ಯಃ
ಪ್ರೇರಕಃ ಸಕಲಶೇಮುಷಿಸನ್ತತೇಶ್ಚ ತಸ್ಯಾಜ್ಞತಾ ಕುತ ಇಹೇಶವರಸ್ಯ ವಿಷ್ಣೋಃ ।
ತೇನೋದಿತೋsಥ ಸುದೃಢಂ ಪುನರಾಗತೇನ ವಜ್ರೋಪಮಂ ಶರಮಮೂಮುಚದಿನ್ದ್ರಸೂನೋಃ
॥೬.೧೭॥
ಯಾರು ಎಲ್ಲರ
ಬುದ್ಧಿಯನ್ನು ಪ್ರೇರಣೆ ಮಾಡುತ್ತಾನೋ, ಅಂತಹ ಶ್ರೇಷ್ಠನಾದ ಶ್ರೀರಾಮಚಂದ್ರನಿಗೆ ಯಾರು ವಾಲೀ-ಯಾರು ಸುಗ್ರೀವ ಎನ್ನುವ ವಿಷಯದಲ್ಲಿ ಅಜ್ಞಾನವು ಎಲ್ಲಿಂದ ಬರಬೇಕು?
ಸುಗ್ರೀವನಿಂದ ವಾಲಿಯ ಸಂಹಾರ ಆಗಲೇಬೇಕು ಎಂದು ಅತಿದೃಢವಾಗಿ ಹೇಳಲ್ಪಟ್ಟ ನಂತರ ಶ್ರೀರಾಮಚಂದ್ರನು
ಮರುದಿನ ಯುದ್ಧಕ್ಕೆ ಬಂದ ವಾಲಿಯ ಮೇಲೆ ವಜ್ರಕ್ಕೆ
ಸಜ್ರಸವಾದ ಬಾಣವನ್ನು ಬಿಡುತ್ತಾನೆ.
ರಾಮಾಜ್ಞಯೈವ ಲತಯಾ ರವಿಜೇ ವಿಭಕ್ತೇ
ವಾಯೋಃ ಸುತೇನ ರಘುಪೇಣ ಶರೇ ಚ ಮುಕ್ತೇ ।
ಶ್ರುತ್ವಾsಸ್ಯ ಶಬ್ದಮತುಲಂ ಹೃದಿ ತೇನ ವಿದ್ಧ
ಇನ್ದ್ರಾತ್ಮಜೋ ಗಿರಿರಿವಾಪತದಾಶು ಸನ್ನಃ ॥೬.೧೮॥
ರಾಮನ ಅಣತಿಯಂತೆಯೇ, ಹನುಮಂತನಿಂದ, ಹೂವಿನ ಮಾಲೆಯೊಂದರಿಂದ,
ಸುಗ್ರೀವನು ವಿಲಕ್ಷಣನಾಗಿ ಕಾಣುವಂತಾಗಲು, ಶ್ರೀರಾಮಚಂದ್ರನಿಂದ ಬಿಡಲ್ಪಟ್ಟ ಎಣಿ ಇರದ ಶಬ್ದವುಳ್ಳ
ಬಾಣದಿಂದ ಹೊಡೆಯಲ್ಪಟ್ಟ ವಾಲಿಯು ಬೆಟ್ಟದಂತೆ
ಮೂರ್ಚಿತನಾಗಿ ಬಿದ್ದನು.
[ವಾಲ್ಮೀಕಿ ರಾಮಾಯಣದ ಕಿಷ್ಕಿಂದಾ ಕಾಂಡದಲ್ಲಿ (೧೨.೩೯) ಹೇಳುವಂತೆ: ಗಜಪುಷ್ಪೀಮಿಮಾಂ ಪುಲ್ಲಾಮುತ್ಪಾಟ್ಯ ಶುಭಲಕ್ಷಣಾಂ ।
ಕುರು ಲಕ್ಷ್ಮಣ ಕಂಠೇsಸ್ಯ ಸುಗ್ರೀವಸ್ಯ
ಮಹಾತ್ಮನಃ ॥
ಅಂದರೆ: “ಗಜಪುಷ್ಪೀಮಾಲೆಯನ್ನು ಸುಗ್ರೀವನಿಗೆ ತೋಡಿಸು” ಎಂದು
ಶ್ರೀರಾಮಚಂದ್ರ ಲಕ್ಷ್ಮಣನಿಗೆ ಹೇಳಿದ ಎಂದರ್ಥ. ಲಕ್ಷ್ಮಣೋ ಗಜಪುಷ್ಪೀಂ ತಾಂ ತಸ್ಯ
ಕಂಠೇ ವ್ಯಸರ್ಜಯತ್(೧೨.೪೦) ಅಂದರೆ: ‘ಲಕ್ಷ್ಮಣ
ಗಜಪುಷ್ಪಮಾಲೆಯನ್ನು ಸುಗ್ರೀವನ ಕೊರಳಿಗೆ ಹಾಕಿದನು’ ಎಂದರ್ಥ. ಮಹಾಭಾರತದ ವನಪರ್ವದಲ್ಲಿ(೨೮೧.೩೪)
ಹೇಳುವಂತೆ: ಸುಗ್ರೀವಸ್ಯ ತದಾ ಮಾಲಾಂ ಹನುಮಾನ್ ಕಂಠ ಆಸಜತ್ ॥ ಅಂದರೆ ಹನುಮಂತ ಸುಗ್ರೀವನಿಗೆ ಹೂವಿನ ಮಾಲೆಯನ್ನು ಹಾಕಿದ
ಎಂದರ್ಥ. ಹೀಗಿರುವಾಗ ವಾಲ್ಮೀಕಿಯ ಮಾತಿಗೆ ಏನು
ಅರ್ಥ? ಅಲ್ಲಿ ಲಕ್ಷ್ಮಣ ಎಂದು ಏಕೆ ಹೇಳಿದ್ದಾರೆ
ಎನ್ನುವ ಸಹಜ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ರಾಮಬ್ರಾತರಿ
ಪುಮ್ಸಿ ಸ್ಯಾತ್ ಸಶ್ರೀಕೇ ಚಾಭೀಧೇಯವತ್ ಎನ್ನುವ ಕೋಶದ ವಿವರಣೆಯಂತೆ ‘ಲಕ್ಷ್ಮಣ’
ಎಂದರೆ ‘ಒಳ್ಳೆಯ ಕಾಂತಿ ಇರುವವನು’ ಎಂದರ್ಥ. ಹಾಗಾಗಿ ‘ಲಕ್ಷ್ಮಣ’ ವಾಚ್ಯತ್ವ ಹನುಮಂತನಿಗೂ ಅನ್ವಯವಾಗುತ್ತದೆ.
ಸ್ಕಂಧಪುರಾಣದ ಬ್ರಹ್ಮಖಂಡದಲ್ಲಿ(೨.೨೧) ಹೇಳುವಂತೆ: ‘ತತೋ ರಾಮೋ ಮಹಾಬಾಹುಃ ಸುಗ್ರೀವಸ್ಯ
ಶಿರೋಧರೇ । ಲತಾಮಾಬಧ್ಯ ಚಿಹ್ನಂ ತು ಯುದ್ಧಾಯಾ ಚೋದಯತ್ ತದಾ’ . ಇಲ್ಲಿ ‘ರಾಮ’ ಎಂದರೆ
ಹನುಮಂತನ ದ್ವಾರ ಎಂದು ಹೇಗೆ ಅರ್ಥವೋ, ಹಾಗೇ,
ಮೇಲಿನ ಮಾತಿನಲ್ಲಿ ‘ಲಕ್ಷ್ಮಣ’ ಎಂದರೆ
ಹನುಮಂತ ಎಂದೇ ತಿಳಿಯತಕ್ಕದ್ದು.
ಈ ಎಲ್ಲವನ್ನೂ ಸಮನ್ವಯಗೊಳಿಸಿ ಆಚಾರ್ಯರು ‘ಹನುಮಂತ ಹೂವಿನ ಮಾಲೆಯನ್ನು ತೊಡಿಸಿದ’ ಎಂದು ಇಲ್ಲಿ ನಿರ್ಣಯ ನೀಡಿದ್ದಾರೆ.
No comments:
Post a Comment