ಭಗವಂತ ಈ
ರೀತಿ ಮಾಡಲು ಎನು ಕಾರಣ ಎನ್ನುವುದನ್ನು ಆಚಾರ್ಯರು ಮುಂದೆ ವಿವರಿಸಿದ್ದಾರೆ]
ಸೌಭ್ರಾತ್ರಮೇಷ ಯದಿ ವಾಞ್ಚತಿ
ವಾಲಿನೈವ ನಾಹಂ ನಿರಾಗಸಮಥಾಗ್ರಜನಿಂ ಹನಿಷ್ಯೇ ।
ದೀರ್ಘಃ ಸಹೋದರಗತೋ ನ ಭವೇದ್ಧಿ ಕೋಪೋ
ದೀರ್ಘೋsಪಿ ಕಾರಣಮೃತೇ ವಿನಿವರ್ತ್ತತೇ ಚ ॥೬.೧೪ ॥
ಆ ಕ್ಷಣದಲ್ಲಿ ಸುಗ್ರೀವನು
ಒಂದು ವೇಳೆ ವಾಲಿಯನ್ನು ಕೊಲ್ಲಿಸುವ ನಿರ್ಧಾರವನ್ನು ಬಿಟ್ಟು ಆತನಿಂದ ಕೇವಲ ಒಳ್ಳೆಯ ಸಂಬಂಧವನ್ನು ಬಯಸಿದ್ದಿದ್ದರೆ, ಯಾವ ತಪ್ಪನ್ನೂ
ಮಾಡಿರದ^ ವಾಲಿಯನ್ನು ತಾನು ಕೊಲ್ಲುವುದಿಲ್ಲ ಎನ್ನುವುದು ರಾಮಚಂದ್ರನ ನಿಲುವಾಗಿತ್ತು. ಏಕೆಂದರೆ ಅಣ್ಣ-ತಮ್ಮಂದಿರರ
ಮನಸ್ತಾಪ ಧೀರ್ಘಕಾಲ ಇರುವುದಿಲ್ಲ. ಒಂದು ವೇಳೆ ದೀರ್ಘವಾಗಿದ್ದರೂ,
ಅದು ಯಾವುದೇ ಕಾರಣವಿಲ್ಲದೆ ನಾಶವಾಗುತ್ತದೆ
ಕೂಡಾ.
[^ಗವಿಯ ಒಳಗೆ ರಕ್ಕಸರೊಂದಿಗೆ ಯುದ್ಧಮಾಡುತ್ತಿದ್ದ ಅಣ್ಣ ವಾಲಿ
ಬದುಕಿದ್ದಾನೋ ಇಲ್ಲವೋ ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳದೇ, ವಾಲಿ ಸತ್ತ ಎಂದು ತಿಳಿದು ಗವಿಯನ್ನು
ಮುಚ್ಚಿ ಬಂದಿರುವ ತಪ್ಪಿಗೆ ತಾನು ಸುಗ್ರೀವನಿಗೆ ಶಿಕ್ಷೆ ಕೊಡುತ್ತಿರುವುದಾಗಿ ವಾಲಿ ತಿಳಿದಿದ್ದ.
ತಾರತಮ್ಯದ ಕನ್ನಡಿಯಲ್ಲಿ ನೋಡಿದರೆ ಸ್ವರೂಪತಃ ವಾಲೀ (ಇಂದ್ರ) ಸುಗ್ರೀವ(ಸೂರ್ಯ)ನಿಗಿಂತ ಎತ್ತರದಲ್ಲಿದ್ದಾನೆ. ಸುಗ್ರೀವ
ಬದುಕಿರುವಾಗಲೇ ವಾಲಿ ಆತನ ಪತ್ನಿ ರಮೆಯನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಸ್ವರೂಪ ನ್ಯಾಯದ ಪ್ರಕಾರ ವಾಲಿ ಮಾಡಿದ್ದು ತಪ್ಪಲ್ಲ. ಆದರೆ ಲೋಕದ ಕಾನೂನಿನ ಪ್ರಕಾರ ವಾಲಿ
ಮಾಡಿದ್ದು ತಪ್ಪು.
ಮುಂದೆ ವಾಲಿಯ ಸಂಹಾರದ ನಂತರ ಸುಗ್ರೀವ ರಾಜನಾಗುತ್ತಾನೆ. ಕಪಿಲೋಕದ ಕಾನೂನಿನ
ಪ್ರಕಾರ ಹಿಂದಿನ ರಾಜ ಸೋತು ಸತ್ತಾಗ, ಆತನ ಆಸ್ತಿಯ
ಜೊತೆಗೆ ಅವನ ಹೆಂಡತಿಯೂ ಈಗಿನ ರಾಜನ ವಶವಾಗುತ್ತಾಳೆ.
ಆ ಪ್ರಕಾರ ವಾಲಿ ಸತ್ತ ನಂತರ ತಾರೆಯನ್ನು ಸುಗ್ರೀವ ಕೂಡುತ್ತಾನೆ. ಆದರೆ ಇದು ಸ್ವರೂಪ ನ್ಯಾಯದ ಪ್ರಕಾರ
ಅಪರಾಧ]
ಕೋಪಃ ಸಹೋದರಜನೇ ಪುನರನ್ತಕಾಲೇ
ಪ್ರಾಯೋ ನಿವೃತ್ತಿಮುಪಗಚ್ಛತಿ ತಾಪಕಶ್ಚ ।
ಏಕಸ್ಯ ಭಙ್ಗ ಇತಿ ನೈವ ಝಟಿತ್ಯಪಾಸ್ತ
ದೋಷೋ ನಿಹನ್ತುಮಿಹ ಯೋಗ್ಯ ಇತಿ ಸ್ಮ ಮೇನೇ ॥೬.೧೫॥
ಅಣ್ಣ-ತಮ್ಮಂದಿರರಲ್ಲಿ ಇರತಕ್ಕ ಕೋಪವು ಕಡೆಗಾಲದಲ್ಲಿ ಹೆಚ್ಚಾಗಿ ನಾಶವಾಗುತ್ತದೆ. ಒಬ್ಬ
ಸತ್ತರೆ, ಅದು ಪಶ್ಚಾತ್ತಾಪವನ್ನು ತಂದುಕೊಡುತ್ತದೆ. (ವ್ಯರ್ಥವಾಗಿ ದ್ವೇಶಿಸಿದೆನಲ್ಲಾ ಎನ್ನುವ
ಪಶ್ಚಾತ್ತಾಪ). ಆ ಕಾರಣದಿಂದ ಆ ಕ್ಷಣದಲ್ಲಿ, ಕೂಡಲೇ ದೋಷವಿಲ್ಲದ ವಾಲಿಯು ಕೊಲ್ಲಲು ಯೋಗ್ಯನಲ್ಲ
ಎಂದು ರಾಮಚಂದ್ರ ಚಿಂತಿಸಿದ. [ಅರ್ಥಾತ್: ಹಿಂದಿನದನ್ನು ಮರೆತು ಅಣ್ಣನೊಂದಿಗೆ ಮರಳಿ ಒಳ್ಳೆಯ
ಸಂಬಂಧವನ್ನು ಬೆಳೆಸುವ ಒಂದು ಅವಕಾಶವನ್ನು ಸುಗ್ರೀವನಿಗೆ
ರಾಮಚಂದ್ರ ನೀಡುತ್ತಾನೆ]
ತಸ್ಮಾನ್ನ ಬನ್ಧುಜನಗೇ ಜನಿತೇ
ವಿರೋಧೇ ಕಾರ್ಯ್ಯೋ ವಧಸ್ತದನುಭನ್ಧಿಭಿರಾಶ್ವಿತೀಹ ।
ಧರ್ಮ್ಮಂ ಪ್ರದರ್ಶಯಿತುಮೇವ ರವೇಃ
ಸುತಸ್ಯಭಾವೀ ನ ತಾಪ ಇತಿ ವಿಚ್ಚ ನ ತಂ ಜಘಾನ ॥೬.೧೬॥
ಈ ಎಲ್ಲಾ ಕಾರಣದಿಂದ: ಬಂಧು ಜನರಲ್ಲಿ ವಿರೋಧ ಬಂದಲ್ಲಿ ಅವರ ಜೊತೆಗೆ
ಇರುವವರು ಕೂಡಲೇ ಒಬ್ಬರ ಪರ ವಹಿಸುವುದಾಗಲೀ ಒಬ್ಬರನ್ನು ಕೊಲ್ಲುವುದಾಗಲೀ ಮಾಡಬಾರದು. ಇದು ಧರ್ಮ.
ಈ ರೀತಿಯಾದ ಧರ್ಮವನ್ನು ತೋರಿಸಲು ಮತ್ತು ಸುಗ್ರೀವನಿಗೆ
ಮುಂದೆ ಈ ಕುರಿತು ದುಃಖವಾಗಬಾರದು ಎನ್ನುವುದಕ್ಕಾಗಿಯೇ ಮೊದಲನೇ ಸಲ ವಾಲಿಯನ್ನು ಶ್ರೀರಾಮಚಂದ್ರ ಕೊಲ್ಲುವುದಿಲ್ಲ.
No comments:
Post a Comment