ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 8, 2020

Mahabharata Tatparya Nirnaya Kannada 19166_19170

 [ದ್ರೌಪದಿ  ಸ್ವಯಮ್ಬರದ ನಂತರ, ಶ್ರೀಕೃಷ್ಣ ಉಡುಗೊರೆಯೊಂದಿಗೆ ಕಾಮ್ಪಿಲ್ಯನಗರಕ್ಕೆ ಮರಳಿ ಬರುವುದಕ್ಕೂ ಮೊದಲೇ ನಡೆದ ಘಟನೆಯನ್ನು ಇಲ್ಲಿ ವಿವರಿಸುತ್ತಾರೆ. ಸ್ವಯಮ್ಬರದಲ್ಲಿ ಮುಖಭಂಗಹೊಂದಿ, ಸೋತು ಹಿಂತಿರುಗಿ ಬಂದಿದ್ದ ದುರ್ಯೋಧನಾದಿಗಳು, ಮತ್ತೆ ಎಲ್ಲರನ್ನೂ ಸೇರಿಸಿಕೊಂಡು, ಸೈನ್ಯದೊಂದಿಗೆ ದ್ರುಪದನನ್ನು ಕೊಲ್ಲಬೇಕೆಂದು ಅವನ ಪಟ್ಟಣದಮೇಲೆ ಧಾಳಿ ಮಾಡುತ್ತಾರೆ. ಸ್ವಯಮ್ಬರದ ನಂತರ ಶ್ರೀಕೃಷ್ಣ ದ್ವಾರಕೆಗೆ ಹಿಂತಿರುಗಿ ಬಂದಿದ್ದರಿಂದ, ಈ ಸಮಯದಲ್ಲಿ ಶ್ರೀಕೃಷ್ಣ ಕಾಮ್ಪಿಲ್ಯನಗರದಲ್ಲಿರಲಿಲ್ಲ].

ವೈಚಿತ್ರವೀರ್ಯ್ಯ ತನಯಾಃ ಸಹ ಸೌಬಲೇನ ಕರ್ಣ್ಣೇನ ಸಿನ್ಧುಪತಿನಾ ರಥಹಸ್ತಿಯೌಧೈಃ ।

ಭೂರಿಶ್ರವಃಪ್ರಭೃತಿಭಿಶ್ಚ ಸಹೈವ ಹನ್ತುಂ ಪಾಞ್ಚಾಲರಾಜಮಗುರೇತ್ಯ ಪುರೀಂ ಪುನಸ್ತೇ ॥೧೯.೧೬೬॥

 

ಇತ್ತ ದುರ್ಯೋಧನಾದಿಗಳು ಶಕುನಿ, ಕರ್ಣ, ಜಯದ್ರಥ, ಭೂರಿಶ್ರವ, ಮೊದಲಾಗಿರುವ ತಮ್ಮ ಬಂಧುಗಳೊಂದಿಗೆ, ರಥ, ಆನೆ, ಯೋಧರಿಂದಲೂ ಕೂಡಿಕೊಂಡು, ದ್ರುಪದನನ್ನು ಕೊಲ್ಲಲು ಅವನ ಪಟ್ಟಣವನ್ನು ಮತ್ತೆ ಹೊಂದಿದರು.

 

ತೈರರ್ದ್ದಿತೇ ಸ್ವಪುರ ಆಶು ಸ ಸೋಮಕಾನಾಂ ರಾಜಾ ಸುತೈಃ ಸಹ ಸಸೈನಿಕ ಉದ್ಗತೋsಭೂತ್ ।

ತೇಷಾಂ ಚ ತಸ್ಯ ಚ ಬಭೂವ ಮಹಾನ್ ವಿಮರ್ದ್ದಃ ಪುತ್ರೌ ಚ ತಸ್ಯ ನಿಹತೌ ವಿಧುತಾಶ್ಚ ಸೇನಾಃ ॥೧೯.೧೬೭॥

 

ಅವರಿಂದ ತನ್ನ ಪಟ್ಟಣವು ಸ್ವಲ್ಪ ಹಾಳುಗೆಡವಲ್ಪಡಲು, ಸೋಮಕರ ಒಡೆಯನಾದ ದ್ರುಪದನು ಮಕ್ಕಳಿಂದಲೂ, ಸೈನಿಕರಿಂದಲೂ ಕೂಡಿಕೊಂಡು, ಯುದ್ಧಕ್ಕಾಗಿ ಬಂದ. ಹೀಗೆ ಬಂದ ದ್ರುಪದ ಹಾಗೂ ದುರ್ಯೋಧನಾದಿಗಳ ನಡುವೆ ದೊಡ್ಡ ಯುದ್ಧವಾಯಿತು. ಈ ಯುದ್ಧದಲ್ಲಿ ದ್ರುಪದನ ಮಕ್ಕಳಿಬ್ಬರು ಸತ್ತರು ಮತ್ತು ಅವನ ಸೇನೆ ಓಡಿಸಲ್ಪಟ್ಟಿತು.

 

ಚಿತ್ರೇ ಹತೇ ಸಮರ ಆಶು ಸಚಿತ್ರಕೇತೌ ಧಾವತ್ಸು ಸೈನಿಕವರೇಷು ಚ ಪಾರ್ಷತಸ್ಯ ।

ಪಾರ್ತ್ಥಾ ರಥೈರಭಿಯಯುರ್ದ್ಧೃತಚಾಪಬಾಣಾ ವೈಚಿತ್ರವೀರ್ಯ್ಯತನಯಾನ್ ರವಿಸೂನುಯುಕ್ತಾನ್ ॥೧೯.೧೬೮॥

 

ಹೀಗೆ, ದ್ರುಪದನ ಮಕ್ಕಳಾದ ಚಿತ್ರಕೇತುವಿನಿಂದ ಕೂಡಿದ ಚಿತ್ರನು ಯುದ್ಧದಲ್ಲಿ ಸಾಯುತ್ತಿರಲು, ಅವನ ಶ್ರೇಷ್ಠ ಸೈನಿಕರೆಲ್ಲಾ ಓಡುತ್ತಿರಲು, ಪಾಂಡವರು ರಥದೊಂದಿಗೆ, ಬಿಲ್ಲು-ಬಾಣಗಳನ್ನು ಧರಿಸಿ, ಕರ್ಣನಿಂದ ಕೂಡಿದ ದುರ್ಯೋಧನ ಮೊದಲಾದವರನ್ನು  ಯುದ್ಧಕ್ಕಾಗಿ ಎದುರುಗೊಂಡರು.

[ಮಹಾಭಾರತದಲ್ಲಿ ಈಕುರಿತ ವಿವರಣೆ ಸ್ವಲ್ಪ ಭಿನ್ನವಾಗಿದೆ: : ಧೃಷ್ಟದ್ಯುಮ್ನಃ ಶಿಖಣ್ಡೀ ಚ  ಸುಮಿತ್ರಃ ಪ್ರಿಯದರ್ಶನಃ । ಚಿತ್ರಕೇತುಃ ಸುಕೇತುಶ್ಚ ಧ್ವಜಕೇತುಶ್ಚ  ವೀರ್ಯವಾನ್ । ಪುತ್ರಾ ದ್ರುಪದರಾಜಸ್ಯ...‘ (ಆದಿಪರ್ವ ೨೧೮.೧೯-೨೦)    ಜಘ್ನತುಃ ಸಮರೇ ತಸ್ಮಿನ್ ಸುಮಿತ್ರಪ್ರಿಯದರ್ಶನೌ । ಜಯದ್ರಥಶ್ಚ  ಕರ್ಣಶ್ಚ  ಪಶ್ಯತಃ ಸವ್ಯಸಾಚಿನಃ । ಅರ್ಜುನಃ ಪ್ರೇಕ್ಷ್ಯ ನಿಹತೌ ಸೌಮಿತ್ರಪ್ರಿಯದರ್ಶನೌ । ಜಯದ್ರಥಸುತಂ ತತ್ರ ಜಘಾನ ಪಿತುರನ್ತಿಕೇ’ (೩೦-೩೧). ಇಲ್ಲಿ   ಸತ್ತವರು ಸುಮಿತ್ರ ಹಾಗೂ ಪ್ರಿಯದರ್ಶನರು ಎಂದು ಹೇಳಿದ್ದು, ಚಿತ್ರ ಹಾಗೂ ಚಿತ್ರಕೇತು ಎಂದು ನೇರವಾಗಿ ಹೇಳಿಲ್ಲ. ಇದು ಪಾಠಾಂತರವಾಗಿರಬಹುದು.   ಮಹಾಭಾರತ ಪ್ರಾಚೀನ ಪಾಠ ಹೀಗಿದ್ದಿರಬಹುದು:  ಧೃಷ್ಟದ್ಯುಮ್ನ ಶಿಖಣ್ಡೀ ಚ  ಸಚಿತ್ರಃ  ಪ್ರಿಯದರ್ಶನಃ । ಚಿತ್ರಕೇತುಃ ಸುಕೇತುಶ್ಚ ಧ್ವಜಕೇತುಶ್ಚ  ವೀರ್ಯವಾನ್ ।...    ಜಘ್ನತುಃ  ಸಮರೇ ತಸ್ಮಿನ್ ಸುಚಿತ್ರಪ್ರಿಯದರ್ಶನೌ । ...। ಅರ್ಜುನಃ ಪ್ರೇಕ್ಷ್ಯ ನಿಹತೌ ತೌ ಚಿತ್ರಪ್ರಿಯದರ್ಶನೌ  । ..... ಪ್ರಾಯಃ ಚಿತ್ರಕೇತು ನೋಡಲು ತುಂಬಾ ಸುಂದರನಾಗಿದ್ದಿರಬಹುದು. ತನ್ನ ಮುಗ್ಧತೆಯಿಂದಲೋ, ಚಿಕ್ಕ ವಯಸ್ಸಿನಿಂದಲೋ ಆತ  ಎಲ್ಲರ ಕಣ್ಮಣಿಯಾಗಿದ್ದಿರಬಹುದು ಮತ್ತು ಅದರಿಂದಾಗಿ ಅವನನ್ನು ಪ್ರಿಯದರ್ಶನ ಎಂದು ಕರೆಯುತ್ತಿದ್ದಿರಬಹುದು. ಒಟ್ಟಿನಲ್ಲಿ ದ್ರುಪದನ ಇಬ್ಬರು ಮಕ್ಕಳು ಈ ಯುದ್ಧದಲ್ಲಿ ಸಾವನ್ನಪ್ಪಿದರು].

 

ತೈಸ್ತೇಷು ಪಞ್ಚಸು ಸಮಂ ಪ್ರತಿಯೋಧಯತ್ಸು ಭೂರಿಶ್ರವಾಃ ಸರವಿಜೋ ವಿರಥಂ ಚಕಾರ ।

ಶಕ್ರಾತ್ಮಜಂ ತದನು ಪರ್ವತಸನ್ನಿಕಾಶಂ ದೋರ್ಭ್ಯಾಂ ತು ಮಾರುತಿರುರುಂ ತರುಮುದ್ಬಬರ್ಹ ॥೧೯.೧೬೯॥

 

ಅವರೆಲ್ಲರೊಂದಿಗೆ ಈ ಐದುಜನ ಯುದ್ಧ ಮಾಡುತ್ತಿರಲು, ಕರ್ಣನಿಂದ ಕೂಡಿರುವ ಭೂರಿಶ್ರವಸ್ಸು ಅರ್ಜುನನನ್ನು ರಥಹೀನನನ್ನಾಗಿ ಮಾಡಿದನು. ಆಗ ಭೀಮಸೇನನು ತನ್ನೆರಡು ಬಾಹುಗಳಿಂದ ಬಹಳ ಎತ್ತರವಾಗಿರುವ ಉತ್ಕೃಷ್ಟವಾದ ಮರವನ್ನು ಕಿತ್ತನು.

 

ಆಯಾನ್ತಮೀಕ್ಷ್ಯ ತರುಹಸ್ತಮಿಮಂ ಸಮೀರಸೂನುಂ ಸುಯೋಧನಮುಖಾ ನಿಖಿಲಾಃ ಸಕರ್ಣ್ಣಾಃ ।

ಭೂರಿಶ್ರವಾಃ ಶಕುನಿಭೂರಿಜಯದ್ರಥಾಶ್ಚ ಸರ್ವೇsಪಿ ದುದ್ರುವುರಥೋ ವಿವಿಶುಃ ಪುರಂ ಸ್ವಮ್ ॥೧೯.೧೭೦॥

 

ಮರವನ್ನು ಕೈಯಲ್ಲಿ ಹಿಡಿದು ಬರುತ್ತಿರುವ ಭೀಮಸೇನನನ್ನು ನೋಡಿ, ಕರ್ಣನಿಂದ ಕೂಡಿರುವ ದುರ್ಯೋಧನ ಹಾಗೂ  ಭೂರಿಶ್ರವಸ್ಸು, ಶಕುನಿ, ಭೂರಿ, ಜಯದ್ರಥ ಮೊದಲಾದ ಎಲ್ಲರೂ ಕೂಡಾ ತಮ್ಮ ಪಟ್ಟಣದ ತನಕ ನಿಲ್ಲದೇ ಓಡಿಹೋದರು(ಎಲ್ಲರೂ ಹೆದರಿ ಓಡಿಹೋದರು).

No comments:

Post a Comment