ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 3, 2019

Mahabharata Tatparya Nirnaya Kannada 1466_1470


ದೃಷ್ಟ್ವಾsಮಿತಾನ್ಯಥ ಕರಾಂಸಿ ಮರುತ್ಸುತೇನ ನಿತ್ಯಂ ಕೃತಾನಿ ತನಯಾ ನಿಖಿಲಾಶ್ಚ ರಾಜ್ಞಾಮ್
ತಸ್ಯಾಮಿತಂ ಬಲಮುದೀಕ್ಷ್ಯ ಸದೋರುವೃದ್ಧದ್ವೇಷಾ ಬಭೂವುರಥ ಮನ್ತ್ರಮಮನ್ತ್ರಯಂಶ್ಚ೧೪.೬೬

ರಾಜರ ಎಲ್ಲಾ ಮಕ್ಕಳೂ ಕೂಡಾ ಭೀಮನ ಎಣಿಯಿರದ ಕಸುವನ್ನು ಕಂಡು, ಯಾವಾಗಲೂ ಚೆನ್ನಾಗಿ ಬೆಳೆದ ದ್ವೇಷವುಳ್ಳವರಾದರು. ಆನಂತರ ಅವರೆಲ್ಲರೂ ಗುಪ್ತವಾಗಿ ಮಾತನಾಡಿಕೊಂಡರು ಕೂಡಾ.

ಯೇಯೇ ಹಿ ತತ್ರ ನರದೇವಸುತಾಃ ಸುರಾಂಶಾಃ ಪ್ರೀತಿಂ ಪರಾಂ ಪವನಜೇ ನಿಖಿಲಾ ಅಕುರ್ವನ್
ತಾಂಸ್ತಾನ್ ವಿಹಾಯ ದಿತಿಜಾ ನರದೇವವಂಶಜಾತಾ ವಿಚಾರ್ಯ್ಯ ವಧನಿಶ್ಚಯಮಸ್ಯ ಚಕ್ರುಃ ೧೪.೬೭

ಯಾರು ದೇವತೆಗಳ ಅಂಶದಿಂದ ರಾಜರಲ್ಲಿ ಹುಟ್ಟಿದ್ದರೋ, ಅವರೆಲ್ಲರೂ ಕೂಡಾ ಭೀಮಸೇನನಲ್ಲಿ ಉತ್ಕೃಷ್ಟವಾದ ಪ್ರೀತಿಯನ್ನು ಮಾಡಿದರು. ಅವರನ್ನು ಬಿಟ್ಟು, ದೈತ್ಯರ ಅಂಶವನ್ನು ಹೊಂದಿದ ಇತರರು ಚೆನ್ನಾಗಿ  ವಿಚಾರಮಾಡಿ, ಭೀಮಸೇನನನ್ನು ಸಾಯಿಸಬೇಕು ಎನ್ನುವ ನಿಶ್ಚಯವನ್ನು ಮಾಡಿದರು.

ಅಸ್ಮಿನ್ ಹತೇ ವಿನಿಹತಾ ಅಖಿಲಾಶ್ಚ ಪಾರ್ಥಾಃ
ಶಕ್ಯೋ ಬಲಾಚ್ಚ ನ ನಿಹನ್ತುಮಯಂ ಬಲಾಢ್ಯಃ
ಛದ್ಮಪ್ರಯೋಗತ ಇಮಂ ವಿನಿಹತ್ಯ ವೀರ್ಯ್ಯಾತ್
ಪಾರ್ತ್ಥಂ ನಿಹತ್ಯ ನಿಗಳೇ ಚ ವಿದಧ್ಮಹೇsನ್ಯಾನ್ ೧೪.೬೮

ಏವಂ ಕೃತೇ ನಿಹತಕಣ್ಟಕಮಸ್ಯ ರಾಜ್ಯಂ ದುರ್ಯ್ಯೋಧನಸ್ಯ ಹಿ ಭವೇನ್ನ ತತೋsನ್ಯಥಾ ಸ್ಯಾತ್
ಅಸ್ಮಿನ್ ಹತೇ ನಿಪತಿತೇ ಚ ಸುರೇನ್ದ್ರಸೂನೌ ಶೇಷಾ ಭವೇಯುರಪಿ ಸೌಬಲಿಪುತ್ರದಾಸಾಃ ೧೪.೬೯

‘ಈ ಭೀಮಸೇನನು ಸಂಹರಿಸಲ್ಪಟ್ಟರೆ, ಇತರ ಎಲ್ಲಾ ಕುಂತಿಯ ಮಕ್ಕಳು ಸಂಹರಿಸಲ್ಪಟ್ಟಂತೆ. ಇವನಾದರೋ ಬಹಳ ಬಲದಿಂದ ಕೂಡಿದ್ದು, ಬಲಪ್ರಯೋಗದಿಂದ ಇವನನ್ನು ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ, ಇವನನ್ನು ಕುತಂತ್ರ ಪ್ರಯೋಗಗಳಿಂದ ಕೊಂದು, ಅರ್ಜುನನನ್ನು  ವೀರ್ಯಪ್ರಯೋಗದಿಂದ ಕೊಂದು, ಉಳಿದ ಮೂರು ಜನರನ್ನು (ಧರ್ಮರಾಜ, ನಕುಲ ಮತ್ತು ಸಹದೇವರನ್ನು) ಬಂಧನದಲ್ಲಿಡೋಣ.
ಈರೀತಿ ಮಾಡಿದರೆ ದುರ್ಯೋಧನನಿಗೆ ರಾಜ್ಯವು ಶತ್ರುಗಳಿಲ್ಲದ್ದಾಗಿ ಸಿಗುತ್ತದೆ. ಇಲ್ಲದಿದ್ದರೆ ದುರ್ಯೋಧನನ ರಾಜ್ಯವು ಶತ್ರುಗಳಿಂದ ಕೂಡಿರುವುದೇ ಆಗಿರುತ್ತದೆ. ಇವನು(ಭೀಮಸೇನನು) ಕೊಲ್ಲಲ್ಪಡುತ್ತಿರಲು, ಅರ್ಜುನನು ಬೀಳಲು, ಉಳಿದವರು ದುರ್ಯೋಧನನ ದಾಸರಾಗುವರು.’


ಏವಂ ವಿಚಾರ್ಯ್ಯ ವಿಷಮುಲ್ಬಣಮನ್ತಕಾಭಂ ಕ್ಷೀರೋದಧೇರ್ಮ್ಮಥನಜಂ ತಪಸಾ ಗಿರೀಶಾತ್
ಶುಕ್ರೇಣ ಲಬ್ಧಮಮುತಃ ಸುಬಲಾತ್ಮಜೇನ ಪ್ರಾಪ್ತಂ ಪ್ರತೋಷ್ಯ ಮರುತಸ್ತನಯಾಯ ಚಾದುಃ ೧೪.೭೦

ಈರೀತಿಯಾಗಿ ಚರ್ಚಿಸಿ, ಕ್ಷೀರಸಮುದ್ರದ ಮಥನದಿಂದ ಹುಟ್ಟಿರುವ, ಗಿರೀಶನನ್ನು ತಪಸ್ಸುಮಾಡಿ ಶುಕ್ರಾಚಾರ್ಯರು ಪಡೆದ, ಶುಕ್ರಾಚಾರ್ಯರನ್ನು ಸಂತೋಷಪಡಿಸಿ  ಶಕುನಿಯಿಂದ ಹೊಂದಲ್ಪಟ್ಟ, ಅತ್ಯಂತ ತೀವ್ರವಾದ, ಶೀಘ್ರವಾಗಿ ಫಲಕೊಡುವ ಕಾಲಕೂಟ ವಿಷವನ್ನು ವಾಯುಪುತ್ರ ಭೀಮಸೇನನಿಗೆ ಕೊಟ್ಟರು. 

[ಮಹಾಭಾರತದಲ್ಲಿ (ಆದಿಪರ್ವ ೧೩೭.೪೭). ‘ಕಾಲಕೂಟಂ ವಿಷಂ ತೀಕ್ಷ್ಣಂ ಸಂಭೃತಂ ರೋಮಹರ್ಷಣಮ್’ ಎಂದಷ್ಟೇ ಹೇಳಿದ್ದಾರೆ. ಆದರೆ ಕ್ಷೀರಸಮುದ್ರ ಮಥನದಿಂದ ಹುಟ್ಟಿರುವ ಆ ಕಾಲಕೂಟ ವಿಷ ದುರ್ಯೋಧನಾದಿಗಳಿಗೆ ಸಿಕ್ಕಿರುವುದು ಹೇಗೆ ಎನ್ನುವುದನ್ನು ಆಚಾರ್ಯರು ಇಲ್ಲಿ ನಮಗೆ ಬಿಡಿಸಿ ಹೇಳಿದ್ದಾರೆ]

No comments:

Post a Comment