ಸಮಸ್ತದುರ್ಗ್ಗಪ್ರವರೇ ದುರಾಸದಂ
ವಿಮಾರ್ಗ್ಗತಾಂ ವಿನ್ಧ್ಯಗಿರಿಂ ಮಹಾತ್ಮನಾಮ್ ।
ಗತಃ ಸ ಕಾಲೋ ಹರಿರಾಡುದೀರಿತಃ
ಸಮಾಸದಂಶ್ಚಾಥ ಬಿಲಂ ಮಹಾದ್ಭುತಮ್ ॥೬.೩೬॥
ಸುಗ್ರೀವನು ನೀಡಿದ ಕಾಲಮಿತಿಯು ಕಳೆಯುತ್ತಿರಲು, ಸೀತಾದೇವಿಯನ್ನು
ಹುಡುಕುತ್ತಿರುವ ಹನುಮಂತನೇ ಮೊದಲಾದವರು ಅತ್ಯಂತ ಶ್ರೇಷ್ಠವಾಗಿರುವ ವಿನ್ದ್ಯಗಿರಿಯನ್ನು ಹೊಂದಿ, ಅಲ್ಲಿ
ಅತ್ಯದ್ಭುತವಾದ ಬಿಲವೊಂದನ್ನು ಕಂಡು ಅದನ್ನು
ಪ್ರವೇಶ ಮಾಡುತ್ತಾರೆ.
ಕೃತಂ ಮಯೇನಾತಿವಿಚಿತ್ರಮುತ್ತಮಂ
ಸಮೀಕ್ಷ್ಯ ತತ್ ತಾರ ಉವಾಚ ಚಾಙ್ಗದಮ್ ।
ವಯಂ ನ ಯಾಮೋ ಹರಿರಾಜಸನ್ನಿಧಿಂ
ವಿಲಙ್ಘಿತೋ ನಃ ಸಮಯೋ ಯತೋsಸ್ಯ ॥೬.೩೭॥
ಮಯನಿಂದ ನಿರ್ಮಿಸಲ್ಪಟ್ಟ ಅತಿ ವಿಚಿತ್ರ ಮತ್ತು ಅತ್ಯಂತ ಉತ್ತಮವಾದ ಆ
ಗುಹೆಯನ್ನು ನೋಡಿ, ಬೃಹಸ್ಪತಿಯ ಅವತಾರವಾದ ತಾರನು ಅಂಗದನನ್ನು ಕುರಿತು ಹೇಳುತ್ತಾನೆ: “ಸುಗ್ರೀವ ಕೊಟ್ಟ ಕಾಲಮಿತಿ ಮೀರಿ ಹೋಗಿದೆ. ನಾವು ಇನ್ನು
ಸುಗ್ರೀವನ ಸನ್ನಿಧಿಯನ್ನು ಹೊಂದಲಾರೆವು” ಎಂದು.
ದುರಾಸದೋsಸಾವತಿಚಣ್ಡಶಾಸನೋ ಹನಿಷ್ಯತಿ
ತ್ವಾಮಪಿ ಕಿಂ ಮದಾದಿಕಾನ್ ।
ಅಗಮ್ಯಮೇತದ್ ಬಿಲಮಾಪ್ಯ ತತ್ ಸುಖಂ
ವಸಾಮ ಸರ್ವೇ ಕಿಮಸಾವಿಹಾsಚರೇತ್ ॥೬.೩೮॥
ಮುಂದುವರಿದು ತಾರ ಹೇಳುತ್ತಾನೆ: “ಸುಗ್ರೀವನ ಹತ್ತಿರ ಹಿಂತಿರುಗಿ ಅವನಿಗೆ
ತಿಳಿ ಹೇಳುವುದು ಕಷ್ಟ. ಕೊಟ್ಟ ಆಜ್ಞೆಯನ್ನು ಮೀರಿದವರಿಗೆ ಅತ್ಯಂತ ಭಯಂಕರ ಶಿಕ್ಷೆಯನ್ನು ಆತ ನೀಡುತ್ತಾನೆ.
(ಇದಕ್ಕಾಗಿ ಇಂದಿಗೂ ಕೂಡಾ ‘ಸುಗ್ರೀವಾಜ್ಞೆ’ ಎನ್ನುವ ಪದ ಬಳಕೆಯಲ್ಲಿದೆ). ನಿನ್ನನ್ನೂ ಕೂಡಾ
‘ಅಣ್ಣನ ಮಗ’ ಎನ್ನುವ ಕರುಣೆ ಇಲ್ಲದೆ ಆತ ಕೊಲ್ಲಬಲ್ಲ. ಇನ್ನು ನಮ್ಮನ್ನು
ಕೊಲ್ಲುವುದರಲ್ಲೇನೂ ಆಶ್ಚರ್ಯವಿಲ್ಲ. ಅದಕ್ಕಾಗಿ
ಯಾರೂ ಹೊಂದದ ಈ ಬಿಲವನ್ನು ಹೊಂದಿ, ನಾವೆಲ್ಲರೂ ಇಲ್ಲಿಯೇ ವಾಸ ಮಾಡೋಣ. ನಾವಿಲ್ಲಿದ್ದರೆ ಅವನಿಗೆ
ಏನೂ ಮಾಡಲು ಸಾಧ್ಯವಿಲ್ಲ”.
ನಚೈವ ರಾಮೇಣ ಸಲಕ್ಷ್ಮಣೇನ ಪ್ರಯೋಜನಂ
ನೋ ವನಚಾರಿಣಾಂ ಸದಾ ।
ನಚೇಹ ನಃ ಪೀಡಯಿತುಂ ಸ ಚ ಕ್ಷಮಃ ತತೋ
ಮಮೇಯಂ ಸುವಿನಿಶ್ಚಿತಾ ಮತಿಃ ॥೬.೩೯॥
“ಕಾಡಿನಲ್ಲಿ ತಿರುಗುವ ನಮಗೆ ರಾಮನಿಂದಾಗಲೀ, ಲಕ್ಷ್ಮಣನಿಂದಾಗಲೀ ಏನೂ
ಪ್ರಯೋಜನವಿಲ್ಲಾ. ನಮ್ಮನ್ನು ಇಲ್ಲಿ ಪೀಡಿಸಲು ಅವರು
ಸಮರ್ಥರಲ್ಲಾ. ಹೀಗಾಗಿ ನಮ್ಮ ಬುದ್ಧಿಯು ಈ ವಿಚಾರದಲ್ಲಿ ನಿಶ್ಚಿತವಾಗಿದೆ” ಎನ್ನುತ್ತಾನೆ
ತಾರ.
ಇತೀರಿತಂ ಮಾತುಲವಾಕ್ಯಮಾಶು ಸ ಆದದೇ
ವಾಲಿಸುತೋsಪಿ ಸಾದರಮ್ ।
ಉವಾಚ ವಾಕ್ಯಂ ಚ ನ ನೋ ಹರೀಶ್ವರಃ
ಕ್ಷಮೀ ಭವೇಲ್ಲಙ್ಘಿತಶಾಸನಾನಾಮ್ ॥೬.೪೦॥
ತಕ್ಷಣ, ಯಾವುದೇ ವಿಚಾರ ಮಾಡದೇ, ತನ್ನ ಸೋದರಮಾವನಾದ ತಾರನ ಮಾತನ್ನು
ಅಂಗದನು ಭಕ್ತಿಯಿಂದ ಸ್ವೀಕರಿಸಿ ಹೇಳುತ್ತಾನೆ: “ಸುಗ್ರೀವನ ಆಜ್ಞೆಯನ್ನು ಮೀರಿರುವ ನಮ್ಮನ್ನು
ಆತ ಎಂದೂ
ಕ್ಷಮಿಸುವುದಿಲ್ಲ”.
ರಾಜ್ಯಾರ್ಥಿನಾ ಯೇನ ಹಿ ಘಾತಿತೋsಗ್ರಜೋ ಹೃತಾಶ್ಚ ದಾರಾಃ ಸುನೃಶಂಸಕೇನ
।
ಸ ನಃ ಕಥಂ ರಕ್ಷ್ಯತಿ ಶಾಸನಾತಿಗಾನ್
ನಿರಾಶ್ರಯಾನ್ ದುರ್ಬಲಕಾನ್ ಬಲೇ ಸ್ಥಿತಃ ॥೬.೪೧॥
“ರಾಜ್ಯ ಬೇಕು ಎಂಬ ಬಯಕೆಯಿಂದ ತನ್ನ ಅಣ್ಣನನ್ನೇ ಕೊಲ್ಲಿಸಿ, ಅತ್ತಿಗೆಯನ್ನು ಅಪಹರಿಸಿರುವವನು ಆತ. ಅಂತಹ ಅತ್ಯಂತ ಕ್ರೂರನಾದ ಸುಗ್ರೀವನ ಅಪ್ಪಣೆಯನ್ನು ಉಲ್ಲಂಘಿಸಿರುವ ನಮ್ಮನ್ನು ಆತ
ಹೇಗೆ ತಾನೇ ರಕ್ಷಣೆ ಮಾಡಿಯಾನು? ನಾವು
ನಿರಾಶ್ರಿತರು, ದುರ್ಬಲರು. ಅವನಾದರೋ ರಾಮನ ಬೆಂಬಲದೊಂದಿಗಿದ್ದಾನೆ” ಎನ್ನುತ್ತಾನೆ ಅಂಗದ.
No comments:
Post a Comment