ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 18, 2020

Mahabharata Tatparya Nirnaya Kannada 19220_19223

 

ವಾಸಿಷ್ಠಪೇನ ಯದುಪೇನ ಚ ಪಾಣ್ಡವಾನಾಂ ರತ್ನೋತ್ಕರಂ ಕುರು ಪುರಂ ಪುರುಹೂತಪುರ್ಯ್ಯಾಃ  

ಸಾದೃಶ್ಯತಸ್ತ್ವಿತಿ ನಿಯುಕ್ತ ಉಭೌ ಪ್ರಣಮ್ಯ ಸರ್ವೇಶ್ವರೌ ಸ ಕೃತವಾಂಶ್ಚ ಪುರಂ ತಥೈವ ॥೧೯.೨೨೦॥

 

ವೇದವ್ಯಾಸರಿಂದಲೂ, ಯಾದವಕೃಷ್ಣನಿಂದಲೂ “ಪಾಂಡವರಿಗಾಗಿ ಇಂದ್ರನ ಅಮರಾವತಿಗೆ ಸಮನಾಗಿರುವ, ರತ್ನದಿಂದ ಉಜ್ವಲವಾಗಿರುವ ಪಟ್ಟಣವನ್ನು ಮಾಡು” ಎಂದು ನಿಯುಕ್ತನಾದ ವಿಶ್ವಕರ್ಮನು,  ಸರ್ವೇಶ್ವರರಾದ ಇಬ್ಬರನ್ನೂ ನಮಸ್ಕರಿಸಿ, ಅದೇರೀತಿಯಾದ ಭವನವನ್ನು ನಿರ್ಮಿಸಿದನು. 

 

ದೇಶಂ ಚ ನಾತಿಜನಸಂವೃತಮನ್ಯದೇಶಸಂಸ್ಥೈರ್ಜ್ಜನೈರಭಿಪುಪೂರಿರ ಆಶು ಪಾರ್ತ್ಥಾಃ ।

ತೇಷಾಂ ಗುಣೈರ್ಹರಿಪದಾನತಿಹೇತುತಶ್ಚ ರಾಷ್ಟ್ರಾನ್ತರಾ ಇಹ ಶುಭಾ ವಸತಿಂ ಸ್ಮ ಚಕ್ರುಃ ॥೧೯.೨೨೧॥

 

ಅತ್ಯಂತ ಜನಸಂಖ್ಯೆ ಇಲ್ಲದ ಆ ದೇಶವನ್ನು ಪಾಂಡವರು ಬೇರೆ ದೇಶದ ಜನರಿಂದ ತುಂಬಿದರು. ಪಾಂಡವರ ಸಜ್ಜನಿಕೆ ಮೊದಲಾದ ಗುಣ, ಜೊತೆಗೆ ಹರಿಭಕ್ತಿ ಎನ್ನುವ ಶ್ರೇಷ್ಠಗುಣದ ಕಾರಣದಿಂದ,  ಸಜ್ಜನರಾದ ಬೇರೆಬೇರೆ ರಾಷ್ಟ್ರದ ಜನರು ಇಲ್ಲಿಯೇ ವಾಸಮಾಡಿದರು. 

 

ಪ್ರಸ್ಥಾಪ್ಯ ದೂರಮನುಜಸ್ಯ ಸುತಾನ್ ಸ ರಾಜಾ ಚಕ್ರೇsಭಿಷೇಕಮಪಿ ತತ್ರ ಸುಯೋಧನಸ್ಯ ।

ದುಃಶಾಸನಂ ಚ ಯುವರಾಜಮಸೌ ವಿಧಾಯ ಮೇನೇ ಕೃತಾರ್ತ್ಥಮಿವ ಚ ಸ್ವಮಶಾನ್ತಕಾಮಃ ॥೧೯.೨೨೨॥

 

ಧೃತರಾಷ್ಟ್ರನು ತನ್ನ ತಮ್ಮನ ಮಕ್ಕಳನ್ನು ದೂರಕ್ಕೆ ಕಳುಹಿಸಿದ ನಂತರ ದುರ್ಯೋಧನನಿಗೆ   ಪಟ್ಟಾಭಿಷೇಕ  ಮಾಡಿದ. ದುಃಶಾಸನನನ್ನು ಯುವರಾಜನನ್ನಾಗಿ ಮಾಡಿದ ಅವನು, ತಾನು ಮಾಡಬೇಕಾದದ್ದನ್ನು ಮಾಡಿದೆ ಎಂದು ಅಂದುಕೊಂಡ. ಆದರೆ ಒಳಗಿನಿಂದ ಇನ್ನೂ ಅವನ ಕಾಮನೆ ಪೂರ್ತಿ ನಾಶವಾಗಿರಲಿಲ್ಲ.

 

ಪಾರ್ತ್ಥಾಶ್ಚ ತೇ ಮುಮುದುರತ್ರ ವಸಿಷ್ಠವೃಷ್ಣಿವರ್ಯ್ಯೋದಿತಾನಖಿಲತತ್ತ್ವವಿನಿರ್ಣ್ಣಯಾಂಸ್ತು

ಶೃಣ್ವನ್ತ ಏವ ಹಿ ಸದಾ ಪೃಥಿವೀಂ ಚ ಧರ್ಮ್ಮಾದ್ ಭುಞ್ಜನ್ತ ಆಶ್ರಿತರಮಾಪತಿಪಾದಯುಗ್ಮಾಃ ॥೧೯.೨೨೩॥

 

ಆ ಪಾಂಡವರು ಇಂದ್ರಪ್ರಸ್ಥದಲ್ಲಿ ವೇದವ್ಯಾಸರು ಮತ್ತು ಶ್ರೀಕೃಷ್ಣರಿಂದ ಹೇಳಲ್ಪಟ್ಟ ಸಮಸ್ತ ತತ್ತ್ವವಿನಿರ್ಣಯಗಳನ್ನು ಕೇಳತಕ್ಕವರಾಗಿ, ಭೂಮಿಯನ್ನು ಧರ್ಮದಿಂದ ಪಾಲಿಸುವವರಾಗಿ, ಪರಮಾತ್ಮನ ಪಾದವನ್ನು ಆಶ್ರಯಿಸಿ, ಸಂತಸಪಟ್ಟರು.

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವರಾಜ್ಯಲಾಭೋ ನಾಮ ಏಕೋನವಿಂಶೋsದ್ಧ್ಯಾಯಃ

*********








No comments:

Post a Comment