ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, October 9, 2020

Mahabharata Tatparya Nirnaya Kannada 19171_19178

[ಸ್ವಯಮ್ಬರದಲ್ಲಿ ಸೋತು, ಮರಳಿ ದ್ರುಪದನನ್ನು ಕೊಲ್ಲಲೆಂದು ಸೈನ್ಯದೊಂದಿಗೆ ಹೋಗಿ, ಪುನಃ ಸೋತ ದುರ್ಯೋಧನಾದಿಗಳು ಹಿಂತಿರುಗಿ ಬರುತ್ತಿರುವಾಗ, ಇತ್ತ ಅರಮನೆಯಲ್ಲಿ ವಿದುರ ಧೃತರಾಷ್ಟ್ರನಿಗೆ ಪಾಂಡವರು ದ್ರೌಪದಿಯನ್ನು ಮದುವೆಯಾಗಿರುವ ವಿಷಯವನ್ನು ಹೇಳುತ್ತಾನೆ.  ಇಲ್ಲಿ ದುರ್ಯೋಧನಾದಿಗಳು ಸ್ವಯಮ್ಬರದಲ್ಲಿ ಸೋತಿರುವುದಾಗಲಿ, ಮರಳಿ  ದ್ರುಪದನಮೇಲೆ ಯುದ್ಧಕ್ಕೆ ಹೋಗಿರುವ ವಿಷಯವಾಗಲೀ  ಧೃತರಾಷ್ಟ್ರನಿಗೆ ತಿಳಿದಿರಲಿಲ್ಲ. ದುರ್ಯೋಧನ ಆಡಳಿತಯಂತ್ರದ ಸಂಪೂರ್ಣ ನಿಯಂತ್ರಣ ಹೊಂದಿದ್ದ ಎನ್ನುವುದು ಇದರಿಂದ ನಮಗೆ ತಿಳಿಯುತ್ತದೆ. ಆದರೆ ಚತುರನಾದ  ವಿದುರ ತನ್ನದೇ ಆದ ಚಾರರ ಮುಖೇನ ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದ].

   

ಜ್ಞಾತ್ವಾ ಸಮಸ್ತಮಪಿ ತದ್ ವಿದುರೋsಗ್ರಜಂ ಸ್ವಂ ವರ್ದ್ಧನ್ತ ಏವ ತನಯಾ ಭವತೋ ನರೇನ್ದ್ರ ।

ಇತ್ಯಾಹ ಸೋsಪಿ ಮುದಿತಃ ಸ್ವಸುತೇನ ಕೃಷ್ಣಾ ಪ್ರಾಪ್ತೇತಿ ಭೂಷಣವರಾಣ್ಯದಿಶಚ್ಚ ವಾಸಃ ॥೧೯.೧೭೧॥

 

ವಿದುರನು ಇವೆಲ್ಲವನ್ನೂ ಕೂಡಾ ತಿಳಿದು, ತನ್ನ ಅಣ್ಣನಾದ ಧೃತರಾಷ್ಟ್ರನನ್ನು ಕುರಿತು: “ಓ ರಾಜನೇ, ನಿನ್ನ ಮಕ್ಕಳು (ಕೀರ್ತಿಯಿಂದ, ಸಂಪತ್ತಿನಿಂದ) ಬೆಳೆಯುತ್ತಿದ್ದಾರೆ” ಎಂದು ಹೇಳಿದ. ಈ ಮಾತನ್ನು ಕೇಳಿದ ಧೃತರಾಷ್ಟ್ರನಾದರೋ, ಅತ್ಯಂತ ಸಂತುಷ್ಟನಾಗಿ, ದುರ್ಯೋಧನನಿಂದ  ದ್ರೌಪದಿಯು ಹೊಂದಲ್ಪಟ್ಟಿದ್ದಾಳೆ ಎಂದು ತಿಳಿದು,  ಶ್ರೇಷ್ಠವಾದ ಆಭರಣಗಳನ್ನೂ ಬಟ್ಟೆಗಳನ್ನೂ ತಕ್ಷಣ ಆದೇಶಮಾಡಿದ.  

[ಮಹಾಭಾರತದ ವಿವರಣೆ(ಆದಿಪರ್ವ ೨೧೯.೧೫-೧೮) ಹೀಗಿದೆ: ‘ತತಃ ಪ್ರೀತಮನಾಃ ಕ್ಷತ್ತಾ ಧೃತರಾಷ್ಟ್ರಂ ವಿಶಾಮ್ಪತೇ । ಉವಾಚ ದಿಷ್ಟ್ಯಾ ಕುರವೋ ವರ್ಧನ್ತ ಇತಿ ವಿಸ್ಮಿತಃ । (ವಿದುರ ‘ಕುರುಗಳು ಬೆಳೆಯುತ್ತಿದ್ದಾರೆ’ ಎಂದು ಹೇಳಿದ. ಆದರೆ ಧೃತರಾಷ್ಟ್ರನ ಪ್ರಕಾರ ಪಾಂಡವರು ಸತ್ತಿದ್ದಾರೆ. ಅದರಿಂದಾಗಿ ಅವನು ವಿದುರ ತನ್ನ ಮಕ್ಕಳ ಕುರಿತೇ ಹೇಳುತ್ತಿದ್ದಾನೆ ಎಂದುಕೊಂಡ). ವೈಚಿತ್ರವೀರ್ಯಸ್ತು ನೃಪೋ ನಿಶಮ್ಯ ವಿದುರಸ್ಯ ತತ್ । ಅಬ್ರವೀತ್ ಪರಮಪ್ರೀತೋ  ದಿಷ್ಟ್ಯಾದಿಷ್ಟ್ಯೇತಿ ಭಾರತ । (ಅವನು ಪದೇಪದೇ ದಿಷ್ಟ್ಯಾ-ದಿಷ್ಟ್ಯಾ(ಎಲ್ಲಾ ದೈವಸಂಕಲ್ಪ) ಎಂದು ಹೇಳುತ್ತಾ  ಸಂತೋಷಪಡುತ್ತಿದ್ದ). ಮನ್ಯತೇ ಸ ವೃತಂ ಪುತ್ರಂ ಜ್ಯೇಷ್ಠಂ ದ್ರುಪದಕನ್ಯಯಾ ।  ದುರ್ಯೋಧನಮವಿಜ್ಞಾನಾತ್  ಪ್ರಜ್ಞಾಚಕ್ಷುರ್ನರೇಶ್ವರಃ । ಅಥ ತ್ವಾಜ್ಞಾಪಯಾಮಾಸ  ದ್ರೌಪದ್ಯಾ ಭೂಷಣಂ ಬಹು ।  ಆನೀಯತಾಂ ವೈ ಕೃಷ್ಣೇತಿ  ಪುತ್ರಂ ದುರ್ಯೋಧನಂ ತದಾ’ (ದ್ರುಪದ ಕನ್ಯೆಯ ಕುರಿತು ಮೊದಲೇ ತಿಳಿದಿದ್ದ ಅವನು, ಕೂಡಲೇ  ಆಚೆ ತಿರುಗಿ, ‘ದುರ್ಯೋಧನನ ಹೆಂಡತಿಯಾದ ದ್ರೌಪದಿಗೆ ಶ್ರೇಷ್ಠವಾದ ಆಭರಣಗಳನ್ನು ತೆಗೆದುಕೊಂಡು ಬನ್ನಿ' ಎಂದು  ಆಜ್ಞೆಮಾಡಿದ) ]    

 

ಪಾರ್ತ್ಥಾ ಇತಿ ಸ್ಮ ವಿದುರೋsವದದಾಶು ಸೋsಪಿ ಸ್ವಾಕಾರಗೂಹನಪರೋ ಯದಿ ತರ್ಹ್ಯತೀವ ।

ಭದ್ರಂ ಮೃತಾ ನಹಿ ಪೃಥಾಸಹಿತಾಃ ಸ್ಮ ಪಾರ್ತ್ಥಾಸ್ತೇಷಾಂ ಪ್ರವೃತ್ತಿಮಪಿ ಮೇ ವದ ಸರ್ವಶಸ್ತ್ವಮ್ ॥೧೯.೧೭೨॥

 

ಆಗ ತಕ್ಷಣ ವಿದುರನು ‘ಕುರುಗಳು ಎಂದರೆ-ಪಾಂಡವರು’ ಎಂದು ಹೇಳಿದ(ಪಾಂಡವರೂ ಕೂಡಾ ಕುರುಗಳಲ್ಲವೇ ಎಂದು ಹೇಳಿದ). ಧೃತರಾಷ್ಟ್ರನಾದರೋ(ಒಳಗಿನಿಂದ ಬಹಳ ಸಂಕಟಕ್ಕೊಳಗಾದರೂ)   ತನ್ನ ಮನೋಭಾವ(ತನ್ನೊಳಗಿನ ಸ್ವಭಾವ, ಅಸಂತುಷ್ಟತೆ) ಯಾರಿಗೂ ತಿಳಿಯಬಾರದು ಎನ್ನುವ ಅಭಿಪ್ರಾಯದಿಂದ, ‘ಒಂದು ವೇಳೆ ಹಾಗಾದರೆ ಅತೀವ ಸಂತೋಷ, ಅತ್ಯಂತ ಮಂಗಳಕರ ಎಂದ ಮತ್ತು ಕುಂತಿಯಿಂದ ಕೂಡಿದ ಪಾಂಡವರು ಸಾಯಲಿಲ್ಲವಾದರೆ ಅವರ ಪ್ರವೃತ್ತಿಯನ್ನು ಸಂಪೂರ್ಣವಾಗಿ ಹೇಳು ಎಂದ. 

[ಮಹಾಭಾರತ ವಾಕ್ಯ: ಆಕಾರಚ್ಛಾದನಾರ್ಥಾಯ ದಿಷ್ಟ್ಯಾದಿಷ್ಟ್ಯೇತಿ ಚಾಬ್ರವೀತ್’ (ಆದಿಪರ್ವ ೨೧೯.೨೨), ನೀನು ಹೇಳಿದ್ದು ನಿಜವೇ ಆಗಿದ್ದರೆ ಇನ್ನೂ ಸಂತೋಷ ಎಂದ ಧೃತರಾಷ್ಟ್ರ]. 

 

ಇತ್ಯುಕ್ತ ಆಹ ವಿದುರಃ ಸ ಹಿಡಿಮ್ಬವದ್ಧ್ಯಾಪೂರ್ವಾಂ ಪ್ರವೃತ್ತಿಮಖಿಲಾಮಪಿ ಲಕ್ಷವೇಧಮ್ ।

ಉದ್ವಾಹಮಪ್ಯಥ ನದೀಜಮುಖಾಶ್ಚ ಸರ್ವೇ ತುಷ್ಟಾ ಬಭೂವುರಪಿ ವತ್ಸರಮೂಷುರೇವಮ್ ॥೧೯.೧೭೩॥

 

ಈರೀತಿಯಾಗಿ ಹೇಳಲ್ಪಟ್ಟ ವಿದುರನು ಹಿಡಿಮ್ಬನ ಕೊಲ್ಲುವಿಕೆ, ಮೊದಲಾದ ಎಲ್ಲಾ ಪ್ರವೃತ್ತಿಯನ್ನು, ಗುರಿಯನ್ನು ಬೇಧಿಸಿದ್ದನ್ನು, ಮದುವೆಯ ವಿಶೇಷಗಳನ್ನೂ ಕೂಡಾ ಹೇಳಿದ. ಇದನ್ನು ಕೇಳಿದ ಭೀಷ್ಮ-ದ್ರೋಣ ಮೊದಲಾದ ಎಲ್ಲರೂ ಸಂತೋಷಪಟ್ಟರು. ಆದರೆ ಎಲ್ಲವನ್ನೂ ತಿಳಿದಮೇಲೂ, ಇನ್ನೂ ಒಂದು ವರ್ಷ ಕಳೆದರೂ. ಯಾವ ಪ್ರವೃತ್ತಿಯನ್ನೂ ಅವರು ಮಾಡಲಿಲ್ಲ.

 

ಶ್ರುತ್ವಾsಥ ಕೃಷ್ಣಮುಪಯಾತಮುರು ಪ್ರದಾಯ ರತ್ನಂ ಚ ಪಾಣ್ಡುತನಯೇಷು ಗತಂ ಪುನಶ್ಚ ।

ತಾತಪ್ಯಮಾನಹೃದಯಾಸ್ತು ಸುಯೋಧನಾದ್ಯಾ ಮನ್ತ್ರಂ ಪ್ರಚಕ್ರುರಥ ಕರ್ಣ್ಣಮುಖಾ ಯಯುಶ್ಚ ॥೧೯.೧೭೪॥

 

ತದನಂತರ, ಶ್ರೀಕೃಷ್ಣನು ಮತ್ತೆ ಬಂದು ಪಾಂಡವರಲ್ಲಿ ಬಹಳವಾಗಿರುವ ಸಂಪತ್ತನ್ನು ಉಡುಗೊರೆಯಾಗಿ ಕೊಟ್ಟು ಹೋಗಿರುವ ವಿಷಯವನ್ನು ಕೇಳಿ, (ದುರ್ಯೋಧನಾದಿಗಳಿಗೆ ಶ್ರೀಕೃಷ್ಣ ದ್ರುಪದನ ರಾಜ್ಯವಾದ ಕಾಮ್ಪಿಲ್ಯಪುರಕ್ಕೆ ಬಂದು ಪಾಂಡವರಿಗೆ ಮದುವೆಯ ಕಾಣಿಕೆ ಕೊಟ್ಟು ಹೋದ ವಿಷಯ ನಿಧಾನವಾಗಿ ತಿಳಿಯಿತು. ಆಕಾಲದ ರಾಜಕೀಯದ ಬಹಳ ದೊಡ್ಡ ಶಕ್ತಿ ಶ್ರೀಕೃಷ್ಣನಾಗಿದ್ದ. ಅಂತಹ ಕೃಷ್ಣನ ಬೆಂಬಲ ಪಾಂಡವರಿಗೆ ಸಿಕ್ಕಿತಲ್ಲಾ ಎನ್ನುವುದನ್ನು ಅವರಿಂದ ಸಹಿಸಲಾಗಲಿಲ್ಲ), ಹೊಟ್ಟೆಯಲ್ಲಿ ಕಿಚ್ಚು ಇಟ್ಟುಕೊಂಡ ದುರ್ಯೋಧನ ಮೊದಲಾದವರು ಮಂತ್ರಾಲೋಚನೆ ಮಾಡಿ, ಕರ್ಣನನ್ನೇ ಪ್ರಮುಖವಾಗಿರಿಸಿಕೊಂಡು ಹೊರಟರು. (ಇನ್ನೊಮ್ಮೆ ಯುದ್ಧಕ್ಕೆ ಸಿದ್ಧತೆಯಲ್ಲಿ ತೊಡಗಿದರು)

 

ಯುದ್ಧಾಯ ತೇಷು ಪುನರೇವ ರಥೈಃ ಪ್ರಯಾತೇಷ್ವಾಹಾಗ್ರಜಂ ಸ ವಿದುರೋsಪಿ ನದೀಜಮುಖ್ಯಾನ್ ।

ಏತೇ ಹಿ ಪಾಪತಮಚೇತಸ ಏತ್ಯ ಪಾರ್ತ್ಥಾನ್ ಯುದ್ಧಾಯ ಮೃತ್ಯುಮುಪಯಾನ್ತಿ ನ ಸಂಶಯೋsತ್ರ ॥೧೯.೧೭೫॥

 

ಮತ್ತೆ ಅವರೆಲ್ಲರೂ ರಥಗಳಿಂದ ಕೂಡಿಕೊಂಡು ಯುದ್ಧಕ್ಕಾಗಿ ಹೊರಡುತ್ತಿರಲು, ವಿದುರನು ಭೀಷ್ಮ ಮೊದಲಾದವರನ್ನೂ, ತನ್ನ ಅಣ್ಣನಾದ ಧೃತರಾಷ್ಟ್ರನನ್ನೂ ಕುರಿತು ಹೀಗೆ ಹೇಳಿದ: ‘ಅತ್ಯಂತ ಪಾಪಿಷ್ಠವಾದ ಮನಸ್ಸುಳ್ಳ ಇವರೆಲ್ಲರೂ ಪಾಂಡವರನ್ನು ಯುದ್ಧಕ್ಕಾಗಿ ಹೊಂದಿ ಸಾವನ್ನಪ್ಪುತ್ತಾರೆ. ಈ ವಿಚಾರದಲ್ಲಿ ಸಂದೇಹವೇ ಇಲ್ಲ.  

 

ಭೀಮಾರ್ಜ್ಜುನೌ ವಿಷಹಿತುಂ ನಹಿ ಕಶ್ಚನಾಸ್ತಿ ಸಾಮರ್ತ್ಥ್ಯಯುಕ್ ಸುರವರೇಷ್ವಪಿ ವರ್ದ್ಧಿತಾಸ್ತೇ ।

ಜ್ಞಾತ್ವೈವ ವತ್ಸರತ ಏವ ಮಹಾನಧರ್ಮ್ಮಸ್ತೇಷಾಮುಪೇಕ್ಷಣಕೃತಸ್ತದಲಂ ನಿಯುಙ್ಕ್ಷ್ವ ॥೧೯.೧೭೬॥

 

ಭೀಮಾರ್ಜುನರನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದವರು ದೇವತಾಶ್ರೇಷ್ಠರಲ್ಲೂ ಕೂಡಾ ಯಾರೂ ಇಲ್ಲ. (ದೇವತಾ ಶ್ರೇಷ್ಠರೂ ಕೂಡಾ ಇವರನ್ನು ಗೆಲ್ಲಲು ಸಾಧ್ಯವಿಲ್ಲ). ಪಾಂಡವರು ಜೀವಂತವಾಗಿ ಅಲ್ಲಿದ್ದಾರೆ ಎಂದು ತಿಳಿದು ಒಂದು ವರ್ಷವಾದರೂ ಕೂಡಾ, ಅವರನ್ನು  ಕಡೆಗಣಿಸಿದ್ದುದರಿಂದ ಬಂದ ಅಧರ್ಮವು ಬಹಳ ದೊಡ್ಡದು(ಇದು ದೊಡ್ಡ ದೋಷ). ಆಕಾರಣದಿಂದ ಅವರನ್ನು ಕರೆತರಲು ನಿನ್ನ ಸುತ್ತ ಇರುವವರನ್ನು ಪ್ರಚೋದನೆಮಾಡು ಎನ್ನುತ್ತಾನೆ ವಿದುರ.   

[ಇಲ್ಲಿ ‘ವಿಷಹಿತುಮ್’ ಎನ್ನುವ ಪ್ರಯೋಗವನ್ನು ಕಾಣುತ್ತೇವೆ. ಇದು ‘ವಿಸೋಡುಮ್’  ಎಂದಾಗಬೇಕಲ್ಲವೇ  ಎನ್ನುವ ಪ್ರಶ್ನೆ ಕೆಲವರಿಗೆ ಬರುತ್ತದೆ. ಆದರೆ ಇಲ್ಲಿ ಅಕ್ಷರವನ್ನು ಜಾಸ್ತಿಮಾಡಿ ಹೇಳುವ ಮುಖೇನ ಆಚಾರ್ಯರು ಒಂದು ಸೂಚನೆ ಕೊಡುತ್ತಿದ್ದಾರೆ. ಸಹಜವಾದ ಬಲದಿಂದಾಗಲೀ, ಕೃತ್ರಿಮವಾದ ಬಲದಿಂದಾಗಲೀ(ವರ ಮೊದಲಾದವುಗಳ ಬಲದಿಂದಾಗಲೀ), ಭೀಮಾರ್ಜುನರನ್ನು ಕಟ್ಟಿಹಾಕಲು ಸಾಧ್ಯವಿಲ್ಲಾ ಎನ್ನುವುದನ್ನು ಸೂಚನೆ ಮಾಡಲೆಂದೇ  ‘ವಿಸೋಡುಮ್’ ಎನ್ನುವ ಬದಲು ‘ವಿಷಹಿತುಮ್’ ಎಂದು ಬಿಡಿಸಿ ಹೇಳಿದ್ದಾರೆ. ಇದೇ ರೀತಿ ಮಹಾಭಾರತ ತಾತ್ಪರ್ಯದಲ್ಲೂ ಕೂಡಾ ಒಂದು ಪ್ರಯೋಗವಿದೆ. ‘ನಹಿ ನಹುಷೋsಲಂ ನಹಿತುಮ್’ ಎಂದು. ಇಲ್ಲಿ ‘ನದ್ಧುಮ್’ ಬದಲು ‘ನಹಿತುಮ್’ ಎಂದು ಪ್ರಯೋಗಿಸಿದ್ದಾರೆ. ಅಂದರೆ- ಯಾವುದೇ ರೀತಿಯಿಂದ ಕೂಡಾ ಇವರನ್ನು ಕಟ್ಟಿಹಾಕಲು ಸಾಧ್ಯವಿಲ್ಲಾ ಎನ್ನುವುದನ್ನು ಒತ್ತಿ ಹೇಳಲೋಸುಗವೇ  ‘ನದ್ಧುಮ್’ ಬದಲು ‘ನಹಿತುಮ್’ ಎಂದು ಪ್ರಯೋಗಿಸಿದ್ದಾರೆ].

 

ಆನೀತಯೇ ಚ ವಿನಿಯುಜ್ಯ ಸುಸಾನ್ತ್ವಪೂರ್ವಮಾನೀಯ ಯೋಜಯ ನೃಪೈಷು ತಥಾsರ್ದ್ಧರಾಜ್ಯಮ್ ।

ಏವಂ ಕೃತಂ ತವ ಭವೇತ್ ಕುಲವೃದ್ಧಯೇ ಹಿ  ಧರ್ಮ್ಮಾಯ ಚೋಭಯವಿನಾಶಕರೋsನ್ಯಥಾ ಸ್ಯಾಃ ॥೧೯.೧೭೭॥

 

ಅದರಿಂದ ಎಲೈ ರಾಜನೇ, ಯಾರನ್ನಾದರೂ ಕರೆತರುವುದಕ್ಕಾಗಿ ಆಜ್ಞೆಮಾಡಿ,  ಸಮಾಧಾನಪೂರ್ವಕವಾಗಿ ಕರೆತಂದು, ಅವರಲ್ಲಿ ರಾಜ್ಯದ ಅರ್ಧಭಾಗವನ್ನು ಕೊಡು. ಈರೀತಿ ಮಾಡಿದರೆ ನಿನ್ನ ಕುಲವೃದ್ಧಿಯಾದೀತು, ಪುಣ್ಯ ಬಂದೀತು.ಇಲ್ಲದಿದ್ದರೆ ಎರಡನ್ನೂ ಕೂಡಾ ಕಳೆದುಕೊಳ್ಳುತ್ತೀಯ.   

 

ಇತ್ಯುಕ್ತವತ್ಯನು ತಥೇತ್ಯವದನ್ನದೀಜೋ ದ್ರೋಣಃ ಕೃಪಶ್ಚ ವಿದುರಂ ಸ ನೃಪೋsಪ್ಯುವಾಚ ।

ಯಾಹ್ಯಾನಯೇತಿ ಸ ಚ ವೇಗವತಾ ರಥೇನ ತತ್ರಾಗಮತ್ ತದನು ತೈರಭಿಪೂಜಿತಶ್ಚ ॥೧೯.೧೭೮॥

 

ಈರೀತಿಯಾಗಿ ಹೇಳಿದಕೂಡಲೇ ಭೀಷ್ಮರು, ದ್ರೋಣಾಚಾರ್ಯರು, ಕೃಪಾಚಾರ್ಯರೂ ಕೂಡಾ ‘ಹಾಗೇ ಆಗಬೇಕು ಎಂದು ಹೇಳಿದರು. ಆಗ ಧೃತರಾಷ್ಟ್ರನು ವಿದುರನನ್ನು ಕುರಿತು ‘ಹೋಗು, ಅವರನ್ನು ಕರೆ ತಾ ಎಂದು ಹೇಳಿದ. ಅವನಾದರೋ, ವೇಗವುಳ್ಳ ರಥದಿಂದ ಅಲ್ಲಿಗೆ ತೆರಳಿದ ಮತ್ತು ಅಲ್ಲಿ ಪಾಂಡವರು ಮತ್ತು ದ್ರುಪದನಿಂದ ಗೌರವಿಸಲ್ಪಟ್ಟ.    

No comments:

Post a Comment