ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, October 5, 2020

Mahabharata Tatparya Nirnaya Kannada 19153_19159

 

ವ್ಯಾಸಂ ತಮೀಕ್ಷ ಭಗವನ್ತಮಗಣ್ಯಪೂರ್ಣ್ಣನಿತ್ಯಾವ್ಯಯಾತ್ಮಗುಣಮಾಶು ಸಮಸ್ತ ಏವ ।

ನತ್ವಾsಭಿಪೂಜ್ಯ ವರಪೀಠಗತಸ್ಯ ಚಾsಜ್ಞಾಮಾದಾಯ ಚೋಪವಿವಿಶುಃ ಸಹಿತಾಸ್ತದನ್ತೇ  ॥೧೯.೧೫೩॥

 

ಎಣಿಸಲಾರದ, ತುಂಬಿರುವ, ನಿತ್ಯವಾಗಿರುವ ಗುಣಗಳುಳ್ಳ ವೇದವ್ಯಾಸರನ್ನು ನೋಡಿದ ಎಲ್ಲರೂ, ಅವರನ್ನು  ನಮಸ್ಕರಿಸಿ ಪೂಜಿಸಿದರು. ಉನ್ನತವಾದ ಪೀಠದಲ್ಲಿ ಕುಳಿತಿರುವ ವೇದವ್ಯಾಸರ ಆಜ್ಞೆಯನ್ನು ಸ್ವೀಕರಿಸಿ, ಅವರ ಸಮೀಪದಲ್ಲಿ ಎಲ್ಲರೂ ಸೇರಿ ಕುಳಿತರು.  

 

ಕೃಷ್ಣಸ್ತದಾssಹ ನೃಪತಿಂ ಪ್ರತಿ ದೇಹಿ ಕನ್ಯಾಂ ಸರ್ವೇಭ್ಯ ಏವ ವೃಷವಾಯುಪುರನ್ದರಾ ಹಿ ।

ನಾಸತ್ಯದಸ್ರಸಹಿತಾ ಇಮ ಏವ ಇನ್ದ್ರಾಃ ಪೂರ್ವೇ ಚ ಸಮ್ಪ್ರತಿತನಶ್ಚ ಹರೇರ್ಹಿ ಪಶ್ಚಾತ್ ॥೧೯.೧೫೪॥

 

ಆಗ ವೇದವ್ಯಾಸರು ದ್ರುಪದನನ್ನು ಕುರಿತು ‘ಎಲ್ಲರಿಗೂ(ಪಂಚಪಾಂಡವರಿಗೆ) ನಿನ್ನ ಮಗಳನ್ನು ಕೊಡು ಎನ್ನುತ್ತಾರೆ. ಪಾಂಡವರ ಮೂಲಸ್ವರೂಪವನ್ನು ವಿವರಿಸುತ್ತಾ ವ್ಯಾಸರು ‘ಇವರೇ ವೃಷ(ಧರ್ಮರಾಜ), ವಾಯು(ಮುಖ್ಯಪ್ರಾಣ), ಪುರಂದರ(ಇಂದ್ರ) ಹಾಗೂ ನಾಸತ್ಯ-ದಸ್ರ(ಅಶ್ವೀದೇವತೆಗಳು)ರಿಂದ ಕೂಡಿರುವ ಮೊದಲಿನ ಮತ್ತು ಈಗಿನ ಇಂದ್ರರು. ಅಂದರೆ ಯಜ್ಞನಾಮಕ ಇಂದ್ರನನ್ನು ಬಿಟ್ಟು ಉಳಿದ ಎಲ್ಲಾ ಇಂದ್ರರೂ ಇಲ್ಲಿದ್ದಾರೆ’.

[ಪ್ರಥಮ(ಸ್ವಾಯಮ್ಭುವ) ಮನ್ವಂತರದಲ್ಲಿ ಯಜ್ಞನಾಮಕ ಇಂದ್ರ ಸ್ವಯಂ ಭಗವಂತ. ವಾಯು ‘ರೋಚನ’ ನಾಮಕ ಇಂದ್ರನಾಗಿ ದ್ವಿತೀಯ(ಸ್ವಾರೋಚಿಷ) ಮನ್ವಂತರ,  ವೃಷ ‘ಸತ್ಯಜಿತ್’ ನಾಮಕ ಇಂದ್ರನಾಗಿ ತೃತೀಯ(ಉತ್ತಮ)ಮನ್ವಂತರ, ನಾಸತ್ಯ-ದಸ್ರ ಇವರು  ತ್ರಿಶಿಖ-ವಿಭುನಾಮಕ ಇಂದ್ರರಾಗಿ  ನಾಲ್ಕು(ರೈವತ) ಹಾಗು ಐದನೇ(ತಾಪಸ) ಮನ್ವಂತರದ ಇಂದ್ರರು. ಆರನೇ(ಚಾಕ್ಷುಷ) ಮನ್ವಂತರದ ಮನ್ದ್ರದ್ಯುಮ್ನ ನಾಮಕ ಇಂದ್ರ ಹಾಗು  ಈ(ವೈವಸ್ವತ) ಮನ್ವಂತರದ ಇಂದ್ರ-ಪುರಂದರ(ಆರು ಹಾಗೂ ಏಳು ಈ ಎರಡೂ ಮನ್ವಂತರದ ಇಂದ್ರ ಪುರಂದರ) ]     

 

ಏಷಾಂ ಶ್ರಿಯಶ್ಚ ನಿಖಿಲಾ ಅಪಿಚೈಕದೇಹಾಃ ಪುತ್ರೀ ತವೈವ ನ ತತೋsತ್ರ ವಿರುದ್ಧತಾ ಹಿ ।

ಇತ್ಯುಕ್ತವತ್ಯಪಿ ಯದಾ ದ್ರುಪದಶ್ಚಕಾರ ಸಂವಾದಿನೀಂ ನ ಧಿಯಮೇನಮಥಾsಹ ಕೃಷ್ಣಃ ॥೧೯.೧೫೫॥

 

‘ಇವರೆಲ್ಲರ ಮಡದಿಯರು ಒಂದೇ ದೇಹದೊಳಗಡೆ ಸೇರಿಕೊಂಡಿದ್ದಾರೆ ಹಾಗೂ ಅದರಿಂದಾಗಿ ನಿನ್ನ ಮಗಳೇ ಈ ಐದೂ ಜನರ ಸಮಷ್ಟಿಯಾಗಿದ್ದಾಳೆ. ಆ ಕಾರಣದಿಂದ  ಇಲ್ಲಿ ಧರ್ಮವಿರೋಧವಿಲ್ಲ’ ಎಂದು ವೇದವ್ಯಾಸರು ಹೇಳುತ್ತಿದ್ದರೂ ಕೂಡಾ, ದ್ರುಪದನು ಸಮ್ಮತಿಯುಕ್ತವಾದ ಬುದ್ಧಿಯನ್ನು ಮಾಡಲಿಲ್ಲ. ಆಗ ವೇದವ್ಯಾಸರು ಹೇಳುತ್ತಾರೆ:

 

ದಿವ್ಯಂ ಹಿ ದರ್ಶನಮಿದಂ ತವ ದತ್ತಮದ್ಯ ಪಶ್ಯಾsಶು ಪಾಣ್ಡುತನಯಾನ್ ದಿವಿ ಸಂಸ್ಥಿತಾಂಸ್ತ್ವಮ್ ।

ಏತಾಂ ಚ ತೇ ದುಹಿತರಂ ಸಹ ತೈಃ ಪೃಥಕ್ಸ್ಥಾಮ್ ತಲ್ಲಕ್ಷಣೈಃ ಸಹ ತತಃ ಕುರು ತೇ ಯಥೇಷ್ಟಮ್ ॥೧೯.೧೫೬॥

 

‘ನಿನಗೆ ಯಾರಿಗೂ ಕಾಣಲು ಅಸಾಧ್ಯವಾದ, ಅಲೌಕಿಕವನ್ನು ಕಾಣುವ ದಿವ್ಯದೃಷ್ಟಿ ಕೊಡಲ್ಪಟ್ಟಿದೆ. ಈಗ ಆಕಾಶದಲ್ಲಿ(ಅವರವರ ಲೋಕದಲ್ಲಿ) ಇರುವ ಈ ಪಾಂಡವರನ್ನು ನೋಡು. ಇವಳೇ ಆಗಿರುವ, ಈ ನಿನ್ನ ಮಗಳನ್ನು ಅವರೊಂದಿಗೆ ಬೇರೆಬೇರೆಯಾಗಿ ಇರುವುದನ್ನೂ ಕೂಡಾ ಕಾಣು. ಐದೂ ಜನರಿಗೂ ಐದು ವಿಶಿಷ್ಟವಾದ ಲಕ್ಷಣಗಳಿರುವುದನ್ನೂ ನೀನು ಕಾಣು. ಆನಂತರ ನಿನ್ನಿಷ್ಟಬಂದಂತೆ ಮಾಡು’.

 

ಇತ್ಯುಕ್ತವಾಕ್ಯಮನು ತಾನ್ ಸ ದದರ್ಶ ರಾಜಾ ಕೃಷ್ಣಪ್ರಸಾದಬಲತೋ ದಿವಿ ತಾದೃಶಾಂಶ್ಚ ।

ಏತಾನ್ ನಿಶಾಮ್ಯ ಚರಣೌ ಜಗದೀಶಿತುಶ್ಚ ಭೀತೋ ಜಗಾಮ ಶರಣಂ ತದನಾದರೇಣ ॥೧೯.೧೫೭॥

 

ಈರೀತಿಯಾಗಿ ವೇದವ್ಯಾಸರು ಹೇಳುತ್ತಿದ್ದಂತೆಯೇ,  ಅವರೆಲ್ಲರನ್ನೂ ದ್ರುಪದ ಕಂಡ. ಕೃಷ್ಣಾನುಗ್ರಹದ ಬಲದಿಂದ, ಅವರವರ ಲೋಕದಲ್ಲಿರುವ ಎಲ್ಲರನ್ನೂ, ವೇದವ್ಯಾಸರು ಹೇಳಿರುವ ಲಕ್ಷಣಗಳಿಂದ ಕೂಡಿರುವ ಇವರೆಲ್ಲರನ್ನೂ ಕಂಡು, ತಾನು ಅನಾದರ ಮಾಡಿದ್ದರಿಂದ, ಜಗತ್ತಿಗೇ ಒಡೆಯನಾದ ವೇದವ್ಯಾಸರ ಚರಣಕಮಲವನ್ನು ಭಯಗೊಂಡ ದ್ರುಪದ ಶರಣುಹೊಂದಿದ.   

 

ದತ್ವಾsಭಯಂ ಸ ಭಗವಾನ್ ದ್ರುಪದಸ್ಯ ಕಾರ್ಯ್ಯೇ ತೇನೋಮಿತಿ ಸ್ಮ ಕಥಿತೇ ಸ್ವಯಮೇವ ಸರ್ವಾಮ್ ।

ವೈವಾಹಿಕೀಂ ಕೃತಿಮಥ ವ್ಯದಧಾಚ್ಚ ಧೌಮ್ಯಯುಕ್ತಃ ಕ್ರಮೇಣ ಜಗೃಹುರ್ನ್ನಿಖಿಲಾಶ್ಚ ಪಾಣಿಮ್ ॥೧೯.೧೫೮॥

 

ಆಗ ವೇದವ್ಯಾಸರು ಅವನಿಗೆ ಅಭಯವನ್ನು ನೀಡಿದರು. ‘ಎಲ್ಲಾ ಕಾರ್ಯವೂ ನಿರ್ವಿಘ್ನವಾಗಿ ನಡೆಯಲಿ ಎನ್ನುವ ಅಂಗೀಕಾರವು ದ್ರುಪದನಿಂದ ಹೇಳಲ್ಪಡುತ್ತಿರಲು, ಸ್ವಯಂ ವೇದವ್ಯಾಸರೇ ಧೌಮ್ಯರೊಂದಿಗೆ ಕೂಡಿ, ವಿವಾಹಕ್ಕೆ ಸಂಬಂಧಿಸಿದ ಎಲ್ಲಾ  ಕೃತಿಗಳನ್ನು ಮಾಡಿದರು. ಪಾಂಡವರೆಲ್ಲರೂ ಕೂಡಾ ಕ್ರಮವಾಗಿ ದ್ರೌಪದಿಯ ಕೈಹಿಡಿದರು.

 

ಪಾಞ್ಚಾಲಕೇಷು ಚ ಮಹೋತ್ಸವ ಆಸ ರಾಜಾ ತುಷ್ಟೋsಭವತ್ ಸಹ ಸುತೈಃ ಸ್ವಜನೈಶ್ಚ ಸರ್ವೈಃ ।

ಪೌರೈಶ್ಚ ಜಾನಪದಿಕೈಶ್ಚ ಯಥೈವ ರಾಮೇ ದತ್ವಾ ಸುತಾಂ ಜನಕ ಆಪ ಮುದಂ ತತೋsನು ॥೧೯.೧೫೯॥

 

ಇಡೀ ಪಾಂಚಾಲದೇಶದಲ್ಲಿ ಹಬ್ಬವೇ ನಡೆಯಿತು. ದ್ರುಪದನು ಮಕ್ಕಳಿಂದ, ತನ್ನೆಲ್ಲ ಬಂಧುಗಳಿಂದ ಕೂಡಿಕೊಂಡು, ನಗರವಾಸಿಗಳಿಂದ, ಹಳ್ಳಿಯವರಿಂದಲೂ ಕೂಡಾ ಕೂಡಿಕೊಂಡು, ಅತ್ಯಂತ ಸಂತುಷ್ಟನಾದ. ಹೇಗೆ ರಾಮನಲ್ಲಿ ತನ್ನ ಮಗಳಾದ ಸೀತೆಯನ್ನು ಕೊಟ್ಟು ಜನಕರಾಜನು ಸಂತಸವನ್ನು ಹೊಂದಿದ್ದನೋ, ಅವನ ನಂತರ ದ್ರುಪದರಾಜನೇ ಆ ಪ್ರಮಾಣದ ಸಂತೋಷವನ್ನು ಅನುಭವಿಸಿರುವುದು.   

No comments:

Post a Comment