ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 4, 2020

Mahabharata Tatparya Nirnaya Kannada 19148_19152

 

ಚೇಷ್ಟಾಸ್ವರಾಕೃತಿವಿವಕ್ಷಿತವೀರ್ಯ್ಯಶೌರ್ಯ್ಯಪ್ರಾಗಲ್ಬ್ಯಪೂರ್ವಕಗುಣೈಃ ಕ್ಷಿತಿಭರ್ತ್ತೃಪುತ್ರಾನ್ ।

ವಿಜ್ಞಾಯ ತಾನ್ ದ್ರುಪದ ಏತ್ಯ ಚ ಧರ್ಮ್ಮಸೂನುಂ ಪಪ್ರಚ್ಛ ಕೋsಸಿ ನರವರ್ಯ್ಯ ವದಸ್ವಸತ್ಯಮ್ ॥೧೯.೧೪೮॥

 

ಅವರ ಹಾವ-ಭಾವ, ಸ್ವರ, ಆಕೃತಿ, ಮಾತನಾಡುವ ರೀತಿ, ವೀರ್ಯ, ಶೌರ್ಯ, ಮಾತಿನ ಪ್ರೌಢತೆ, ಮೊದಲಾದ ಗುಣಗಳಿಂದ ಅವರನ್ನು ಕ್ಷತ್ರಿಯೋತ್ತಮರ ಮಕ್ಕಳೇ ಇವರೆಂದು ತಿಳಿದ ದ್ರುಪದನು, ಧರ್ಮರಾಜನ ಬಳಿಬಂದು, ‘ನರವರ್ಯ, (ಮನುಷ್ಯಶ್ರೇಷ್ಠ), ಯಾರು ನೀನು? ಸತ್ಯವನ್ನು ಹೇಳು’ ಎಂದು ಕೇಳಿದ.     

 

ಸ ಪ್ರಾಹ ಮನ್ದಹಸಿತಃ ಕಿಮಿಹಾದ್ಯ ರಾಜನ್ ಪೂರ್ವಂ ಹಿ ವರ್ಣ್ಣವಿಷಯೇ ನ ವಿಶೇಷ ಉಕ್ತಃ ।

ಪುತ್ರೀಕೃತೇ ತವ ಸುತೇನ ತು ಲಕ್ಷವೇಧ ಉಕ್ತೋ ನರೇನ್ದ್ರಸಮಿತೌ ಸ ಕೃತೋsಪ್ಯನೇನ ॥೧೯.೧೪೯॥

 

ಅವನಾದರೋ, ಮುಗುಳುನಗುತ್ತಾ ಹೇಳಿದ: ‘ರಾಜನೇ, ಈಗ ಅದು ಏಕೆ ಬೇಕು? ಮೊದಲು ವರ್ಣದ ವಿಚಾರದಲ್ಲಿ  ನಿನ್ನ ಮಗನಾದ ಧೃಷ್ಟದ್ಯುಮ್ನನಿಂದ ನಿನ್ನ ಮಗಳ ಸಲುವಾಗಿ ಯಾವ ವಿಶೇಷವೂ ಹೇಳಲ್ಪಡಲಿಲ್ಲವಲ್ಲವೇ? ಗುರಿಯನ್ನು ಬೇಧಿಸಬೇಕೆಂದಷ್ಟೇ ಹೇಳಲ್ಪಟ್ಟಿತು. ಅದು ಇವನಿಂದ ಮಾಡಲ್ಪಟ್ಟಿದೆ ಕೂಡಾ.

 

ಏವಂ ಬ್ರುವಾಣಮಥ ತಂ ಪೃಥಯಾ ಸಹೈವ ರಾಜಾ ವದೇತಿ ಪುನರೇವ ಯಯಾಚ ಏಷಃ ।

ಸರ್ವಂ ಪೃಥಾsಪ್ಯವದತಾಂ ಸ ಚ ತೇನ ತುಷ್ಟೋ ವಾಚಂ ಜಗಾದ ಕೃತಕೃತ್ಯ ಇಹಾsಸಮದ್ಯ ॥೧೯.೧೫೦॥

 

ಈರೀತಿಯಾಗಿ ಹೇಳುತ್ತಿರುವ ಅವನನ್ನು ದ್ರುಪದನು, ಕುಂತಿಯಿಂದ ಕೂಡಿಕೊಂಡು ಮತ್ತೆಮತ್ತೆ ಬೇಡಿದ. ಆಗ ಕುಂತಿಯೂ, ಧರ್ಮರಾಜನೂ ಎಲ್ಲವನ್ನೂ ಅವನಿಗೆ ಹೇಳಿದರು. ಅದರಿಂದ ತೃಪ್ತನಾದ ದ್ರುಪದ ಹೇಳುತ್ತಾನೆ: ‘ಈ ವಿಚಾರದಲ್ಲಿ ನಾನಿಂದು ಕೃತಕೃತ್ಯನಾದೆ’ ಎಂದು.

 

ಪಾರ್ತ್ಥಾರ್ತ್ಥಮೇವ ಹಿ ಮಯೈಷ ಕೃತಃ ಪ್ರಯತ್ನಸ್ತ್ವಂ ಫಲ್ಗುನೋsನ್ಯ ಉತವಾsದ್ಯ ಕರಂ ಸುತಾಯಾಃ ।

ಗೃಹ್ಣಾತ್ವಿತೀರಿತ ಇಮಂ ಸ ತು ಧರ್ಮ್ಮಸೂನುರಾಹ ಸ್ಮ ಸರ್ವ ಇತಿ ಮೇ ಮನಸಿ ಪ್ರರೂಢಮ್ ॥೧೯.೧೫೧॥

 

ದ್ರುಪದ ಧರ್ಮರಾಜನನ್ನು ಕುರಿತು ಹೇಳುತ್ತಾನೆ: ‘ನನ್ನಿಂದ ಕೇವಲ ಅರ್ಜುನನಿಗಾಗಿಯೇ ಇಲ್ಲಿಯತನಕದ ಎಲ್ಲಾ ಪ್ರಯತ್ನವು ಮಾಡಲ್ಪಟ್ಟಿದೆ. ನೀನಾಗಿರಬಹುದು, ಅರ್ಜುನನಾಗಿರಬಹುದು, ಉಳಿದವರಾಗಿರಬಹುದು, ನನ್ನ ಮಗಳ ಕೈಯನ್ನು ಈಗಲೇ ಹಿಡಿಯಿರಿ’ ಎಂದು. ಹೀಗೆ ಹೇಳಲ್ಪಟ್ಟ ಧರ್ಮರಾಜನು ದ್ರುಪದನನ್ನು ಕುರಿತು ‘ನನ್ನ ಮನಸ್ಸಿನಲ್ಲಿ ಎಲ್ಲರೂ ಮದುವೆಮಾಡಿಕೊಳ್ಳೋಣ ಎಂದು ರೂಢವಾಗಿದೆ ಎಂದು.   

 

ನಾತ್ರ ಪ್ರಮಾ ಮಮ ಹೃದಿ ಪ್ರತಿಭಾತ್ಯಥಾಪಿ ಧರ್ಮ್ಮಾಚಲಾ ಮಮ ಮತಿರ್ಹಿ ತದೇವ ಮಾನಮ್ ।

ಇತ್ಯುಕ್ತವತ್ಯಪಿ ಸಹೈವ ಸುತೇನ ರಾಜಾ ನೈವೈಚ್ಛದತ್ರ ಭಗವಾನಗಮಚ್ಚ ಕೃಷ್ಣಃ ॥೧೯.೧೫೨॥

 

ಮುಂದುವರಿದು ಧರ್ಮರಾಜ ಹೇಳುತ್ತಾನೆ: ‘ಈ ವಿಚಾರದಲ್ಲಿ (ಒಬ್ಬಳನ್ನು ಐದುಜನ ಮದುವೆಮಾಡಿಕೊಳ್ಳುವುದರಲ್ಲಿ) ನನ್ನ ಹೃದಯದಲ್ಲಿ ಪ್ರಮಾಣವಿಲ್ಲ, ಯುಕ್ತಿಯೂ ಇಲ್ಲಾ. (ಯುಕ್ತಿಯಿಂದಾಗಲೀ, ವೇದ ಪ್ರಮಾಣದಿಂದಾಗಲೀ ನಾನಿದನ್ನು ಹೇಳುತ್ತಿಲ್ಲ). ಆದರೂ ಧರ್ಮದಲ್ಲಿಯೇ ರಥವಾಗಿರುವ ನನ್ನ ಬುದ್ಧಿಯು ಎಂದೂ ಧರ್ಮದಿಂದ ಚಲಿತವಾಗುವುದಿಲ್ಲ. ಅದೊಂದೇ ಪ್ರಮಾಣ’ ಎಂದು. ಈರೀತಿಯಾಗಿ ಧರ್ಮರಾಜನು ಹೇಳುತ್ತಿರಲು, ಮಗನಾದ ಧೃಷ್ಟದ್ಯುಮ್ನನಿಂದ ಕೂಡಿಕೊಂಡ ದ್ರುಪದನು ಅದನ್ನು ಇಚ್ಛಿಸಲೇ ಇಲ್ಲ. ಆಗ ಈ ವಿಚಾರದಲ್ಲಿ  ನಿರ್ಣಯ ಕೊಡಲೆಂದೇ ಷಡ್ಗುಣೈಶ್ವರ್ಯ ಸಂಪನ್ನರಾದ ಭಗವನ್ ವೇದವ್ಯಾಸರು ಅಲ್ಲಿಗೆ ಬಂದರು.  

No comments:

Post a Comment