ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, December 6, 2019

Mahabharata Tatparya Nirnaya Kannada 1491_1495


ಭಾಗೇತ ಏವ ತನಯಸ್ಯ ಸ ಏವ ವಹ್ನೇರ್ನ್ನಾಮ್ನಾ ಶುಚೇಃ ಸ ತು ಪಿತಾsಸ್ಯ ಹಿ ಮಿತ್ರಭಾಗಃ
ರಾಹ್ವಂಶಯುಕ್ ತದನುಜೌ ಕ್ರಥಕೈಶಿಕಾಖ್ಯೌ ಭಾಗೌ ತಥಾsಗ್ನಿಸುತಯೋಃ ಪವಮಾನಶುನ್ಧ್ಯೋಃ ೧೪.೯೧

ಆ ರುಗ್ಮಿಯು ‘ಶುಚಿ’ ಎಂಬ ಹೆಸರಿನ ಅಗ್ನಿಪುತ್ರನ ಅಂಶದಿಂದ ಕೂಡಿದ್ದವನಾಗಿದ್ದರೆ, ಅವನ ತಂದೆ ಭೀಷ್ಮಕನಲ್ಲಿ  ಮಿತ್ರನ(ಸೂರ್ಯನ) ಅಂಶವಿತ್ತು. ಅಷ್ಟೇ ಅಲ್ಲಾ,  ಭೀಷ್ಮಕನಲ್ಲಿ ರಾಹುವಿನ ಅಂಶವೂ ಇತ್ತು. ಹಾಗೆಯೇ ಭೀಷ್ಮಕನ  ತಮ್ಮಂದಿರಾದ ಕ್ರಥ ಮತ್ತು ಕೈಶಿಕರು ಅಗ್ನಿಯ ಮಕ್ಕಳಾಗಿರುವ ಪವಮಾನ ಹಾಗು  ಶುನ್ಧ್ಯು ಇವರ ಅಂಶಭೂತರಾಗಿದ್ದರು [ಪಾವಕ-ಪವಮಾನ-ಶುಚಿ. ಇಲ್ಲಿ ಪಾವಕನನ್ನೇ ಶುನ್ಧ್ಯು ಎಂದು ಕರೆದಿದ್ದಾರೆ].

ಬನ್ಧೋರ್ನ್ನಿಜಸ್ಯ ತು ಬಲಂ ಸುಪರೀಕ್ಷಮಾಣಃ ಶಲ್ಯೋsಪಿ ತೇನ ಯುಯುಧೇ ವಿಜಿತಸ್ತಥೈವ
ಭೀಮೋ ಜಿಗಾಯ ಯುಧಿ ವೀರಮಥೈಕಲವ್ಯಂ ಸರ್ವೇ ನೃಪಾಶ್ಚ ವಿಜಿತಾ ಅಮುನೈವಮೇವ ೧೪.೯೨

ತನ್ನ ಬಂಧುವಾಗಿರುವ ಭೀಮಸೇನನ ಬಲವನ್ನು ಚೆನ್ನಾಗಿ ಪರೀಕ್ಷಿಸತಕ್ಕ ಶಲ್ಯನೂ ಕೂಡಾ ಅವನೊಂದಿಗೆ ಯುದ್ಧಮಾಡಿದ. ಹಾಗೇ ಸೋತ ಕೂಡಾ. ಯುದ್ಧದಲ್ಲಿ ವೀರನಾಗಿರುವ ಏಕಲವ್ಯನನ್ನು ಭೀಮ ಗೆದ್ದ. ಇದೇರೀತಿ ಭೀಮನಿಂದ ಎಲ್ಲಾ ರಾಜರುಗಳೂ ಕೂಡಾ ಪರಾಜಯಹೊಂದಿದರು.

ತದ್ಬಾಹುವೀರ್ಯ್ಯಪರಿಪಾಲಿತ ಇನ್ದ್ರಸೂನುಃ ಶೇಷಾನ್ ನೃಪಾಂಶ್ಚ ಸಮಜೈದ್ ಬಲವಾನಯತ್ನಾತ್ 
ಸಾಲ್ವಂ ಚ ಹಂಸಡಿಭಕೌ ಚ ವಿಜಿತ್ಯ ಭೀಮೋ ನಾಗಾಹ್ವಯಂ ಪುರಮಗಾತ್ ಸಹಿತೋsರ್ಜ್ಜುನೇನ ೧೪.೯೩

ಭೀಮನ ಬಾಹುವೀರ್ಯದಿಂದ ಪರಿಪಾಲಿತನಾದ(ರಕ್ಷಿಸಲ್ಪಟ್ಟ) ಅರ್ಜುನನು, ಉಳಿದ ರಾಜರನ್ನು ಯಾವುದೇ ಯತ್ನವಿಲ್ಲದೇ ಸುಲಭವಾಗಿ ಗೆದ್ದ. ಸಾಲ್ವನನ್ನು, ಹಂಸ-ಡಿಭಕರನ್ನು ಗೆದ್ದ  ಭೀಮಸೇನನು, ಅರ್ಜುನನೊಂದಿಗೆ ಕೂಡಿಕೊಂಡು ಹಸ್ತಿನಪುರಕ್ಕೆ ತೆರಳಿದನು.

ತದ್ಬಾಹುವೀರ್ಯ್ಯಮಥ ವೀಕ್ಷ್ಯ ಮುಮೋದ ಧರ್ಮ್ಮಸೂನುಃ ಸಮಾತೃಯಮಜೋ ವಿದುರಃ ಸಭೀಷ್ಮಃ
ಅನ್ಯೇ ಚ ಸಜ್ಜನಗಣಾಃ ಸಹಪೌರರಾಷ್ಟ್ರಾಃ ಶ್ರುತ್ವೈವ ಸರ್ವಯದವೋ ಜಹೃಷುರ್ನ್ನಿತಾನ್ತಮ್ ೧೪.೯೪

ತಾಯಿ ಮತ್ತು ನಕುಲಸಹದೇವರಿಂದ ಕೂಡಿಕೊಂಡ ಧರ್ಮರಾಜನು ಭೀಮಸೇನನ ಬಾಹುವೀರ್ಯವನ್ನು ಕಂಡು ಸಂತೋಷಪಟ್ಟನು. ವಿದುರನು, ಭೀಷ್ಮನೂ ಸೇರಿದಂತೆ, ಸಮಸ್ತ ಸಜ್ಜನರೂ ಕೂಡಾ, ಇಡೀ ರಾಷ್ಟ್ರದಲ್ಲಿರುವವರು ಇದನ್ನು ಕೇಳಿ ಅತ್ಯಂತ ಸಂತೋಷಪಟ್ಟರು.

ಕೃಷ್ಣಃ ಸುಯೋಧನಮುಖಾಕ್ರಮಮಾಮ್ಬಿಕೇಯಂ ಜಾನನ್ ಸ್ವಪುತ್ರವಶವರ್ತ್ತಿನಮೇವ ಗತ್ವಾ
ಶ್ವಾಫಲ್ಕಿನೋ ಗೃಹಮಮುಂ ಧೃತರಾಷ್ಟ್ರಶಾನ್ತ್ಯೈ ಗನ್ತುಂ ದಿದೇಶ ಗಜನಾಮ ಪುರಂ ಪರೇಶಃ ೧೪.೯೫

ಶ್ರೀಕೃಷ್ಣನು ಸುಯೋಧನನಿಂದಾಗುತ್ತಿರುವ ಅಕ್ರಮಗಳನ್ನು ತಿಳಿದು, ಧೃತರಾಷ್ಟ್ರನು ತನ್ನ ಪುತ್ರವಶವಾಗಿದ್ದಾನೆ ಎಂಬುದನ್ನೂ ತಿಳಿದು, ಶ್ವಫಲ್ಕನ ಮಗನಾದ ಅಕ್ರೂರನನ್ನು ಧೃತರಾಷ್ಟ್ರನ ಶಾಂತಿಗಾಗಿ(ವಿಪರೀತ ಪ್ರವೃತ್ತಿ ನಿವಾರಣೆಗಾಗಿ) ಹಸ್ತಿನಾವತಿಗೆ ತೆರಳು ಎಂದು ಹೇಳಿ ಕಳುಹಿಸಿದ.
[ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಮತ್ತು ಅವಶ್ಯಕತೆ ಇದ್ದರೆ ತಿಳುವಳಿಕೆ ಹೇಳಿ ಬರುವಂತೆ ಕೃಷ್ಣ ಅಕ್ರೂರನಿಗೆ ಹೇಳಿ ಕಳುಹಿಸಿದ].

No comments:

Post a Comment