ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 11, 2020

Mahabharata Tatparya Nirnaya Kannada 19179_19182

ತತ್ಕಾಲ ಏವ ವಸುದೇವಸುತಶ್ಚ ಕೃಷ್ಣೋ ವ್ಯಾಸಶ್ಚ ತಾನುಪಸಮೇತ್ಯ ದುರನ್ತಶಕ್ತೀ ।

ಆದಾಯ ಕುನ್ತಿಸಹಿತಾನ್ ವಿದುರೇಣ ಯುಕ್ತೌ ನಾಗಾಹ್ವಯಂ ಪುರಮಿತಾಂ ಸಹ ಭಾರ್ಯ್ಯಯೈವ ॥೧೯.೧೭೯॥

 

ಅದೇ ಸಮಯದಲ್ಲಿ, ಎಣಿಯಿರದ ಶಕ್ತಿಯುಳ್ಳ  ವಸುದೇವನ ಮಗನಾದ ಶ್ರೀಕೃಷ್ಣನು ಹಾಗೂ  ವೇದವ್ಯಾಸರೂ ಕೂಡಾ ಪಾಂಡವರನ್ನು ಹೊಂದಿ, ಕುಂತಿಯಿಂದ ಕೂಡಿರುವ ಪಾಂಡವರನ್ನು ಕರೆದುಕೊಂಡು, ವಿದುರನಿಂದ ಕೂಡಿದವರಾಗಿ, ನಾಗ(ಹಸ್ತಿ/ಆನೆ) ಎನ್ನುವ ಹೆಸರಿನ ಪಟ್ಟಣವನ್ನು(ಹಸ್ತಿನಪುರವನ್ನು) ದ್ರೌಪದಿಯೊಡನೆಯೇ ಹೊಂದಿದರು.      

 

ತೇಷ್ವಾಗತೇಷು ಸುಮಹಾನಭವತ್ ಪ್ರಹರ್ಷಃ ಪೌರಸ್ಯ ಜಾನಪದಿಕಸ್ಯ ಜನಸ್ಯ ಚೋಚ್ಚೈಃ ।

ಭೀಷ್ಮಾದಿಕಾಶ್ಚ ಮುದಿತಾಃ ಪ್ರತಿಪೂಜ್ಯ ಗೇಹಮಾವೇಶಯನ್ ಸಹ ನೃಪೇಣ ಮಹೋತ್ಸವೇನ ॥೧೯.೧೮೦॥

 

ಆ ಪಾಂಡವರು ಬರುತ್ತಿರಲು, ಪಟ್ಟಣಿಗರಿಗೆ, ಹಳ್ಳಿಗರಿಗೆ, ಹೀಗೆ ಎಲ್ಲಾ  ಜನರಿಗೂ ಅತ್ಯಂತ ಉತ್ಕೃಷ್ಟವಾದ ಸಂತಸವಾಯಿತು. ಧೃತರಾಷ್ಟ್ರನೊಂದಿಗೆ ಭೀಷ್ಮ ಮೊದಲಾದವರೂ ಕೂಡಾ ಸಂತೋಷದಿಂದ ಅವರನ್ನು ಆಧರಿಸಿ, ಗೌರವವನ್ನು ಸಲ್ಲಿಸಿ, ದೊಡ್ಡ ಉತ್ಸವದೊಂದಿಗೆ ಮನೆಯೊಳಗಡೆ ಪ್ರವೇಶಮಾಡಿಸಿದರು.

[ಇಲ್ಲಿ ‘ಸುಮಹಾನಭವತ್ ಪ್ರಹರ್ಷಃ’ ಎನ್ನುವಲ್ಲಿ  ‘ಸು ಎಂದು ಒಂದು ಅತಿಶಯಾರ್ಥವನ್ನೂ, ‘ಪ್ರ’ ಎಂದು ಇನ್ನೊಂದು ಅತಿಶಯಾರ್ಥವನ್ನು ಹೇಳಿರುವುದನ್ನು ಕಾಣುತ್ತೇವೆ. ಮಹಾನ್ ಹರ್ಷಃ ಅಥವಾ ಸುಮಾಹಾನ್ ಹರ್ಷಃ ಅಥವಾ ಮಹಾನ್ ಪ್ರಹರ್ಷಃ ಎನ್ನಬಹುದಿತ್ತು.  ಆದರೆ ಸುಮಹಾನ್ ಪ್ರಹರ್ಷಃ ಎನ್ನುವ ಪ್ರಕೃಷ್ಟವಾಚಕಗಳನ್ನು ಹೇಳಲು ಕಾರಣವೇನೆಂದರೆ: ದ್ರೌಪದಿಯನ್ನು ಹೊಸದಾಗಿ ಜನ ನೋಡುತ್ತಿದ್ದಾರೆ. ಆ ಹೊಸದಾದ ಸಂತೋಷ ‘ಪ್ರಹರ್ಷ’. ಪಾಂಡವರು ಸತ್ತಿದ್ದಾರೆ ಎಂದು ತಿಳಿದಿದ್ದರೂ, ಈಗ ಬದುಕಿದ್ದಾರೆ ಹಾಗಾಗಿ ಮಹಾನ್ ಪ್ರಹರ್ಷ. ಅಂತಹ ಪಾಂಡವರು ಕೇವಲ ಬಂದಿರುವುದಷ್ಟೇ ಅಲ್ಲಾ, ಮದುವೆಯಾಗಿ ಬಂದಿದ್ದಾರೆ. ಹಾಗಾಗಿ ಸುಮಹಾನ್ ಪ್ರಹರ್ಷ. ಇದು ಜನರಿಗೆ ಸಾಮಾನ್ಯ ಸಂತೋಷವಲ್ಲ, ಅತ್ಯಂತ ಉತ್ಕ್ರಷ್ಟವಾದ ಸಂತೋಷ].    

 

ಕೃಷ್ಣಾಮಪೂಜಯದತೀವ ಚ ಸೌಬಲೀ ಸಾ ದುರ್ಯ್ಯೋಧನಸ್ಯ ದಯಿತಾಸಹಿತಾsತ್ರ ತೇsಪಿ ।

ಊಷುಸ್ತತಶ್ಚ ನಿಜಪುತ್ರಕದುರ್ವಿನೀತ್ಯಾ ಕೃಷ್ಣಾನಿಮಿತ್ತಮುರುಭೀತಿತ ಆಹ  ಭೀಮಾತ್ ॥೧೯.೧೮೧॥

 

ಗಾಂಧಾರ ದೇಶದ ರಾಜ ಸುಬಲನ ಮಗಳು ಗಾಂಧಾರಿ(ಸೌಬಲೀ) ದುರ್ಯೋಧನನ ಹೆಂಡತಿಯೊಡನೆ ಕೂಡಿಕೊಂಡು ದ್ರೌಪದಿಯನ್ನು ಸತ್ಕರಿಸಿದಳು. ನಂತರ ಪಾಂಡವರು ಧೃತರಾಷ್ಟ್ರನ ಅರಮನೆಯಲ್ಲಿಯೇ ವಾಸಮಾಡಿದರು. ತದನಂತರ ಗಾಂಧಾರಿ ದ್ರೌಪದೀನಿಮಿತ್ತವಾಗಿ, ತನ್ನ ಮಗ ದುರ್ಯೋಧನನ ದುರ್ಮಾರ್ಗ ಹಾಗೂ ಭೀಮಸೇನನದೆಸೆಯಿಂದ ಅತ್ಯಂತ ಭಯಗೊಂಡು ಮಾತನ್ನು ಹೇಳಿದಳು:   

 

ಕುನ್ತಿ ಪ್ರಯಾಹಿ ಸಹಿತಾ ಸ್ನುಷಯಾ ಗೃಹಂ ಸ್ವಂ ಭೀಮಾದ್ ಬಿಭೇಮಿ ನಿಜಪುತ್ರಕದುರ್ವಿನೀತ್ಯಾ ।

ಕೃಷ್ಣಾತ್ರಿಲೋಕವನಿತಾಧಿಕರೂಪಸಾರಾ ಯಸ್ಮಾದಿತಿ ಸ್ಮ ಸಸುತಾ ಪ್ರಯಯೌ ಗೃಹಂ ಸಾ ॥೧೯.೧೮೨॥

 

‘ಓ ಕುಂತಿಯೇ, ಸೊಸೆಯಿಂದ ಕೂಡಿಕೊಂಡು ನೀನು ನಿನ್ನ ಮನೆಗೆ(ಪಾಂಡುರಾಜ ವಾಸಿಸುತ್ತಿದ್ದ ಅರಮನೆಗೆ) ತೆರಳು. ಕೃಷ್ಣಾ(ದ್ರೌಪದಿ) ತ್ರಿಲೋಕದಲ್ಲಿರುವ ಸಮಸ್ತ ಹೆಂಗಳೆಯರಿಗಿಂತ ಅತ್ಯಂತ ಉತ್ಕೃಷ್ಟವಾದ ರೂಪವುಳ್ಳವಳು. ಹಾಗಾಗಿ ಇಲ್ಲಿ ನಾನು ನನ್ನ ಮಗನ ದುರ್ನೀತಿಯ ನಿಮಿತ್ತವಾಗಿ ಭೀಮಸೇನನಿಂದ ಭಯಗೊಳ್ಳುತ್ತಿದ್ದೇನೆ’ ಹೀಗೆ ಗಾಂಧಾರಿಯಿಂದ ಹೇಳಲ್ಪಟ್ಟ ಕುಂತಿಯು ಮಕ್ಕಳಿಂದ ಕೂಡಿಕೊಂಡು ತನ್ನ ಮನೆಗೆ ತೆರಳಿದಳು.

[ಮಹಾಭಾರತದ ವಿವರಣೆ ಹೀಗಿದೆ: ‘ದುರ್ಯೋಧನಸ್ಯ ಮಹಿಷೀ ಕಾಶಿರಾಜಸುತಾ ತದಾ । ಧೃತರಾಷ್ಟ್ರಸ್ಯ ಪುತ್ರಾಣಾಂ ವಧೂಭಿಃ ಸಹಿತಾ ತಥಾ । ಪಾಞ್ಚಾಲೀಂ ಪ್ರತಿಜಗ್ರಾಹ ಸಾಧ್ವೀಂ ಶ್ರಿಯಮಿವಾಪರಾಮ್’ (ಆದಿಪರ್ವ ೨೨೭.೧)  ದುರ್ಯೋಧನನ ಹೆಂಡತಿ ಕಾಶಿರಾಜನ ಮಗಳು ಹಾಗೂ ಧೃತರಾಷ್ಟ್ರನ ಉಳಿದ ಮಕ್ಕಳ ಹೆಂಡತಿಯರಿಂದ ಕೂಡಿಕೊಂಡ ಗಾಂಧಾರಿ ದ್ರೌಪದಿಯನ್ನು ಎದುರುಗೊಂಡು ಗೌರವಿಸಿದಳು. (ಕಣ್ಣಿಗೆ ಪಟ್ಟಿಕಟ್ಟಿಕೊಂಡಿದ್ದ ಗಾಂಧಾರಿಗೆ ಕೃಷ್ಣೆ ತ್ರಿಲೋಕಸುಂದರಿ ಎನ್ನುವುದು ಹೇಗೆ ತಿಳಿಯಿತು ಎಂದರೆ-) ‘ಪರಿಷ್ವಜ್ಯೈವ  ಗಾನ್ಧಾರೀ ಕೃಷ್ಣಾಂ ಕಮಲಲೋಚನಾಮ್ । ಪುತ್ರಾಣಾಂ ಮಮ ಪಾಞ್ಚಾಲೀ ಮೃತ್ಯುರೇವೇತ್ಯಮನ್ಯತ’ (೨೨೭.೪) ಗಾಂಧಾರಿಯು ತಾವರೆಯ ಎಸಳಿನಂತೆ ಕಣ್ಗಳಿರುವ ದ್ರೌಪದಿಯನ್ನು  ಅಪ್ಪಿಯೇ, ತನ್ನ ಮಕ್ಕಳಿಗೆ ಇವಳೇ ಮೃತ್ಯು  ಎನ್ನುವುದನ್ನು ತಿಳಿದಳು].      

No comments:

Post a Comment