ತತಸ್ತು ತೇ ಬ್ರಹ್ಮಸುತೇನ ಪೃಷ್ಟಾ
ನ್ಯವೇದಯನ್ಮಾತ್ಮಬಲಂ ಪೃಥಕ್ ಪೃಥಕ್ ।
ದಶೈವ ಚಾsರಭ್ಯ ದಶೋತ್ತರಸ್ಯ ಕ್ರಮಾತ್ ಪಥೋ
ಯೋಜನತೋsತಿಯಾನೇ ॥೬.೫೨॥
ರಾಮನ ಕಥೆಯನ್ನು ಕೇಳಿ, ಸೀತೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡ
ನಂತರ, ‘ಸಮುದ್ರವನ್ನು ಹಾರಲು ಯಾರಿಗೆ ಬಲವಿದೆ’ ಎಂದು ಜಾಂಬವಂತನಿಂದ ಪ್ರಶ್ನೆಮಾಡಲ್ಪಟ್ಟವರಾದ
ಕಪಿಗಳು, ಬೇರೆಬೇರೆಯಾಗಿ ತಮಗಿರುವ ಬಲವನ್ನು ನಿವೇದಿಸಿಕೊಳ್ಳುತ್ತಾರೆ. ಹತ್ತು ಯೋಜನದಿಂದ
ಆರಂಭಿಸಿ, ಹತ್ತು-ಹತ್ತು ಅಧಿಕವಾಗಿ ಸುಮಾರು ಎಂಬತ್ತು
ಯೋಜನ ಪರ್ಯಂತ ಎಲ್ಲರೂ ತಮ್ಮ ಹಾರುವ ಬಲವನ್ನು
ನಿವೇದಿಸಿಕೊಳ್ಳುತ್ತಾರೆ.
ಸನೀಲಮೈನ್ದದ್ವಿವಿದಾಃ ಸತಾರಾಃ
ಸರ್ವೇsಪ್ಯಶೀತ್ಯಾಃ ಪರತೋ ನ ಶಕ್ತಾಃ ।
ಗನ್ತುಂ ಯಧsಥಾsತ್ಮಬಲಂ ಸ ಜಾಮ್ಬವಾನ್ ಜಗಾದ
ತಸ್ಮಾತ್ ಪುನರಷ್ಟಮಾಂಶಮ್ ॥೬.೫೩॥
ನೀಲ, ಮೈಂದ, ದ್ವಿವಿದಾ ಮತ್ತು ತಾರನಿಂದ ಸಹಿತರಾದ ಎಲ್ಲಾ ಕಪಿಗಳೂ, ಎಂಬತ್ತು ಯೋಜನಕ್ಕಿಂತ ಹೆಚ್ಚು ಹಾರಲು ಶಕ್ತರಲ್ಲ
ಎಂದು ತಿಳಿದೊಡನೆ, ಪ್ರಶ್ನೆ ಹಾಕಿದ್ದ ಜಾಂಬವಂತ
ತೊಂಬತ್ತು ಯೋಜನ ಹಾರುವ ತನ್ನ ಆತ್ಮ ಬಲವನ್ನು ತಿಳಿಸುತ್ತಾನೆ.
ಬಲೇರ್ಯ್ಯದಾ ವಿಷ್ಣುರವಾಪ
ಲೋಕಾಂಸ್ತ್ರಿಭಿಃ ಕ್ರಮೈರ್ನ್ನನ್ದಿರವಂ ಪ್ರಕುರ್ವತಾ ।
ತದಾ ಮಯಾ ಭ್ರಾನ್ತಮಿದಂ ಜಗತ್ರಯಂ
ಸವೇದನಂ ಜಾನು ಮಮಾsಸ ಮೇರುತಃ ॥೬.೫೪॥
ತನ್ನ ಹಾರುವ ಸಾಮರ್ಥ್ಯವನ್ನು ಹೇಳಿದ ಜಾಂಬವಂತ, ಹಿಂದೆ ಇದ್ದ ಬಲ
ಇಂದು ತನ್ನಲ್ಲಿಲ್ಲದೇ ಇರುವುದಕ್ಕೆ ಕಾರಣವನ್ನು ನೀಡುತ್ತಾ ಹೇಳುತ್ತಾನೆ: “ಯಾವ ಕ್ಷಣದಲ್ಲಿ ಮೂರು ಹೆಜ್ಜೆಗಳಿಂದ ವಿಷ್ಣುವು
ಬಲಿಯಿಂದ ಮೂರು ಲೋಕಗಳನ್ನು ಪಡೆದನೋ, ಆಗ ಸಂತೋಷದ ದ್ವನಿಯನ್ನು ಮಾಡುತ್ತಾ ನಾನು ಮೂರು
ಜಗತ್ತನ್ನು ಸುತ್ತಿದೆ. ಆಗ ಮೇರು ಪರ್ವತಕ್ಕೆ ತಾಗಿ ನನ್ನ ಮೊಣಕಾಲು ನೋವಿನಿಂದ ಕೂಡಿತು” ಎಂದು.
[ಈ ಮಾತಿಗೆ ಪೂರಕವಾದ ಕಥೆಯನ್ನು ಭಾಗವತದ ಎಂಟನೇ ಸ್ಕಂಧದ ಇಪ್ಪತ್ತನೇ
ಅಧ್ಯಾಯದಲ್ಲಿ ಕಾಣುತ್ತೇವೆ. ಅಲ್ಲಿ ಹೀಗೆ ಹೇಳಿದ್ದಾರೆ: ಜಾಮ್ಬವಾನ್ರಕ್ಷರಾಜಸ್ತು ಭೇರೀಶಬ್ದೌರ್ಮನೋಜವಃ
। ವಿಜಯಂ ದಿಕ್ಷು ಸರ್ವಾಸು ಮಹೋತ್ಸವಮಘೋಷಯತ್॥]
ಅತೋ ಜವೋ ಮೇ ನಹಿ ಪೂರ್ವಸಮ್ಮಿತಃ
ಪುರಾ ತ್ವಹಂ ಷಣ್ಣವತಿಪ್ಲವೋsಸ್ಮಿ ।
ತತಃ ಕುಮಾರೋsಙ್ಗದ ಆಹ ಚಾಸ್ಮಾಚ್ಛತಂ ಪ್ಲವೇಯಂ ನ
ತತೋsಭಿಜಾನೇ ॥೬.೫೫॥
“ಆ ಕಾರಣದಿಂದ ಮೊದಲಿನ ವೇಗಕ್ಕೆ ಸದೃಶವಾದ ವೇಗ ಇಂದು ತನ್ನಲಿಲ್ಲ. ಹಿಂದಾದರೋ ೯೬ ಯೋಜನ ಜಿಗಿಯಬಲ್ಲ ಸಾಮರ್ಥ್ಯ ನನ್ನಲ್ಲಿತ್ತು”
ಎನ್ನುತ್ತಾನೆ ಜಾಂಬವಂತ.
ಎಲ್ಲರೂ ತಮ್ಮ ಸಾಮರ್ಥ್ಯದ ಕುರಿತು ಹೇಳಿದ ಮೇಲೆ, ಚಿಕ್ಕವನಾದ ಅಂಗದ ಹೇಳುತ್ತಾನೆ: “ನಾನು ಇಲ್ಲಿಂದ
ನೂರು ಯೋಜನ ಜಿಗಿದೇನು. ಆದರೆ ಆಮೇಲೆ ನನಗೆ ಏನು ಮಾಡಲೂ ಶಕ್ತಿ ಇರದು” ಎಂದು.
No comments:
Post a Comment